Saturday 22 November 2014

ನಾಗೇಶ ಹೆಗಡೆಯವರ ಸಾಹಿತ್ಯದ ಕುರಿತು ವಿಠ್ಠಲ

Nagesh Hegde-ನಾಗೇಶ ಹೆಗಡೆಯವರ ಸಾಹಿತ್ಯದ ಕುರಿತು ವಿಠ್ಠಲ ಭಂಡಾರಿ ಭಾಗ 2 vittal Bhandari

Monday 10 November 2014

ಸುಬ್ರಾಯ ಮತ್ತಿಹಳ್ಳಿ ನಾಗೇಶ ಹೆಗಡೆ ಬರಹದ ಕುರಿತು

 
ಸುಬ್ರಾಯ ಮತ್ತಿಹಳ್ಳಿ ನಾಗೇಶ ಹೆಗಡೆ ಬರಹದ ಕುರಿತು subraya mattihalli

ಬಸವರಾಜ ಹೂಗಾರ : ಕವಿತೆ ಓದು

 
ಬಸವರಾಜ ಹೂಗಾರ : ಕವಿತೆ ಓದು-basavaraj hugar

Thursday 30 October 2014

ಅಮಾಸೆ ಹುಡುಗನ ಬಾಯೊಳಗೆ ಕವಳ -ಯಮುನಾ ಗಾಂವ್ಕರ್

ಅಮಾಸೆ ಹುಡುಗನ ಬಾಯೊಳಗೆ ಕವಳ
ಮನದಲಿ ತಳಮಳ-ಕಳವಳ
ಮನಸ್ಸು ನಿಗಿನಿಗಿ ಕೆಂಡ
ಮುಖಚರ್ಯೆಯಲಿ ಕುದಿಬಿಂದು
ಹೃದಯದಲಿ ಮಾನವತೆ
ಇದು ವಿಡಂಬಾರಿ ಕವಿತೆ !
DSCN0560

ಆಂತರ್ಯದಲಿ ಗುನುಗುನಿಸಿದ, ಹಂಬಲಿಸಿದ, ಬಯಸಿದ
ಮನುಷ್ಯತ್ವ. . .ಮಾನವತೆ. . .ಬಂಧುತ್ವ
ಜನಮನದಾಳ ದ್ವೇಷದ ಸಿಕ್ಕು ಬಿಡಿಸುತ
ಬೋಧಿಸಿದನೀತ, ಪ್ರೀತಿಯ ಹೂಗಳ ಅರಳಿಸಿದನೀತ
 ಅಕ್ಷರದ ಸಾಂಗತ್ಯ ಇವಗೇಕೆ ಬೇಕು?
ಹೀಗಳೆವರೆನ್ನ ಎನ್ನದೇ, ಬಾಯ್ಬಿಡದೇ
ಬರಸೆಳೆದ ಚಾವಟಿಗೆಯ
ಪಟಾರ್ ಎಂದು ಬಿರುಸಿನಲಿ ಬೀಸಿದ
ಪ್ರಶ್ನಿಸಿದವಗೆ ಬಾಯುತ್ತರ ತಪ್ಪಿ
ಚುಟುಕಿನ ಬಾರೇಟು ಕನ್ನೆತ್ತರು ಗಟ್ಟಿತು
ಅವಮಾನ . . ಅಪಮಾನಗಳ ಮೊಗೆಮೊಗೆದು
ಸೈರಿಸಿದ ಸಂಚಯಿಸಿದ ಜೋಳಿಗೆಯಲಿ, ಕಂಕುಳ ಪುಸ್ತಕದಲಿ
ಲೇಖನಿಯ ತುದಿ ಮಾತ್ರ ಸವೆಯಲಿಲ್ಲ
ಕಣ್ಣತೇವ ಮಸಿಕುಡಿಕೆ
ಅಕ್ಷಯ ಅಕ್ಷರಕೆ ಸದಾ
ಮುನ್ನುಡಿ ಬರೆಯುತ್ತಲೇ ಹೋದನೀತ!
                                                   -ಯಮುನಾ ಗಾಂವ್ಕರ್

ವಿಡಂಬಾರಿ ಅವರ ಪ್ರಕಟಿತ ಪುಸ್ತಕದ ಕುರಿತು………


Standard
vidambari
ವಿಡಂಬಾರಿ
ಒಗ್ಗರಣೆ ಕುರಿತು ಡಾ. ಶಾಲಿನಿ ರಘುನಾಥ
ವ್ಯಾಪಕವಾದ ರೀತಿಯಲ್ಲಿ ಚುಟುಕು ಸಾಹಿತ್ಯ ಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡ ಜನಪ್ರಿಯ ಕವಿಗಳಲ್ಲಿ ದಿನಕರ ದೇಸಾಯಿಯವರನ್ನು ಬಿಟ್ಟರೆ, ವಿಡಂಬಾರಿಯವರ ಹೆಸರು ವಿಶೇಷವಾಗಿ ಕೇಳಿ ಬರುತ್ತಿದೆ. ಅವರು ಈಗಾಗಲೇ 2000 ಕ್ಕೂ ಹೆಚ್ಚು ಚುಟುಕುಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮೊದಲ ಕಂತಾಗಿ 500 ಚುಟುಕುಗಳ ಒಗ್ಗರಣೆ ಸಂಕಲನ ಹೊರಬಂದಿದೆ. ಈ ಕವಿ ಶಾಲೆಗೆ ಹೋಗಿ ಕಲಿತದ್ದು ವಿಶೇಷವಲ್ಲದಿದ್ದರೂ ಬದುಕಿನಿಂದ ಕಲಿತದ್ದು ಅಪಾರ. ಇದನ್ನು ನಾವು ಅವರ ಚುಟುಕುಗಳಿಂದಲೇ ಅರಿಯಬಹುದು. ಶೋಷಣೆಗೆ ಒಳಗಾದ ನಿಮ್ಮ ವರ್ಗದ ಕವಿಯ ಆಕ್ರಂದನವನ್ನೂ ಆಂತಕವನ್ನೂ ಅವರ ಚೌಪದಿಗಳಲ್ಲಿ ನಾವು ಕಾಣುತ್ತೇವೆ.
ಇದ್ದವರು ಬರೆಬರೆದು ಮುದ್ರಣವ ಮಾಡಿ
ಸದ್ದು ಗದ್ದಲದಿಂದ ಹಂಚುವರು ನೋಡಿ
ನಾನೇನ ಮಾಡುವೆನು ಬಡ ಬೋರೆಗೌಡ
ಮೂಲೆಯಲಿ ಕುಳಿತಲ್ಲೆ ಹಾಡುವೆನು ಹಾಡ (ಬೋರೆಗೌಡ)
– ಎಂದು ಪ್ರಾರಂಭದಲ್ಲಿಯೇ ನಿವೇದಿಸಿಕೊಳ್ಳುತ್ತಾರೆ.
ಚುಟುಕಗಳನ್ನು ಬರೆಯಲಿಕ್ಕೆ ಸ್ಫೂತರ್ಿ ದಿನಕರ ದೇಸಾಯಿಯವರೇ ಆದರೂ ತಮ್ಮತನವನ್ನು ಉಳಿಸಿಕೊಂಡಿರುವೆನೆಂಬ ಆತ್ಮ ವಿಶ್ವಾಸವು ಅವರಿಗಿದೆ.
ಚೌಪದಿಗೆ ಜನಕನೇ ದಿನಕರನು ನೋಡಿ
ಬರೆಯುವೆನು ದಿನಕರನ ಸ್ಮರಣೆಯನು ಮಾಡಿ
ಆದರೂ ಇನ್ನೊಂದು ಮಾತುಂಟು ಕೇಳಿ
ತುಂಬಿಹೆನು ಇದರೊಳಗೆ ನನ್ನದೇ ಗಾಳಿ (ಸ್ಮರಣೆ)
ಆತ್ಮೀಯತೆ, ತಿಳಿಯಾದ ಆತ್ಮ ವಿಮಶರ್ೆ, ಹರಿತವಾದ ವಿಡಂಬನೆ ಇವೆಲ್ಲ ಒಗ್ಗರಣೆಯ ಚುಟುಕುಗಳಲ್ಲಿವೆ. ಈ ವಿಷಯದಲ್ಲಿ ಕವಿಯ ಪ್ರಾಮಾಣಿಕತೆ ಧೈರ್ಯ ಮೆಚ್ಚುವಂತಹದೇ. ತಮ್ಮ ಹೆಸರನ್ನೇ ವಿಡಂಬಿಸಿಕೊಂಡವರು ಅವರು! ಸಾಮಾಜಿಕ ವಿಷಮತೆ ಅನ್ಯಾಯಗಳನ್ನು ಕಂಡಾಗ ಮನ ಕುದಿ ಕುದಿದು ಸಿಡಿದುಕ್ಕಿ ಹೊರಚೆಲ್ಲಿದ ಪರಿಣಾಮ, ಕೆಲವು ಚುಟುಕುಗಳು; ಮತ್ತೆ ಕೆಲವಂತೂ ಯಾವ ಮುಲಾಜಿಲ್ಲದೆ ಕೆತ್ತುರುಳಿಸುವ ಬುಲ್ಡೋಜರ್ ಗಾಡಿಗಳು. ಒಟ್ಟಿನಲ್ಲಿ ನಮ್ಮ ಸಮಾಜದಲ್ಲಿ ತಾವು ಕಂಡುದನ್ನು ಅವರು ಬರೆದಿದ್ದಾರೆ; ಬರೆದು ತೊಡಕಿನಲ್ಲಿ ಸಿಲುಕಿಸಿಕೊಂಡಿದ್ದಾರೆ; ಆದರೆ ತೊಡಕು ಹೆಚ್ಚಾಯಿತೆಂದು ಬರೆಯುವ ಹುಚ್ಚನ್ನು ಮಾತ್ರ ಬಿಟ್ಟಿಲ್ಲವಾದ್ದರಿಂದಲೇ ಅವರು ಮಹತ್ವದ ಕವಿಯೆನಿಸುತ್ತಾರೆ.
ಒಗ್ಗರಣೆಯಲ್ಲಿ ಪ್ರಸ್ತಾವನೆ, ವ್ಯಕ್ತಿಗತ, ಜಾತಿ, ರಾಜಕೀಯ, ಕಾಳ ಸಂತೆ, ಸಂಕೀರ್ಣ ಎಂಬ ಆರು ವಿಭಾಗಗಳನ್ನು ಮಾಡಿದ್ದರೂ ಕೊನೆಯ ಸಂಕೀರ್ಣದಲ್ಲಿ ಉಳಿದ ಐದುಬಗೆಯ ವಿಭಾಗಗಳಿಗೆ ಸೇರಬಹುದಾದ ಚುಟುಕುಗಳಿವೆ. ಸಂಪಾದನಾಕಾರ್ಯದಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಿದ್ದರೆ, ಸಮರ್ಪಕತೆಯ ಪ್ರಮಾಣವನ್ನು ಏರಿಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಕೆಲವು ಚುಟುಕುಗಳ ಹಾಗೂ ಚುಟುಕುಗಳ ತಲೆಬರಹಗಳ ಪುನರುಕ್ತಿಗಳನ್ನೂ ತಪ್ಪಿಸಬಹುದಿತ್ತು. ಇದರಿಂದ ಒಗ್ಗರಣೆ ಹೆಚ್ಚು ವ್ಯವಸ್ಥಿತವಾಗುತ್ತಿತ್ತು. ಇಷ್ಟಾದರೂ ತಮ್ಮ ಸುತ್ತಲಿನ ಸಮಾಜದ ನಿತ್ಯದ ಆಗುಹೋಗುಗಳಿಗೆ ಜೀವಂತವಾಗಿ ಹಾಗೂ ಸತ್ವಯುತವಾಗಿ ಪ್ರತಿಕ್ರಿಯಿಸುತ್ತಿರುವ ವಿಡಂಬಾರಿಯವರು ತಮ್ಮ ಒಗ್ಗರಣೆಯ ಕಂಪಿನಿಂದ ಸಹೃದಯರನ್ನು ದೂರದಿಂದಲೇ ಆಕರ್ಷಿಸುತ್ತಾರೆ.
(ಸೌಜನ್ಯ : ಗ್ರಂಥಲೋಕ)
@@@@@@@@@@@@
???????????????????????????????
ವಿಡಂಬಾರಿ
ವಿಡಂಬಾರಿ ಅವರ “ಕವಳ” 
ಡಾ. ಪುರುಷೋತ್ತಮ ಬಿಳಿಮಲೆ
ದಿನಕರ ದೇಸಾಯಿಯವರ ಅನಂತರ ಚೌಪದಿಗಳ ಕಾಲ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇದೀಗ ವಿಡಂಬಾರಿಯವರು ಕವಳದ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಚೌಪದಿಗಳಿಗೆ ಉತ್ತರ ಕನ್ನಡ ಇನ್ನೂ ಫಲವತ್ತಾದ ಭೂಮಿಯಾಗಿದೆ ಎಂಬುದಕ್ಕೆ ಇದೊಂದು ದೃಷ್ಟಾಂತ.
ಚೌಪದಿಗಳ ಪ್ರಧಾನ ಗುಣ ಎರಡು. ಮೊದಲನೆಯದಾಗಿ ಮಿತವಾದ ಮಾತುಗಳಲ್ಲಿ ಗಂಭೀರವಾದ ಅರ್ಥವನ್ನು ಹಿಡಿದಿಡುವುದು ಮತ್ತು ಎರಡನೆಯದಾಗಿ ಚೌಪದಿಯ ಕೊನೆ ಸಾಲಿನಲ್ಲಿ ಮಾಮರ್ಿಕವಾದ ತಿರುವೊಂದನ್ನು ತುಂದಿರುವುದು. ಈ ಕೊನೆಯ ಸಾಲು ಅನೇಕ ಬಾರಿ ವಿಡಂಬನಾ ಪ್ರಧಾನವಾಗಿದ್ದು, ಅದಕ್ಕಿಂತ ಮೊದಲಿನ ಮೂರು ಸಾಲುಗಳಿಗೆ ಹೊಸ ಅರ್ಥವನ್ನು ಕೊಡುವಷ್ಟು ಸಶಕ್ತವಾಗಿರುವುದು. ದೇಸಾಯಿಯವರು ಈ ಎರಡನೆಯ ಗುಣವನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದರು. ಕನ್ನಡದ ತ್ರಿಪದಿಗಳ ಸಾರ್ವಭೌಮನಾದ ಸರ್ವಜ್ಞನು ಮೊದಲನೇ ಗುಣಕ್ಕೆ ಹೆಸರಾದವನು.
ವಿಡಂಬಾರಿಯವರು, ಅವರ ಕಾವ್ಯನಾಮದಂತೆ, ವಿಡಂಬನೆಯಲ್ಲಿ ಪ್ರಸಿದ್ಧರು. ಇದು ಚೌಪದಿಯ ಕೊನೆ ಸಾಲಿನಲ್ಲಿ ಬರುತ್ತಿದ್ದದ್ದು, ಇವರಲ್ಲಿ ಆರಂಭದಲ್ಲಿ ಬಂದು ಬಿಡುತ್ತದೆ.
ಉದಾ : ಕನರ್ಾಟಕ ರಾಜ್ಯ ಸೋರಿಗೆಯ ಗಾಡಿ
ಗುರಿಯ ಮುಟ್ಟುವುದುಂಟೆ ಒಂದು ಕಡೆ ಓಡಿ
ಪ್ರಯಾಣಿಕರ ಮಾತ್ರ ಬೋಳಿಸುವ ದಾರಿ
ಚೆನ್ನಾಗಿ ಗೊತ್ತುಂಟು ಮಿತಿಯನ್ನು ಮೀರಿ. (337)
ಇಲ್ಲೂ ಮೊದಲ ಸಾಲಿನಲ್ಲಿ ಬರುವ ರಾಜ್ಯ ಸೋರಿಗೆ ಎಂಬುದು ವಿಡಂಬನೆಗಾಗಿಯೇ ಬಂದಿದೆ. ಚೌಪದಿಯ ಮುಂದಿನ ಸಾಲುಗಳು ಇದನ್ನು ಮೀರಿ ಬೆಳೆಯುವುದಿಲ್ಲದ ಕಾರಣ ಈ ವಿಡಂಬನೆ ಹೆಚ್ಚು ಯಶಸ್ವಿಯಾಗುವುದಿಲ್ಲ. ಆದರೆ ಸಾಮಾಜಿಕ ಕಳಕಳಿ ಹೆಚ್ಚು ಇರುವ ಚೌಪದಿಗಳಲ್ಲಿ ಈ ವಿಡಂಬನಾ ಗುಣ ಅತ್ಯಂತ ಸಲೀಸಾಗಿ ಬಂದು ಬಿಟ್ಟಿದೆ.
ತೋಡಿರುವ ಪ್ರತಿಯೊಂದು ಬಾವಿಯಲಿ ನೀರು
ಬಂದೇ ಬರುವುದೆಂದು ಕಂಡವರು ಯಾರು
ಹೀಗಾಗಿ ಹಲವಾರು ಬಾವಿಗಳು ಇಲ್ಲಿ
ತುಂಬುವುವು ಸಂಪೂರ್ಣ ಮಳೆಗಾಲದಲ್ಲಿ.
ಇಲ್ಲಿಯ ಕೊನೆ ಸಾಲು ಚೌಪದಿಯನ್ನು ಅತ್ಯಂತ ಅರ್ಥವಾತ್ತಾಗಿಸಿದೆ. ಇಂಥ ಅನೇಕ ಚೌಪದಿಗಳು ವಿಡಂಬಾರಿಯವರ ಕಾವ್ಯಶಕ್ತಿಯನ್ನು ಪ್ರಕಟಪಡಿಸುತ್ತವೆ. 76, 82, 88, 104, 137, 210, 47, 259, 265, 309, 385, 416, 513, 568, 603, 614, 813, 782, 831, 814 ಈ ಚೌಪದಿಗಳು ವಿಡಂಬನಾ ಗುಣಕ್ಕಾಗಿ ಹಾತೊರೆಯುತ್ತಿರುವುದರಿಂದ ಮುಖ್ಯವಾಗುತ್ತವೆ.
ಕವನ ಸಂಕಲನವನ್ನು ಐದು ಭಾಗಗಳಲ್ಲಿ ಹಂಚಿದ್ದಾರೆ. ಈ ವಿಭಾಗ ಅಭ್ಯಾಸದ ಸೌಕರ್ಯಕ್ಕೆ ಹೇಗೋ ಹಾಗೇ ವಸ್ತುವಿನ ದೃಷ್ಟಿಯಿಂದಲೂ ಹೌದು. ಮೊದಲ ಭಾಗ ಆತ್ಮ ನಿವೇದನೆಯಲ್ಲಿ 55 ಚೌಪದಿಗಳಿದ್ದು, ಎಲ್ಲವೂ ತೀರಾ ಸಾಮಾನ್ಯ ರಚನೆಗಳಾಗಿವೆ. ಕವಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಮುಖ್ಯ ಅಷ್ಟೇ. ಒಂಥರಾ ಆತ್ಮ ಚರಿತ್ರೆಯ ಲೇಪ ಇದರಲ್ಲಿದೆ. ಎರಡನೆಯದಾದ ಸಾಮಾಜಿಕದಲ್ಲಿ 400 ಚೌಪದಿಗಳಿದ್ದು ಹೆಚ್ಚಿನವು ವ್ಯಂಗ್ಯ ಇಲ್ಲವೇ ಕಟಕಿಯಿಂದ ಯಶಸ್ವಿಯಾಗಿವೆ. ಮೂರನೇ ಭಾಗ ನೀತಿಪರವಾದದ್ದು. ಅದರಲ್ಲಿ ಒಟ್ಟು 92 ಚೌಪದಿಗಳಿದ್ದು ಕವಿಯ ನೈತಿಕ ದೃಷ್ಟಿಕೋನವನ್ನು ವಿವರಿಸಿ ಹೇಳುತ್ತದೆ. ಇಂಥ ಕಡೆ ಚೌಪದಿಗಳು ಬರೇ ಹೇಳಿಕೆಗಳಾದದ್ದೂ ಇದೆ. ಆದರೂ ಕವಿಯ ಮಾನವೀಯ ಕಳಕಳಿಯನ್ನು ಆಕ್ಷೇಪಿಸುವಂತಿಲ್ಲ. ನಾಲ್ಕನೆಯದಾದ ರಾಜಕೀಯ ಎಂಬ ಭಾಗದಲ್ಲಿ 113 ಚೌಪದಿಗಳಿದ್ದು, ಅವೆಲ್ಲವೂ ರಾಜಕೀಯ ವಿಡಂಬನೆಯಲ್ಲಿ ಯಶಸ್ವಿಯಾಗಿದೆ. ಅಧಿಕಾರ ಲಾಲಸೆ, ಮತಬೇಡಿಕೆಯ ಹಿಂದಿನ ಧೂರ್ತತನ, ಬಡವರುದ್ಧಾರದ ಸೋಗು ಇವನ್ನೆಲ್ಲ ಬಯಲಿಗೆಳೆಯಲಾಗಿದೆ.
ವಿಡಂಬಾರಿಯವರಿಗೆ ಚೌಪದಿಯ ಗುಣಗಳು ಗೊತ್ತಿವೆ. ಸಹಜವಾದ ಪ್ರಾಸ ಮತ್ತು ಲಯ ವಿನ್ಯಾಸ ಅವರಿಗೆ ಸಿದ್ಧಿಸಿದೆ. ಸಮಾಜವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ಚೌಪದಿಗಳಲ್ಲಿ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಬಲ್ಲರು. ಕವಳ ಅವರ ಸಾಧನೆಯ ಮೈಲಿಗಳಲ್ಲು.
(ಸೌಜನ್ಯ : ಮಂಗಾರು ದೈನಿಕ)
@@@@@@@@@
DSCN5638
ವಿಡಂಬಾರಿ
 ಅಂಚೆಪೇದೆಯ ಆತ್ಮಕಥನ -       ಪ್ರಕಾಶ ಕಡಮೆ
ಈ ಕೃತಿ ಶ್ರೀ ರಾಘವೇಂದ್ರ ಪ್ರಕಾಶನದ 1995ರ ಬೆಳ್ಳಿ ಸ್ಮರಣೆಮಾಲೆಯಿಂದ ಹೊರಬಂದಿದೆ. ಶ್ರೀಯುತ ವಿ.ಜಿ. ಭಂಡಾರಿಯವರು ವಿಡಂಬಾರಿಯಾದ ಕಥೆ ಈ ಕೃತಿಯಲ್ಲಿದೆ. ಇವರ ಪ್ರಥಮ ಚುಟುಕು ಸಂಕಲನ ಒಗ್ಗರಣೆಗೆ ಮುನ್ನುಡಿ ಬರೆಯುತ್ತ ಹಿರಿಯ ಸಾಹಿತಿಗಳಾದ ಶ್ರೀ ಯಶವಂತ ಚಿತ್ತಾಲರು, ಮಹಾರಾಷ್ಟ್ರದ ದಲಿತ ಲೇಖಕ ದಯಾ ಪವಾರ್ ಬರೆದ ಆತ್ಮಕಥೆ ಬಲೂತಕ್ಕೆ ಹಿಂದೆ ಬೀಲದ ಸಾಹಿತ್ಯ ಕೃತಿಯೊಂದು ನಿಮ್ಮ ಆತ್ಮಕಥೆಯಲ್ಲಿ ಸಿಗುವಂತಾಗಲಿ ಎಂದು ಈ ಕೃತಿ ರಚಿಸಲು ಪ್ರೋತ್ಸಾಹಿಸಿದ್ದರಂತೆ. ಅದರಿಂದ ಸ್ಫೂತರ್ಿ ಹೊಂದಿ ಈ ಬರವೆಣಿಗೆಗೆ ತೊಡಗಿಕೊಂಡಿರುವದಾಗಿ ವಿಡಂಬಾರಿಯವರೇ ಹೇಳಿಕೊಂಡಿದ್ದಾರೆ.
ಆತ್ಮ ಕಥೆಯುದ್ದಕ್ಕೂ ಅವರು ಹೆಸರಿಸಿದ ಕೃತಜ್ಞತೆಯ ಪಟ್ಟಿ ತುಂಬ ದೊಡ್ಡದಿದೆ. ಅದು ವಿಡಂಬಾರಿಯವರ ದೊಡ್ಡತನ. ತಾನು ಚಿಕ್ಕವನಿದ್ದಾಗ ಎಲ್ಲದಕ್ಕೂ ಹೌದ್ರಾ ಒಡೆಯಾ ಎನ್ನುವ ಕಾಲವಿತ್ತು. ಇಲ್ರಾ ಒಡೆಯಾ ಎನ್ನುವುದಕ್ಕೆ ಅವಕಾಶವಿದ್ದದ್ದು ಯಾವಾಗೆಂದರೆ ಅದು ನನ್ನ ಅಜ್ಜನನ್ನು ಒಡೆಯರು, ಊಟ ಆಯ್ತಾ ವೆಂಕಪ್ಪಾ? ಅಂತ ಕೇಳಿದಾಗ ಮಾತ್ರ ಎಂದು ಬಡತನದ ರೂಪಕದಿಂದ ಪ್ರಾರಂಭವಾಗುವ ಈ ಆತ್ಮಕಥೆಯನ್ನು ಓದುತ್ತಿದ್ದಂತೆ ಸಹಜವಾಗಿ ಮನದುಂಬಿ ಬರುತ್ತದೆ. ವೆಂಕಪ್ಪಜ್ಜನ ಮುಗ್ಧತನದಿಂದ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟವರ ಸ್ವಾರ್ಥದಿಂದ ಲೇಖಕರ ತಾಯಿ ಗಣಪಿ ದೇವರ ಹೆಸರಿನಲ್ಲಿ ದೇವದಾಸಿಯಾದ ಪ್ರಕರಣವಂತೂ ಮೈಯಲ್ಲಿ ಮುಳ್ಳೇಳಿಸುವಂಥದು.
1938 ರಲ್ಲಿ ಅಮವಾಸ್ಯೆಯ ದಿನ ಹುಟ್ಟಿದ ಲೇಖಕರು ಚಿಕ್ಕಮ್ಮನಿಗೆ ದತ್ತಕ ಹೋದದ್ದು, ಆ ಚಿಕ್ಕಮ್ಮ ತೀರಿಕೊಂಡ ನಂತರ ಮಲತಾಯಿಯ ಕಾರುಬಾರಿನಲ್ಲಿ ಕಂಡ-ಉಂಡ ದುಃಖ, ನೋವು-ಸಂಕಟ ವಿಡಂಬಾರಿಯವರ ಬಾಲ್ಯದ ದಾರುಣತೆ.
ಅಂದು ಮೂರನೇ ಇಯತ್ತೆವರೆಗೆ ಓದಿದವರಾದ ಲೇಖಕರು ಇಂಗ್ಲಿಷ್ ವಿಳಾಸ ಓದಲು-ಬರೆಯಲು ಬರುತ್ತದೆಂಬ ಸಟರ್ಿಫಿಕೇಟಿನೊಂದಿಗೆ ಅಂಚೆಪೇದೆಯ ಜಾಗೆಗೆ ಅಜರ್ಿ ಹಾಕಿದರು. ಕೆಲವು ದಿನ ವಾದ್ಯ ಬಾರಿಸುವ ಕೆಲಸವನ್ನೂ ಸಹ ಕೈಕೊಂಡರು. ನಂತರ ಶಿರಾಲಿ-ಅಂಕೋಲೆಗಳಲ್ಲಿ ಅಂಚೆಪೇದೆಯಾಗಿ ಪ್ರಾಮಾಣಿಕ ಕಾರ್ಯನಿರ್ವಹಿಸುತ್ತಲೇ ದಿನಕರ ದೇಸಾಯರ ಗರಡಿಯಲ್ಲಿ ಚುಟುಕು ರಚಿಸಲು ಪಳಗಿದ ವಿಡಂಬಾರಿವರು ನಮಗೆಲ್ಲ ಗೊತ್ತಿರುವಂತೆ ಅತ್ಯಂತ ಸನ್ನಡತೆಯ, ವಿನಯಶೀಲ, ನಿಸ್ವಾಥರ್ಿ ಹಾಗೂ ಪ್ರೇಮಮಯಿಯಾದ ವ್ಯಕ್ತಿಯಾಗಿದ್ದಾಎ. ಇವರು ಮೂಢನಂಬಿಕೆ ಡಂಬಾಚಾರಗಳ ವಿರುದ್ಧ ನಡೆಸಿದ ಪ್ರಾಮಾಣಿಕ ಅಭಿವ್ಯಕ್ತಿ ಇಲ್ಲಿದೆ. ಇವರ ಬಾಳಿನ ಸಂಕಷ್ಟಗಳು, ಹೆಂಡತಿಯ ಅನಾರೋಗ್ಯ, ತನ್ನದಲ್ಲದ ತಪ್ಪಿಗೆ ಪಡಬೇಕಾದ ಮಾನಸಿಕ ಯಾತನೆಯನನು ಈ ಬರವಣಿಗೆಯ ಮೂಲಕ ತಮ್ಮದೇ ಆದ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಎಂಥ ಪರಿಸ್ಥಿತಿಯಲ್ಲೂ ಧೃತಿಗೆಡದೇ ಬದುಕುವ ಛಲ ಹೊತ್ತ ಅವರ ಆತ್ಮ ಬಲ ಇನ್ನು ಮುಂದೆಯೂ ಅವರಿಗೆ ರಕ್ಷೆಯಾಗಿರಲಿ.

Thursday 2 October 2014

ಯುಮುನಾ, ಸೊಲಬಕ್ಕನವರ್ ನೆನಪಿಸಿದ ವಿಶ್ವ ಶಾಂತಿ ದಿನ

ಯುಮುನಾ, ಸೊಲಬಕ್ಕನವರ್ ನೆನಪಿಸಿದ ವಿಶ್ವ ಶಾಂತಿ ದಿನ

Standard
ಈ ವರ್ಷ ಮತ್ತೆ ವಿಶ್ವದಾದ್ಯಂತ ಯುದ್ಧದ ಕಾರ್ಮೋಡಗಳು ಕವಿದಿವೆ. ಸಿರಿಯಾ, ಗಾಜಾ, ಉಕ್ರೇನ್ ಗಳಲ್ಲಿ ಭೀಕರ ಯುದ್ಧ ನಡೆದಿವೆ. ಈ ವರ್ಷ ಮೊದಲ ಮಹಾಯುದ್ಧದ ಆರಂಭದ ಶತವಾರ್ಷಿಕ ಸಹ. ಹಿರೊಶಿಮಾ-ನಾಗಸಾಕಿ (ಅಗಸ್ಟ್ 6 ಮತ್ತು 9) ದಿನದಂದು ಪ್ರತಿ ವರ್ಷ ಆ ನಗರಗಳಲ್ಲಿ ‘ಗೆನುಸುಕಿಯೊ’ ಎಂಬ ಜಪಾನಿ ಸಂಘಟನೆ ಸಂಘಟಿಸುವ “ಅಣು ಬಾಂಬುಗಳ ವಿರುದ್ಧ ಅಂತರ್ರಾಷ್ಟ್ರೀಯ ಸಮ್ಮೇಳನ” ನಡೆಯುತ್ತದೆ. ಈ ಸಮ್ಮೇಳನ 1955ರಿಂದ ಪ್ರತಿ ವರ್ಷ ಸತತವಾಗಿ ನಡೆಯುತ್ತಾ ಬಂದಿದೆ. ಈ ಸಮ್ಮೇಳನಕ್ಕೆ ಈ ಬಾರಿ ಸಿ.ಐ.ಟಿ.ಯು. ಪ್ರತಿನಿಧಿಯಾಗಿ ಕರ್ನಾಟಕದಿಂದ ಪ್ರಗತಿಪರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಕವಯಿತ್ರಿ ಕೂಡಾ ಆಗಿರುವ ಯುಮುನಾ ಗಾಂವ್ಕರ್ ಆಯ್ಕೆಯಾಗಿದ್ದು ವಿಶೇಷವಾಗಿತ್ತು.
ನೂರಡಿ ಬಣ್ಣದ ನಡೆ ಜಪಾನಿನತ್ತ
ಯಮುನಾ ಅಣುಬಾಂಬು-ವಿರೋಧಿ ಸಮ್ಮೇಳನಕ್ಕೆ ಕರ್ನಾಟಕದಿಂದ ಏನು ಒಯ್ಯಲಿ ಎಂದು ಸಮುದಾಯವನ್ನು ಕೇಳಿದಾಗ ನಮಗೆ ನೆನಪಾದದ್ದು ಸೊಲಬಕ್ಕನವರ 1986ರ ನೂರಡಿ ಬಣ್ಣದ ಅಣು-ಬಾಂಬು ವಿರೋಧಿ ಚಿತ್ರ. ಅದು ಆ ವರ್ಷ ಸಮುದಾಯದ ವಿಶ್ವಶಾಂತಿ ಜಾಥಾದಲ್ಲಿ ರಾಜ್ಯದ (ಮಾತ್ರವಲ್ಲ, ದೇಶದ ಹಲವು ಕಡೆ ಸೇರಿದಂತೆ) ಉದ್ದಗಲ ಸುತ್ತಿತ್ತು. ಆ ಚಿತ್ರದ ಜತೆ ‘ನೂರಡಿ ಬಣ್ಣದ ನಡೆಯಣ್ಣ, ಅಣು ಸಮರಕ್ಕೆ ತಡೆಯಣ್ಣ’ ಹಾಡು ಸಹ ರಾಜ್ಯದ ಮೂಲೆಮೂಲೆಯಲ್ಲೂ ಮಾರ್ದನಿಸಿತ್ತು. ಈಗ ಹಾವೇರಿಯಲ್ಲಿ ಸೊಲಬಕ್ಕನವರು ಸ್ಥಾಪಿಸಿರುವ ‘ರಾಕ್ ಗಾರ್ಡನ್’ನಲ್ಲಿ ಪ್ರದರ್ಶಿಸಿರುವ ಅದನ್ನು ಒಯ್ಯುವುದು ಶಕ್ಯವಿರಲಿಲ್ಲ. ಅದಕ್ಕಾಗಿ ಅದರ ಡಿಜಿಟಲ್ ಅವತಾರವನ್ನು ಡಿವಿಡಿ ರೂಪದಲ್ಲಿ ತಯಾರಿಸಿ ಯಮುನಾ ಅವರಿಗೆ ಕೊಡಲಾಯಿತು. ಯಮುನಾ ಗಾಂವ್ಕರ್ ಅವರು ಅಗಸ್ಟ್ ಮೊದಲ ವಾರದಲ್ಲಿ ಹಿರೊಶಿಮಾ-ನಾಗಸಾಕಿಗೆ ಹೋಗಿ ಅಲ್ಲಿ ಮನೆ-ಮನೆಗೂ ಮನ-ಮನಕ್ಕೂ ಹಬ್ಬಿದ ಶಾಂತಿ ಸಂದೇಶ ಹೊತ್ತು ತಂದರು.
ಅಷ್ಟು ಹೊತ್ತಿಗೆ ವಿಶ್ವ ಸಂಸ್ಥೆ 1986ರಲ್ಲಿ ಘೋಷಿಸಿದ (ಇತ್ತೀಚೆಗೆ ನಾವು ಮರೆತು ಬಿಟ್ಟಿರುವ) ವಿಶ್ವ ಶಾಂತಿ ದಿನ (ಸೆಪ್ಟೆಂಬರ್ 21) ಹತ್ತಿರ ಬರಲಾರಂಭಿಸಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ಸಮುದಾಯ ಈ ಬಾರಿಯ ವಿಶ್ವ ಶಾಂತಿ ದಿನವನ್ನು ಸೆಪ್ಟೆಂಬರ್ 20ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ವಿಶಿಷ್ಟವಾಗಿ ಆಚರಿಸಿತು. ಅದೊಂದು ವಿಶಿಷ್ಟ ಸಾಂಸ್ಕೃತಿಕ ಅನುಭವವಾಗಿತ್ತು. ಮಹಾಂತೇಶ್ ಲಿಂಗರಾಜು ಮತ್ತು ಸಂಗಡಿಗರು ಅವರು ಪ್ರಸ್ತುತಪಡಿಸಿದ 1986ರ ಜಾಥಾದ ಮತ್ತು ಇತರ ಶಾಂತಿ ಹಾಡುಗಳಿಂದಲೇ ಅದು ಆರಂಭವಾಯಿತು. ಯುದ್ಧ-ವಿರೋಧಿ ಕವನಗಳನ್ನು ರವಿಕುಮಾರ್ ಬಾಗಿ, ಹುಲಿಕುಂಟೆ ಮೂರ್ತಿ ಮತ್ತು ಮಂಜುನಾಥ್ ಅವರು ಓದಿದರು.
shanti dvd bidugade (2)
ಸಂಗ್ರಹಯೋಗ್ಯ ಡಿವಿಡಿ
ಅಂದು ಸೊಲಬಕ್ಕನವರ ವಿಶ್ವಶಾಂತಿ ಮತ್ತು ಅಣುಯುದ್ಧದ ಅಪಾಯವನ್ನು ಸಮರ್ಥವಾಗಿ ಬಿಂಬಿಸುವ ‘ನೂರಡಿ ಬಣ್ನದ ಚಿತ್ರದ ಬಗೆಗಿನ ಡಿವಿಡಿ ಬಿಡುಗಡೆ ಮತ್ತು ಪ್ರದರ್ಶನ ಮುಖ್ಯ ಆಕರ್ಷಣೆಯಾಗಿತ್ತು. ಡಿವಿಡಿಯನ್ನು ಕಲಾವಿದ ಕೃಷ್ಣ ರಾಯಚೂರು ಅವರು ಕರ್ನಾಟಕದ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು. 25 ಮಿನಿಟಿನ ಈ ಡಿವಿಡಿಯನ್ನು ಪ್ರದರ್ಶಿಸಲಾಯಿತು. ನೂರಡಿ ಬಣ್ನದ ಚಿತ್ರವನ್ನು ಅದರ ಬಗೆಗಿನ ನಿರೂಪಣೆ ಜತೆ ತೋರಿಸುವುದಲ್ಲದೆ, – ಜಾಥಾದ ಹಾಡುಗಳು, ಚಿತ್ರದ ರಚನೆಯ ಹಿನ್ನೆಲೆ ಪ್ರಕ್ರಿಯೆಗಳ ಆಸಕ್ತಿಕಾರಕ ವಿವರಗಳು, ಯುದ್ಧ-ವಿರೋಧಿ ನಾಟವೊಂದರ ದೃಶ್ಯಗಳು, ಆ ಜಾಥಾದಲ್ಲಿ ಭಾಗವಹಿಸಿದ ಗಣ್ಯರ ನುಡಿಗಳಿಂದ – ಕೂಡಿದ್ದು ಸಂಗ್ರಹ ಯೋಗ್ಯ ದಾಖಲೆಯಾಗಿದೆ. ಮನುಕುಲದ ಚರಿತ್ರೆಯಲ್ಲಿ ಯುದ್ಧ ಹುಟ್ಟಿದ ಬಗೆ ಮತ್ತು ಸಮಾಜದ ಬೆಳವಣಿಗೆಯೊಂದಿಗೆ ಭೂತಾಕಾರದಲ್ಲಿ ಬೆಳೆದಿರುವ ಅದರ ಭೀಕರತೆ ಅಪಾಯಗಳನ್ನು ಅದು ಸಮರ್ಥವಾಗಿಯೂ ಮನೋಜ್ಞವಾಗಿಯೂ ಸೆರೆಹಿಡಿಯುತ್ತದೆ. ಇದು ಹಿಂದಿನಷ್ಟೇ, ಅಥವಾ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿರುವ ವಿಶ್ವಶಾಂತಿ ಚಳುವಳಿಯ ಪ್ರಮುಖ ಆಶಯದ ಅತ್ಯಂತ ಸಮರ್ಥ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ. ಕೃಷ್ಣ ರಾಯಚೂರು ಅವರು ನೂರಡಿ ಬಣ್ನದ ಚಿತ್ರದ ಮಹತ್ವ ಮತ್ತು ಇಂದೂ ಅದರ ಪ್ರಸ್ತುತತೆ ಬಗ್ಗೆ ಮಾತನಾಡಿದರು.
ಇದಕ್ಕಿಂತ ಮೊದಲು ನ್ಯಾಯಮೂರ್ತಿ ನಾಗ್ ಮೋಹನದಾಸ್ ಅವರು ಮೊದಲ ಮಹಾಯುದ್ಧದ ಆರಂಭದಿಂದ ಈ ವರೆಗಿನ ಯುದ್ಧದ ಅಪಾಯದ ಬೆಳವಣಿಗೆಯ ಹಾದಿಯನ್ನು ಗುರುತಿಸಿದರು. ಮೊದಲ ಮಹಾಯುದ್ಧದ ಮೊದಲಿನ ಮತ್ತು ನಂತರದ ಯುದ್ಧಗಳ ನಡುವಿನ ವ್ಯತ್ಯಾಸವಾದ ಭಾರೀ ಪ್ರಮಾಣದಲ್ಲಿ ನಾಗರಿಕರ ಸಾವು-ನೋವು ಬಗ್ಗೆ ಗಮನ ಸೆಳೆದರು. ಎರಡನೇ ಮಹಾಯುದ್ಧದ ನಂತರ ಇನ್ನೊಂದು ಮಹಾಯುದ್ಧ ನಡೆದಿರದಿದ್ದರೂ, ಸುಮಾರು 250 ಯುದ್ಧಗಳು ನಡೆದಿವೆ ಈಗ ಇಡೀ ಜಗತ್ತನ್ನು ನೂರಾರು ಬಾರಿ ನಾಶ ಮಾಡುವಷ್ಟು ಶಸ್ತ್ರಾಸ್ತ್ರ ಪೇರಿಸಲಾಗಿದೆ ಎಂದು ಎಚ್ಚರಿಸಿದರು. 1986ರ ಸಮುದಾಯದ ಶಾಂತಿ ಜಾಥಾ ನಡೆದ ಅವಧಿಯಿಂದ ಈ ವರೆಗೆ ಆಗಿರುವ ಯುದ್ಧದ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳನ್ನು ಅವರು ಗುರುತಿಸಿ, ಇಂದಿನ ಸಂದರ್ಭದಲ್ಲಿ ಯುದ್ಧದ ಅದರಲ್ಲೂ ಅಣು ಬಾಂಬುಗಳ ಬಳಕೆಯ ಅಪಾಯ ಮತ್ತು ಅವುಗಳ ನಾಶಕ್ಕಾಗಿಯೂ ವಿಶ್ವಶಾಂತಿಗಾಗಿಯೂ ನಡೆಯಬೇಕಾದ ಚಳುವಳಿಯ ಮಹತ್ವದ ಬಗ್ಗೆ ವಿವರಿಸಿದರು.
das at shanti dina (2)
ಯುದ್ಧ-ವಿರೋಧಿ ಗಾಢ ಮಲ್ಟಿಮೀಡಿಯಾ ಅನುಭವ
ಯುಮುನಾ ಗಾಂವ್ಕರ್ ತಮ್ಮ ಜಪಾನ್ ಪ್ರವಾಸದ ಮೊದಲು ಮತ್ತು ನಂತರ ಬರೆದ ಅತ್ಯಂತ ಅರ್ಥಪೂರ್ಣ ಕವನಗಳ ಓದಿನ ನಡುವೆ ತಮ್ಮ ಅನುಭವವನ್ನು ಹಂಚಿಕೊಂಡರು. ಹಿರೊಶಿಮಾ ನಾಗಾಸಾಕಿಗಳಲ್ಲಿ ನಡೆದ “ಅಣು ಬಾಂಬುಗಳ ವಿರುದ್ಧ ಅಂತರ್ರಾಷ್ಟ್ರೀಯ ಸಮ್ಮೇಳನ”ದ ಕಲಾಪಗಳು, ಅಲ್ಲಿ ನೆರೆದ ವಿವಿಧ ದೇಶಗಳ ಸರಕಾರಗಳ, ಶಾಂತಿ ಸಂಘಟನೆಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ, ಸಮ್ಮೇಳನದ ಘೋಷಣೆ, ಅಗಸ್ಟ್ 6 ರಂದು ಹಿರೊಶಿಮಾ ದಲ್ಲಿ ಮತ್ತು ಅಗಸ್ಟ್ 9 ರಂದು ನಾಗಾಸಾಕಿಯಲ್ಲಿ ಬೃಹತ್ ರ್ಯಾಲಿ, ಹಿರೊಶಿಮಾ ನಾಗಾಸಾಕಿ ಮ್ಯೂಸಿಯಂನ ಅನುಭವಗಳು, ಮನೆ-ಮನೆಗಳನ್ನೂ ಮುಟ್ಟುವ ಮತ್ತು ಮನ-ಮನಗಳನ್ನು ತಟ್ಟುವ ಅಲ್ಲಿನ ಶಾಂತಿ ಚಳುವಳಿಯ ವ್ಯಾಪಕತೆ – ಬಗ್ಗೆ ಅವರ ಅನುಭವಗಳು ವಿಶಿಷ್ಟ ಅನುಭವ ನಿಡಿದವು. ಅಲ್ಲಿ ಅವರು ತೆಗೆದ ಫೋಟೋಗಳು, ವಿಡಿಯೊಗಳ ಮತ್ತು ನೆನಪಿನ ಕಾಣಿಕೆಗಳ ಪ್ರದರ್ಶನದೊಂದಿಗೆ ಅವರು ಹಂಚಿಕೊಂಡ ‘ಮಲ್ಟಿಮೀಡಿಯಾ’ ಅನುಭವದಿಂದಾಗಿ, ನಾವೆಲ್ಲರೂ ಹಿರೊಶಿಮಾ, ನಾಗಾಸಾಕಿಗಳ ಪ್ರವಾಸ ಮಾಡಿ ಬಂದಂತಾಗಿತ್ತು.
yamuna @ shanti dina (2)
ಇತ್ತೀಚಿನ ಭೀಕರ ಗಾಜಾ ನರಮೇಧದ ಮೇಲೆ ಸುಮಾರು 10 ಪೋಸ್ಟರುಗಳ ಪೋಸ್ಟರ್ ಪ್ರದರ್ಶನ, ಮೊದಲ ಮಹಾಯುದ್ಧಕ್ಕೆ ಕಾರಣವಾದ ಬೆಳವಣಿಗೆಗಳ ಬಗೆಗಿನ ವಿಡಿಯೋ ಪ್ರದರ್ಶನ, ಇತ್ತೀಚಿನ ಗಾಜಾ ನರಮೇಧದ ಹಿನ್ನೆಲೆಯಲ್ಲಿ ಪ್ಯಾಲೆಸ್ಟೈನ್ ಸಮಸ್ಯೆ ಮತ್ತು ಅದರ ಬಗ್ಗೆ ಅಂತರ್ರಾಷ್ಟ್ರಿಯ ಧೋರಣೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸುತ್ತಾ ಪ್ಯಾಲೆಸ್ಟೈನ್ ಕವಯಿತ್ರಿ ರಫಿಫ್ ಜೈದಾ ಅವರ ಕವನವೋದುವುದರ ಪರಿಣಾಮಕಾರಿ ವಿಡಿಯೋ ಮತ್ತು ಪ್ರೊ, ಅರ್,ಕೆ.ಹುಡಗಿ ಅದರ ಕನ್ನಡ ಅನುವಾದವನ್ನು ಅಷ್ಟೇ ಪರಿಣಾಮಕಾರಿಯಾಗಿ ಓದುವುದರ ಜತೆ ಆಢಿದ ಸಮಾರೋಪದ ನುಡಿಗಳು ಮರೆಯಲಾಗದ ಯುದ್ಧ-ವಿರೋಧಿ ಗಾಢ ಮಲ್ಟಿಮೀಡಿಯಾ ಅನುಭವವನ್ನು ಇನ್ನಷ್ಟು ಗಟ್ಟಿಗೊಳಿಸಿದವು.

gaza poster set (2)

Tuesday 12 August 2014

ರಂಗದಲ್ಲಿ ತೆರೆದುಕೊಂಡ ಊರ್ಮಿಳೆಯ ಒಡಲಾಳ -ಸತೀಶ ಯಲ್ಲಾಪುರ

ಶಿರಸಿಯಲ್ಲಿ ಇತ್ತೀಚೆಗೆ(ದಿನಾಂಕ: 2 ಅಗಸ್ಟ 2014) ರಂದು ಚಿಂತನ ರಂಗ ಅಧ್ಯಯನ ಕೇಂದ್ರದವರಿಂದ ‘ಊರ್ಮಿಳೆಯ’ ಎಂಬ ಏಕವ್ಯಕ್ತಿ ರಂಗ ಪ್ರದರ್ಶನ ಏರ್ಪಟ್ಟಿತ್ತು. ರೋಟರಿ ಕ್ಲಬ್ ಶಿರಸಿ ಆಯೋಜಿಸಿದ್ದ ಈ ರಂಗ ಚಟುವಟಿಕೆಗೆ ಡಾ. ಶಿವರಾಮ .ಕೆ.ವಿ. ಅವರ ನಯನ ಸಭಾಂಗಣ ವೇದಿಕೆಯಾಗಿತ್ತು. ಡಾ. ಶ್ರೀಪಾದ ಭಟ್ ಈ ಹಿಂದೆ ನಿದರ್ೇಶಿಸಿದ್ದ ‘ಚೋರ ಚರಣದಾಸ’ ಹಾಗೂ ‘ಮುದುಕನ ಮದುವೆ'(ಕಂಪೆನಿ ನಾಟಕ) ಗಳ ಪ್ರದರ್ಶನದಿಂದ ಪುಳಕಿತರಾಗಿದ್ದ ಶಿರಸಿ ಜನತೆಯಿಂದ ಸಭಾಂಗಣ ತುಂಬಿ ಹೋಗಿತ್ತು. ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂತರ್ಿ ಅವರ ಊಮರ್ಿಳೆ ಇಲ್ಲಿ ಡಾ. ಶ್ರೀಪಾದ ಭಟ್ಟರ ನಿದರ್ೇಶನದಲ್ಲಿ ಹೊರಬಂದಿದ್ದಳು. ಊಮರ್ಿಳೆಯ ಪಾತ್ರ ನಿರ್ವಹಣೆ ಶ್ರೀಮತಿ ಶಾಂತಲಾ ಶಾಸ್ತ್ರಿ ಹಾಗೂ ಡಾ. ಶ್ರೀಪಾದ ಭಟ್ಟ ದಂಪತಿಗಳ ಮಗಳು ಶೀತಲಾ ಭಟ್ಟ ಅವರದ್ದಾಗಿತ್ತು.
urmila1
ಶೀತಲ ಭಟ್,ಶಿರಸಿ..ಊರ್ಮಿಳಾ ಪಾತ್ರದಲ್ಲಿ












ತುಂಬ ಸರಳ ವೇದಿಕೆ. ಹಿಂಗಡೆ ಇಳಿಬಿಟ್ಟ ತಿಳಿಗುಲಾಬಿ ಹಾಗೂ ಹಳದಿ ಬಣ್ಣದ ಪಾರದರ್ಶಕ ಪರದೆಯಿಂದ ದ್ವಾರದ ನಿಮರ್ಾಣ. ರಂಗದ ಎಡಗಡೆ ಕುಸುರಿ ಕೆತ್ತನೆಯ ಕಂಬದಾಕಾರ. ಪಕ್ಕದಲ್ಲೊಂದು ಸುಂದರ ಪೀಠ. ಮಧ್ಯದಲ್ಲಿ ಆಯತಾಕಾರದ ಉದ್ದಕ್ಕೆ ಮಲಗಿದ ಮೆಟ್ಟಿಲು. ಬಲಗಡೆ ಒಂದು ಇಳಿಜಾರಾದ ಪೀಠ. ಇವಿಷ್ಟೇ ರಂಗ ಪರಿಕರ. 14 ವರ್ಷ ವನವಾಸ ಮುಗಿಸಿ, ರಾವಣ ವಧೆ ಮಾಡಿ ಪುಷ್ಟಕ ವಿಮಾನದಲ್ಲಿ ತನ್ನ ಪರಿವಾರದೊಂದಿಗೆ ನಂದಿಗ್ರಾಮಕ್ಕೆ ಆಗಮಿಸುವ ಹೊತ್ತು ಸ್ವಾಗತಕ್ಕಾಗಿ ಸಾಕೇತದ ಅರಮನೆಗೆ ಅರಮನೆಯೇ ನಂದಿಗ್ರಾಮದಲ್ಲಿ ಸಕಲಸಿದ್ಧತೆಯೊಂದಿಗೆ ನಿಂತಿರುವಾಗ, 14 ವರ್ಷಗಳಿಂದ ನಂದಿಗ್ರಾಮದಲ್ಲೇ ನಿಂತ ಲಕ್ಷ್ಮಣನ ಹೆಂಡತಿ ಊಮರ್ಿಳೆ ಮಾತ್ರ ಅರಮನೆಯತ್ತ ಹೆಜ್ಜೆ ಹಾಕುತ್ತಿದ್ದಾಳೆ. ಪರದೆಯ ಹಿಂಗಡೆಯಿಂದ ಲವಲವಿಕೆಯಿಲ್ಲದ , ಭಾರವಾದ ಹೆಜ್ಜೆಯಿಡುತ್ತ ಆಕೆ ದ್ವಾರಕ್ಕೆ ಬರುತ್ತಾಳೆ. ಅರಮನೆಯಲ್ಲಿ ಯಾವ ಬದಲಾವಣೆಯೂ ಆಕೆಗೆ ಕಾಣುವುದಿಲ್ಲ. ಎಲ್ಲವೂ ಸುಸಂಬದ್ಧವಾಗಿರುವಂತೆಯೇ ಕಾಣಿಸುತ್ತಿದೆ. ಹಿಂದಿನ ನೆನಪಿಗೆ ಸರಿಯುತ್ತಾಳೆ. ನಾಳೆ ರಾಮನಿಗೆ ಯುವರಾಜ ಪಟ್ಟಾಭಿಷೇಕ ಎಂಬ ಸಂಗತಿ ಉಂಟುಮಾಡಿದ ಸಂಚಲನವನ್ನು ತನ್ನ ಸಹೋದರಿ ಶತ್ರುಘ್ನನ ಪತ್ನಿ ಶ್ರುತಕೀತರ್ಿಯೊಂದಿಗೆ ಹಂಚಿಕೊಳ್ಳುತ್ತಾಳೆ. ಮುಗ್ಧೆ ಶ್ರುತಕೀತರ್ಿ ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರಕೊಡುತ್ತ ಹೋಗುತ್ತಾಳೆ. ಕೈಕಾದೇವಿಗೆ ರಾಮನಿಗೆ ಪಟ್ಟಾಭಿಷೇಕದ ಸುದ್ದಿ ಅಸಮಾಧಾನ ತಂದಿದೆ ಹಾಗಾಗಿ ಆಕೆ ಕೋಪಗ್ರಹ ಸೇರಿದ್ದಾಳೆ ಎಂಬ ವಿಚಾರ ಹೇಳುವ ಮೊದಲು ಎಚ್ಚೆಸ್ವಿಯವರ ಸಾಹಿತ್ಯದ ಶಕ್ತಿ ಬಹಳ ಪ್ರಖರವಾಗಿ. ವ್ಯಂಗ್ಯವಾಗಿ ಮೂಡಿಬಂದಿದೆ. ಸುಖ ದು:ಖ ಕೋಪ ತಾಪ ಯಾವುದನ್ನೂ ಅರಮನೇಲಿ ಹತ್ತು ಜನಕ್ಕೆ ಕಾಣೋ ಹಾಗೆ ತೋರಿಸೋ ಹಾಗಿಲ್ಲ. ದು:ಖ ಆದ್ರೆ ಶೋಕ ಮಂದಿರಕ್ಕೆ ಹೋಗಿ ಅಳ್ತಾ ಕೂಡಬೇಕು. ಸಂತೋಷ ಆದ್ರೆ ಹಷರ್ಾಲಯಕ್ಕೆ ಹೋಗಿ ಬಾಗಿಲು ಮುಚ್ಚಿಕೊಂಡು ಕುಣಿದು ಕುಪ್ಪಳಿಸಬೇಕು. ಕೋಪ ಬಂದ್ರೆ ಕೋಪಗ್ರಹ! ಅಲ್ಲಿ ಹೋಗಿ ದುಮುದುಮು ದುಮು ಅಂತ ಮುಖ ಊದಿಸಿಕೊಂಡು ಕೂತ್ಕೋಬೇಕು.. ವೇದಿಕೆಯ ಮೇಲೆ ಬಂದ್ವಿ ಅಂತಂದ್ರೆ ನಾವೆಲ್ಲಾ ನಿಭರ್ಾವದ ಸಾಲಭಂಜಿಕೆಗಳು ಎಂದು ಅಣಕವಾಡುವ ರೀತಿ ರಂಗದಲ್ಲಿ ಉತ್ತಮವಾಗಿ ಮೂಡಿಬಂದಿದೆ. ದಶರಥ-ಕೈಕೇಯಿಯರ ಸಂಭಾಷಣೆ ನಡೆಯುವಾಗ ಒಮ್ಮೆ ದಶರಥನಾಗಿ ಕೈಕೆಯ ಮನವೊಳಿಸುವ ವ್ಯರ್ಥಪ್ರಯತ್ನ ಮಾಡುವುದು-ಕೈಕೆ ಉರಿದೇಳುವುದು, ವರವನ್ನು ಪಡೆದೇ ತೀರುವುದು ಇವೆಲ್ಲ ತುಂಬ ಮನೋಜ್ಞವಾಗಿ ಬಂದಿತು. ಒಂದಲ್ಲ.. ಎರಡಲ್ಲ.. ಮೂರಲ್ಲ..ಹದಿನಾಲ್ಕು ವರ್ಷ. ಹದಿನಾಲ್ಕುವರ್ಷಆ ಅಂತಲೇ ಯಾಕೆ ಹೆೇಳಿದಳೋ ಕೈಕೇಯಿದೇವಿ? ಯಾರಿಗೆ ಗೊತ್ತು ಬಾಲ್ಯದಲ್ಲಿ ಅವಳು ಕಲಿತದ್ದೇ ಅಷ್ಟಿರಬಹುದು..! ಎಂಬ ಮಾತನ್ನಂತೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಮುಂದುವರಿದು ಇದೆಲ್ಲ ಕೈಕೇಯಿಯ ಹುಲಿಮನೆ ಆಟ ಎಂಬುದಾಗಿ ಬಣರ್ಿಸುತ್ತಾಳೆ. ಊಮರ್ಿಳೆಯೂ ಕೂಡ ಈ ಆಟದಲ್ಲಿ ಬಂಧಿ ಎಂಬುದರ ಚಿತ್ರಣ ಕಣ್ಣಿಗೆ ಕಟ್ಟುವಂತಿತ್ತು.

urmila3
ಶೀತಲ ಭಟ್,ಶಿರಸಿ..ಊರ್ಮಿಳಾ ಪಾತ್ರದಲ್ಲಿ
urmila4














ಮುಂದಿನ ಭಾಗದಲ್ಲಿ ವನವಾಸ ಗಮನಿಯಾದ ರಾಮನೊಂದಿಗೆ ಲಕ್ಷ್ಮಣನೂ ಹೊರಟು ನಿಂತಿದ್ದಾನೆ. ಹೋಗಲೇಬೇಕಾ? ಎಂದು ಊಮರ್ಿಳೆ ಪ್ರಶ್ನಿಸಿದ್ದಕ್ಕೆ ಪಿತ್ರವಾಕ್ಯಪರಿಪಾಲನೆ, ಅಣ್ಣ ಅತ್ತಿಗೆಯರ ರಕ್ಷಣೆ ನನ್ನ ಹೊಣೆ ಎನ್ನುತ್ತಾನೆ. ಅದಕ್ಕೆ ಊಮರ್ಿಳೆ ಅಣ್ಣನ ಸೇವೆ ತಮ್ಮನ ಧರ್ಮ ನಿಜ. ಆದರೆ ಆ ತಮ್ಮ ಬರಿ ತಮ್ಮ ಮಾತ್ರವಲ್ಲ, ಒಬ್ಬ ತಂದೆಯ ಮಗ, ಹಾಗೇ ಒಬ್ಬ ಹೆಂಡತಿಯ ಗಂಡನೆಂದು ನೆನಪಿಸುತ್ತಾಳೆ. ಭ್ರಾತೃಧರ್ಮದ ಹಾಗೇ ಪುತ್ರ ಧರ್ಮವನ್ನೂ ಇಲ್ಲಿದ್ದು ನಡೆಸಿ ಎಂದು ಕೇಳಿಕೊಂಡಾಗ ನನ್ನ ಸ್ಥಾನದಲ್ಲಿ ನಿಂತು ನೀನು ಅದನ್ನು ನಡೆಸಬೇಕು ಎಂದು ಆದೇಶಿಸುತ್ತಾನೆ. ಆಕೆ ಲಕ್ಷ್ಮಣನ ಕಣ್ಣಲ್ಲಿ ಕಣ್ಣಿಟ್ಟುೆ ‘ಚಕ್ರವಾಕ ಜೋಡಿಯಂತೆ ಸರೋವರದಲಿ, ಒಟ್ಟಿಗೇ ಇದ್ದು ನಾವು ತೇಲೋಣಾ, ಹಾಗೆ ತೇಲಿ ದೇವ ಗಂಧರ್ವ ವಿತ್ತವನ್ನು ನೆಲದಲ್ಲೇ ಸೂರೇಗೊಳ್ಳೋಣ’ ಎಂದು ಮದುವೆಯ ಸಂದರ್ಭದ ವಚನವನ್ನು ನೆನಪಿಸುತ್ತಾಳೆ. ಲಕ್ಷ್ಮಣ ಅದನ್ನೆಲ್ಲ ನೆನಪಿಸಿ ನನ್ನನ್ನು ತಡೆಯಬೇಡ ಎಂದು ಹೇಳಿ ಪತಿ ಮನೆಯಲ್ಲಿ ಇಲ್ಲದಾಗ ಗೃಹ ರಕ್ಷಣೆ, ಅತಿಥಿ ಸೇವೆ, ಸಂತಾನ ರಕ್ಷಣೆ ಇವೆಲ್ಲ ಗೃಹಿಣಿಯ ಧರ್ಮವೆಂದು ಉಪದೇಶಿಸುತ್ತಾನೆ. ನೀನು ಇಲ್ಲೇ ಇದ್ದು ರಾಮನಿಲ್ಲದಿರುವಾಗ ರಾಜ್ಯವ್ಯವಸ್ಥೆ ವಿಮುಖವಾಗದಂತೆ ನೋಡಿಕೋ ಎಂದು ರಾಜಕಾರಣ ಬೋಧಿಸುತ್ತಾನೆ. ನೀನೊಂದು ಕಣ್ಣೊತ್ತು, ನೀನೊಂದು ಅಂತ:ಸಾಕ್ಷಿ , ನೀನೊಂದು ಎಚ್ಚರದ ಗುರುತು, ಅರ್ಥ ಮಾಡಿಕೋ ಊಮರ್ಿಳಾ.. ಧರ್ಮಕ್ಕಿಂತ ಲೋಕಧರ್ಮ ಜಟಿಲ, ಲೋಕಧರ್ಮಕ್ಕಿಂತ ರಾಜತಂತ್ರ ಜಟಿಲ ಆರ್ಥಮಾಡಿಕೋ ಎನ್ನುತ್ತಾನೆ. ಮುಂದೆ ಸಾಗಿ ಆರ್ಯರ ಹೆಗಲಿನ ಮೇಲೆ ಜಗತ್ತಿನ ಭಾರವೇ ಕೂತಿದೆ ಎನ್ನುತ್ತಾನೆ. ದಕ್ಷಿಣದಲ್ಲಿ ಹೆಚ್ಚಾಗಿರುವ ದಸ್ಯುಗಳ ಭಾರವನ್ನು ಇಳುಹುವುದಕ್ಕಾಗಿ ನಾವು ಹೋಗಬೇಕಿದೆ. ದಸ್ಯುಗಳ ಉದ್ದಾರ ಬಿಳಿಯರ ಭಾರ! ಎನ್ನುತ್ತಾನೆ. ಊಮರ್ಿಳೆ ಹೇಳಿಕೊಳ್ಳುತ್ತಾಳೆ , ಹದಿನಾಲ್ಕು ವರ್ಷ ಕಾಡುಮೇಡು ಅಲೆದು ದಸ್ಯುಗಳನ್ನು ಉದ್ದಾರ ಮಾಡಿ ಕೃತಕೃತ್ಯರಾಗಿ ಈವತ್ತು ಹಿಂದಿರುಗಿ ಬರತಾ ಇದಾರೆ ಎಂದು. ಶೀತಲಾ ಭಟ್ ಅವರ ಊಮರ್ಿಳೆ ವಂ್ಯಗ್ಯವಾಗಿ ಆಡುವ ಈ ಮಾತು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. ಸದಾ ಸಮಾಜದಲ್ಲಿ ಆಳುವ ಹಾಗೂ ಆಳಿಸಿಕೊಳ್ಳುವ ವರ್ಗಗಳ ಹೊಯ್ದಾಟದ ಚಿತ್ರ ಹಿಂದಿನಿಂದಲೂ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ.
urmila5
ಶೀತಲ ಭಟ್,ಶಿರಸಿ..ಊರ್ಮಿಳಾ ಪಾತ್ರದಲ್ಲಿ











ಲಂಕಾದಹನದ ವಿಚಾರವಾಗಿಯೂ ಬಹಳ ಚಚರ್ೆ ನಡೆಯುತ್ತದೆ. ಅಗ್ನಿದೇವನ ಪಕ್ಷಪಾತ ಧೋರಣೆ ಬಗ್ಗೆ ವಿಚಾರವಿದೆ. ಆತ ಹನುಮನ ಬಾಲ ಸುಡುವುದೇ ಇಲ್ಲ. ಬದಲಿಗೆ ಇಡೀ ಲಂಕೆಯನ್ನೇ ಸುಟ್ಟುಬಿಡುತ್ತದೆ. ಅದರಲ್ಲಿ ನಿಷ್ಫಾಪಿ ಮಕ್ಕಳು ಮುದುಕಿಯರೂ, ಹೆಂಗಳೆಯರೂ ಎಲ್ಲ ಬೆಂದು ಹೋದರಲ್ಲ. ಇವೆಲ್ಲ ದಸ್ಯುಗಳ ಉದ್ಧಾರದ ಭಾಗವೆಂದೇ ಊಮರ್ಿಳೆ ಕಟಕಿಯಾಡುತ್ತಾಳೆ. ಯುದ್ಧ ವಿರೋಧಿ ಸಂದೇಶ ಈ ಮುಖೇನ ಎಚ್ಚೆಸ್ವಿಯವರು ನೀಡಿದ್ದಾರೆ. ಚಂದ್ರನಖಿ (ಶೂರ್ಪನಖಿ)ಯ ನೆನಪಾಗಿ ಆಕೆ ಬಂದು ನಿನ್ನ ಗಂಡ ಮದುವೆಯಾಗುವುದಿಲ್ಲ ಎಂದಿದ್ದರೆ ಸಾಕಿತ್ತು ಅದರ ಬದಲಿ ಮೂಗು, ಮೊಲೆಗಳನ್ನು ಕೊಯ್ದಿದ್ದಾನೆ. ನನಗೆ ನ್ಯಾಯ ಕೊಡಿಸು ಅಂತ ನನ್ನಲ್ಲಿ ಕೇಳಿದರೆ ನಾನೇನು ಹೇಳಬಲ್ಲೆ ಎಂದು ಹತಾಶೆ ವ್ಯಕ್ತಪಡಿಸುವ ದೃಶ್ಯ ಮನೋಜ್ಞವಾಗಿತ್ತು. ಅಂತೂ ಲಂಕೆಯಿಂದ ಹಿಂದಿರುಗಿ ಪುಷ್ಟಕವಿಮಾನದಲ್ಲಿ ನಂದಿಗ್ರಾಮಕ್ಕೆ ಬಂದ ಲಕ್ಷ್ಮಣ ಊಮರ್ಿಳೆಯನ್ನು ಕಾಣದೇ ಅರಮನೆಗೆ ಬರುತ್ತಾನೆ. ಅಂತ:ಪುರದೊಳಗೆ ಬಂದು ಊಮರ್ಿಳೆಯನ್ನು ನೇರವಾಗಿ ನೋಡಲಾರದೇ ಮಾತನಾಡಿಸುತ್ತಾನೆ. ಯಾಕೆ ಬರಲಿಲ್ಲ ಎಂದು ಕೇಳುತ್ತಾನೆ. ನೀನು ಬಾರದಿರುವುದನ್ನು ಕಂಡು ಅಣ್ಣ, ಅತ್ತಿಗೆ, ಜನ ಎಲ್ಲ ಏನೆಂದುಕೊಂಡಾರು ಎಂದು ಪ್ರಶ್ನಿಸುತ್ತಾನೆ. ಊಮರ್ಿಳೆ ಅಂದುಕೊಳ್ಳುತ್ತಾಳೆ ಯಾರಿಗೆ ಏನುಅನ್ನಿಸುತ್ತೆ ಎನ್ನುವುದು ಮುಖ್ಯವಲ್ಲ, ನನಗೆ ಏನು ಅನ್ನಿಸುತ್ತದೆ ಎನ್ನುವುದು ನನಗೆ ಮುಖ್ಯ ನೀವೇ ಹೇಳಿದ್ದಿರಿ, ನಾನು ಬರುವತನಕ ಮನೆಕಡಟೆ ನೋಡಿಕೋ.. ಗೃಹಿಣಿಯ ಕರ್ತವ್ಯ ಗೃಹ ರಕ್ಷಣೆ, ಅತಿಥಿ ರಕ್ಷಣೆ, ಸಂತಾನ ರಕ್ಷಣೆ . ನೋಡಿ ಮಾವು, ನೇರಿಲೆ, ಸುರಹೊನ್ನೆ, ಲೋಧ್ರ, ಪ್ರಿಯಾಲ, ಚಿರಬಿಲ್ವ, ಪನಸು ತಮಾಲ ಕಾಶ್ಮರಿ ಹೀಗೆ ಗಿಡಗಳ ಪಟ್ಟಿ ಮಾಡುತ್ತಾಳೆ. ಶೀತಲಾ ಭಟ್ ಈ ಧೃಶ್ಯವನ್ನು ಹೃದಯಕ್ಕೆ ತಟ್ಟುವಂತೆ ಅಭಿನಯಿಸಿದ್ದಾರೆ. ಆಕೆ ಒಂದೊಂದೇ ಗಿಡವನ್ನು ತೋರಿಸುತ್ತಾ ಅವುಗಳ ಹೆಸರನ್ನು ಹೇಳಿ ಮಾತೃವಾತ್ಸಲ್ಯದಿಂದ ಅವನ್ನು ಮಗುವಿನಂತೆ ನೋಡಿಕೊಂಡು ಬೆಳೆಸಿದ್ದೇನೆ, ಸಂತಾನ ರಕ್ಷಣೆ ಮಾಡಿದ್ದೇನೆ ಎನ್ನುವಾಗ ನೋಟಕರ ಕಣ್ಣಾಲಿಗಳೂ ಆದರ್ೃಗೊಳ್ಳುತ್ತವೆ. ಕೊನೆಯಲ್ಲಿ ಗಂಡಿನ ಹಂಗೇ ಇಲ್ಲದೇ ಹೆಣ್ಣು ಗೃಹಸ್ಥ ಜೀವನ ನಡೆಸಬಹುದು..ಸಾರ್ಥಕ ಜೀವನ ನಡೆಸಬಹುದು ಎನ್ನುತ್ತಾಳೆ. ಸ್ತ್ರೀಯ ಅಸ್ಮಿತೆಯನ್ನು ಸಾರುವ ಸಾಲುಗಳು ರಂಗದಲ್ಲಿಯೂ ತುಂಬ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಊರಿಗೆ ಉಪಕಾರಿ, ಹೆಂಡತಿಗೆ ಅಪಾಯಕಾರಿ ಮನೋಭಾವದ ಗಂಡಸರಿಗೆಲ್ಲ ಒಂದು ನೀತಿಪಾಠದಂತಿತ್ತು. ಎಚ್. ಎಸ್. ವೆಂಕಟೇಶಮೂತರ್ಿಯವರ ಈ ಬರಹಕ್ಕೆ ಶೀತಲಾ ಭಟ್ಟರ ಅಭಿನಯ – ಮಾತು ಅಷ್ಟೊಂದು ಪರಿಣಾಮಕಾರಿಯಾಗಿದೆ. ಇನ್ನೊಂದೆರಡು ಪ್ರಯೋಗವಾದರಂತೂ ಶೀತಲಾ ಭಟ್ ಯಶಸ್ವೀ ಏಕವ್ಯಕ್ತಿ ರಂಗಕಲಾವಿದೆಯಾಗಿ ಹೊರಹೊಮ್ಮುವ ಭರವಸೆ ಮೂಡಿಸುತ್ತಾರೆ. ಪ್ರಸಾಧನ, ಬೆಳಕು, ಸಂಗೀತ ಎಲ್ಲವೂ ಹಿತವಾಗಿದ್ದುದು ಪ್ರಯೋಗಕ್ಕೆ ಪ್ಲಸ್ಪಾಯಿಂಟಾಗಿತ್ತು.

urmila2
ಶೀತಲ ಭಟ್,ಶಿರಸಿ..ಊರ್ಮಿಳಾ ಪಾತ್ರದಲ್ಲಿ

-ಸತೀಶ್ ಯಲ್ಲಾಪುರ
, ಅಂಚೆ: ಬಿಸಗೋಡ, ತಾ|| ಯಲ್ಲಾಫುರ (ಉ.ಕ.)ಜಟಚಿಟ:                                                                ಚಿಣ.ಥಿಜಟಟಚಿಠಿಣಡಿ@ರಟಚಿಟ.ಛಿಠಟ

Saturday 9 August 2014

ದಾರಿ ಯಾವುದಯ್ಯ ಮಕ್ಕಳ ಸಾಹಿತ್ಯಕೆ? -M G Hegde,Kumata

.
ಪೂರ್ವ-ಪಶ್ಚಿಮ ಮುಖಾಮುಖಿಯ ಫಲಿತವಾಗಿ ಹುಟ್ಟಿದ ಮಕ್ಕಳ ಸಾಹಿತ್ಯಕ್ಕೀಗ ನೂರು ವರ್ಷ. ಇದಕ್ಕೂ ಮೊದಲು ನಮ್ಮಲ್ಲಿ ಮಕ್ಕಳ ಸಾಹಿತ್ಯ ಇರಲಿಲ್ಲವೆಂದಲ್ಲ. ಆದರೆ ಅವುಗಳ ಸ್ವರೂಪ, ಉದ್ದೇಶಗಳಿಗೂ ಇವತ್ತು ನಾವು ಯಾವುದನ್ನು ಮಕ್ಕಳ ಸಾಹಿತ್ಯವೆಂದು ಗುರುತಿಸುತ್ತೇವೆಯೋ ಅದರ ಸ್ವರೂಪ, ಉದ್ದೇಶಗಳಿಗೂ ತುಂಬ ವ್ಯತ್ಯಾಸವಿದೆ. ಮೌಖಿಕ ಪರಂಪರೆಯ ಅಸಂಖ್ಯ ಕತೆಗಳು, ಹಾಡುಗಳು ಮಕ್ಕಳನ್ನು ರಂಜಿಸಿದರೂ ಅವನ್ನು ಮಕ್ಕಳ ಸಾಹಿತ್ಯ ಎಂಬ ವಿಭಾಗದಲ್ಲಿ ಸೇರಿಸುವ ಕ್ರಮ ಇಲ್ಲ. ಪಂಚತಂತ್ರದಂತಹ ಕಥಾಗುಚ್ಛಗಳನ್ನು ಅವುಗಳ ಮೂಲರೂಪದಲ್ಲಿ 'ಮಕ್ಕಳ ಸಾಹಿತ್ಯ' ಎಂದು ಗುರುತಿಸುವ ವಾಡಿಕೆ ಇಲ್ಲ. ಮೇಲಾಗಿ ಪಂಚತಂತ್ರದಂತಹ ಕೃತಿ ಗೃಹೀತವಾಗಿಟ್ಟುಕೊಂಡಿರುವ ಮಕ್ಕಳ ಕಲ್ಪನೆ ಎಷ್ಟು ವ್ಯಾವಹಾರಿಕ ಹಾಗೂ ಅ-ಭಾವುಕವಾದದ್ದು ಎಂದರೆ ಮಕ್ಕಳೆಂದರೆ ನಾವು ಬಯಸಿದ ರೂಪ ಕೊಡಬಹುದಾದ ಮುಗ್ಧ, ವಿಧೇಯ ಹಾಗೂ ಭಾವುಕವಾದ ಸಮರೂಪದ ವರ್ಗಎಂತಲೋ, ತಿಳುವಳಿಕೆ ಹಾಗೂ ಕಲ್ಪನಾ ಸಾಮಥ್ರ್ಯ ಪರಿಮಿತವಾಗಿರುವ ಒಂದು ಅವಸ್ಥೆ ಎಂತಲೋ ಕಲ್ಪನೆ ಇಟ್ಟುಕೊಂಡಿರುವ ಆಧುನಿಕ ಮಕ್ಕಳ ಸಾಹಿತಿಗೆ ಗಾಬರಿ ಹುಟ್ಟಿಸುವಂತಹುದಾಗಿದೆ. ಅಂದರೆ, ಶ್ರೀಮಂತವಾದ ಮೌಖಿಕ ಪರಂಪರೆಯ ಕತೆ ಹಾಗೂ ಹಾಡುಗಳಿಂದಾಗಿ, ಪಂಚತಂತ್ರದಂತಹ ಮಾಗರ್ೀಯ ಕೃತಿಗಳಿಂದಾಗಿ ಹಾಗೂ ನಮ್ಮ ಗುಹೆ ದೇಗುಲಗಳ ಚಿತ್ರಕಥಾ ಮಾಲಿಕೆಗಳಿಂದಾಗಿ ಮಕ್ಕಳ ಸಾಹಿತ್ಯದ ತೊಟ್ಟಿಲು ಎನ್ನಬಹುದಾದ ದೇಶದಲ್ಲಿ ಪೂರ್ವ-ಪಶ್ಚಿಮ ಮುಖಾಮುಖಿಯ ಫಲಿತವಾಗಿ ಒಳಬಂದ ಹೊಸ ಶಿಕ್ಷಣ ನೀತಿ ಹಾಗೂ ಮಕ್ಕಳ ಪರಿಕಲ್ಪನೆಯಿಂದಾಗಿ ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಹೊಣೆಗಾರಿಕೆಯನ್ನು ನಾವು ಸಂಪೂರ್ಣವಾಗಿ ಹೊಸ ಶಿಕ್ಷಣ ಸಂಸ್ಥೆಗೆ ವಹಿಸಿಕೊಟ್ಟ ಕಾರಣದಿಂದಾಗಿ 'ಮಕ್ಕಳ ಸಾಹಿತ್ಯ' ಹೊಸದಾಗಿ ಹುಟ್ಟಬೇಕಾಯಿತು. ನಮ್ಮ ಹೊಸಕಾಲದ ಮಕ್ಕಳ ಸಾಹಿತ್ಯದ ಉಗಮ ಪಠ್ಯಾವಳಿಗಳು, ವಾಚಿಕೆಗಳು ಹಾಗೂ ಬಾಲಬೋಧೆಗಳಲ್ಲಿ ಕಂಡುಬರುವುದು ಮಿಶನರಿಗಳು ಶಿಕ್ಷಣದ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡ ದಕ್ಷಿಣ ಕನ್ನಡದಲ್ಲೆ. ಮಕ್ಕಳ ಸಾಹಿತ್ಯದ ಮೊದಲಿಗರು ಕಂಡುಬರುವುದು ಹಾಗೂ ಸಾಹಿತ್ಯದ ನಿಮರ್ಾತೃಗಳಲ್ಲಿ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳೇ ಹೆಚ್ಚಾಗಿರುವುದು ಹೊಸ ಶಿಕ್ಷಣ ಕ್ರಮಕ್ಕೂ ಹೊಸ ಕಾಲದ ಮಕ್ಕಳ ಸಾಹಿತ್ಯಕ್ಕೂ ಇರುವ ನಂಟಿನ ಸೂಚಕವಾಗಿದೆ. ಈ ಸಾಹಿತ್ಯವು ಗೃಹೀತವಾಗಿಟ್ಟುಕೊಂಡಿರುವ ಮಕ್ಕಳ ಕಲ್ಪನೆ ಹಾಗೂ ಕಲಿಕಾ ಪ್ರಕ್ರಿಯೆಯ ಕಲ್ಪನೆ ಕೂಡ ವಸಾಹತುಶಾಹಿ ಪ್ರಣೀತ ಶಿಕ್ಷಣ ನೀತಿಗೆ ಋಣಿಯಾಗಿದೆ.

ಮಕ್ಕಳಿಗೆ ಭವಿಷ್ಯದಲ್ಲಿ ಉಪಯುಕ್ತವಾಗಬಹುದಾದದ್ದನ್ನಷ್ಟೇ ಕಲಿಸಬೇಕೆಂಬುದು ಈ ಶಿಕ್ಷಣ ನೀತಿಯ ಒಂದು ಮುಖ್ಯ ತತ್ತ್ವವಾಗಿದೆ. ಹೀಗಾಗಿ, ಮಕ್ಕಳಿಗೆ ಯಾವುದೆಲ್ಲ 'ಉಪಯುಕ್ತ' ಎಂದು ಮೊದಲು ನಿರ್ಧರಿಸಬೇಕಾಗುತ್ತದೆ ಹಾಗೂ ಇದನ್ನು ನಿರ್ಧರಿಸುವ ಅಧಿಕಾರವನ್ನು ಶಿಕ್ಷಣ ನೀಡುವ ಸಂಸ್ಥೆ ಅಥವಾ ಸರಕಾರವೇ ಕಾದಿರಿಸಿಕೊಂಡಿರುತ್ತದೆ. ಇಂತಹ 'ಉಪಯೋಗವಾದಿ ದೃಷ್ಟಿಕೋನ'ದ ಹಿಂದೆ ಮಕ್ಕಳು ಹಾಗೂ ಕಲಿಕಾ ಪ್ರಕ್ರಿಯೆಯ ಕುರಿತು ಕೆಲವು ಗೃಹಿತಗಳಿವೆ: ಇಂದಿನ ಮಕ್ಕಳೇ ನಾಳಿನ ನಾಗರಿಕರು; ಅವರು ಹೀಗೆಯೇ ಬೆಳೆಯಬೇಕು, ಬದುಕಬೇಕು; ಅದಕ್ಕಾಗಿ ನಿದರ್ಿಷ್ಟ ಕೌಶಲಗಳನ್ನು ನಿದರ್ಿಷ್ಟ ಕ್ರಮದಲ್ಲಿ ಕಲಿಯಬೇಕು, ಇತ್ಯಾದಿ. ಈ ದೃಷ್ಟಿಕೋನದ ಪ್ರಕಾರ ಮಕ್ಕಳೆಂದರೆ ನಾವು ಮೆತ್ತಿ, ಒತ್ತಿ, ಕೆತ್ತಿ, ತಿದ್ದಿ, ತೀಡಿ ಆಕಾರ ಕೊಡಬಹುದಾದ, ಸ್ವಂತವಾದದ್ದು ಸ್ವಾಜರ್ಿತವಾದದ್ದು ಏನೂ ಇಲ್ಲದ, ಚರಿತ್ರೆ ಇಲ್ಲದ ಮಣ್ಣಿನ ಮುದ್ದೆ. ಮಕ್ಕಳು ಏನನ್ನು ಕಲಿಯಲು ಸಾಧ್ಯವಿದೆಯೋ ಅದನ್ನಷ್ಟೇ ಕಲಿಸಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಇನ್ನೊಂದು ತತ್ವವಾಗಿದೆ. ಈ 'ವ್ಯಾವಹಾರಿಕ ದೃಷ್ಟಿಕೋನ'ದ ಹಿಂದೆ ಮಕ್ಕಳೆಂದರೆ ಜ್ಞಾನ, ತಿಳಿವಳಿಕೆ, ಭಾಷಾ ಸಾಮಥ್ರ್ಯ, ಕಲ್ಪನಾ ಸಾಮಥ್ರ್ಯ ಹಾಗೂ ಆಸಕ್ತಿಯ ವ್ಯಾಪ್ತಿ ಪರಿಮಿತವಾಗಿರುವ ಹಾಗೂ ಈ ಪರಿಮಿತಿಗನುಗುಣವಾಗಿ ಹಂತಹಂತವಾಗಿ ಹನಿಹನಿಯಾಗಿ ಕೊಟ್ಟದ್ದನ್ನಷ್ಟೇ ದಕ್ಕಿಸಿಕೊಳ್ಳಬಲ್ಲ ಒಂದು ಅವಸ್ಥೆ. ಹೀಗೆ ಉಪಯುಕ್ತವಾದದ್ದನ್ನು ಹಿತಮಿತವಾಗಿ ಕೊಡಬೇಕು ಎಂಬ ವಸಾಹತುಶಾಹಿ ಪ್ರಣೀತ ಹೊಸ ಶಿಕ್ಷಣ ನೀತಿಯ ಮಕ್ಕಳಿಂದ ಶಿಸ್ತು, ವಿಧೇಯತೆ, ವಿನಮ್ರತೆಯನ್ನು ಬಯಸಿದರೆ, ಶಿಕ್ಷಕರು ಹಾಗೂ ಪಾಲಕರಿಂದ ನಿರಂತರ ಕಣ್ಗಾವಲನ್ನು ನಿರೀಕ್ಷಿಸುತ್ತದೆ. ಮಕ್ಕಳ ಶಿಕ್ಷಣವೆಂಬ ಬೃಹತ್ ಯೋಜನೆಯ ಅಂಗಸಂಸ್ಥೆಯಾಗಿ ಹುಟ್ಟಿದ ಮಕ್ಕಳ ಸಾಹಿತ್ಯ ಒಂದೆಡೆಯಲ್ಲಿ ಮಕ್ಕಳಲ್ಲಿ ವಿನಮ್ರತೆಯನ್ನು ರೂಢಿಸುವ ಹಾಗೂ ಇನ್ನೊಂದೆಡೆಯಲ್ಲಿ 'ಸೂಕ್ತ' ಅತ್ಯುತ್ತಮ ಎಂದು ಸ್ವೀಕೃತವಾದ ಮೌಲ್ಯಗಳನ್ನು ಒಳತುಂಬುವ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಮಕ್ಕಳೆಂದರೆ ಚರಿತ್ರಾತೀತವಾದ, ಮುಗ್ಧ, ಸರಳ, ಭಾವುಕ ಸ್ಥಿತಿ ಎಂಬ ನೆಲೆಯಿಂದ ಹೊರಡುವ ಮಕ್ಕಳ ಸಾಹಿತ್ಯದಲ್ಲಿ ಯಾವುದೆಲ್ಲ 'ಸೂಕ್ತ' ಮೌಲ್ಯಗಳು ಎಂಬುದು ರಾಜಕೀಯ ನಿಸ್ಸಂಗಿಯಾದ ತ್ರಿಕಾಲ ಸತ್ಯವೆಂಬ ಭ್ರಮೆಯೂ, ಮಕ್ಕಳು ಸದಾ ವಿಧೇಯರಾಗಿರಬೇಕೆಂಬ, ಪ್ರಶ್ನೆಗಳನ್ನು ಕೇಳಿದರೂ 'ಸರಿಯಾದ' ಪ್ರಶ್ನೆಗಳನ್ನೇ ಕೇಳಬೇಕೆಂಬ ಮಧ್ಯಮ ವರ್ಗದ ಆತಂಕವೂ ಸೇರಿಕೊಂಡು ರಮ್ಯ ಜಗತ್ತೊಂದು ಸೃಷ್ಟಿಯಾಗುತ್ತದೆ.

ಇಲ್ಲಿಯೇ 'ಮಕ್ಕಳ ಸಾಹಿತ್ಯ' ಎಂಬ ವಗರ್ೀಕರಣದ ಒಂದು ವೈಶಿಷ್ಟ್ಯವನ್ನು ಗಮನಿಸಬೇಕು. ಸಾಹಿತ್ಯವನ್ನು ಅದರ ತಾತ್ವಿಕ ನಿಲುವನ್ನೋ (ನವ್ಯ, ನವೋದಯ, ಬಂಡಾಯ ಇತ್ಯಾದಿ) ಕೃತಿಯ ಪ್ರಕಾರವನ್ನೋ (ಗದ್ಯ, ಪದ್ಯ, ನಾಟಕ), ಕೃತಿ ರಚನೆಯ ಕಾಲವನ್ನೋ (ಪ್ರಾಚೀನ, ಆಧುನಿಕ, 20ನೇ ಶತಮಾನದ ಸಾಹಿತ್ಯ), ಕೃತಿಕಾರನನ್ನೋ (ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ ಇತ್ಯಾದಿ) ಲಕ್ಷ್ಯದಲ್ಲಿಟ್ಟುಕೊಂಡು ವಿಭಜಿಸಿ ಅಭ್ಯಾಸ ಮಾಡುವ ಕ್ರಮವಿದೆಯಾದರೂ, ವಾಚಕ ವರ್ಗವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮಾಡಿದ ವಗರ್ೀಕರಣ 'ಮಕ್ಕಳ ಸಾಹಿತ್ಯ'ವನ್ನು ಬಿಟ್ಟರೆ ಸಾಹಿತ್ಯ ವಿಮಶರ್ೆಯಲ್ಲಿ ಇನ್ನೊಂದಿಲ್ಲ. ಯಾವುದೇ ಸಾಹಿತ್ಯ ಕೃತಿಯಾದರೂ, ತನ್ನ ವಾಚಕರು ಯಾರು ಎಂಬ ಕುರಿತು ಕೆಲವು ಗೃಹೀತಗಳನ್ನು ಇಟ್ಟುಕೊಂಡೇ ಹೊರಟಿರುತ್ತದೆ. ಆದರೆ ಈ ಗೃಹೀತಗಳೇ ಆ ಸಾಹಿತ್ಯದ ಭಾಷೆ, ವಸ್ತು ಹಾಗೂ ನಿಲುವಿನ ಆಯ್ಕೆಯನ್ನು, ಅದರ ಒಟ್ಟೂ ಚಹರೆಯನ್ನು ನಿಯಂತ್ರಿಸುವ ಶಕ್ತಿಯಾಗಿರುವುದು ಮಕ್ಕಳ ಸಾಹಿತ್ಯದಲ್ಲಿ ಮಾತ್ರ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ಆ ಸಾಹಿತ್ಯವು ಗೃಹೀತವಾಗಿ ಇಟ್ಟುಕೊಂಡಿರುವ ಮಕ್ಕಳ ಪರಿಕಲ್ಪನೆಯಲ್ಲಿ ಮೂಲಭೂತ ಅಥವಾ ಕ್ರಾಂತಿಕಾರಿ ಬದಲಾವಣೆ ಆಗದೆ ಹೊಸ ಪ್ರವೃತ್ತಿಗಳು ಕಾಣಿಸಿಕೊಳ್ಳುವುದು ಅಸಾದ್ಯ. 19ನೇಯ ಶತಮಾನದ ಮಧ್ಯಭಾಗದಲ್ಲಿ ಪಶ್ಚಿಮದ ಸಂಪರ್ಕದಿಂದಾಗಿ ಒಳಬಂದ ಹೊಸ ಶಿಕ್ಷಣ ನೀತಿಯಿಂದ ನಮ್ಮಲ್ಲಿ ಅಂತಹುದೊಂದು ಕ್ರಾಂತಿಕಾರಿ ಬದಲಾವಣೆ ಕಂಡುಬಂದಿತು; ಮಕ್ಕಳ ಪರಿಕಲ್ಪನೆ ಬದಲಾಯಿತು. ಹೀಗಾಗಿ ಮಕ್ಕಳ ಸಾಹಿತ್ಯವೂ ಹೊಸ ಸ್ವರೂಪವನ್ನು ಪಡೆಯಿತು. ಆ ನಂತರದಲ್ಲಿ (ಸ್ವಾತಂತ್ರ್ಯ ಬಂದರೂ ಸಹಾ) ನಮ್ಮ ಶಿಕ್ಷಣ ನೀತಿಯಲ್ಲಾಗಲಿ, ಮಕ್ಕಳು ಹಾಗೂ ಕಲಿಕಾ ಪ್ರಕ್ರಿಯೆಯ ಪರಿಕಲ್ಪನೆಯಲ್ಲಾಗಲಿ ಮೂಲಭೂತ ಬದಲಾವಣೆ ಆಗಿಯೇ ಇಲ್ಲ. ಹೀಗಾಗಿ ಮಕ್ಕಳ ಸಾಹಿತ್ಯದ ಮೂಲ ಸ್ವರೂಪವೂ ಬದಲಾಗಿಲ್ಲ. ಇವತ್ತಿಗೂ 'ಶೈಕ್ಷಣಿಕ' ಎನ್ನಬಹುದಾದ ಉದ್ದೇಶವೇ ಅದನ್ನು ನಿಯಂತ್ರಿಸುತ್ತದೆ. ಅದು ಈ ತಳಿಯ 'ಸ್ವ-ಭಾವವೇ' ಆಗಿದೆ. ಪಂಜೆ, ಪುಟ್ಟಣ್ಣ, ಕುವೆಂಪು, ರಾಜರತ್ನಂ, ಹೊಯಿಸಳ ಮೊದಲಾದ ಹಿರಿಯರ ಗ್ರಹಿಕೆಯೇ ಇಂದಿನ ಮಕ್ಕಳ ಸಾಹಿತಿಗಳದೂ ಆಗಿದೆ. ಪ್ರಾದೇಶಿಕ ನುಡಿಗಟ್ಟಿನ ಬಳಕೆಯಲ್ಲೋ, ನೀತಿಯ ತಲೆಭಾರದಲ್ಲೋ ಚಿಕ್ಕಪುಟ್ಟ ಬದಲಾವಣೆ ಆಗಾಗ್ಗೆ ಕಂಡುಬಂದಿರಬಹುದು. ಆದರೆ ಈ ಬರಹಗಳ ಹಿಂದಿನ ದೃಷ್ಟಿಕೋನದಲ್ಲಿ ಮಕ್ಕಳ ಪರಿಕಲ್ಪನೆಯಲ್ಲಿ ಕಳೆದ ನೂರೈವತ್ತು ವರ್ಷಗಳಲ್ಲಿ ಬದಲಾವಣೆಯೂ ಆಗಿಲ್ಲ. ಅಂದರೆ ಮಕ್ಕಳ ಸಾಹಿತ್ಯ ನಿಂತ ನೀರಾಗಿದೆ.

ಕನ್ನಡದ ಯಾವುದೇ ಪ್ರಾತಿನಿಧಿಕ ಮಕ್ಕಳ ಸಾಹಿತ್ಯ ಸಂಕಲವನ್ನು ನೋಡಿದರೂ ಅದರಲ್ಲಿ ಸೇರಿರುವ ಬಹುತೇಕ ರಚನೆಗಳು ನವೋದಯ ಕಾಲದವು. 'ಪಾತರಗಿತ್ತಿ ಪಕ್ಕ' ದಂತಹ ಮಕ್ಕಳಿಗಾಗಿ ಎಂತಲೇ ಬರೆದಿರುವ ರಚನೆಗಳನ್ನು ಕೈಬಿಟ್ಟರೂ ನಾವು 'ಅತ್ಯುತ್ತಮ' ಎಂದು ಹೇಳಬಹುದಾದ ಬಹುತೇಕ ಕೃತಿಗಳು ನವೋದಯದ ಹಿರಿಯರು ರಚಿಸಿದ್ದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಅವರಿಗೆ 'ಮಕ್ಕಳ ಸಾಹಿತ್ಯ' ಎನ್ನುವ ಪ್ರಕಾರ, ಅದರ ಪರಿಕಲ್ಪನೆಗಳು ಹೊಸದಾಗಿ ದೊರಕಿದ್ದವು. ಅವರು ಒಳ್ಳೆಯ ಸಾಹಿತಿಗಳೂ ಆಗಿದ್ದದರಿಂದ ಆ ಪ್ರಕಾರದ ಸಾಧ್ಯತೆಗಳನ್ನೆಲ್ಲಾ ಶೋಧಿಸಿ ಅತ್ಯುತ್ತಮ ಬರಹಗಳನ್ನು ನೀಡಿದರು. ಅವರ ನಂತರದಲ್ಲಿ ಬಂದವೆಲ್ಲ ಅವರಿಂದ ಪ್ರಭಾವಿತವಾದ, ಅವರನ್ನು ಅನುಕರಿಸಿದ ರಚನೆಗಳೇ. ನಮ್ಮ ದೈನಿಕ, ಸಾಪ್ತಾಹಿಕ, ಮಾಸಿಕ ಪತ್ರಿಕೆಗಳ ಮಕ್ಕಳ ಪುಟಗಳಲ್ಲಿ, ಮಕ್ಕಳಿಗಾಗಿಯೇ ಇರುವ ಪತ್ರಿಕೆಗಳಲ್ಲಿ, ಕಣ್ಣಾಡಿಸಿದರೆ ಈ ಕ್ಷೇತ್ರದಲ್ಲಿ ಬೆಳೆಗಿಂತ ಗೊಬ್ಬರವೇ ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ. ಅಜ್ಜನ ಕೋಲಿನ ಜಾಗೆಯಲ್ಲಿ ಅಜ್ಜಿಯ ಗೆಜ್ಜೆಯನ್ನೂ, ಕಾಗೆಯೊಂದು ಹಾರಿಬಂದು ಕುಳಿತಿರುವಲ್ಲಿ ಬೆಕ್ಕು ಒಂದು ಓಡಿಬಂದು ಕುಳಿತಿರುವುದನ್ನೂ ನೋಡುವಾಗ ಖೇದವೆನಿಸುತ್ತದೆ. ಸ್ವೋಪಜ್ಞವಲ್ಲದ ಇಂತಹ ರಚನೆಗಳು ಮಕ್ಕಳ ಸಾಹಿತ್ಯ ಹಾಗೂ ಹೀಗೂ ಬದುಕಿರುವಂತೆ ನೋಡಿಕೊಳ್ಳುತ್ತವೆಯಷ್ಟೇ. ಇವು ಉಳಿಸುವ, ಬೆಳೆಸುವ ರಚನೆಗಳಲ್ಲ.

ಹಾಗಾದರೆ ಕನ್ನಡ ಮಕ್ಕಳ ಸಾಹಿತ್ಯಕ್ಕೆ ದಾರಿ ಯಾವುದು? ಮೊದಲಿಗೆ ಮಕ್ಕಳ ಸಾಹಿತ್ಯ ವಿಮಶರ್ೆ ಬೆಳೆಯಬೇಕು. ಈ ಸಾಹಿತ್ಯ ವಿಮಶರ್ೆಗೆ ಸಂಪ್ರದಾಯವಿಲ್ಲ. ಅದರ ಪರಿಭಾಷೆಯಾಗಲಿ, ಮಾನದಂಡವಾಗಲಿ, ಇನ್ನೂ ದೊರಕಿಲ್ಲ. ಬೆನ್ನು ತಟ್ಟುವ ಧಾಟಿ-ಧೋರಣೆಯನ್ನು ಬಿಟ್ಟು ಅದು ಮುಂದೆ ಹೋಗಿಲ್ಲ. ಇನ್ನೊಂದು ಕೆಲಸವೆಂದರೆ, ನೂರು ವರ್ಷಗಳ ಈ ಸಾಹಿತ್ಯದಲ್ಲಿ ಮುಖ್ಯ ಪ್ರವಾಹಕ್ಕೆ ಹೊರತಾದ ಮಾದರಿಗಳನ್ನು, ಮಾಗರ್ಾಂತರವೆಂದರೆ ವಿ.ಜಿ. ಭಟ್ಟರದು. ಭಟ್ಟರು ಕಟ್ಟಿಕೊಂಡ ಮಕ್ಕಳ ಪರಿಕಲ್ಪನೆ ಕನ್ನಡ ಮಕ್ಕಳ ಸಾಹಿತ್ಯದ ಪ್ರಧಾನವಾಹಿನಿಗಿಂತ ತೀರ ಭಿನ್ನವಾದದ್ದು. ಅದಕ್ಕೆ ಹೋಲಿಕೆ ಇದ್ದರೆ ಪಂಚತಂತ್ರದ ವಿಷ್ಣುಶರ್ಮನ ಶ್ರೋತೃಗಳಲ್ಲಿ ಮಾತ್ರ. ಆದರೆ ಪ್ರಭುತ್ವ ವಿರೋಧಿ ನಿಲುವಿನಿಂದಾಗಿ ಭಟ್ಟರು ವಿಷ್ಣುಶರ್ಮನಿಗಿಂತ ಭಿನ್ನರಾಗಿದ್ದಾರೆ. ಇದೇ ರೀತಿ ವೆಂಕಟೇಶಮೂತರ್ಿಯವರು ಸಹ ವಿಭಿನ್ನ ಮಾದರಿಯೊಂದನ್ನು ರೂಪಿಸುತ್ತಿದ್ದಾರೆ. ಕನ್ನಡ ಮಕ್ಕಳ ಸಾಹಿತ್ಯ ಹೊಸದಾರಿಯನ್ನು ತುಳಿಯುವವರೆಗೂ ವಿ.ಜಿ. ಭಟ್ಟರ ತುಂಟ ಪ್ರಶ್ನೆ ಉಳಿದೇ ಇರುತ್ತದೆ.

ಕತ್ತಲೆ ಕೋಣೆಗೆ ಬೆಳಕನು ತಂದರೆ
ಕತ್ತಲೆಯೆಲ್ಲೋ ಓಡುವದು
ಬೆಳಕಿನ ಬಯಲಿಗೆ ಕತ್ತಲೆ ಬಂದರೆ
ಬೆಳಕಾದರು ಏನ್ ಮಾಡುವುದು?
                                                                                                                                     ಅಗಸ್ಟ್ 2001

Saturday 12 July 2014

ಮಧ್ಯಮ ವರ್ಗದ ವಿವೇಕ ಪ್ರಜ್ಞೆ - ಪರ್ವತವಾಣಿ- ಡಾ.ಶ್ರೀಪಾದ ಭಟ್

                                             ಮಧ್ಯಮ ವರ್ಗದ ವಿವೇಕ ಪ್ರಜ್ಞೆ - ಪರ್ವತವಾಣಿ

       ಭಾಷೆಯನ್ನು ಕಲಿಯುತ್ತಿರುವವರಿಂದ ರಂಗಭೂಮಿಯನ್ನು ದೂರವಾಗಿಸಿ, ಅದನ್ನು ಉತ್ಸವದ ಸರಕನ್ನಾಗಿಮಾತ್ರವೇ ಗೃಹಿಸುತ್ತ ಭಾಷೆ ಮತ್ತು ಸಂಸ್ಕೃತಿಗಿರುವ ಸಹಜ ಸಂಬಂಧವನ್ನು ಅಥರ್ೈಸಿಕೊಳ್ಳಲಾರದೇ ಏದುಸಿರು ಬಿಡುತ್ತಿರುವ ಕನ್ನಡರಂಗಭುಮಿಗೆ - ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದ ಪರ್ವರವಾಣಿಯವರು ನೆನಪಾಗುತ್ತಿರುವದು ಸಕಾಲಿಕ.
             50 - 60 ರ ದಶಕದಲ್ಲಿ ಆಧುನಿಕ ರಂಗವ್ಯಾಕರಣವನ್ನೂ, ಭಾಷಾಬಳಕೆಯ ವಿವಿಧ ಸಾಧ್ಯತೆಗಳನ್ನೂ ಬಹುದೊಡ್ಡಮಟ್ಟದಲ್ಲಿ ಪರಿಚಯಿಸಿದ್ದು ಪರ್ವತವಾಣಿ ಮತ್ತವರ ಸ್ನೇಹಿತರು. ಶಾಲಾಕಾಲೇಜುಗಳಲ್ಲಿ ಕನ್ನಡ ರೂಪುಗೊಳ್ಳತ್ತಿರುವ ಕಾಲದಲ್ಲಿ, ಊರಿನ ಶಲಾಕಾಲೇಜುಗಳ ವಾಷರ್ಿಕೋತ್ಸವವೇ ಸುಶೀಕ್ಷಿತವಲಯದ ಬಹುಮುಖ್ಯ ಮನರಂಜನೆಯ ತಾಣವಾಗಿದ್ದ ಹೊತ್ತಿನಲ್ಲಿ ಪರ್ವರವಾಣಿಯವರು ಪ್ರವೇಶಿಸಿದ್ದರು. ಕಂಪನಿಗಳ ಸಾಮಾಜಿಕ ನಾಟಕಗಳು ಜನಪ್ರಿಯವಾಗುತ್ತಿದ್ದ ಕಾಲವದು. ಶಾಲಾ ಕಾಲೇಜುಗಳಿಗೆ ಈ ಕಂಪನಿ ನಾಟಕಗಳು ಆಡುವುದಕ್ಕೆ ತುಂಬದೀರ್ಘವೂ, ಹಲವು ಅತಿರೇಕಗಳ ಅಡ್ಡೆಯೂ ಅನಿಸಿದ್ದ ಆದರೆ ಅದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾರದ ಹೊತ್ತಿನಲ್ಲಿ ಸೂಕ್ತ ಮಧ್ಯಪ್ರವೇಶಿಕೆ ಮಾಡಿದ್ದು ಪರ್ವತವಾಣಿ ಮತ್ತವರ ಸ್ನೇಹ ವಲಯ. ಕಡಿಮೆ ಅವಧಿಯ,ಸರಳವಾಗಿ ಆಡಬಹುದಾದ,ಸೀಮಿತ ಪರಿಕರ ಮತ್ತು ಪರಿಸರದಲ್ಲಿ ನಿಭಾಯಿಸಬಹುದಾದ ಇವರ ನಾಟಕಗಳು ಬಹುಬೇಗ ಜನಪ್ರಿಯಗೊಂಡವು. ಬುದ್ದಿಗೆ ಕಚಕುಳಿ ಇಡುವಂತಿರುವ ಕಥಾ ಸಂವಿಧಾನ, ಭಾಷೆಯನ್ನು ಹಲವುಬಗೆಯಲ್ಲಿ ಬಳಸುವ ಪರಿ ಇವೆಲ್ಲವುಗಳಿಮದ ಖುಷಿಗೊಂಡ ಈ ಸಮುದಾಯ ರಂಗಭೂಮಿಯನ್ನು ವಾಷರ್ಿಕ ಕ್ರಿಯಾವಿಧಿಯನ್ನಾಗಿಸಿಕೊಂಡಿತ್ತು. ಅಲ್ಲದೇ ಪರ್ವತವಾಣಿ ಕಂಪನಿ ನಾಟಕಗಳಲ್ಲಿಯ ಟಿಪಿಕಲ್ ಆದ ಸ್ಥಾಯಿ ಪಾತ್ರಗಳಾದ ಅಣ್ಣ,ತಂಗಿ,ಅನಾರೋಗ್ಯದ ಅಪ್ಪ,ಕೆಡುಕಿನ ಧನಿಕ - ಇಂತಹ ಮಾದರಿಗಳನ್ನು ಬಿಟ್ಟು ಯಾವ ಮಧ್ಯಮವರ್ಗದ ಕುಟುಂಬಗಳಲ್ಲಿಯೂ ಇರಬಹುದಾದ ಪಾತ್ರಗಳನ್ನು ಸೃಷ್ಟಿಸಿದ್ದರಿಂದ ಅದರ ವಾಸ್ತವದ ಸಾಮೀಪ್ಯತೆ ನೂತನ ಶಿಕ್ಷಿತವಲಯಕ್ಕೆ ಆತ್ಮೀಯವೆನಿಸಿತು.
              ಕೈಲಾಸಂ ಆರಂಭಿಸಿದ ಆಧುನಿಕ ನಾಟಕ ಪರಂಪರೆಯನ್ನು ಮುಂದುವರಿಸಿ ಅಷ್ಟೇ ಅಲ್ಲದೇ ಅದನ್ನು ವಿಸ್ತರಿಸಿದವರು ಪರ್ವತವಾಣಿ. ಕೈಲಾಸಂ ಅವರ ಕನ್ನಡಾಂಗ್ಲವನ್ನು ಒಂದು ಹದಕ್ಕೆ ತಂದು , ಪಟ್ಟಣಿಗರ ಆಡುಮಾತಿನ ಲಯ, ಅದಕ್ಕೆ ಗ್ರಂತಸ್ಥ ಭಾಷೆಯ ಲೇಪ - ಮುಂದೆ ಅದೇ ಒಂದು ಮಾದರಿಯಾಗಿ ಭಾಷಾ ಪ್ರಕಾರವಾಗಿ ಪಟ್ಟಣದ ಭಾಷಿಕವಲಯದಲ್ಲಿ ಜನಪ್ರಿಯಗೊಂಡು, ಸಿನೆಮಾದ ಮೂಲಕ ವ್ಯಾಪಕತೆ ಪಡೆದದ್ದು ದಾಖಲಾರ್ಹ ಇತಿಹಾಸ. 
           ಪರ್ವತವಾಣಿ ಸಾಕಷ್ಟು ಪ್ರಗತಿಪರರು. ಈ ನಿಟ್ಟಿನಲ್ಲಿ ಕೆಲವೊಮ್ಮೆ ಅವರ ಗುರು ಕೈಲಾಸಂ ಎಲ್ಲಿ ನಿಂತುಬಿಡುತ್ತಾರೋ ಅಲ್ಲಿ ಇವರು ಮುಂದಡಿ ಇಡುತ್ತಾರೆ. ನಾಟಕ ಕ್ಷೇತ್ರದ ಪ್ರಗತಿಶೀಲರೆಂದು ಇವರನ್ನು ಕರೆದರೆ ತಪ್ಪಿಲ್ಲ. ಒಂದುರೀತಿಯಲ್ಲಿ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಪ್ರಗತಿಶೀಲರು ನೀಡಿದ ಕೊಡುಗೆಯನ್ನೇ ನಾಟಕಕ್ಷೇತ್ರಕ್ಕೆ ಪರ್ವತವಾಣಿಯವರು ನೀಡಿದ್ದರೆ. ಪಠ್ಯದ ಸಾಮಾಜಿಕ ಜವಾಬ್ದಾರಿಯನ್ನೂ ಜನಪ್ರಿಯತೆಯನ್ನೂ ಹೆಚ್ಚಿಸಿದ್ದಾರೆ.
              ನಿಜ. ಅವರದ್ದು ಮಧ್ಯಮವರ್ಗದ ಪ್ರಪಂಚ. ಮಧ್ಯಮವರ್ಗದ ನೈತಿಕತೆಯ ಒಳಗೆ ಎಷ್ಟು ಸಾಧ್ಯವೋ ಅಷ್ಟು ಪ್ರಗತಿಪರತೆಯನ್ನು ಸಾಧಿಸಿದವರು ಅವರು. ಆದರೆ ಈ ನೈತಿಕ ಜವಾಬ್ದಾರಿಗಾಗಿ ರಂಗಭುಮಿಯ ' ಈಠಡಿಟ 'ನ್ನು ಬಲಿಕೊಟ್ಟವರಲ್ಲ ಅವರು. ಈ  ಕುರಿತು ಅವರಲ್ಲಿ ಖಚಿತ ನಿಲುವು ಇತ್ತು. ಮೋಲಿಯೇರ್ನ ನಾಟಕಗಳ ರೂಪಾಂತರದ ಮುನ್ನುಡಿಯಲ್ಲಿ ಅವರು ಹೇಳಿದ ಮಾತುಗಳಿವು.  . . . ನಾಟಕಕಲೆಯಲ್ಲಿ ಹೆಚ್ಚು ಜನರನ್ನು ಸಂಪಕರ್ಿಸುವ . . . ಹೀಗೆ ಸಂಪಕರ್ಿಸಿ ಸನ್ಮಾರ್ಗಕ್ಕೆ ಎಳೆಯುವ ಪ್ರಯತ್ನ ಮಾಡುವ ಅವಕಾಶವಿದೆ. . . ಆದರೆ ಕಪ್ಪುನಾಯಿಯನ್ನು ಬಿಳಿನಾಯಿ ಮಾಡುತ್ತೇವೆಂದು ಅತಿ ಉತ್ಸಾಹದಿಂದ ಹೊರಟು ನಾಯಿಯನ್ನೇ ಮಂಗ ಮಾಡಿದ್ದೇವೆ. . . . ನಾಟಕ ಕಲೆ. ಇದಕ್ಕೆ ಪ್ರಥಮ ಸ್ಥಾನ. ನಂತರ ತಲೆ. ಎರಡೂ ಕೂಡಿದರೆ ಹೆಚ್ಚು ಬೆಲೆ. ಬರಿ 'ತಲೆ'ಯಷ್ಟನ್ನೇ ರಂಗಮಂಚದ ಮೇಲಿಟ್ಟರೆ ಪ್ರೇಕ್ಷಕರು ನೋಡುವುದಿಲ್ಲ. ಓಡುತ್ತಾರೆ. ತಲೆ - ಕಲೆ ಎರಡೂ ಕೂಡಿದ ಬೆಲೆಯುಳ್ಳ ಸಪ್ತಪದಿ ಯಂತಹನಾಟಕಗಳನ್ನು ಪರ್ವತವಾಣಿ ರಚಿಸಿದ್ದಾರೆ.
  ಸ್ವತಂತ್ರ ನಾಟಕಗಳ ಜತೆ ಅನೇಕ ರೂಪಾಂತರಗಳನ್ನೂ ನೀಡಿ ರಂಗಭೂಮಿಯನ್ನು ಸಮೃದ್ಧಿಗೊಳಿಸಿದ  ಪರ್ವತವಾಣಿಯವರನ್ನು ವಿಮರ್ಶಕರು ಅಷ್ಟಾಗಿ ಗಮನಿಸಿಲ್ಲ. ಜನಪ್ರಿಯತೆಯನ್ನು ಅನುಮಾನದಿಂದ ನೋಡಲು ಆರಂಭಿಸಿದ ಕಾಲಘಟ್ಟದಿಂದ ಇಂತವರ ಕೊಡುಗೆಯನ್ನು ಗೌರವಿಸದಿರುವ ಒಂದು ಸಂಕಥನವೇ ರೂಪುಗೊಂಡಿರುವ ಹಿನ್ನೆಲೆಯಲ್ಲಿಯೇ ನಾವಿದನ್ನು ಕಾಣಬಹುದಾಗಿದೆ. ಹೀಗೆ ಅನಾದರಕ್ಕೊಳಗಾಗಿದ್ದು ಪರ್ವತವಾಣಿ ಮಾತ್ರವಲ್ಲ ಶಲಾ ಕಾಲೇಜುಗಳ ರಂಗಭೂಮಿಯೂ ಹೌದು. ಈಗ ಶತಮಾನೋತ್ಸವದ ಶುಭ ಅವಸರದಲ್ಲಿ ಪರ್ವತವಾಣಿಯವರ ನಾಟಕಗಳನ್ನು ಪುನರವಲೋಕಿಸುತ್ತಿದ್ದೇವೆ. ಇದು ಕನ್ನಡ ರಂಗಭೂಮಿಗೆ ಸಕಾಲಿಕ. ಪರ್ವತವಾಣಿಯವರ 3 ನಾಟಕಗಳ ಕಿರು ಅವಲೋಕನದೊಂದಿಗೆ ಈ ನಿಲುವನ್ನು ಮುಂದುವರಿಸಬಹುದು.   
                              ತಪ್ಪು ಹೆಜ್ಜೆ
ತಾರಾನಾಥ - ತಾರಾಬಾಯಿ ಇವರ ಮಗ ರವಿ. ಸೊಸೆ ರೂಪಾ. ರೂಪಾಳಿಗೆ ಮಕ್ಕಳಿಲ್ಲ. ಗಂಡ ರವಿಗೆ ಮಕ್ಕಳಾಗುವ ಯೋಗವಿಲ್ಲ. ವೈದ್ಯರು ಹೀಗೆಂದು ಕೊಟ್ಟ ರಿಪೋರ್ಟನ್ನು ಆತ ಯಾರಿಗೂ ತೋರಿಸದೇ ಮುಚ್ಚಿಟ್ಟಿದ್ದಾನೆ. ಯಥಾ ಪ್ರಕಾರ ಅತ್ತೆಯ ನಿಂದನೆಗೆ, ಆಚೆ ಈಚೆಯವರ ಕುತ್ಸಿತ ನುಡಿಗೆ ರೂಪಳ ಬಲಿ. ಬಂಜೆ ತನದ ಬಿರುನುಡಿಗೆ ಆಘಾತಗೊಂಡು ದಾರಿಹೋಕನೊಬ್ಬನನ್ನು ಕೂಡಿ ಆಕೆ ಗಭರ್ಿಣಿಯಾಗುತ್ತಾಳೆ. ಹೆಂಡತಿ ಗಭರ್ಿಣಿಯಾದದ್ದು ಗಂಡನಿಗೆ ಆಘಾತ ತಂತು. ಸತ್ಯ ಹೊರಬಿತ್ತು. ಆದರೆ ರೂಪ ನಿಸ್ಸಹಾಯಕಳದಳು. ಈ  ಪರಿಸ್ಥಿತಿಯಿಂದ ಪಾರಾಗಲು ಆಕೆ ನಿದ್ದೆಗುಳಿಗೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ವಿವೇಕಿಯಾದ ಮಾವ ತಾರಾನಾಥರ ಔಚಿತ್ಯದ ನಡೆಯಿಂದ ಅತ್ತೆ, ಗಂಡ ರೂಪಾಳನ್ನು ಅವಳ ಮಗುವಿನ ಸಮೇತ ಒಪ್ಪಿಕೊಳ್ಳುತ್ತಾರೆ. ಇದು ನಾಟಕದ ಸಂವಿಧಾನ. ರೂಪಾ ಇಟ್ಟಿದ್ದು ಮಾತ್ರ ತಪ್ಪುಹೆಜ್ಜೆ ಆಗದೇ ಅವಳನ್ನು ಆ ಸಂದರ್ಭಕ್ಕೆ  ನೂಕಿದ ಸಮಾಜದ ಹೆಜ್ಜೆಗಳ ತಪ್ಪನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ನಾಟಕ ಸಂಕಲನದ ಭರತವಾಕ್ಯದಲ್ಲಿ ಬೇಂದ್ರೆ ಹೇಳುವಂತೆ  ತಪ್ಪು ಹೆಜ್ಜೆಯಲ್ಲಿ ತಪ್ಪೇನಿದೆ? ಬೆಪ್ಪಿದೆ. ಬೆರಗಿದೆ. ಅದೂ ಕರಗಿದೆ. ಸಹ್ಯ ಜೀವನದ ವಿವೇಕ
                   ಜೀವನವನ್ನು ಸಹ್ಯಗೊಳಿಸುವುದು ಕಲೆಗಳ ಉದ್ದೇಶಗಳಲ್ಲೊಂದು. ಲೋಕಾರೂಢಿಯ ಹಲವು ಸ್ವಭವಗಳು ಇಲ್ಲಿ ಚಿತ್ರಿತಗೊಂಡಿದೆ. ತಾರಾ ನಾಥರಾಯರ ಪಾತ್ರ ನಾಟಕದ ಒಟ್ಟೂ ಪ್ರದರ್ಶನಕ್ಕೆ ಒಂದು ಲವಲವಿಕೆಯನ್ನು, ಬದುಕಿಗೊಂದು ಔಚಿತ್ಯವನ್ನೂ ಕೊಡುತ್ತದೆ. ಮಾತೂ ಅಷ್ಟೆ ಹಲವು ಅರ್ಥಗಳನ್ನು ವ್ಯಂಜಿಸಲು ಆಗಾಗ ಪ್ರಯತ್ನಿಸುತ್ತದೆ. ಉಧಾ .- ರೂಪಾಳಿಗೆ ಕೊನೆಯಲ್ಲಿ ಎಚ್ಚರ ಬಂದಾಗ ಅತ್ತೆ ತಾರಾಬಾಯಿ  'ಜ್ಞಾನಬಂತು . . ಜ್ಞಾನಬಂತು ' ಎಂದು ಹೇಳುವದು ಕೇವಲ ರೂಪಾಳಿಗೆ ಬಂದ ಭೌತಿಕ ಜ್ಞಾನದ ಕುರಿತಾದ  ಮಾತಾಗದೇ ಅವಳಿಗೇ ಬಂದ ಜ್ಞಾನದ ಕುರಿತೂ ಆಡುವ ಮಾತಾಗುವಂತೆ ನಾಟಕಕಾರ ಬಳಸಿದ್ದಾನೆ.

                                                                           ಸಪ್ತಪದಿ
ಈ ಸಂಕಲನದ ಅತ್ಯುತ್ತಮ ನಾಟಕ. ತಾಂತ್ರಿಕವಾಗಿಯೂ ತುಂಬ ಬಿಗಿಯಾದ ಬಂಧದ ನಾಟಕವಿದು. ವಸ್ತುವಿನಲ್ಲಿಯೂ ತುಂಬ ಪ್ರಗತಿಪರವಾದ ನಿಲುವಿನ, ಸಂಪ್ರದಾಯವಾದಿಗಳಿಗೆ 'ಠಞ ' ನೀಡುವ ನಾಟಕ. ಹೀಗೆ ಆಶಯ - ಆಕೃತಿ ಎರಡರಲ್ಲೂ ಛಂದದ ನಾಟಕ.
       ನಾಟಕ ನಡೆಯುವುದು ಮದುವೆ ಮಂಟಪದಲ್ಲಿ. ನಾಟಕ ನಡೆಸುವ ಸೂತ್ರಧಾರ, ಮದುವೆಯ ಸೂತ್ರಧಾರನಾದ ಪುರೋಹಿತ. ರಾಜು ಮತ್ತು ಸರಸು ಎನ್ನುವವರು ಮದುವೆ ಮನೆಯ ಗಂಡು ಹೆಣ್ಣು. ಮಾಂಗಲ್ಯ ಕಟ್ಟಿ ಮುಗಿದಿದ್ದರೂ ಸಪ್ತಪದಿ ತುಳಿಯುವ ಕ್ರಿಯೆ ಇನ್ನೂ ಆಗ ಬೇಕಿದೆ.  ಪುರೋಹಿತರ ಪ್ರಕಾರ ಮಾಂಗಲ್ಯ ಧಾರಣೆ ಆದರೂ ಮದುವೆ ಆದಂತಲ್ಲ. ಇನ್ನೂ ಅವರು ಗಂಡು - ಹೆಣ್ಣ ಅಷ್ಟೆ. ಸಪ್ತಪದಿ ತುಳಿದ ಮೇಲೆಯೇ ಗಂಡ ಹೆಂಡತಿ. ಅವರಿಗೆ ಅರ್ಥವಾಗುವಂತೆ ಆತ ಸಂಸ್ಕೃತದ ಸಪ್ತಪದಿಯ ಮಂತ್ರಗಳನ್ನು ಕನ್ನಡದಲ್ಲಿಯೂ ಅನುವಾದಿಸಿ ಹೇಳುತ್ತಾನೆ. 7 ಹೆಜ್ಜೆಗೆ 7 ಮಂತ್ರ. ರಾಜೂ ಸರಸು ಇವರ ವಲ್ಲಿ ಮತ್ತು ಸೆರಗಿಗೆ ಗಂಟು ಹಾಕಲಾಗಿದೆ. ಪುರೋಹಿತರ ಮಂತ್ರದೊಂದಿಗೆ ಒಂದೊಂದೇ ಹೆಜ್ಜೆ ಆರಂಭ. ನಿಜವಾದ ನಾಟಕ, ನಾಟಕದೊಳಗಿನ ನಾಟಕ ಆರಂಭಗೊಳ್ಳುತ್ತದೆ.
   ಪ್ರತಿ ಮಂತ್ರ ಮತ್ತು ಹೆಜ್ಜೆಗು ಸರಸು ಮತ್ತು ರಾಜು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ಗತ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿ ಮಂತ್ರದ ಹೆಜ್ಜೆಗೊಮ್ಮೆ ಹಿನ್ನೋಟ. ಈ ಹಿನ್ನೋಟದಲ್ಲಿಯೂ ಕ್ರಮವಿದೆ. ಆ ನೆನಪಿಗೂ ಒಂದು ತಾಕರ್ಿಕಗತಿಯಿದೆ. ಅದು ಸಪ್ತಪದಿಯ ಪ್ರತಿಹೆಜ್ಜೆಯ ಮಂತ್ರದ ಅರ್ಥವನ್ನು ಆಧರಿಸಿದೆ. ಉಧಾ:'ಸಂಸಾರಕ್ಕೆ ನೆರವಾಗು' ಎಂದು ಗಂಡು ಹೆಣ್ಣನ್ನು ಕೇಳಿಕೊಳ್ಳುವ ಮೊದಲ ಹೆಜ್ಜೆಯ ಮಂತ್ರವನ್ನು ಪುರೋಹಿತರು ಹೇಳಿದಾಗ ಸರಸುವಿಗೆ, ವರದಕ್ಷಿಣೆ ಕೇಳಲು ಬಂದ ಗಂಡೊಬ್ಬನ ತಂದೆಯ ಜೊತೆಗಿನ ಮನಸ್ತಾಪದ ಘಟನೆ ನೆನಪಾಗುತ್ತದೆ. 'ಶರೀರ ಕ್ರಿಯೆಗೆ ನೆರವಾಗು' ಎಂಬ ಮಂತ್ರಕ್ಕೆ ಹೆಜ್ಜೆಹಾಕುವಾಗ ರಾಜುವಿಗೆ, ತಾನು ವಾರಾನ್ನ ಉಣ್ಣುತ್ತಿದ್ದ ಮನೆಯ ಯಜಮಾನನ ಹೆಂಡತಿ ತನ್ನ ಶರೀರಕ್ಕೆ ಸೋತು ಆಕ್ರಮಿಸ ಬಂದ ನೆನಪು - ಹೀಗೆ ಆರು ಹೆಜ್ಜೆಗೆ ಆರು ನೆನಪು. ಈ ನೆನಪುಗಳಿಗೆ ಇನ್ನೊಂದು ತರ್ಕವೂ ಇದೆ. ಅದೆಂದರೆ ಸರಸು ಕಾಣುವ ನೆನಪು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ್ದರೆ ರಾಜು ಕಾಣುವ ನೆನಪು ಹೆಣ್ಣಿನ ತಪ್ಪಿನ ನಡೆಗೆ ಸಂಬಂಧಿಸಿದ್ದಾಗಿರುತ್ತದೆ. ಏಳನೇ ಹೆಜ್ಜೆ ಇನ್ನೇನು ಆರಂಭವಾಗಬೇಕು ಆಗ ಇಬ್ಬರೂ ಪುರೋಹಿತರಲ್ಲಿ ಮಂತ್ರ ನಿಲ್ಲಿಸಲು ಹೇಳಿ, ಕೋಣೆಯೊಂದರಲ್ಲಿ ಮನಬಿಚ್ಚಿ ಮಾತನಾಡಿಕೊಳ್ಳುತ್ತಾರೆ. ಇಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ಮಾತುಗಳಲ್ಲಿಯೂ ಅವರ ಗತದ ನೆನಪಿನ ಕಹಿ ಇದೆ. ಹೆಣ್ಣು ಗಂಡಿನ ಸಮಾನತೆ,ದುಡಿಯುವ ಹಕ್ಕಿನ ಸಂಬಂಧದ ಚಚರ್ೆಯನಂತರ ಇಬ್ಬರೂ ಒಮ್ಮತದಿಂದ ಹೊರಬಂದು ಎಲ್ಲರೆದುರೂ ನಾಟಕೀಯವಾಗಿ ತಮ್ಮ ವಲ್ಲಿ - ಸೆರಗಿನ ಕೊನೆಗೆಹಾಕಿದ ಗಂಟನ್ನು ಬಿಡಿಸಿಕೊಂಡು, ಸೇರಿದವರೆಲ್ಲ ಛೀ ಎನ್ನುತ್ತರುವಂತೆ ಮದುವೆಯಿಂದ ದೂರ ಸರಿಯುತ್ತಾರೆ.
     ರಂಗ ತಂತ್ರ, ಸಂಭಾಷಣೆ, ನಾಟಕದ ಸಂವಿಧಾನ ಇವೆಲ್ಲ ತುಂಬ ಆಸ್ಥೆಯಿಂದ ಒಂದರೊಳಗೊಂದು ಹೊಂದಿಕೊಂಡ ನಾಟಕವಿದು. ಮಾತು-ಕ್ರಿಯೆ ಎರಡರಲ್ಲೂ ಒಂದು ಬಂದವಿದೆ. ನಾಟಕದ ಸೂತ್ರಧಾರನೇ ಆದ ಮದುವೆಯ ಸುತ್ರಧಾರ ಪುರೋಹಿತ ಆರಂಭದಲ್ಲಿಯೇ ಆಡುವ ಮಾತು ನಾಟಕದ ಕುರಿತ ಮುಂದಿನ ನಡೆಯನ್ನು ಸುಚಿಸುತ್ತದೆ.  . . . ನೀವು ಏಳನೇ ಹೆಜ್ಜೆ ಇಡುವುದರೊಳಗೆ ಏನಾದರೂ ಆಕಸ್ಮಿಕ ಆಗಿ ಈ ಶಾಸ್ತ್ರ ನಿಂತಿತೂ . . .  ನಾಟಕದಲ್ಲಿ ಈ ಶಾಸ್ತ್ರ ನಿಂತೇ ಹೋಗುತ್ತದೆ. ಅಲ್ಲದೇ ನಟಕದಲ್ಲಿ ಪುರೋಹಿತರಾಡುವ ಮಾತು ಈ ನಾಟಕದ ಆಶಯವನ್ನೂ ಧ್ವನಿಸುತ್ತದೆ.  . . . ಹೆಂಗಸಿಗೆ ಮೀಸೆ ಇಲ್ಲ. ಗಂಡಸಿಗಿದೆ. ಆದ್ದರಿಂದ ಅವನು ಕೂತಿರ ಬೇಕು, ಅವಳು ಓಡಾಡುತ್ತಿರಬೇಕು ಅನ್ನುವ ಪದ್ಧತಿ ತಪ್ಪು. ಶಾಸ್ತ್ರದ ಸರಿಯದ ಅಥ್ ತಿಳಿದುಕೊಂಡರೆ ಇಬ್ಬರು . . . ಹೆಜ್ಜೆಯಿಡಬೇಕು.
ತಮ್ಮ ಚಚರ್ೆಯನಂತರ ಕೋಣೆಯೊಳಗಿನಿಂದ ಹೊರಬರುವಾಗ ರಾಜು ಮತ್ತು ಸರಸು ಇವರಾಡುವ ಮತುಗಳನ್ನು ನೋಡಿ.
ರಾಜು: ನಡೆಯಿರಿ
ಸರಸು: ನೀವು ಮುಂದೆ
ರಾಜು: ಉಂಟೆ? ಲೇಡೀಸ್ ಫಸ್ಟ್. ನಿವು ಮುಂದೆ
ಸರಸು:  . . . ಬೆಡ . . ಬೇಡ . . . ಒಟ್ಟಿಗೆ . . .
  ನಾಟಕದಲ್ಲಿ 17 ದೃಶ್ಯಗಳಿವೆ. ಯಾವ ದೃಶ್ಯವೂ ದೀರ್ಘವಾಗದೇ ವೇಗವಾಗಿ ಸಾಗುತ್ತದೆ. ಕೇವಲ ಕ್ರಿಯೆಯೊಂದನ್ನೇ ಸೂಚಿಸುವ, ಮತಿಲ್ಲದ ದೃಶ್ಯವೂ ಇದೆ.  ಮಾತು, ನಟಕದ ಲಯವನ್ನು ಕೊಂಡೊಯ್ಯುವ ರೀತಿ ಗಮನಾರ್ಹವಾದುದು. ಉಧಾ: ದೃಶ್ಯ 1ರ ಕೊನೆಯ ಮಾತು  . . ಮೊದಲ ಹೆಜ್ಜೆ ಎಂದಿದ್ದರೆ 2ನೇ ದೃಶ್ಯದ ಮೊದಲ ಮಾತು 'ಮೊದಲ ಹೆಜ್ಜೆ'ಯನ್ನು ಒಳಗೊಂಡಿದೆ. ನಾಟಕದುದ್ದಕ್ಕೂ ಇಂತಹ ಲಯವನ್ನು ಸಂಬಾಳಿಸಲಾಗಿದೆ.

                               ಫೋರೆನ್ ಮಾಲು
ಮುದುಕನೊಬ್ಬ ಪ್ರೇಕ್ಷಕರಿಗೆ ವಿದೇಶೀ ಸರಕಿನ ವ್ಯಾಮೋಹದಿಂದ ತೊಂದರೆಗೊಳಗಾದವರ ಕತೆಗಲನ್ನು ತೋರಿಸುತ್ತ ಸಗುವ ನಾಟಕವಿದು. ವಿದೇಶೀ ಸೀರೆಗೆ ಮರುಳಾಗುವ ಹೆಂಗಸರು, ವಿದೇಶದಲ್ಲಿಯೇ ಉತ್ತಮ ಪ್ರಶಂಸೆಗೆ ಒಳಗಾಗುವ ದೇಶೀ ಗಡಿಯಾರ, ಫಾರಿನ್ ಅಳಿಯನನ್ನು ಮಡಿಕೊಳ್ಳುವ ಹುಚ್ಚಿನಲ್ಲಿ ಮೋಸ ಹೋದ ಅಪ್ಪ, ತಾಯಂದಿರನ್ನು ತುಳಸೀಕಟ್ಟೆಯ ಅಮ್ಮಂದಿರೆಂದು ಜರಿಯುವ ಹುಡುಗಿಯರು, ಮಮ್ಮಿ - ಡ್ಯಾಡಿ ಉಲಿಯುವ ಮಕ್ಕಳು, ಫಾರಿನ್ ಸಿನೆಮ ನೊಡಿ ಅನುಕರಿಸ ಹೊರಟು ಸಿಕ್ಕಿಬಿದ್ದ ಕಳ್ಳ, ವಿದೇಶೀ ನಾಟಕದ ಅನುಕರಣೆಯಲ್ಲಿ ಸಿಕ್ಕಿದ ಅಸಂಗತ ನಾಟಕದ ದೃಶ್ಯ, - ಇವೆಲ್ಲವನ್ನು ಕಾಣಿಸಲು ಪ್ರಯತ್ನಿಸುತ್ತದೆ. ಸ್ವದೇಶಿ ಆಂದೋಲನದ ಹರಿಕಾರರಾದ ಗಾಂಧಿಯನ್ನು ಮರೆತ ಸಮಕಾಲೀನ ಸಮಾಜದ ವಿಡಂಬನೆ ಇದರ ಉದ್ದೇಶ. 
     ಸ್ವದೇಶಿ - ವಿದೇಶಿಯನ್ನು ತುಸು ಸರಳೀಕರಿಸಿದ ನಟಕ ಎಂದೆನಿಸಿದರೂ ಕೆಲವು ಆಸಕ್ತಿದಾಯಕ ಸಂಗತಿಗಳೂ ಈ ನಾಟಕದಲ್ಲಿದೆ. ಆರಂಭದಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡುವ ಮುದುಕ ಸೂತ್ರಧಾರನಾಗಿ ಬೆಳೆಯುವದು ಪ್ರಯೋಗದ ಕುತೂಹಲ ಹೆಚ್ಚಿಸುತ್ತದೆ. ಆ ಕಾಲದಲ್ಲಿ ಪ್ರಚಾರಕ್ಕೆ ಬಂದ ಅಸಂಗತ ನಾಟಕವನ್ನು ಲೇಖಕರು ಸಾಹಿತ್ಯದ ಫೋರೆನ್ ಮಾಲು ಎಂದು ಕರೆದಿರುವದು, ನಾಟಕ-ಪ್ರೇಕ್ಷಕರನ್ನು ಕುರಿತ ಮಾತುಗಳು ಚಚರ್ೆಗೆ ಅವಕಾಶ ನೀಡುತ್ತದೆ. ಫಾರಿನ್ ಅಳಿಯನಿಗೆ ಮಗಳನ್ನು ಕೊಟ್ಟು ಬೇಸ್ತು ಬಿದ್ದ ಅಪ್ಪನಿಗೆ ಮಗಳು ಬರೆದ ಕಾಗದದಲ್ಲಿ ಬದುಕಿನ ವಿವೇಕವೂ ಇದೆ. ಆಕೆ ಅಂತಾಳೆ  . . . . ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳೊಲ್ಲ .

           'ಸಪ್ತಪದಿ', 'ತಪ್ಪುಹೆಜ್ಜೆ','ಫೋರೆನ್ ಮಾಲು' - ಈ ಮೂರೂ ನಾಟಕಗಳ ವಸ್ತು ವಿನ್ಯಾಸ ಬೇರೆ ಬೇರೆಯಾಗಿದ್ದರೂ ಇವುಗಳ ಆಶಯದಲ್ಲಿ ಸಾಮ್ಯತೆಗಳಿವೆ. ಇವು ಮೂರೂ 'ಸರಿ ಪಡಿಸಿಕೊಳ್ಳ ಬಹುದಾದ ತಪ್ಪುಗಳ'ಕುರಿತು ಮಾತನಾಡುತ್ತದೆ. 'ಸಪ್ತಪದಿ' ವ್ಯಕ್ತಿಗತವಾಗಿ ಗಂಡು ಹೆಣ್ಣಿನ ಕುರಿತು, ಹೆಣ್ಣು ಗಂಡಿನ ಕುರಿತು ತಳೆಯುವ ತಪ್ಪು ಅಭಿಪ್ರಾಯವನ್ನು ದೂರ ಮಡಿಕೊಳ್ಳಲು ಇರುವ ಅವಕಾಶದ ಕುರಿತು ಹೇಳಿದರೆ, 'ತಪ್ಪುಹೆಜ್ಜೆ' ಕುಟುಂಬವೊಂದು ತಳೆಯುವ ತಪ್ಪು ನಿಧರ್ಾರವನ್ನು ಸರಿಪಡಿಸುತ್ತದೆ. 'ಫಾರಿನ್ ಮಾಲು' ಸಮಾಜ ಇಡುತ್ತಿರುವ ತಪ್ಪು ಹೆಜ್ಜೆಯಕುರಿತು ಎಚ್ಚರಿಸುತ್ತದೆ. ಹೀಗೆ ವ್ಯಕ್ತಿ,ಕುಟುಂಬ,ಸಮಾಜ - ಈ ಮೂರೂ ಸ್ತರಗಳಲ್ಲಿಯೂ ಇಡುತ್ತಿರುವ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಬೇಕಾದ ವಿವೇಕದ ಕುರಿತು ಇವು ಗಮನ ಸೆಳೆಯುತ್ತವೆ.
             ಬದುಕಿನ ಬಗ್ಗೆ ಗಾಢವಾದ ಪ್ರೀತಿ, ವ್ಯವಸ್ಥೆಯ ಒಳಗಿದ್ದೇ ಅದರ ಪರಿಧಿ ಹಿಗ್ಗಿಸುವ ಪ್ರಯತ್ನ ಅವರ ನಟಕಗಳ ಸ್ಥಾಯಿಭಾವ. ಮಧ್ಯಮತನ ಕೇವಲ ಅವರ ವರ್ಗಪ್ರಜ್ಷೆಗೆ ಮಾತ್ರ ಸಂಬಂಧಿಸಿದುದಲ್ಲ. ಅದು ಅವರ ನಿಲುವಿಗೂ ಸಂಬಂಧಿಸಿದುದು.ಹಾಗಾಗಿ ಕೆಲವೊಮ್ಮೆ ಅವರು ತೀರ ಬಿಸಿಯಲ್ಲ ಅನಿಸುತ್ತದೆ. ಆದರೆ ಅವರು ತೀರ ತಂಪೂ ಅಲ್ಲ. ಅವರು ಉಗುರು ಬೆಚ್ಚನೆಯ ಅನುಭವ ನೀಡುವಂತವರು.
          ಹೆಚ್ಚು ಅರ್ಥ ವ್ಯಂಜಕತೆಗೆ ಆಸ್ಪದ ಮಾಡಿಕೊಡುವ ಚಿಕ್ಕಚಿಕ್ಕ ಮಾತುಗಳು, ಕುತೂಹಲ ಹುಟ್ಟಿಸುವ ಆರಂಭಗಳು, ಚಿಕ್ಕದಾದ ಒಗಟೊಂದನ್ನು ಒಡಲಲ್ಲಿರಿಸಿಕೊಂಡು ಅದನ್ನು ಬಿಡಿಸುತ್ತಹೋಗುವಂತಿರುವ ನಾಟಕದ ಬೆಳವಣಿಗೆ,ಅನವಶ್ಯಕ ಮಾತು ಪಾತ್ರಗಳು ಬರದಂತೆ ಕಾದುಕೊಳ್ಳುವ ಶುಚಿತ್ವ, ಇವು ಪರ್ವತವಾಣಿಯವರ ನಾಟಕಗಳ ಕೆಲವು ಲಕ್ಷಣಗಳು.
          ನಿಜ, ಇವು ಮಾತಿನ ನಾಟಕಗಳು.ಅದನ್ನೇ ಪ್ರಧಾನವಾಗಿಟ್ಟುಕೊಂಡವು.ರಂಗಭೂಮಿಯ ಎಲ್ಲ ಸಾಧ್ಯತೆಗಳನ್ನೂ ಇವು ಪೂರೈಸಿಬಿಟ್ಟಿದ್ದವು ಎಂದಲ್ಲ ಆದರೆ ಇವು ಪೂರೈಸಿಕೊಟ್ಟ ಆದರೆ ಇಂದು ಅಭಾವವಾಗುತ್ತಿರುವ ಹಲವು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಇಂದಿನ ರಂಗಭೂಮಿಯ ಹಿತಕ್ಕೆ ಪೂರಕ.
          ಹೀಗೆ ರಂಗಭೂಮಿಯ ಇತಿಹಾಸದ ಒಂದು ಕಾಲಘಟ್ಟದಲ್ಲಿ ತಮ್ಮ ಪಾತ್ರವನ್ನು ತುಂಬಸಮರ್ಥವಾಗಿ ನಿರ್ವಹಿಸಿದವರು ಪರ್ವತವಾಣಿ.ಸ್ವತಂತ್ರ,ರೂಪಾಂತರ - ಹೀಗೆ ಹಲವು ನಾಟಕಗಳ ರಚನೆಯ ಮೂಲಕ ಕಾಲದ ಕರೆಗೆ ಓಗೊಟ್ಟವರು. ಇಂದಿನ ಯುವ ಜನತೆಯಲ್ಲಿ ರಂಗವ್ಯಾಕರಣದ ಪರಿಚಯವೇ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರ ನಡುವೆ ಸುಲಭವಾಗಿ, ಸರಳವಾಗಿ, ಒಂದುಚಟುವಟಿಕೆಯಾಗಿ ರಂಗಪ್ರದರ್ಶನಗಳು ಬೆಳೆಯಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚು. ಇದನ್ನು ಪರ್ವತವಾಣಿ ಚೆನ್ನಾಗಿ ಸಾಧಿಸಿದ್ದರು.
            ಹೀಗಾಗಿ ಪರ್ವತವಾಣಿಯವರನ್ನು ಕೇವಲ ಕಲಾ ಇತಿಹಾಸದ ಕಣ್ಣಿನಿಂದ ನೋಡಲಾಗದು. ಸಾಮಾಜಿಕ ಸ್ವಾಸ್ಥ್ಯ, ಒಪ್ಪಂದಗಳು, ಸಂಸ್ಕೃತಿ, ಭಾಷೆ - ಈ ನಿಟ್ಟಿನಿಂದಲೂ ಗಮನಿಸಬೇಕು.
     
                                                         - ಡಾ.ಶ್ರೀಪಾದ ಭಟ್
                                                               ಶಿರಸಿ
                       

Friday 11 July 2014

ವಿಡಂಬಾರಿ ಅವರ ಕವಳ -- ಡಾ. ಪುರುಷೋತ್ತಮ ಬಿಳಿಮಲೆ


ವಿಡಂಬಾರಿ ಅವರ ಕವಳ
ಡಾ. ಪುರುಷೋತ್ತಮ ಬಿಳಿಮಲೆ

ದಿನಕರ ದೇಸಾಯಿಯವರ ಅನಂತರ ಚೌಪದಿಗಳ ಕಾಲ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇದೀಗ ವಿಡಂಬಾರಿಯವರು ಕವಳದ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಚೌಪದಿಗಳಿಗೆ ಉತ್ತರ ಕನ್ನಡ ಇನ್ನೂ ಫಲವತ್ತಾದ ಭೂಮಿಯಾಗಿದೆ ಎಂಬುದಕ್ಕೆ ಇದೊಂದು ದೃಷ್ಟಾಂತ. 
ಚೌಪದಿಗಳ ಪ್ರಧಾನ ಗುಣ ಎರಡು. ಮೊದಲನೆಯದಾಗಿ ಮಿತವಾದ ಮಾತುಗಳಲ್ಲಿ ಗಂಭೀರವಾದ ಅರ್ಥವನ್ನು ಹಿಡಿದಿಡುವುದು ಮತ್ತು ಎರಡನೆಯದಾಗಿ ಚೌಪದಿಯ ಕೊನೆ ಸಾಲಿನಲ್ಲಿ ಮಾಮರ್ಿಕವಾದ ತಿರುವೊಂದನ್ನು ತುಂದಿರುವುದು. ಈ ಕೊನೆಯ ಸಾಲು ಅನೇಕ ಬಾರಿ ವಿಡಂಬನಾ ಪ್ರಧಾನವಾಗಿದ್ದು, ಅದಕ್ಕಿಂತ ಮೊದಲಿನ ಮೂರು ಸಾಲುಗಳಿಗೆ ಹೊಸ ಅರ್ಥವನ್ನು ಕೊಡುವಷ್ಟು ಸಶಕ್ತವಾಗಿರುವುದು. ದೇಸಾಯಿಯವರು ಈ ಎರಡನೆಯ ಗುಣವನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದರು. ಕನ್ನಡದ ತ್ರಿಪದಿಗಳ ಸಾರ್ವಭೌಮನಾದ ಸರ್ವಜ್ಞನು ಮೊದಲನೇ ಗುಣಕ್ಕೆ ಹೆಸರಾದವನು.
ವಿಡಂಬಾರಿಯವರು, ಅವರ ಕಾವ್ಯನಾಮದಂತೆ, ವಿಡಂಬನೆಯಲ್ಲಿ ಪ್ರಸಿದ್ಧರು. ಇದು ಚೌಪದಿಯ ಕೊನೆ ಸಾಲಿನಲ್ಲಿ ಬರುತ್ತಿದ್ದದ್ದು, ಇವರಲ್ಲಿ ಆರಂಭದಲ್ಲಿ ಬಂದು ಬಿಡುತ್ತದೆ.
ಉದಾ : ಕನರ್ಾಟಕ ರಾಜ್ಯ ಸೋರಿಗೆಯ ಗಾಡಿ
ಗುರಿಯ ಮುಟ್ಟುವುದುಂಟೆ ಒಂದು ಕಡೆ ಓಡಿ
ಪ್ರಯಾಣಿಕರ ಮಾತ್ರ ಬೋಳಿಸುವ ದಾರಿ
ಚೆನ್ನಾಗಿ ಗೊತ್ತುಂಟು ಮಿತಿಯನ್ನು ಮೀರಿ. (337)
ಇಲ್ಲೂ ಮೊದಲ ಸಾಲಿನಲ್ಲಿ ಬರುವ ರಾಜ್ಯ ಸೋರಿಗೆ ಎಂಬುದು ವಿಡಂಬನೆಗಾಗಿಯೇ ಬಂದಿದೆ. ಚೌಪದಿಯ ಮುಂದಿನ ಸಾಲುಗಳು ಇದನ್ನು ಮೀರಿ ಬೆಳೆಯುವುದಿಲ್ಲದ ಕಾರಣ ಈ ವಿಡಂಬನೆ ಹೆಚ್ಚು ಯಶಸ್ವಿಯಾಗುವುದಿಲ್ಲ. ಆದರೆ ಸಾಮಾಜಿಕ ಕಳಕಳಿ ಹೆಚ್ಚು ಇರುವ ಚೌಪದಿಗಳಲ್ಲಿ ಈ ವಿಡಂಬನಾ ಗುಣ ಅತ್ಯಂತ ಸಲೀಸಾಗಿ ಬಂದು ಬಿಟ್ಟಿದೆ. 
ತೋಡಿರುವ ಪ್ರತಿಯೊಂದು ಬಾವಿಯಲಿ ನೀರು
ಬಂದೇ ಬರುವುದೆಂದು ಕಂಡವರು ಯಾರು
ಹೀಗಾಗಿ ಹಲವಾರು ಬಾವಿಗಳು ಇಲ್ಲಿ
ತುಂಬುವುವು ಸಂಪೂರ್ಣ ಮಳೆಗಾಲದಲ್ಲಿ.
ಇಲ್ಲಿಯ ಕೊನೆ ಸಾಲು ಚೌಪದಿಯನ್ನು ಅತ್ಯಂತ ಅರ್ಥವಾತ್ತಾಗಿಸಿದೆ. ಇಂಥ ಅನೇಕ ಚೌಪದಿಗಳು ವಿಡಂಬಾರಿಯವರ ಕಾವ್ಯಶಕ್ತಿಯನ್ನು ಪ್ರಕಟಪಡಿಸುತ್ತವೆ. 76, 82, 88, 104, 137, 210, 47, 259, 265, 309, 385, 416, 513, 568, 603, 614, 813, 782, 831, 814 ಈ ಚೌಪದಿಗಳು ವಿಡಂಬನಾ ಗುಣಕ್ಕಾಗಿ ಹಾತೊರೆಯುತ್ತಿರುವುದರಿಂದ ಮುಖ್ಯವಾಗುತ್ತವೆ.
ಕವನ ಸಂಕಲನವನ್ನು ಐದು ಭಾಗಗಳಲ್ಲಿ ಹಂಚಿದ್ದಾರೆ. ಈ ವಿಭಾಗ ಅಭ್ಯಾಸದ ಸೌಕರ್ಯಕ್ಕೆ ಹೇಗೋ ಹಾಗೇ ವಸ್ತುವಿನ ದೃಷ್ಟಿಯಿಂದಲೂ ಹೌದು. ಮೊದಲ ಭಾಗ ಆತ್ಮ ನಿವೇದನೆಯಲ್ಲಿ 55 ಚೌಪದಿಗಳಿದ್ದು, ಎಲ್ಲವೂ ತೀರಾ ಸಾಮಾನ್ಯ ರಚನೆಗಳಾಗಿವೆ. ಕವಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಮುಖ್ಯ ಅಷ್ಟೇ. ಒಂಥರಾ ಆತ್ಮ ಚರಿತ್ರೆಯ ಲೇಪ ಇದರಲ್ಲಿದೆ. ಎರಡನೆಯದಾದ ಸಾಮಾಜಿಕದಲ್ಲಿ 400 ಚೌಪದಿಗಳಿದ್ದು ಹೆಚ್ಚಿನವು ವ್ಯಂಗ್ಯ ಇಲ್ಲವೇ ಕಟಕಿಯಿಂದ ಯಶಸ್ವಿಯಾಗಿವೆ. ಮೂರನೇ ಭಾಗ ನೀತಿಪರವಾದದ್ದು. ಅದರಲ್ಲಿ ಒಟ್ಟು 92 ಚೌಪದಿಗಳಿದ್ದು ಕವಿಯ ನೈತಿಕ ದೃಷ್ಟಿಕೋನವನ್ನು ವಿವರಿಸಿ ಹೇಳುತ್ತದೆ. ಇಂಥ ಕಡೆ ಚೌಪದಿಗಳು ಬರೇ ಹೇಳಿಕೆಗಳಾದದ್ದೂ ಇದೆ. ಆದರೂ ಕವಿಯ ಮಾನವೀಯ ಕಳಕಳಿಯನ್ನು ಆಕ್ಷೇಪಿಸುವಂತಿಲ್ಲ. ನಾಲ್ಕನೆಯದಾದ ರಾಜಕೀಯ ಎಂಬ ಭಾಗದಲ್ಲಿ 113 ಚೌಪದಿಗಳಿದ್ದು, ಅವೆಲ್ಲವೂ ರಾಜಕೀಯ ವಿಡಂಬನೆಯಲ್ಲಿ ಯಶಸ್ವಿಯಾಗಿದೆ. ಅಧಿಕಾರ ಲಾಲಸೆ, ಮತಬೇಡಿಕೆಯ ಹಿಂದಿನ ಧೂರ್ತತನ, ಬಡವರುದ್ಧಾರದ ಸೋಗು ಇವನ್ನೆಲ್ಲ ಬಯಲಿಗೆಳೆಯಲಾಗಿದೆ.
ವಿಡಂಬಾರಿಯವರಿಗೆ ಚೌಪದಿಯ ಗುಣಗಳು ಗೊತ್ತಿವೆ. ಸಹಜವಾದ ಪ್ರಾಸ ಮತ್ತು ಲಯ ವಿನ್ಯಾಸ ಅವರಿಗೆ ಸಿದ್ಧಿಸಿದೆ. ಸಮಾಜವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ಚೌಪದಿಗಳಲ್ಲಿ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಬಲ್ಲರು. ಕವಳ ಅವರ ಸಾಧನೆಯ ಮೈಲಿಗಳಲ್ಲು.
                     (ಸೌಜನ್ಯ : ಮಂಗಾರು ದೈನಿಕ)

.ಮಕ್ಕಳ ರಂಗಭೂಮಿ ಮತ್ತು ನಾಟಕ -Dr. R V Bhandari


ರಂಗಭೂಮಿಯ ಕುರಿತು ಅನೇಕ ಪರಿಕಲ್ಪನೆಗಳಿವೆ. ಒಂದು ವಿಶಾಲವಾದ ಅರ್ಥದಲ್ಲಿ ಇವೆಲ್ಲವುಗಳನ್ನು ಒಳಗೊಂಡಿದ್ದೇ 'ರಂಗಭೂಮಿ' ಎಂಬ ಪರಿಕಲ್ಪನೆ ಕೂಡ. 'ರಂಗಭೂಮಿ' ಎನ್ನುವುದು ಸರ್ವತಂತ್ರ ಸ್ವತಂತ್ರವಲ್ಲ. ಅದಕ್ಕೆ ವಸ್ತು ಸಿಕ್ಕಿದಾಗಲೇ 'ರಂಗಭೂಮಿ' ಎನ್ನಿಸಿಕೊಳ್ಳುವುದು. ಪ್ರಸ್ತುತವಾಗಿ 'ರಂಗಭೂಮಿ' ಎಂದು ಕರೆಯುವುದು ನಾಟಕ ರಂಗಭೂಮಿಯೇ ಆದ್ದರಿಂದ ರಂಗಭೂಮಿ ನಾಟಕಾವಲಂಬಿ.
ರಂಗಭೂಮಿಯಲ್ಲಿ ಅಭಿಜಾತ ಮತ್ತು ಜಾನಪದ ಎಂಬೆರಡು ಬಗೆ. ಅಭಿಜಾತದಲ್ಲಿ ಪೌರಾತ್ಯ ಮತ್ತು ಪಾಶ್ಚಾತ್ಯ ಎಂಬುದು. ಇನ್ನು ಇದರಲ್ಲಿಯ ಪ್ರಕಾರಗಳು ಎಷ್ಟೋ ಇದ್ದರೂ ಇಂದು ಇವೆಲ್ಲ ಹತ್ತಿರ ಬಂದಿವೆ. ಪೌರಾತ್ಯದಲ್ಲಿ, ಪಾಶ್ಚಾತ್ಯ, ಅಭಿಜಾತ, ಜಾನಪದ ಹೀಗೆ ಯಾವುಯಾವುದು ಉದ್ದೇಶ ಪೂರಕವೆನಿಸುತ್ತದೋ ಅವೆಲ್ಲ ಒಂದೆಡೆ ಬಂದು ಸೇರಿಕೊಳ್ಳುತ್ತಿವೆ. ಆದ್ದರಿಂದ ನಮ್ಮ ಆಧುನಿಕ ರಂಗಭೂಮಿಯ ಬಗ್ಗೆ ಶಾಸ್ತ್ರ ವ್ಯಾಖ್ಯೆ ಮಾಡಲು ಮತ್ತೊಬ್ಬ 'ಭರತ ಮುನಿ' ಹುಟ್ಟಿ ಬರಬೇಕು. ಅಲ್ಲಿಯ ತನಕವೂ ವಿವಿಧ ಪ್ರಯೋಗ ಆಕರವನ್ನು ನಿಮರ್ಿಸುತ್ತಲೇ ಹೋಗಬೇಕಾಗುತ್ತದೆ. ಆ ಮೇಲೂ ಶಾಸ್ತ್ರಕ್ಕಿಂತ ಪ್ರಯೋಗವೇ ಸ್ವಾಭಾವಿಕ.
ಮಕ್ಕಳ ನಾಟಕ ಹೇಗೆ ಹೊಸ ಕಲ್ಪನೆಯೋ ಹಾಗೇ ಮಕ್ಕಳ ರಂಗಭೂಮಿ ಎನ್ನುವುದೂ ಕೂಡ. ಪಾಶ್ಚಾತ್ಯರಲ್ಲಿ, ರಷ್ಯಾದಲ್ಲಿ ಇದು ಒಂದು ಪರಿಕಲ್ಪನೆಯಾಗಿ ಪ್ರಯೋಗವಾಗುತ್ತಿದೆ ಎಂದು ಕೇಳಿದ್ದೇನೆ. ಅದರಂತೆ ಆಧುನಿಕ ಶಿಕ್ಷಣ ಮತ್ತಿತರ ವಿದ್ಯಮಾನದಬೆನ್ನು ಹಿಡಿದು ನಮ್ಮಲ್ಲೂ ಬಂದುದು ಈ ಮಕ್ಕಳ ರಂಗಭೂಮಿ ಎಂಬ ಹೊಸ ಕಲ್ಪನೆ.
ಮಕ್ಕಳ ರಂಗಭೂಮಿಗೂ ವಯಸ್ಕರ ರಂಗಭೂಮಿಗೂ ಇರುವ ವ್ಯತ್ಯಾಸ ಮನಃಶಾಸ್ತ್ರಕ್ಕೆ ಸಂಬಂಧಿಸಿ ನಿರೂಪಣೆಗೊಳ್ಳಬೇಕಾದುದು. ದೊಡ್ಡವರ 'ರಂಗಭೂಮಿ'ಯ ಎಲ್ಲ ಪರಿಕರಗಳೂ ಮಕ್ಕಳ ರಂಗಭೂಮಿಗೂ ಇರುತ್ತವೆ. ಆದರೆ ಅದು 'ವಾಸ್ತವಿಕ' ರಂಗಭೂಮಿಗಿಂತ ತೀರ ಭಿನ್ನ. ಅದರಲ್ಲಿ ಹಾಡು, ಕುಣಿತ, ಭ್ರಾಮಕ ಕಲೆ (ಫೆಂಟಸಿ) ಕತೆ, ಕನಸು, ಮನೋರಂಜನೆ, ವೇಷಭೂಷಣ, ಬಣ್ಣ ಬೆಡಗು, ಮುಖವಾಡ, ಬೆಳಕಿನ ವ್ಯವಸ್ಥೆ ಎಲ್ಲವೂ ಇರಬಹುದು. ಇವು ದೊಡ್ಡವರ ರಂಗಭೂಮಿಯಲ್ಲೂ ಇರುತ್ತದೆ. ಆದರೆ ಮಕ್ಕಳ ರಂಗಭೂಮಿಯ ತಿರುಳು ಇರುವುದು ಇವುಗಳನ್ನು ದುಡಿಸಿಕೊಳ್ಳುವ ರೀತಿಯಲ್ಲಿ ಅಥವಾ ಇವು ಪ್ರತ್ಯಕ್ಷವಾಗುವ ಸ್ವರೂಪದಲ್ಲಿ ಇವು ಜನಪದ ರಂಗಭೂಮಿಯ ಉತ್ಸವ ಸ್ವರೂಪಿಯಾದುದು. ಲವಲವಿಕೆ ಚಟುವಟಿಕೆ ಮತ್ತು ರಂಜನೆಯಿಂದ ವೈಶಿಷ್ಟ್ಯ ಪೂರ್ಣವಾದುದು.
ಮಕ್ಕಳ 'ರಂಗಭೂಮಿ'ಯ ಪರಿಕಲ್ಪನೆಯಲ್ಲಿ ಬರುವ ಮಕ್ಕಳು ಯಾರು? ಇವು ಬಹಳ ಮುಖ್ಯವಾದ ಪ್ರಶ್ನೆ. ನಮಗೆಲ್ಲ ಗೊತ್ತಿರುವಂತೆ ಮಕ್ಕಳ ಬೆಳವಣಿಗೆ ಸಂಕೀರ್ಣವಾದುದು. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ವೇಗಪೂರ್ಣ. ಈ ಬೆಳವಣಿಗೆಯನ್ನು ಶಾರೀರಿಕ ಮತ್ತು ಮಾನಸಿಕ ಎರಡನ್ನೂ ಒಟ್ಟಿಗೇ ನೋಡಬೇಕು. ಪರಿಸರ ಕೂಡ ಪ್ರಭಾವಶಾಲಿಯಾಗಿದ್ದರೂ ಮುಖ್ಯವಾಗಿ ಗಮನಿಸಬೇಕಾದುದು ಈ ಎರಡನ್ನೇ. ಇದನ್ನು ಗ್ರಹಿಸುವಾಗ ಒಂದು ಸ್ಥೂಲ ಸ್ವರೂಪ ಮಾತ್ರ ಸಾಧ್ಯ. ಇದು ಮನಃಶಾಸ್ತ್ರದಲ್ಲೂ ಸರಿ. ಆದ್ದರಿಂದ ಮನೋವಿಜ್ಞಾನದ ಅನುಸರಿಯಾಗಿ ಲೆಕ್ಕಹಾಕಬೇಕಾಗುತ್ತದೆ.
ಮೊದಲನೆಯದಾಗಿ ಮಕ್ಕಳೆಂದರೆ ದೊಡ್ಡವರಲ್ಲ. ನಮ್ಮ ಯಕ್ಷಗಾನದಲ್ಲಿ ಬರುವ ಪ್ರಹ್ಲಾದ, ಲೋಹಿತಾಶ್ವ ಮುಂತಾದವೆಲ್ಲ ಸಣ್ಣವರ ರೂಪದಲ್ಲಿರುವ ದೊಡ್ಡವರೇ ಹೊರತು ಮಕ್ಕಳಲ್ಲ. ಮಕ್ಕಳ ಮಾನಸಿಕ ಸ್ಥಿತಿಯ ರೀತಿಯೇ ಬೇರೆ. ಇಲ್ಲಿ ಬರುವ ಕತೆ, ಹಾಡು, ಕುಣಿತ, ಕನಸು, ಭ್ರಮೆ, ರಂಜನೆ ಇವೆಲ್ಲ ಮಕ್ಕಳ ಮನೋಭೂಮಿಕೆಯ ರಂಜನೀಯ ಸ್ಥಿತಿಯಿಂದ ಪೋಷಣೆಗೊಂಡಿರಬೇಕು. ಹಾಗೆಯೇ ಅದರ ಪ್ರತಿಬಿಂಬ ಗತಿಬಿಂಬ ಕೂಡ ಆಗಿರಬೇಕು. 'ಬುಶ್ಕೋಟು, ಮದುವೆ ಪತ್ತಲ, ಸದಾರಮೆ, ಸತ್ಯಾವಾನ ಸಾವಿತ್ರಿ, ಸಂಗ್ಯಾಬಾಳ್ಯ, ಶೋಕ ಚಕ್ರ ಇಂಥವೆಲ್ಲ ಇಲ್ಲಿ ಸಲ್ಲದು. ಇದು ಪ್ರದರ್ಶನ ದೃಷ್ಟಿಯಿಂದಲೂ ಮಕ್ಕಳ ರಂಗಭೂಮಿಗೆ ಸಲ್ಲದು. ನೋಡುವುದರಿಂದ ಕೆಲ ಅಂಶ ಮಕ್ಕಳಿಗೂ ರಂಜನೆಗೆ ಸಲ್ಲಬಹುದು. ಮಕ್ಕಳು ಮೀಸೆ ಬರೆದೋ, ಸೀರೆ ಉಟ್ಟೋ ಅಭಿನಯಿಸುವದರಿಂದ ದೊಡ್ಡವರಿಗೆ ಒಂದು ನಗೆಯಾಟ ದೊರಕಬಹುದು. ಆದರೆ ಇದು ಅರ್ಥಪೂರ್ಣವಲ್ಲ. ಯಾಕೆಂದರೆ ಇವು ಮಕ್ಕಳ ಮಾನಸಿಕ ಬೆಳವಣಿಗೆ ಹಂತದಲ್ಲಿ ಪ್ರತಿಕ್ರಿಯಿಸಲಾರವು.
ಮಕ್ಕಳು ಎಂದು ನಾವು ನಿರ್ಣಯಿಸುವಲ್ಲೂ ಯಾವ ವಯಸ್ಸಿನ ಮಕ್ಕಳು ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ 'ಮಕ್ಕಳ' ಬೆಳವಣಿಗೆಯಲ್ಲಿ ಅನೇಕ ಹಂತಗಳಿವೆ. ಆಯಾ ಹಂತದ ಬೇಡಿಕೆ ಮತ್ತು ಅರ್ಹತೆ ಬೇರೆ ಬೇರೆಯೇ ಆಗಿರುತ್ತದೆ. ಇದನ್ನು ಗಮನಿಸಿ ಮನೋವಿಜ್ಞಾನದ ನೆರವಿನಿಂದ ಸ್ಥೂಲವಾಗಿ ಹೀಗೆ ವಿಂಗಡಿಸಿಕೊಳ್ಳಬಹುದು.
1) 6 ರಿಂದ 9 ವರ್ಷ
2) 10 ರಿಂದ 13 ವರ್ಷ
3) 14 ರಿಂದ 17 ವರ್ಷ
ಮೊದಲಹಂತದಲ್ಲಿ ಮುಗ್ಧತೆ, ಕ್ರಿಯಾಶೀಲತೆ, ಹಾಡು, ಕುಣಿತ, ಗುಂಪುಕ್ರಿಯೆ, ರಂಜನೆ, ಭ್ರಾಮಕತೆ, ಬಣ್ಣಬೆಡಗು ಸೂಕ್ಷ್ಮವಲ್ಲದ ನಟನೆ ಮುಖ್ಯ. ಕಲ್ಲು, ಮಣ್ಣು, ನೀರು, ಮರ, ಮಳೆ, ಸೂರ್ಯ, ಚಂದ್ರ, ಬೆಕ್ಕು, ಹುಲಿ, ಹಾವು ಇತ್ಯಾದಿಗಳು ಜೀವ ತಳೆದು ಮಾತಾಡಬಲ್ಲವು. ಅವು ಮನುಷ್ಯರೂಪಿ ಪದಾರ್ಥಗಳೂ ಪದಾರ್ಥರೂಪಿ ಮನುಷ್ಯರೋ ಆಗಬಲ್ಲವು. ಒಂದನ್ನೊಂದು ಸ್ಪಂದಿಸಬಲ್ಲವು. ಇಲ್ಲಿ ಲಘು ಸಂಗೀತ ಹಾಡು ಅಪೇಕ್ಷಣೀಯ.
ಎರಡನೆಯ ಹಂತದಲ್ಲಿ ಇವೆಲ್ಲವೂ ಇರುತ್ತದೆ. ಆದರೂ ಇಲ್ಲಿ ವಾಸ್ತವಿಕತೆಯ ಗ್ರಹಿಕೆ ಬೆಳೆದಿರುತ್ತದೆ. ಹೀಗೆ ಮಾಡುವುದಕ್ಕಿಂತ ಹೀಗೆ ಮಾಡಿದರೆ ಚೆನ್ನಲ್ಲವೇ ಎಂಬ ಕುತೂಹಲ. ಮುಖವಾಡಕ್ಕಿಂತ ನೇರ ಪ್ರದರ್ಶನ ಇಚ್ಛೆ, ಪ್ರದರ್ಶನದಲ್ಲಿ ಹೆಚ್ಚು ಶಿಸ್ತು ಇವೆಲ್ಲ ಇಲ್ಲಿ ಮುಖ್ಯ. ನಟನೆ ಕೂಡ ಕಲಾತ್ಮಕತೆ, ಸೂಕ್ಷ್ಮತೆಯ ಕಡೆ ಒಲಿಯುತ್ತದೆ. ಭ್ರಾಮಕತೆಯಿದ್ದು ತಾಕರ್ಿಕ ಮನೋಭಾವ ಬೆಳೆದಿರುತ್ತದೆ. ಕತೆಯಲ್ಲಿ (ವಸ್ತುವಿನಲ್ಲಿ) ಒಂದು ಸುಸಂಬದ್ಧತೆ ಇಲ್ಲಿಯ ನಿರೀಕ್ಷೆ.
ಮೂರನೇ ಹಂತದಲ್ಲಿ ಇನ್ನೂ ಪ್ರೌಢಾವಸ್ಥೆ. ಹಿಂದಿನ ಎಲ್ಲ ರಂಜನೀಯ ಅಂಶ ಇಲ್ಲಿಯೂ ಇರುತ್ತದೆ. ಆದರೆ ಬಣ್ಣ ಬೆಡಗಿನಕ್ಕಿಂತ ಚಿಂತನೆ, ಗಾಂಭೀರ್ಯದ ಕಡೆ ಒಲವು ಜಾಸ್ತಿ. ವಾಸ್ತವದ ಪ್ರಜ್ಞೆಯೊಂದಿಗೆ ಆದರ್ಶವಾದಿ ಮತ್ತು ಸಾಹಸದ ಕನಸು ಗರಿಗೆದರುತ್ತದೆ. ಕಲಾತ್ಮಕತೆಯಲ್ಲಿ ಹೆಚ್ಚು ಸ್ವಾತಂತ್ರ್ಯ, ವೈಯುಕ್ತಿಕ ಮೆಚ್ಚಿಕೆಯೆಲ್ಲ ಇಲ್ಲಿ ಜಾಸ್ತಿ. ರಸಭಾವದ ದೃಷ್ಟಿಯಿಂದ ವೀರ, ರೌದ್ರ, ಶಾಂತ, ಕರುಣೆ ಇಂಥವುಗಳ ಬೆಳವಣಿಗೆ.
ಈ ಹಂತದ ಹುಡುಗಿಯರ ಮನೋಭಾವದಲ್ಲಿ ಇನ್ನೂ ಹೆಚ್ಚಿನ ರಸಾತ್ಮಕತೆ ಕಾಣಲು ಸಾಧ್ಯ. ಶೃಂಗಾರ ರಸದ ಪರಿಭಾವನೆಯ ಪಟುತ್ವ ಕಾಣಿಸಿಕೊಳ್ಳುತ್ತದೆ. ಶೀಲಾಶ್ಲೀಲಗಳ ದೃಷ್ಟಿಯಿಂದ ಸಾಮಾಜಿಕ ಅಪೇಕ್ಷೆಯ ಅರಿವು ಹೆಚ್ಚಿರುತ್ತದೆ. ಹಾಗೆಯೇ ವಾಸ್ತವತೆಯನ್ನು ಮೀರುವ ಅಲ್ಲಿ ನಿರುಂಬಳವಾಗುವ ಆಕಾಂಕ್ಷೆ ಹೆಚ್ಚಿರುತ್ತದೆ. ಇಲ್ಲಿ ಹೆಚ್ಚು ಕಲಾತ್ಮಕತೆಯ ಅಪೇಕ್ಷೇ ಕೂಡ ಇರುತ್ತದೆ. ಭಾವಸ್ಪಂದನ ಜಾಸ್ತಿ ಹಾಗೂ ಕಲ್ಪನಾವಿಹಾರ.
ಹಿಂದೆ 'ಮಕ್ಕಳು' ದೊಡ್ಡವರಲ್ಲ ಎಂದೇ ಹೇಳಿದೆ. ಹಾಗಿದ್ದಾಗಲೂ ಅವು ಬಿಡಿಬಿಡಿಯಾದ ಪ್ರತ್ಯೇಕ ಘಟಕಗಳಲ್ಲ. ಅದು ಕೈಯಲ್ಲಿ ಕೈಸೇರಿಕೊಂಡ ಮಾನವ ಸರಪಳಿ. ಒಂದು ಹಂತದ ಬುತ್ತಿ ಮತ್ತೊಂದು ಹಂತದಲ್ಲಿಯೂ ಸಲ್ಲುತ್ತದೆ. ಅದರಿಂದ ಪುಷ್ಟಿಗೊಂಡು ಮುಂದಿನ ಹಂತ ಸಿದ್ಧವಾಗುತ್ತದೆ. 'ಮಗುವೆ ಮಾನವನ ತಂದೆ' ಎಂಬ ವಡ್ಸ್ವತರ್್ ಕವಿಯ ಮಾತು ಕೇವಲ ಕವಿತೆಯ ಮಾತಲ್ಲ. ಮನೋವೈಜ್ಞಾನಿಕವಾಗಿ ಮತ್ತು ಸಾಮಾಜಿಕ ಮನೋಜ್ಞಾನದ ದೃಷ್ಟಿಯಿಂದಲೂ ಅರ್ಥಪೂರ್ಣವಾಗಿದೆ. ಆದ್ದರಿಂದ ಇಲ್ಲಿಯ ವಸ್ತುವಿನ ಆಯ್ಕೆ ಕಲ್ಲಲ್ಲ. ಹರಿವ ಹಳ್ಳದ ನೀರೂ ಅಲ್ಲ. ಅದು ಉಕ್ಕಿನ ಹಾಗೆ ಸೆಟೆದು ಮೇಣದ ಹಾಗೆ ಮಿದುವಾಗಬಲ್ಲದು. ಮನಸ್ಸಿನಲ್ಲಿ ಮೂಡಿಸಿಕೊಳ್ಳುವ ಶಕ್ತಿ ಒಳಗಿನದಾದರೆ, ಮೂಡಿಸುವ ಪ್ರಭಾವ ಹೊರಗಿನದು. ಅಂದರೆ ಆನುವಂಶಿಕ ಒಲವು ಚೆಲುವು ಮತ್ತು ನಿಲುವು ವೈಶಿಷ್ಟ್ಯ ಪೂರ್ಣವಲ್ಲದ್ದು, ದುರ್ಬಲವಾದುದು, ಅಸ್ಪತಂತ್ರವಾದುದು ಎಂದಲ್ಲ. ಆದರೆ ಆ ಪರಿವರ್ತನೀಯವಾದ ಸ್ಥಾವರ ಅಲ್ಲವೆಂದು ಮಾತ್ರ. ಆದ್ದರಿಂದ ಶೈಕ್ಷಣಿಕ ಮನೋವಿಜ್ಞಾನದ ನೆರವು ಇಲ್ಲಿ ಸಾಪೇಕ್ಷಣಿಯವಾದುದು.
ಆದರ್ಶವನ್ನು ಬೆಳೆಸುವುದಕ್ಕಾಗಿ ಮಕ್ಕಳ ರಂಗಭೂಮಿ ಇರಬೇಕೆಂದು ನಾನು ಹೇಳುತ್ತಿಲ್ಲ. 'ವಿಜ್ಞಾನಕ್ಕಾಗಿ ವಿಜ್ಞಾನ ಅಲ್ಲ' ಕಲೆಗಾಗಿ ಕಲೆ ಅಲ್ಲ. ಅದು ಇಡಿಯಾಗಿ ಮಾನವತೆಯ ಆವಿಭರ್ಾವಕ್ಕಾಗಿ, ಹೊರೆಯುವುದಕ್ಕಾಗಿ ಇರಬೇಕು. ನಾವು ಇಂದು 'ನಾನು' ಕ್ಕಿಂತ 'ನಾವು' ಎಂಬ ಪ್ರಜ್ಞೆಯ ಕಡೆಗೆ ಸಾಗುತ್ತಿದ್ದೇವೆ. ಈ 'ನಾವು' ಅಲ್ಲಿ 'ನಾನು' ಕೂಡ ಅಷ್ಟೇ ಮುಖ್ಯ. ಇದರ ಸಮತೋಲನ ಸಂಕೀರ್ಣವಾದುದು ಎಂದು ಒಪ್ಪಿದಾಗಲೂ ನಿರಾಕರಣೆಯದಲ್ಲ. ಗಾಂಧಿಯಂತೆ ಅನೇಕ ಜನ ಶ್ರವಣಕುಮಾರರ ಚರಿತ್ರೆಯನ್ನು ಓದಿದ್ದಾರೆ. ಹರಿಶ್ಚಂದ್ರ ನಾಟಕ ನೋಡಿದ್ದಾರೆ. ಆದರೆ ಯಾರೂ 'ಗಾಂಧಿ' ಆಗಲಿಲ್ಲ. ಆದರೆ ಗಾಂಧಿ ಮಾತ್ರ 'ಗಾಂಧಿ' ಆದರು. ಇದು ಅವರ ವ್ಯಕ್ತಿ ವೈಶಿಷ್ಟ್ಯ. ಆದರೆ ಗಾಂಧಿ 'ಗಾಂಧಿ' ಆಗುವಲ್ಲಿ ಭಾಗವಹಿಸಿದ್ದು ಹದಗೊಳಿಸಿದ್ದು ಸಮಾಜ. ಆದ್ದರಿಂದ ಮಕ್ಕಳ ನಾಟಕ ಮತ್ತು ರಂಗಭೂಮಿ ಕೂಡ ಕಾಲದ ಅವಶ್ಯಕತೆಯನ್ನು ನಿರಾಕರಿಸಬಾರದು. ಹಾಗೆ ನಿರಾಕರಿಸಿದರೆ ಅದಕ್ಕೊಂದು ವೈಶಿಷ್ಟ್ಯವೇ ಇರುವುದಿಲ್ಲ. ಆದ್ದರಿಂದ ಪ್ರಜಾಪ್ರಭುತ್ವದ ವಿಕಾಸಕ್ರಿಯೆಯಲ್ಲಿ ಇವೆಲ್ಲ ಸೇರಬೇಕಾಗಿದೆ. ಸಮಾಜವಾದಿ ಮನೋಭಾವದ ವಿಕಸನ ಶೀಲತೆ ಇಂದಿನ ಸಾಮಾಜಿಕ ಅವಶ್ಯಕತೆ. ಸೂತ್ರ ರೂಪವಾಗಿ ಹೇಳುವುದಾದರೆ ನಮ್ಮ ಮುಂದೆ ಎರಡು ಸಾಹಸ ಆದರ್ಶಗಳಿವೆ. ಒಂದು : ಗಾಂಧಿ, ನೆಹರು, ಮೌಲಾನಾ ಅಬುಲ್ ಕಲಾಮ್ ಆಝಾದ್, ಅರುಣ ಅಸಫ್ ಆಲಿ, ಸುಭಾಶ್ಚಂದ್ರ ಭೋಸ್, ಭಗತ್ಸಿಂಗ್, ಮದರ್ ತೆರೇಸಾ, ಎ.ಕೆ. ಗೋಪಾಲನ್, ವಿವೇಕಾನಂದ, ನಾರಾಯಣ ಗುರು ಹೀಗೆ ಹೀಗೆ. ಎರಡು : ಸುಖರಾಮ್, ಜಯಲಲಿತಾ, ಚಂದ್ರಸ್ವಾಮಿ, ದಾವೂದ್, ಹರ್ಷದ್ ಮೆಹೆತಾ, ವೀರಪ್ಪನ್ ಹೀಗೆ ಹೀಗೆ. ನಮ್ಮ ಮಕ್ಕಳ ಮುಂದೆ ಇಡಬೇಕಾದ ಮಾದರಿ ಯಾವುದೆಂಬುದರ ಬಗ್ಗೆ ಜಗಳ ಇರಲಾರದು ಅಂದುಕೊಂಡಿದ್ದೇನೆ. ರಂಗಭೂಮಿ ಕೂಡ ಶೈಕ್ಷಣಿಕ ಎನ್ನುವ ನಿಲುವು ಇಲ್ಲಿಯದು.
ಇಲ್ಲಿಯವರೆಗೆ ಪ್ರಸ್ತಾಪಿತವಾದ ಮಕ್ಕಳ ರಂಗಭೂಮಿಯ ವಸ್ತುವನ್ನು ನಾವು ಗಮನಿಸಿದಾಗ ಮಧ್ಯಮ ವರ್ಗದ ಒಲವು ಚೆಲುವುಗಳ ಬಗ್ಗೆ ಹೆಚ್ಚು ಗಮನಿಸಿದ್ದು ಕಂಡು ಬರುತ್ತವೆ. ಆದರೆ ಕೆಳಸ್ಥರದ ಮಕ್ಕಳ ಮನೋಭೂಮಿಕೆಯ ಚಿತ್ರಣ ಹಾಗೂ ಭಾಗವಹಿಸುವಿಕೆ ನಮ್ಮ ನಿಲುಕಿನ ಹೊರಗೇ ಇದೆ. ಕೆಳಜಾತಿಯ, ಕೆಳವರ್ಗದ, ಬಾಲಕಾಮರ್ಿಕರ, ಅಸ್ಪೃಶ್ಯ ಮತ್ತು ಕೊಳಚೆ ಮಕ್ಕಳ ರಂಗಭೂಮಿಗೆ ವಿಶೇಷವಾದ ಆಹ್ವಾನವಾಗಿದೆ. ಅದರ ಅಭ್ಯಾಸ ಮತ್ತು ಪ್ರಯೋಗ ಅದ್ಭುತ ಲೋಕವೇ ಹೊರತಂದೀತು. ಸಾಮಾಜಿಕವಾಗಿಯಂತೂ ಅದರ ಮಹತ್ವ ಇಷ್ಟು ಎಂದು ಹೇಳಲಸಾಧ್ಯ.
'ಮಕ್ಕಳ ರಂಗಭೂಮಿ'ಯ ಕುರಿತಾಗಿ ಮಾತನಾಡುವಾಗ ನಾವು ಇನ್ನೊಂದು ಬಹಳ ಮಹತ್ವದ ಪ್ರಶ್ನೆಯ ಕಡೆ ಗಮನಿಸಬೇಕು. ಪ್ರಶ್ನೆ ಇಷ್ಟೇ, ಮಕ್ಕಳ ರಂಗಭೂಮಿ ಮಕ್ಕಳಿಂದಲೆ ನಿರ್ವಹಿಸಲ್ಪಡಬೇಕೋ ಅಥವಾ ಮಕ್ಕಳಿಗಾಗಿ ದೊಡ್ಡವರಿಂದ ನಿರ್ವಹಿಸಲ್ಪಡುತ್ತದೆಯೋ? ಪಾತ್ರ ನಿರ್ವಹಣೆಯಲ್ಲಿ ದೊಡ್ಡವರ ಪಾತ್ರವನ್ನು ಮಕ್ಕಳು ನಿರ್ವಹಿಸಬಹುದೇ?
ಇದಕ್ಕೆ ಎರಡೂ ರೀತಿಯಲ್ಲಿ ಉತ್ತರ ಸಾಧ್ಯ. ಮಕ್ಕಳೇ ಮಕ್ಕಳ ರಂಗಭೂಮಿಯ ನಿವರ್ಾಹಕರು. ಅಂದರೆ ಕೆಲವು ತಾಂತ್ರಿಕ ವ್ಯವಸ್ಥೆಯನ್ನು ಹೊರತುಪಡಿಸಿ. ಅದರಂತೆ ದೊಡ್ಡವರು ಮಕ್ಕಳಿಗಾಗಿ ರಂಗಭೂಮಿಯನ್ನು ನಿರ್ವಹಿಸಬಹುದು. ಆದರೆ ಮಕ್ಕಳೇ ಪಾತ್ರ ನಿರ್ವಹಣೆ, ಹಾಡು ಇತ್ಯಾದಿ ಕಲೆಗೆ ಸಂಬಂಧಿಸಿದ ವಿಷಯದಲ್ಲಿ ಭಾಗವಹಿಸುವುದು ಹೆಚ್ಚು ಅಪೇಕ್ಷಣೀಯ ಮತ್ತು ಪರಿಪೂರ್ಣ ಕೂಡ. 'ಕಲೆ' ಎಂಬುದು ಕಲಿತದ್ದು ಕೂಡ ಹೌದು. ಅದೊಂದು ಯಶಸ್ವೀ ಅನುಕರಣೆ. ಹಾಗಿರುವಾಗ ಮಕ್ಕಳೇ ದೊಡ್ಡವರ ಪಾತ್ರವನ್ನು ಅಜ್ಜ, ರೈತ. ಆರಕ್ಷಕ, ರಾಜ ಇತ್ಯಾದಿ. ವಹಿಸಬಹುದು ಅದನ್ನು ಯಶಸ್ವಿಗೊಳಿಸಬಹುದು. ಮನೋವಿಜ್ಞಾನದ ದೃಷ್ಟಿಯಿಂದ ತೀರ ಅಭಾಸಪೂರ್ಣವಾಗಿ ಮಾತ್ರ ಇರಬಾರದು. ಅಷ್ಟೇ, ದೊಡ್ಡವರ ಪಾತ್ರವನ್ನು ದೊಡ್ಡವರೇ ವಹಿಸಬಹುದು.
ಇನ್ನೊಂದು ವಿಷಯವನ್ನು ಇಲ್ಲಿಯ ನಿದರ್ೆಶಕರು ಗಮನಿಸಬೇಕಾಗಿದೆ. ನಾವು ಮಕ್ಕಳಿಗೆ ಕಥೆಕೊಟ್ಟು ಅಥವಾ ಕೊಡದೆ ಅವರನ್ನು ಅಭಿನಯಕ್ಕೆ ಹಚ್ಚಿ ನೋಡಿದ್ದೇವೆಯೇ? ರಂಗಕ್ರಿಯೆ ಕುರಿತು ಸ್ವಾತಂತ್ರ್ಯ ಕೊಟ್ಟು ಪರಿಣಾಮ ನೋಡಿದ್ದೇಯೇ? ನಮ್ಮ ನಿದರ್ೆಶನದ ಕುರಿತು ಅವರ (ವಿವಿಧ ಹಂತಕ್ಕೆ ತಕ್ಕಾಗಿ) ಅಭಿಪ್ರಾಯ ಸಂಗ್ರಹಿಸಿದ್ದೇವೆಯೇ?
ಇದು ಮುಖ್ಯ ಆದರೂ ರಂಗಭೂಮಿ ಕಲೆಗೆ ಸಂಬಂಧಿಸಿರುವಂತೆ ತರಬೇತಿ, ನಿದರ್ೆಶನ ಅವಶ್ಯ.
ನಮ್ಮ ಜಿಲ್ಲೆಯ ಕುರಿತಾಗಿ ಹೇಳುವುದಾದರೆ 'ಮಕ್ಕಳ ರಂಗಭೂಮಿ'ಯ ಕೆಲಸ ಬಹಳ ಆಗಿದೆ. ಆದರೆ ಅದರ ದಾಖಲೆ ಮತ್ತು ವಿಶ್ಲೇಷಣೆ ಆದದ್ದು ಮಾತ್ರ ಏನೂ ಸಾಲದು. ನಮ್ಮಲ್ಲಿ ರಂಗಸಂಗದ ಗೆಳೆಯರನ್ನೊಳಗೊಂಡು ಕಿರಣ ಭಟ್ಟ, ಜಿ.ಎಂ. ಹೆಗಡೆ, ವಿ. ಎಂ. ಹೆಗಡೆ, ಚಂದ್ರು ಉಡುಪಿ, ಶ್ರೀಪಾದ ಭಟ್ಟ, ಎಸ್. ಪಿ. ಹೆಗಡೆ, ಕೆ. ಆರ್. ಪ್ರಕಾಶ ಇನ್ನೂ ಅನೇಕರು ಮಕ್ಕಳ ನಾಟಕ ಆಡಿಸಿದ್ದಾರೆ. ಒಟ್ಟಾರೆಯಾದ ಮಕ್ಕಳ ರಂಗಭೂಮಿಗೆ ಅವರ ಕೊಡುಗೆ ಗಣನೀಯ. ಅದರಲ್ಲೂ ಗ್ರಾಮೀಣ ಪ್ರದೇಶದ ವಿಶಿಷ್ಟವಾದ ಅನುಭವ ಅವರದ್ದು. ಸಾಮಾಜಿಕರ ಮಧ್ಯೆ, ಶಿಕ್ಷಕರ ಮಧ್ಯೆ ಮತ್ತು ಮುಖ್ಯವಾಗಿ ಮಕ್ಕಳ ಮಧ್ಯೆ ಅವರ ಅನುಭವ ಪ್ರತ್ಯಕ್ಷ ಮತ್ತು ಪ್ರಾಯೋಗಿಕವಾದದ್ದು. ಅದನ್ನು ಚಾಚೂ ತಪ್ಪದೆ ಟಿಪ್ಪಣಿ ಮಾಡಬೇಕು. ಅದರ ವಿಶ್ಲೇಷಣೆಯೂ ರಂಗಾಸಕ್ತರ ಮಧ್ಯೆ ನಡೆಯಲಿ. ಇದರಿಂದ ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತವೆ. ಹಾಗೆಯೇ ಮಕ್ಕಳ ರಂಗಭೂಮಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆಯಾಗುತ್ತದೆ.
ಕೊನೆಯದಾಗಿ ಖಲೀಲ್ ಗಿಬ್ರನ್ನ ಒಂದು ಉಕ್ತಿಯನ್ನು ಹೇಳಬಯಸುತ್ತೇನೆ.
'ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಜೀವನ ಸ್ವ ಪ್ರೇಮದ ಪುತ್ರ ಪುತ್ರಿಯರವರು 
ಅವರು ನಿಮ್ಮ ಜೊತೆಗೆ ಇರುವುದಾದರೂ 
ಅವರು ನಿಮಗೆ ಸೇರಿದವರಲ್ಲ
ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು
ಆದರೆ ನಿಮ್ಮ ಆಲೋಚನೆಗಳನ್ನಲ್ಲ
ಅವರಂತಿರಲು ನೀವು ಪ್ರಯತ್ನಿಸಬಹುದು
ಆದರೆ ಅವರನ್ನು ನಿಮ್ಮಂತೆ ಮಾಡದಿರಿ
ಜೀವನ ಹಿಮ್ಮುಖವಾಗಿ ಹರಿಯದಿರಲಿ'