Tuesday 27 January 2015

ಮೆರವಣಿಗೆ ಹೊರಡುತ್ತೇವೆ - ಘನತೆ ಉಳಿಸಲು, ದೌರ್ಜನ್ಯ ಅಳಿಸಲು..

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಮಾರ್ಚ್ ೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ೨೦೧೫
ಅಂಗವಾಗಿ
ವಿಚಾರ ಸಂಕಿರಣ, ಬೃಹತ್ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ
ಬನ್ನಿ, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ

ಮೆರವಣಿಗೆ ಹೊರಡುತ್ತೇವೆ - ಘನತೆ ಉಳಿಸಲು, ದೌರ್ಜನ್ಯ ಅಳಿಸಲು..

ಸಹೃದಯರೇ,

ಮೆರವಣಿಗೆ ಹೊರಟಿದ್ದೇವೆ, ಈ ನೆಲದ ಸೋದರಿಯರ ಒಗ್ಗೂಡಿಸಲು..

ಆರೋಗ್ಯಕರ ಹಾಗೂ ಸiಸಮಾಜವನ್ನು ಕಟ್ಟುವ ಆಶಯದೊಂದಿಗೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ "ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ"ವನ್ನು ರಚಿಸಿವೆ. ಸೋದರಿತ್ವದ ಶಕ್ತಿಯೊಂದಿಗೆ ಮಹಿಳೆಯರ ಮೇಲಾಗುವ ಹಿಂಸೆ, ದೌರ್ಜನ್ಯಗಳಿಗೆ ಬಲವಾದ ಪ್ರತಿರೋಧ ಒಡ್ಡಲು ಒಕ್ಕೂಟವು ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ಸಾವಿರಾರು ಮಹಿಳೆಯರನ್ನು ಸೇರಿಸಿ ರಾಜ್ಯಮಟ್ಟದಲ್ಲಿ ಮಾರ್ಚ್ ೮ರಂದು ಮಹಿಳಾ ದಿನಾಚರಣೆಯನ್ನು ಒಗ್ಗೂಡಿ ಆಚರಿಸುತ್ತಿದ್ದೇವೆ. ಒಕ್ಕೂಟದ ಭಾಗವಾದ ಬೆಂಗಳೂರಿನ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸೇರಿ ಈ ಬಾರಿಯ ಮಾರ್ಚ್ ೮ರ ಮಹಿಳಾ ದಿನಾಚರಣೆಯನ್ನು ೭ ಮತ್ತು ೮ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. 

ಮೆರವಣಿಗೆ ಹೊರಟಿದ್ದೇವೆ, ಹೋರಾಟದ ಚೈತನ್ಯವನ್ನು ಸ್ಮರಿಸಲು..

ಮಹಿಳೆಯರ ಮೇಲಿನ ದೌರ್ಜನ್ಯವು ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಹಾಗೆಯೇ ಪ್ರತಿರೋಧ ಮತ್ತು ಹೋರಾಟಗಳನ್ನೂ ಮಹಿಳೆಯರು ಮಾಡಿಕೊಂಡೇ ಬಂದಿದ್ದಾರೆ. ಪ್ರತಿಯೊಂದು ಕಾಲಘಟ್ಟದಲ್ಲೂ ಆತ್ಮವಿಶ್ವಾಸದಿಂದ ಹಿಂಸೆ, ಅನ್ಯಾಯ ಮತ್ತು ಅಸಮಾನತೆಗಳನ್ನು ಎದುರಿಸಿರುವ ಮಹಿಳೆಯರ ಹೋರಾಟದ ಬದುಕು ನಮಗೆ ಚೈತನ್ಯವಾಗಬೇಕಿದೆ. ನೂರಾಎಂಭತ್ತನಾಲ್ಕು ವರುಷಗಳ ಹಿಂದೆಯೇ ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಟದ ಪರಂಪರೆಯನ್ನೇ ಕಟ್ಟಿದ ಅನನ್ಯ ಹೋರಾಟಗಾರ್ತಿ, ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ನೆನಪಿನಲ್ಲಿ ಈ ಸಲದ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. 

ಮೆರವಣಿಗೆ ಹೊರಟಿದ್ದೇವೆ ಅನ್ಯಾಯಗಳ ಪ್ರಶ್ನಿಸಲು, ಹಕ್ಕುಗಳಿಗಾಗಿ ಒತ್ತಾಯಿಸಲು..

ಒಂದೆಡೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸುತ್ತಲೇ ಮತ್ತೊಂದು ಕಡೆಯಿಂದ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ಮಾತನಾಡುತ್ತಲೇ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಂತಹ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೆ  ಉದಾರೀಕರಣದ ಹೆಸರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಮಹಿಳೆಯರನ್ನು ಅಸಂಘಟಿತ ವಲಯಕ್ಕೆ ದೂಡಲಾಗುತ್ತಿದೆ. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು ಹಾಗೂ ಇನ್ನಿತರ ಅಸಂಘಟಿತ ವಲಯದಲ್ಲಿ ದುಡಿಯುವವರ ಸಂಖ್ಯೆ ಶೇ. ೯೨.೩ರಷ್ಟಿದೆ. ದೇಶದ ಆಂತರಿಕ ಉತ್ಪನ್ನಕ್ಕೆ ಅವರು ನೀಡುತ್ತಿರುವ ಕೊಡುಗೆ ಶೇ. ೬೦ರಷ್ಟು. ಆದರೆ ವಿರಾಮ, ರಜೆಗಳಿಲ್ಲದೆ ನೀರು, ಶೌಚದಂತಹ ಮೂಲಸೌಕರ್ಯಗಳಿಲ್ಲದೆ ಅತಿಯಾದ ದುಡಿತಕ್ಕೆ ಒಳಗಾಗಿರುವ ಇವರು, ಬೇಕಾಬಿಟ್ಟಿಯಾಗಿ ಕೆಲಸದಿಂದ ತೆಗೆದುಹಾಕುವ ಮಾಲೀಕರ ಪ್ರವೃತ್ತಿಯಿಂದಾಗಿ ಸದಾ ಆತಂಕದಲ್ಲೇ ಬದುಕುತ್ತಾರೆ. ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ಬದುಕುವ ವೇತನ/ಅವಕಾಶ/ಸೌಕರ್ಯಗಳಿಲ್ಲದೆ ಊಟಬಟ್ಟೆಗೆ ಹೋರಾಡುವ ಪರಿಸ್ಥಿತಿ ಇವರದಾಗಿದೆ. ಉದ್ಯೋಗ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ, ಅತ್ಯಾಚಾರ ತಡೆಗೆ ಅತಿ ಕಠಿಣ ಕಾನೂನುಗಳನ್ನು ತಂದರೂ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲದೆ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದರೆ ದೂರು ದಾಖಲಿಸಿದ ಮಹಿಳೆಯರಿಗೇ ಶಿಕ್ಷೆ ನೀಡುವ ಅಪಾಯಕಾರಿ ತಿದ್ದುಪಡಿಗಳನ್ನು ಕಾನೂನಿನಲ್ಲಿ ತರಲಾಗುತ್ತಿದೆ. ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕೆಂದು ಮೀಸಲಿಡುವ ಸಹಾಯಧನವನ್ನು ಸೂಕ್ತವಾಗಿ ಬಳಸದೆ ಹಿಂತಿರುಗಿಸಲಾಗುತ್ತಿದೆ. ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣಕ್ಕೆ ಬಜೆಟ್‌ನಲ್ಲಿ ಮೀಸಲಿಡುವ ಹಣ ಕಡಿತಗೊಳ್ಳುತ್ತಿದೆ. ಹೈಟೆಕ್ ಯುಗದಲ್ಲಿ ಪೌರಕಾರ್ಮಿಕರು ಬರಿಗೈಲಿ ಕಸ-ಮಲಬಾಚುತ್ತ ಅಮಾನವೀಯ ಅಸ್ಪೃಶ್ಯತೆಯಲ್ಲಿ ಬದುಕುತ್ತಿದ್ದರೆ, ಕೋಟ್ಯಾಧೀಶರ ಹೈಟೆಕ್ ಕಂಪನಿಗಳಿಗೆ ಅತಿ ಹೆಚ್ಚು ರಿಯಾಯ್ತಿ, ಸಬ್ಸಿಡಿ ಮತ್ತು ಸಂಪನ್ಮೂಲಗಳು ದೊರೆಯುತ್ತಿವೆ.

ಮೆರವಣಿಗೆ ಹೊರಟಿದ್ದೇವೆ, ಅಧಿಕಾರದಲ್ಲಿ ಪಾಲು ಕೇಳಲು..

ಪ್ರಸ್ತುತ ಸಂದರ್ಭದಲ್ಲಿ ಅಧಿಕಾರವೆಂಬುದು ಸರ್ವರ ಹಿತಕ್ಕಾಗಿ ಎಂಬುದಕ್ಕಿಂತ ಜನರನ್ನು ನಿರಂಕುಶವಾಗಿ ಆಳುವ, ಸಂಪತ್ತನ್ನು ಲೂಟಿಮಾಡುವ ಸರ್ವಾಧಿಕಾರವಾಗಿದೆ. ಹಾಗಾಗಿ ಅಧಿಕಾರ ರಾಜಕಾರಣದಲ್ಲಿ ತೊಡಗಿರುವ ಪಕ್ಷ/ಸಿದ್ಧಾಂತಗಳೂ ಮಹಿಳಾ ವಿಷಯಕ್ಕೆ ಮಾತಿನಲ್ಲಷ್ಟೇ ಮನ್ನಣೆ ನೀಡಿ ಎಲ್ಲ ಸ್ತರದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕಾದ ಸಂದರ್ಭದಲ್ಲಿ ತೊಡರುಗಾಲು ಹಾಕುತ್ತವೆ. ಅಧಿಕಾರ ರಾಜಕೀಯವೆಂಬುದು ಅಧಿಕಾರದ ಕೇಂದ್ರೀಕರಣವಲ್ಲ. ಸರ್ವಜನರ ಕಾಳಜಿಗಾಗಿ ಸದ್ವಿನಿಯೋಗವಾಗಬೇಕಾದ ಶಕ್ತಿ. ಅಂತಹ ಶಕ್ತಿಯ ರಚನೆಯಲ್ಲಿ, ಹಂಚಿಕೆಯಲ್ಲಿ ಮಹಿಳೆಯರ ಪಾಲಿದೆ.

ಮೆರವಣಿಗೆ ಹೊರಟಿದ್ದೇವೆ, ಹಿಂಸೆಯನ್ನು ಎದುರಿಸಲು..
  • ಎಳ್ಳಷ್ಟ್ಟೂ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ ಪ್ರಭುತ್ವದ ದಮನಕಾರಿ ಅಧಿಕಾರ ಸಂಸ್ಕೃತಿ; 
  • ಮಹಿಳೆಯರನ್ನು  ಸರಕಾಗಿಸುವ, ದುಡಿಯುವ ಯಂತ್ರಗಳಾಗಿಸುವ, ಲಾಭಕೋರ ಅಭಿವೃದ್ಧಿ ಮಾದರಿಗಳ ಮೂಲಕ ನಾಡಿನ ಜನ, ಜಲ, ನೆಲವನ್ನು ಹತ್ತಿಕ್ಕಿ ಲೂಟಿ ಮಾಡುತ್ತಿರುವ ಕೊಳ್ಳುಬಾಕ  ಮಾರುಕಟ್ಟೆ ಆರ್ಥಿಕತೆ; 
  • ಮಹಿಳೆಯರನ್ನು ಸಹಜೀವಿಯಾಗಿ ನೋಡದೆ ಗುಲಾಮರನ್ನಾಗಿಸುವ ಪುರುಷ ಪ್ರಧಾನ ವ್ಯವಸ್ಥೆ; 
  • ಮಹಿಳೆಯರನ್ನು ಹತ್ತಿಕ್ಕುವುದೇ ಧರ್ಮವೆಂದು ಭಾವಿಸುವ ಮತಾಂಧತೆ 

ಇವೆಲ್ಲ ಪರಸ್ಪರ ಕೈಜೋಡಿಸಿ, ಒಗ್ಗೂಡಿರುವುದರ ಪರಿಣಾಮವಾಗಿ ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ ಹೆಚ್ಚುತ್ತಿದೆ. ಹಿಂಸೆಯ ಸ್ವರೂಪಗಳು ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವುದಷ್ಟೇ ಅಲ್ಲದೆ ಮಾಮೂಲಿ ವಿಷಯವಾಗಿರುವುದು ಆತಂಕಕಾರೀ ಬೆಳವಣಿಗೆಯಾಗಿದೆ. ಅನೈತಿಕ ಪೊಲೀಸ್‌ಗಿರಿ, ಮರ್ಯಾದಾಹೀನ ಹತ್ಯೆ, ಜಾತಿ ಪಂಚಾಯ್ತಿಗಳ ಮೂಲಕ ಮಹಿಳೆ ಧರ್ಮ/ಕೋಮು/ಜಾತಿ ವೈಷಮ್ಯದ ದಾಳವಾಗಿ ಬಳಕೆಯಾಗುತ್ತಿದ್ದಾಳೆ. ಲಿಂಗತ್ವ ಮತ್ತು ಲೈಂಗಿಕತೆ ಕುರಿತು ವೈಜ್ಞಾನಿಕ ಮನೋಭಾವ ಬೆಳೆಸುವ ಆರೋಗ್ಯಕರ ಶಿಕ್ಷಣದ ಕೊರತೆಯೂ ಸಹ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳ ಮತ್ತು ದೌರ್ಜನ್ಯಕ್ಕೆ ಕಾರಣವಾಗಿದೆ.

ಲಾಭಕೋರತನ, ಜಾತೀಯತೆ, ಪುರುಷ ಪ್ರಧಾನತೆ, ಮತಾಂಧತೆಗಳು ಒಂದಾಗಿ ಜಪಿಸುತ್ತಿರುವ ದ್ವೇಷ ರಾಜಕಾರಣವು ಹುಟ್ಟುಹಾಕುತ್ತಿರುವ ಹಿಂಸೆಯನ್ನು ಎದುರಿಸಲು ಸಂಘಟಿತರಾಗುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧಿಸುವ ಶಕ್ತಿ ಕಳೆದುಕೊಳ್ಳದೇ ಒಗ್ಗಟ್ಟಾಗಿರುವುದು ಅತಿಅವಶ್ಯವಾಗಿದೆ. ಜೀವ ವಿರೋಧಿ ದ್ವೇಷ ರಾಜಕಾರಣವನ್ನು ಮಣಿಸಲು ಸಾಧ್ಯವಾಗುವುದು ಜೀವಪರ ರಾಜಕಾರಣದ ಮೂಲಕವಷ್ಟೇ. ಹೆಣ್ಣು ಭ್ರೂಣಹತ್ಯೆ ವಿರೋಧಿಸಿ ಲಕ್ಷಾಂತರ ಹೆಣ್ಣುಗಳು ಜೀವತಳೆಯುವುದನ್ನು ಬರಮಾಡಿಕೊಳ್ಳಲು; ಹೆಣ್ಣು ಮಕ್ಕಳನ್ನು ಕಾಪಾಡಲು, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ, ದೌರ್ಜನ್ಯಗಳು ಅಳಿಯದೆ ಸ್ವಸ್ಥ ಸಮಾಜ ಸಾಧ್ಯವಿಲ್ಲವೆಂಬ ಅರಿವು ಮೂಡಿಸಲು, ಸಹಜೀವಿಯಾಗಿ ಸಮಾನತೆ-ಸಹಬಾಳ್ವೆಯ ಬದುಕನ್ನು ಕಟ್ಟಲು ಈ ನೆಲದ ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ -

ಹಿಂಸೆಯ ಕಗ್ಗತ್ತಲಲಿ ಶಾಂತಿಯ ಕಂದೀಲು ಹಿಡಿದು 
ದ್ವೇಷದ ಬೇರು ಕಿತ್ತು ಪ್ರೀತಿಯ ಬೀಜ ಬಿತ್ತುತ್ತ
ಕ್ರೌರ್ಯದ ಬೆಂಗಾಡಲಿ ಕರುಣೆಯ ಮಳೆಹಾಡ ಹಾಡುತ್ತ
ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ
ಘನತೆ ಉಳಿಸಲು, ದೌರ್ಜನ್ಯ ಅಳಿಸಲು..

ಬನ್ನಿ ಸಹೃದಯರೆಲ್ಲರೂ ನಮ್ಮೊಂದಿಗೆ ಹೆಜ್ಜೆ ಹಾಕಿ.

ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳ ವಿವರ

೧. ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ: ನೆಲೆಗಳು ಮತ್ತು ಕಾನೂನು ಕುರಿತ ವಿಚಾರ ಸಂಕಿರಣ, ರಾಷ್ಟ್ರೀಯ ಕಾನೂನು ಶಾಲೆ ಸಹಯೋಗದಲ್ಲಿ, ತಾ. ೦೭-೦೩-೨೦೧೫ರಂದು ಬೆಳಿಗ್ಗೆ ೧೦ ಗಂಟೆಯಿಂದ. ಸ್ಥಳ: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು. ಭಾಗವಹಿಸಬಯಸುವವರು ಮೊದಲೇ ಸಂಪರ್ಕಿಸಬೇಕು.
೨. ಮಾರ್ಚ್ ಮೊದಲ ವಾರವಿಡೀ ಬೆಂಗಳೂರು ಸುತ್ತಮುತ್ತ ಶಾಲಾಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚಿಕೆ ಹಾಗೂ ನಿಧಿ ಸಂಗ್ರಹ ಕಾರ್ಯಕ್ರಮ. ಆ ಇಡೀ ವಾರ ಪ್ರತಿದಿನ ಸಂಜೆ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಬೆಂಗಳೂರಿನ ವಿವಿಧೆಡೆ Womeಟಿ iಟಿ ಃಟಚಿಛಿಞ - ಮೌನ ಪ್ರತಿಭಟನೆಯ ಕಾರ್ಯಕ್ರಮ. ಮಾರ್ಚ್ ೭ನೇ ತಾರೀಕು ಸಂಜೆ ೫.೩೦ಕ್ಕೆ ಬೃಹತ್ Womeಟಿ iಟಿ ಃಟಚಿಛಿಞ ನಡೆಸಲಾಗುವುದು. ಅನುಮತಿ ಪಡೆದ ನಂತರ ಸ್ಥಳ ನಿಗದಿಗೊಳಿಸಲಾಗುವುದು. 
೩. ಮಾರ್ಚ್ ೮ ರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಮೈದಾನದವರೆಗೂ ಮಹಿಳಾ ಹಕ್ಕೊತ್ತಾಯ ಜಾಥಾ  ಮತ್ತು ನಂತರ ಸಾರ್ವಜನಿಕ ಸಭೆ. ಜಾಥಾ ಹಾಗೂ ಸಾರ್ವಜನಿಕ ಸಭೆಯಲ್ಲಿ ಭೂಪಾಲ್ ಅನಿಲ ದುರಂತದ ಸಂತ್ರಸ್ತರ ಹಕ್ಕುಗಳ ಪರವಾಗಿ ಹೋರಾಡುತ್ತಿರುವ  ’ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಕರಮ್‌ಚಾರಿ ಸಂಘ’ ದ ಅಧ್ಯಕ್ಷರಾದ ರಷೀದಾ ಬಿ ಮತ್ತು ಕಾರ್ಯದರ್ಶಿಗಳಾದ ಚಂಪಾದೇವಿ ಶುಕ್ಲಾ ಪಾಲ್ಗೊಳ್ಳುತ್ತಾರೆ.

ನಮ್ಮ ಹಕ್ಕೊತ್ತಾಯಗಳು:
  • ಸರ್ಕಾರ ರಚನೆಯಲ್ಲಿ ಮತ್ತು ರಾಜಕೀಯ ರಂಗವೂ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಎಲ್ಲ ವರ್ಗದ ಮಹಿಳೆಯರನ್ನು ಒಳಗೊಳ್ಳುವಂಥ ಮೀಸಲಾತಿ ಜಾರಿಯಾಗಬೇಕು. ರಾಜಕೀಯ ಪಕ್ಷಗಳಲ್ಲಿ ಮತ್ತು ಜನಪರ ಸಂಘಟನೆಗಳಲ್ಲಿ ಮಹಿಳಾ ನಾಯಕತ್ವವನ್ನು ಬೆಳೆಸಲು ಕಾರ್ಯಕ್ರಮ ರೂಪಿಸಬೇಕು. 
  • ಆಹಾರ, ಶಿಕ್ಷಣದಂತೆಯೇ ಉದ್ಯೋಗವೂ ಸಹಾ ಪ್ರತಿ ಪ್ರಜೆಯ ಹಕ್ಕು. ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಹಾಗೂ ಸೂಕ್ತ ವೇತನ ಮಹಿಳೆಯರಿಗೆ ದೊರೆಯಬೇಕು. 
  • ಜಾತಿ, ವರ್ಗ, ಮತ, ಧರ್ಮ, ಜನಾಂಗ, ಯುದ್ಧ, ಭಯೋತ್ಪಾದನೆ, ಸಿದ್ಧಾಂತಗಳ ಹೆಸರಿನಲ್ಲಿ ನಡೆಯುವ ಭೀಕರ ಹಿಂಸೆ, ಅತ್ಯಾಚಾರಗಳು ನಿಲ್ಲಬೇಕು. ಮಹಿಳೆಯನ್ನು ಹಿಂಸೆ-ಪ್ರತಿಹಿಂಸೆಯ ದಾಳವಾಗಿ ಬಳಸಿಕೊಳ್ಳುವುದು ನಿಲ್ಲಬೇಕು.
  • ವಿಶೇಷ ಅನುದಾನ ಯೋಜನೆ ಹಣವೂ ಸೇರಿದಂತೆ ಎಲ್ಲ ಕಡೆ ೧೯೮೪ರಲ್ಲಿ ಆದೇಶವಾಗಿರುವ ಶೇ. ೩೩ ಜೆಂಡರ್ ಬಜೆಟ್ ಕಡ್ಡಾಯವಾಗಿ ಜಾರಿಯಾಗಬೇಕು. ಯೋಜನೆಯ ಹಣ ವಾಪಸಾಗುವುದನ್ನು, ದುರ್ಬಳಕೆಯಾಗುವುದನ್ನು ತಡೆಯಲು ಕಾವಲು ಸಮಿತಿಯನ್ನು ರಚಿಸಬೇಕು.
  • ಹೆಣ್ಣು ಭ್ರೂಣಹತ್ಯೆ, ಆಸಿಡ್ ದಾಳಿಗಳು, ಬಾಲ್ಯ ವಿವಾಹ, ಮಕ್ಕಳ ಮಾರಾಟ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಕೊನೆಯಾಗಬೇಕು. ಆರೋಗ್ಯಕರ ಲೈಂಗಿಕ ಶಿಕ್ಷಣದ ಜೊತೆಗೆ ಸಾರ್ವಜನಿಕ ಸ್ಥಳ/ಸಂಸ್ಥೆಗಳಲ್ಲಿ, ವಿವಾಹ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸಹಜೀವಿಯಾಗಿ, ಸಮಾನವಾಗಿ ಕಾಣುವ ಪರಿಣಾಮಕಾರಿ ಪಠ್ಯಕ್ರಮಗಳು ಶಿಕ್ಷಣದಲ್ಲಿ ಜಾರಿಯಾಗಬೇಕು.
  • ವಿದೇಶಕ್ಕೆ ಹೋಗಲು ಮಹಿಳೆ ಪತಿ ಅಥವಾ ತಂದೆಯ ಅನುಮತಿ ಪಡೆಯಬೇಕೆಂಬಂತಹ ಪುರುಷ ಪ್ರಧಾನ ನೀತಿಗಳು ರದ್ದಾಗಬೇಕು. ಸಂಗಾತಿ/ಪೋಷಕನ ಒಪ್ಪಿಗೆ ಅನಿವಾರ್ಯವಾದಲ್ಲಿ ಅದು ಪುರುಷರಿಗೂ ಅನ್ವಯವಾಗಬೇಕು. 
  • ಗಂಡ/ಸಂಗಾತಿಯ ಆಸ್ತಿ, ಅಧಿಕಾರದಲ್ಲಿ ಮಹಿಳೆಗೆ ಸಮಪಾಲು ನೀಡಬೇಕು. ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗೆ ಮನೆಯೊಡತಿಗೆ ನಿಗದಿಪಡಿಸಿರುವ ಅತ್ಯಲ್ಪ ಹಣವನ್ನು ಹೆಚ್ಚುಮಾಡಬೇಕು.
  • ಕಾರ್ಮಿಕ, ಮಹಿಳಾ, ದಲಿತ, ಆದಿವಾಸಿ ವಿರೋಧಿ ಕಾನೂನು ತಿದ್ದುಪಡಿಗಳು ರದ್ದಾಗಬೇಕು. ಅಲೆಮಾರಿ ಬುಡಕಟ್ಟು ಜನರಿಗೆ ಎಲ್ಲಾ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಬೇಕು.
  • ಸಾರ್ವಜನಿಕ ಸಾರಿಗೆಯ ತರ್ಕಹೀನ ದರ ಏರಿಕೆ ನಿಲ್ಲಿಸಬೇಕು, ಜನಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಯಾಗಬೇಕು. ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕು.
  • ಪೌರಕಾರ್ಮಿಕರಿಗೆ ಬದುಕುವ ವೇತನ, ಉತ್ತಮ ಕೆಲಸದ ವಾತಾವರಣ, ಸುರಕ್ಷಾ ಸೌಲಭ್ಯಗಳು ಸಿಗಲೇಬೇಕು. ಕೆಲಸ ಖಾಯಮ್ಮಾಗಬೇಕು. ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ಯಾಂತ್ರೀಕೃತಗೊಳಿಸಬೇಕು. ಅಸ್ಪೃಶ್ಯತೆ ಕೊನೆಯಾಗಬೇಕು.
  • ಗಾರ್ಮೆಂಟ್ಸ್ ನೌಕರರು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರು ಹಾಗೂ ಇನ್ನಿತರ ಅಸಂಘಟಿತ ವಲಯದ ದುಡಿಮೆಗಾರರಿಗೆ ಬದುಕುವ ವೇತನ, ಆರೋಗ್ಯಕರ ಕೆಲಸದ ವಾತಾವರಣ ಸಿಗಲೇಬೇಕು.
  • ಲೈಂಗಿಕ ವೃತ್ತಿಯ ಅಪರಾಧೀಕರಣ ನಿಂತು ಆ ವೃತ್ತಿಯಲ್ಲಿರುವವರಿಗೆ, ಅವರ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ, ಮತ್ತು ಉದ್ಯೋಗ ಮತ್ತು ಇತರೆ ನಾಗರಿಕ ಸೌಲಭ್ಯ ಸಿಗಬೇಕು. ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗೆ ಗಂಭೀರ ಪ್ರಯತ್ನಗಳಾಗಬೇಕು.
  • ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲಬೇಕು.
  • ಬಿಸಿಯೂಟ ಯೋಜನೆಯ ಖಾಸಗೀಕರಣವನ್ನು ತಡೆಯಬೇಕು. ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಉದ್ಯೋಗ ಭದ್ರತೆ, ಸೌಲಭ್ಯ ಹಾಗೂ ಯೋಗ್ಯ ವೇತನ ನೀಡಬೇಕು.
  • ಕೃಷಿಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಂಡು ಅವರ ಬದುಕನ್ನು ದಿಕ್ಕಾಪಾಲಾಗಿಸುವ ಭೂಸ್ವಾಧೀನ ಸುಗ್ರೀವಾಜ್ಞೆ ತಡೆಯಾಗಬೇಕು.
  • ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ ಮಾಡುವುದನ್ನು ನಿಲ್ಲಿಸಬೇಕು. ಹಾಗೂ ಅವರ ವ್ಯಾಪಾರ ಅಧಿಕೃತಗೊಳಿಸಬೇಕು.
  • ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ/ಕಾರ್ಪೊರೇಟೀಕರಣ ನಿಲ್ಲಬೇಕು. ಸರ್ಕಾರ/ಸಾರ್ವಜನಿಕರ/ಸಹಕಾರಿ ತತ್ವಗಳ ಸ್ವಾಮ್ಯತೆ ಜಾರಿಯಾಗಬೇಕು.
  • ಕಾರ್ಪೊರೇಟ್ ವಲಯದಲ್ಲಿ ಹಗಲು-ರಾತ್ರಿ ವ್ಯತ್ಯಾಸವಿಲ್ಲದ ದುಡಿಮೆ ನಿಲ್ಲಬೇಕು.

ಸಹಭಾಗಿ ಸಂಸ್ಥೆಗಳು : 
ಮಾನಸ ಬಳಗ, ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ, ವಿಮೆನ್ಸ್ ವಾಯ್ಸ್, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ-ಮಂಗಳೂರು, ಮೈಸೂರು ಜಿಲ್ಲಾ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಪಂದನ ಮಂಡ್ಯ, ಮಹಿಳಾ ಮುನ್ನಡೆ, ಗಾರ್ಮೆಂಟ್ ಆಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ, ಸಾಧನಾ ಮಹಿಳಾ ಸಂಘ, ವಿಮೋಚನ ಸಂಘ-ಅಥಣಿ, ಜನವಾದಿ ಮಹಿಳಾ ಸಂಘಟನೆ, ಎ.ಐ.ಎಂ.ಎಸ್.ಎಸ್., ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ, ಆಲ್ ಇಂಡಿಯಾ ಪ್ರೋಗ್ರೆಸಿವ್ ವಿಮೆನ್ಸ್ ಅಸೋಸಿಯೇಷನ್, ನ್ಯಾಷನಲ್ ಫೆಡರೇಷನ್ ಇಂಡಿಯನ್ ವಿಮೆನ್, ಭಾರತೀಯ ಮಹಿಳಾ ಒಕ್ಕೂಟ, ಕರ್ನಾಟಕ ದಲಿತ ಮಹಿಳಾ ವೇದಿಕೆ, ಅತ್ಯಾಚಾರ ವಿರೋಧಿ ಪ್ರಚಾರಾಂದೋಲನ, ಮಾನಿನಿ, ಗಾರ್ಮೆಂಟ್ಸ್ ಲೇಬರ್ ಯೂನಿಯನ್, ಮುನ್ನಡೆ ಸಾಮಾಜಿಕ ಸಂಘಟನೆ, ಸ್ತ್ರೀ ಜಾಗೃತಿ ಸಮಿತಿ, ಚರಕ ಮಹಿಳಾ ವಿವಿಧೋದ್ದೇಶ ಸಂಘ ಭೀಮನಕೋಣೆ, ಹೆಗ್ಗೋಡು, sಸಬಲ ಸಂಸ್ಥೆ-ಬಿಜಾಪುರ, ಸಖಿ ಸಂಸ್ಥೆ ಹೊಸಪೇಟೆ, ಕವಲಕ್ಕಿ ಮಹಿಳಾ ಸಂಘಟನೆ,  ಪಿ.ಯು.ಸಿ.ಎಲ್. ಕರ್ನಾಟಕ, ಎಸ್‌ಎಫ್‌ಐ, ಡಿವೈಎಫ್‌ಐ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಮತಾ ಸೈನಿಕ ದಳ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್), ದಲಿತ ಬಹುಜನ ಚಳವಳಿ, ಎಐಎಸ್‌ಎಫ್, ಎಐವೈಎಫ್, ಅಭಿಮತ, ಅನೇಕ, ಜೀವ, ಒಂದೆಡೆ, ಸ್ವರಾಜ್ ಸಮುದಾಯ ಸಂಘಟನೆ, ಯೂತ್ ಎಂಪವರ‍್ಡ್ ಇನ್ ಆಕ್ಷನ್ ಫಾರ್ ಹ್ಯುಮ್ಯಾನಿಟಿ, ರೇಡಿಯೋ ಆಕ್ಟೀವ್, ಪ್ರಜಾ ರಾಜಕೀಯ ವೇದಿಕೆ, ಸಂಚಯ ನೆಲೆ, ವಿಸ್ತಾರ್, ಜನಸಹಯೋಗ, ತರಿಕಿಟ ಕಲಾಕಮ್ಮಟ, ಸಂವಾದ, ಭಾರತೀಯ ಜ್ಞಾನ-ವಿಜ್ಞಾನ ಸಮಿತಿ, ನಾರ್ಥ್ ಈಸ್ಟ್ ಸಾಲಿಡಾರಿಟಿ, ಅಲೆಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ಬೀದಿ ವ್ಯಾಪಾರಿಗಳ ಸಂಘಟನೆ, ಸ್ಲಂ ಜನಾಂದೋಲನ ಸಮಿತಿ, ಪೌರಕಾರ್ಮಿಕರ ಸಂಘಟನೆ, ಐಎಸ್‌ಐ, ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್-ಮಹಿಳಾ ಘಟಕ, ಬಹುಳ ಜನವೇದಿಕೆ, ಮಂಥನ್ ಕಾನೂನು, ಪಯಣ, ಸಮಾಜವಾದಿ ಜನ ಪರಿಷದ್, ಕರ್ನಾಟಕ ಜನಶಕ್ತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಫೆಡಿನಾ, ಫೋರಂ ಫಾರ್ ವರ್ಕರ‍್ಸ್ ರೈಟ್ಸ್, ಭೂಮ್ತಾಯಿ ಬಳಗ ದೊಡ್ಡಬಳ್ಳಾಪುರ, ಬಯಲು ಬಳಗ, ಪೆಡೆಸ್ಟ್ರಿಯನ್ ಪಿಕ್ಚರ್ಸ್, ಎಐಸಿಸಿಟಿಯು, ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ‘ಸ್ವಾಕ್ - ಎ ಫೇಸ್‌ಬುಕ್ ಗ್ರೂಪ್’, ಸಮರ, ಕರ್ನಾಟಕ ಗಾರ್ಮೆಂಟ್ ವರ್ಕರ‍್ಸ್ ಯೂನಿಯನ್, ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಯೂನಿಯನ್, ರಿಟೈರ‍್ಡ್ ಅನ್ ಆರ‍್ಗನೈಸ್ಡ್ ಸೆಕ್ಟರ್ ಯೂನಿಯನ್, ಮನೆಗೆಲಸ ಕಾರ್ಮಿಕರ ಯೂನಿಯನ್, ಐಕ್ಯತ ಹಾಗೂ ಸಮಾನ ಮನಸ್ಕರು.
  
ಸಂಪರ್ಕ ಸಂಖ್ಯೆಗಳು :- 
ದು. ಸರಸ್ವತಿ  ೯೪೮೨೬೪೨೧೪೭
ವಾಣಿ ಪೆರಿಯೋಡಿ ೯೪೪೮೪೮೧೩೪೦
ವಿಮೋಚನಾ ೦೮೦-೨೫೪೯೨೭೮೧ ಮತ್ತು ೮೨.
ಸವಿತಾ. ಎ. ೯೪೪೮೩೬೭೩೩೩
ಅಖಿಲಾ ವಿದ್ಯಾಸಂದ್ರ ೯೪೪೮೭೫೮೬೧೭
ಪ್ರಭಾ ಬೆಳವಂಗಲ ೯೯೮೦೭೮೭೪೨೬
ಪುಷ್ಪಾ ೯೪೪೮೧೦೫೬೭೮
ಗೌರಿ ೮೯೭೧೨೩೨೩೨೯
ಗಾಟು ೦೮೦ ೨೬೭೪೫೨೪೨
ಸುಮನಾ, ಮೈಸೂರು ೯೪೪೮೧೭೭೧೧೭
ಸಬಿಹಾ ಭೂಮಿಗೌಡ ೯೪೪೮೬೯೬೮೯೮
ಎಚ್. ಎಸ್. ಪುಷ್ಪ ೯೯೮೦೯೧೩೮೪೪
ವೀಣಾ ಹೆಗಡೆ ೯೪೮೦೫೬೫೬೪೭
ಎಚ್. ಎಸ್. ಅನುಪಮಾ ೯೪೮೦೨೧೧೩೨೦

Monday 5 January 2015

ಹೊಸ ವರ್ಷದ ಅಂಗವಾಗಿ ಜರುಗಿದ 'ಕಾವ್ಯ ಸಂಜೆ'

ಕ್ಯಾಲೆಂಡರ್ ಮುಂದಕ್ಕೆ ಚಲಿಸಿದರೆ ನಾವು ಹಿಂದಕ್ಕೆ ಚಲಿಸುತ್ತಿದ್ದೇವೆ: ಮುನೀರ್ ಕಾಟಿಪಳ್ಳ 

 ಕಾಲವನ್ನು ನಿರ್ಧರಿಸುವ ಕ್ಯಾಲೆಂಡರ್ಗಳು ಮುಂದಕ್ಕೆ ಚಲಿಸಿದರೆ, ನಾವು ಮನುಷ್ಯರು ಜಾತಿಯತೆ, ಕೋಮುವಾದಗಳನ್ನು, ಭವಿಷ್ಯ, ಮೌಢ್ಯಗಳನ್ನು ಆಚರಿಸುವ ಮೂಲಕ ಹಿಂದಕ್ಕೆ ಚಲಿಸುತ್ತಿದ್ದೇವೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು.
ನಗರದ ಕಡಲತೀರದಲ್ಲಿರುವ ಯುದ್ದನೌಕೆಯ ಆವರಣದಲ್ಲಿ ಚಿಂತನ ರಂಗಅಧ್ಯಯನ ಕೇಂದ್ರ ಉತ್ತರ ಕನ್ನಡ, ಸಹಯಾನ ಕೆರೆಕೋಣ, ಕಸಾಪ ಕಾರವಾರ, ಮಂಥನ, ಎಸ್ ಎಫ್ ಐ ಕಾರವಾರ- ಸಂಘಟನೆಗಳ ಆಶ್ರಯದಲ್ಲಿ ಹೊಸ ವರ್ಷದ ಅಂಗವಾಗಿ ಜರುಗಿದ 'ಕಾವ್ಯ ಸಂಜೆ'ಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು. 
muneer

ಇತ್ತೀಚೆಗೆ ಪಾಕಿಸ್ತಾನನ ಪೇಶಾವರದಲ್ಲಿ ನೂರಾರು ಮಕ್ಕಳ ಮಾರಣಹೋಮ ನಡೆದಾಗ ಅದನ್ನು ಪ್ರತಿರೋಧಿಸುವ ಹಕ್ಕನ್ನು ನಮ್ಮಂಥವರಿಂದ ಕಸಿಯಲಾಗುತ್ತಿದೆ.  ಹೀಗೇಕೆ ಅಲ್ಲಾ ? ಎಂದು ಪ್ರಶ್ನಿಸಿದರೆ ಅಲ್ಲಾನನ್ನೆ ಪ್ರಶ್ನಿಸಿದ ಮುಸ್ಲಿಂ ನಾಸ್ತಿಕ ಎಂದು ಜರಿಯಲಾಗುತ್ತದೆ. ಮುಸ್ಲಿಂರಿಂದ ನಡೆದಾಗ ಮಾತ್ರ ನೀನು  ಯಾಕೆ ಮಾತಾಡುತ್ತಿ ಎಂದು ಮುಸ್ಲಿಂ ಎಂದರೆ, ಹಿಂದೂಗಳು ನಿಮ್ಮ ಧರ್ಮದವರಿಂದಲೇ ಹೀಗಾಗಿದೆ ಎಂದು ದೂರುತ್ತಾರೆ. ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸಿದರೆ ಮುಸ್ಲಿಮ್ ಹುಡುಗನಿಗೇಕೆ ಇದೆಲ್ಲಾ ಉಸಾಬರಿ ಎಮದು ಕೇಳುತ್ತಾರೆ.  ಎಂದು ವಿಷಾದ ವ್ಯಕ್ತಪಡಿಸಿದರು. 
 'ಪಿಕೆ ಸಿನೆಮಾದಲ್ಲಿ ಎಲ್ಲ ಧರ್ಮಗಳ ನ್ಯೂನ್ಯತೆಗಳು ಕುರಿತು ಅಮೀರ್ಖಾನ ಲೇವಡಿ ಮಾಡಿದ್ದಾರೆ. ಕೇವಲ ಹಿಂದೂ ಧರ್ಮಗಳ ಕುರಿತು ಎಂಬ ಅಪಾದನೆ ಸರಿಯಲ್ಲ.  ನಮ್ಮ ಧರ್ಮ ನಿಮ್ಮ ಧರ್ಮ ಎಂದು ಬಡಿದಾಡುವುದಕ್ಕಿಂತ ಆತ ಹೇಳಿರುವ ವಾಸ್ತವ ಅಂಶಗಳ ಕುರಿತು ಚಿಂತಿಸಬೇಕಿದೆ. ಅನ್ಯಗೃಹದ ವ್ಯಕ್ತಿಯಾದ ಅಮೀರಖಾನ್ ಮಸೀದಿಗೆ ಮದ್ಯದ ಬಾಟಲಿಗಳನ್ನು ಅಪರ್ಿಸಲು ಹೋದಾಗ ಅಲ್ಲಿನ ಮೌಲ್ವಿಗಳು ಬೆನ್ನಟ್ಟುವ ಒಂದು ದೃಶ್ಯ ಸಾಕು ಆತ ಮುಸ್ಲಿಂ ಧರ್ಮವನ್ನು ವಿಶ್ಲೇಷಿಸದೆ ಬಿಟ್ಟಿಲ್ಲ ಎನ್ನುವುದಕ್ಕೆ' ಎಂದರು.
  ಪ್ರೇಮ ಕವಿತೆಗಳನ್ನು ಮಾತ್ರ ಬರೆಯುವ ಸಮಯ ಈಗ ಇಲ್ಲ. ಎಲ್ಲರೂ ಮಾನವೀಯತೆಯನ್ನು ಹರಡುವ ಬರಹಗಳನ್ನು,ಸಕಾರಾತ್ಮಕ ಚಿಂತನೆಗಳನ್ನು ಹರಡುವತ್ತ  ಚಿಂತಿಸಬೇಕಿದೆ. ಈ ಬಲವನ್ನು 2015ನೇ ಇಸ್ವಿ ಕೊಡಲಿ ಎಂದು ಆಶಿಸಿದರು.
basavaraj hugar

 
 'ಕಾವ್ಯ ಸಂಜೆ'ಗೆ  ಉರಿವ ಎದೆಯಲ್ಲಿ ಉಳಿದ ಪ್ರಶ್ನೆ ಎಂಬ ಕವಿತೆ ಓದುವ ಮೂಲಕ ಚಾಲನೆ ನೀಡಿದ ಕವಿ ಬಸವರಾಜ ಹೂಗಾರ, ಯುದ್ದದ ಸ್ಮಾರಕದ ಮುಂದೆ ನಾವು ಮನಸ್ಸು ಮನಸ್ಸುಗಳನ್ನು ಕೂಡಿಸುವ ಕವಿತೆಗಳನ್ನು ಓದುತ್ತಿರುವುದು ಆಶಾದಾಯಕ.  ಯುದ್ದದ ಚಿಹ್ನೆಗಳನ್ನು ಮತ್ತು ಸ್ಮಾರಕಗಳನ್ನು ನೋಡಿದಾಗ ನಮಗೆ ದುಖಃವಾಗಬೇಕು. ಯುದ್ದವೆಂದರೆ ಇನ್ನೊಬ್ಬರ ಬದುಕನ್ನು, ಅಸ್ತಿತ್ವವನ್ನು ಅಲ್ಲಗಳೆಯುವುದಕ್ಕಾಗಿ ನಡೆಸುವ ಮಾರಣಹೋಮವಾಗಿರುತ್ತದೆ. ಜಗತ್ತಿನ ಎಲ್ಲ ಯುದ್ದದ ಸಾಧನಗಳು ಈ ಯುದ್ದನೌಕೆಯಂತೆ ವಿಶ್ರಾಂತಿ ಪಡೆಯುವಂತಾಗಬೇಕು. ಎಲ್ಲರಲ್ಲಿ ತಾಯ್ತನದ ಗುಣಗಳು ಅರಳುವಂತಾಗಬೇಕು ಎಂದು ಆಶಿಸಿದರು.
naveen suranje
 
ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಹೊಸ ವರ್ಷವೆಂದರೆ ಕೇವಲ ಕ್ಯಾಲೆಂಡರ್ ಬದಲಾವಣೆಯಷ್ಟೆ. ಅಮಾಯಕರ ಮೇಲೆ ಕೋಮುವಾದ, ಭಯೋತ್ಪಾದಕತೆಗಳು ಎಂದಿನಂತೆ ಮುಂದುವರೆಯವುದನ್ನು ತಡೆಗಟ್ಟಿದರೆ ಮಾತ್ರ  ಮುಂಬರುವ ವರ್ಷವನ್ನು ಸಂಭ್ರಮಿಸಬಹುದಾಗಿದೆ. ಎಂದರು. ಮುಂದುವರಿದು ಭಯೋತ್ಪಾದನೆ ಎಂದರೆ ಕೇವಲ ಮುಸ್ಲಿಂರು ನಡೆಸುವದಷ್ಟೆ ಭಯೋತ್ಪಾದನೆಯಲ್ಲ. ನೈತಿಕ ಪೋಲೀಸ್ಗಿರಿ ಹೆಸರಲ್ಲಿ ಮಂಗಳೂರು, ಉಡುಪಿ, ಗುಜರಾತಿನಲ್ಲಿಯೂ ನಡೆಯುವುದೆಲ್ಲವೂ ಭಯೋತ್ಪಾದನೆಯೇ ಆಗಿದೆ. ಇಂಥ ನೈತಿಕ ಪೋಲಿಸ್ಗಿರಿಯನ್ನು ವಿರೋಧಿಸಲು ಹೋಗಿ ನಾನು 2013ರ ಹೊಸವರ್ಷವನ್ನು ಜೈಲಿನಲ್ಲಿಯೇ ಕಳೆಯುವಂತಾಗಿತ್ತು. ಆಗ ನಾನು ಗಮನಿಸಿದ್ದೆಂದರೆ  ಜೈಲಿನಲ್ಲಿ ಕೇವಲ ಹಿಂದುಳಿದ, ತಳಸಮುದಾಯದವರೇ ಜೈಲಿನಲ್ಲಿದ್ದರು. ಮೇಲುವರ್ಗದವರು ಯಾರೊಬ್ಬರು ಜೈಲಿನಲ್ಲಿರಲಿಲ್ಲ. ಇದೊಂಥರಾ ಭಯೋತ್ಪಾದನೆ ಇದ್ದಂತೆಯೇ ಎಂದರು.
ಕಾರವಾರ ಕಸಾಪ ಕಾರವಾರ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಉಪಸ್ಥಿತರಿದ್ದರು. ಸಹಯಾನದ ವಿಠ್ಠಲ್ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ  ಕಾವ್ಯ ಮತ್ತು ಕನಸುಗಳು ಮನುಷ್ಯನಿಂದ ದೂರಸರಿಯುತ್ತಿದೆ. ಅದನ್ನು ಮತ್ತೆ ಮನುಷ್ಯ ಕೇಂದ್ರಕ್ಕೆ ತರಬೇಕಾಗಿದೆ. ಇಲ್ಲದಿದ್ದರೆ ಮನುಷ್ಯ ವಿರೋಧಿಯಾದ ಮಡೆಸ್ನಾನ, ಪೇಶಾವರದ ಮಕ್ಕಳ ಮಾರಣ ಹೋಮ, ದಲಿತರ ಮೇಲಿನ ದೌರ್ಜನ್ಯ, ಮಹಿಳೆಯ ಮೇಲಿನ ಅತ್ಯಾಚಾರ, ಮರುಮತಾಂತರ, ನೈತಿಕ ಪೋಲಿಸುಗಿರಿಹೀಗೆ ಮುಂದುವರಿಯುತ್ತದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಯುದ್ಧವನ್ನು ವಿಜೃಂಭಿಸುತ್ತಿರುವ ಹೊತ್ತಿನಲ್ಲಿ ಜಗತ್ತಿನಲ್ಲಿರುವ ಎಲ್ಲಾ ಯುದ್ಧಹಡಗುಗಳು, ಯುದ್ಧವಿಮಾನಗಳು ಹೀಗೆ ಯುದ್ದ ನಿಲ್ಲಿಸಿ ನಿಂತಿರುವ ದಿನಗಳು ಬೇಗ ಬರಲಿ ಎಂಬಾಶಯದಿಂದ ಪ್ರತಿ ವರ್ಷ ಇಲ್ಲಿ 'ಕಾವ್ಯ ಸಂಜೆ' ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ಎಂದರು. ಮಂಥನದ ರಮೇಶ ಭಂಡಾರಿ ವಂದಿಸಿದರು. ರಾಮಾನಾಯ್ಕ, ದಾಮೋದರ ನಾಯ್ಕ ನೆನಪಿನ ಕಾಣಿಕೆ ಅಪರ್ಿಸಿದರು.
vittal bhandari

 ಕಾರವಾರ ಆಕಾಶವಾಣಿ ಮುಖ್ಯಸ್ಥ  ಬಸು ಬೇವಿನಗಿಡದ್, ಎಂ. ಖಲೀಲುಲ್ಲಾ, ಶ್ರೀದೇವಿ ಕೆರೆಮನೆ, ಕೃಷ್ಣಾನಂದ ಬಾಂದೇಕರ್, ನಾಗರಾಜ ಹರಪನಹಳ್ಳಿ, ಪ್ರೇಮಾ ಟಿ.ಎಂ.ಆರ್, ಹನುಮಂತ ಹಾಲಿಗೇರಿ, ಜಯಶೀಲ ಆಗೇರ, ಎಂ.ಎ.ಖತೀಬ್, ಕಡವಾಡ, ಯಮುನಾ ಗಾಂವ್ಕರ, ವಸಂತ ಬಾಂದೇಕರ್, ಜಿ.ಡಿ.ಪಾಲೇಕರ್, ಶಂಕರ ಗೌಡ, ಶ್ರೀನಿವಾಸ ನಾಯ್ಕ ಅಣ್ವೇಕರ್ ಮುತಾದವರು ಕವಿತೆ ವಾಚಿಸಿದರು. 
Show less  ·  Translate