Friday 2 August 2013

ನಾಗೇಶ ಹೆಗಡೆಯವರ ವಿಜ್ಞಾನ ಬರೆಹ: ಕೆಲವು ಟಿಪ್ಪಣೆಗಳು -vittal bhandari


ನಾಗೇಶ ಹೆಗಡೆಯವರ ಬರಹ ಓದುವುದೆಂದರೆ ನಮಗೆ ಅಷ್ಟೊಂದು ಅರಿವಿಲ್ಲದ ಹೊಸಲೋಕವೊಂದನ್ನು ಪ್ರವೇಶಿಸಿದಂತೆ. ಪ್ರೀತಿಯಿಂದ, ಕಾಳಜಿಯಿಂದ ಈ ಲೋಕದಲ್ಲಿ ತಿರುಗಾಡಿಸುತ್ತಾರೆ. ಇಲ್ಲೇನು ನೋಡುವುದಿದೆ ಎಂದುಕೊಂಡ ಸ್ಥಳದಲ್ಲಿ ಹೊಸದನ್ನು ತೋರಿಸುತ್ತಾರೆ. ಸಾಮಾನ್ಯವಾದುದೆಂದು ನಾವು ತಿಳಿದುಕೊಂಡ ಹಲವು ಸಂಗತಿಗಳ ಅಸಾಮಾನ್ಯ ಮಗ್ಗುಲನ್ನು ಪರಿಚಯಸಿಕೊಡುತ್ತಾರೆ. ಅವರ ಲೇಖನಗಳು ನಮ್ಮ ಅರಿವನ್ನು ವಿಸ್ತರಿಸುವುದು ಮಾತ್ರವಲ್ಲ ಅರಿವಿಗೆ ಅಗತ್ಯವಾದ ಹೊಸ ದೃಷ್ಟಿಕೋನವನ್ನು ನೀಡುತ್ತವೆ.

ಸಾಮಾನ್ಯವಾಗಿ ಕವಿಗಳನ್ನೋ, ಕಾದಂಬರಿಕಾರರನ್ನೋ, ಕತೆಗಾರರನ್ನೋ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸುತ್ತಾರೆ. ಆದರೆ ವಿಜ್ಞಾನ ಅಂಕಣ ಬರೆಹಗಾರ ನಾಗೇಶ ಹೆಗಡೆಯವರನ್ನು ಸಿದ್ದಾಪುರ ತಾಲೂಕು ಸಾಹಿತ್ಯಸಮ್ಮೇಳನದ ಸವರ್ಾಧ್ಯಕ್ಷರನ್ನಾಗಿ ಮಾಡಿದ್ದೀರಿ. ಮೌಢ್ಯ-ಕಂದಾಚಾರಗಳೇ ಸಾಹಿತ್ಯ-ಸಾಂಸ್ಕೃತಿಕ ರಂಗವನ್ನು ಬಳಸುದಾರಿಯಲ್ಲಿ ತುಂಬಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹೆಗಡೆಯವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸುವುದೆಂದರೆ ಪ್ರತಿಯೊಂದು ಸಂಗತಿಯನ್ನೂ ವೈಜ್ಞಾನಿಕವಾಗಿ, ವೈಚಾರಿಕವಾಗಿ ನೋಡುತ್ತಿರುವ, ಹಾಗೆ ಬದುಕುತ್ತಿರುವ ಅವರ ಆಲೋಚನೆಗೆ ಕೊಟ್ಟ ಮಾನ್ಯತೆ ಎಂದೇ ಭಾವಿಸುತ್ತೇನೆ. ಒಂದು ರೀತಿಯಲ್ಲಿ ಈ ಸಮ್ಮೇಳನ ಸಾಹಿತ್ಯ ಮತ್ತು ವಿಜ್ಞಾನದ ಸಂಬಂಧವನ್ನು ಘಟ್ಟಿಗೊಳಿಸುವ ಪ್ರಯತ್ನ ಎಂದೇ ನಾನು ಭಾವಿಸಿದ್ದೇನೆ. ಅದಕ್ಕಾಗಿ ಸಾಹಿತ್ಯ ಪರಿಷತ್ತಿಗೂ, ಸಮ್ಮೇಳನದ ಅಧ್ಯಕ್ಷರಾಗಿ ಒಪ್ಪಿ ಬಂದ ನಾಗೇಶ ಹೆಗಡೆಯವರಿಗೂ ವಂದನೆಗಳು.

ಟಿಪ್ಪಣೆ-1

ಸಾಮಾನ್ಯವಾಗಿ 'ವಿಜ್ಞಾನ ಬರೆಹ' ಶುಷ್ಕವಾದದ್ದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ಎಲ್ಲ ಕಾಲಕ್ಕೂ ನಿಯಮ, ಸೂತ್ರ ಮತ್ತು ಭೌತಿಕ ಸಂಬಂಧಗಳ ಮೂಲಕ ನಿರ್ವಚನೆಗೊಳ್ಳುವ  ವಿಜ್ಞಾನ ಬಹುತೇಕವಾಗಿ ಅನ್ಯಭಾಷೆಯಲ್ಲಿಯೇ ಪ್ರಕಟವಾಗುತ್ತಿತ್ತು. ಅಲ್ಲಿ ಬಳಸುವ ಅನೇಕ ಪರಿಭಾಷೆಗಳು ನಮಗೆ ಅನ್ಯವಾಗಿಯೇ ಉಳಿದುಕೊಂಡವು. ಭಾಷೆಯ ತೊಡಕಿನಿಂದ ಇದಕ್ಕೆ ಜನಸಾಮಾನ್ಯರನ್ನು ಒಳಗೊಳ್ಳಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತೀಯರು ವಿಜ್ಞಾನದ ಪ್ರಯೋಜನವನ್ನು ನಮ್ಮದಾಗಿಸಿಕೊಳ್ಳುವಲ್ಲಿ ಆಸಕ್ತಿವಹಿಸಿದರೇ ಹೊರತು ವೈಜ್ಞಾನಿಕ ಮನೋಭಾವವನ್ನು ನಮ್ಮದಾಗಿಸಿಕೊಳ್ಳಲು ಆಸಕ್ತಿ ವಹಿಸಲೇ ಇಲ್ಲ. ಹಾಗಾಗಿ ಇಂದು ಮೌಢ್ಯ, ಕಂದಾಚಾರಗಳನ್ನು ಬೆಳೆಸಲೂ ನಾವು ವಿಜ್ಞಾನದ ಆವಿಷ್ಕಾರವನ್ನೇ ಬಳಸಿಕೊಳ್ಳುವಂತಾಯಿತು. ಪ್ರಸ್ತುತ ವಿಜ್ಞಾನ-ತಂತ್ರಜ್ಞಾನದ ಇತ್ತೀಚಿನ ಉತ್ಪನ್ನಗಳನ್ನು ತನ್ನದಾಗಿಸಿಕೊಳ್ಳುತ್ತಲೇ ಆಂತರ್ಯದಲ್ಲಿ ಸನಾತನವಾದಿಯಾಗಿ ದೇಶಕ್ಕೆ ಅಪಾಯಕಾರಿಯಾಗುವ ಹಲವರನ್ನು ನಾವೇ ನೋಡುತ್ತಿದ್ದೇವೆ. (ಅಥವಾ ಬಹುತೇಕರು ಹಾಗೇ ಇದ್ದಾರೆ.)

ಇನ್ನೊಂದೆಡೆ ವಿಜ್ಞಾನವನ್ನು ಕನ್ನಡದಲ್ಲಿ ತಿಳಿಯಾಗಿ ಹೇಳಲು ಸಾಧ್ಯವಿಲ್ಲವೆಂದೇ ಹಲವು ವರ್ಷಗಳ ಕಾಲ ನಂಬಿಕೊಳ್ಳಲಾಗಿತ್ತು. ಹಾಗಾಗಿ ಬಹುತೇಕ ಬರಹಗಳು ಇಂಗ್ಲಿಷ್ನಲ್ಲಿಯೇ ಇರುತ್ತಿದ್ದವು. ಇದು ಜನಸಾಮಾನ್ಯರ ಓದಿಗೆ ಎಟುಕುತ್ತಿರಲಿಲ್ಲ. ಹಾಗಾಗಿ ಇದನ್ನು ಸಾಹಿತ್ಯದ ಒಂದು ಭಾಗವೆಂದು ನಾವು ಪರಿಗಣಿಸಲೇ ಇಲ್ಲ. ಹೀಗೆ ಕನ್ನಡದಲ್ಲಿ ವಿಜ್ಞಾನವನ್ನು ತಿಳಿಯಾಗಿ ಹೇಳದಿರುವುದು ಕೇವಲ ಆಕಸ್ಮಿಕವೆಂದು ನಾವು ತಿಳಿಯಬೇಕಾಗಿಲ್ಲ. ಇದರ ಹಿಂದೆ ಇರುವ ವರ್ಗ ಹಿತಾಸಕ್ತಿಯನ್ನು ನಾವು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ.

'ವಿಜ್ಞಾನ' ಮತ್ತು 'ಸಾಹಿತ್ಯ' ವಿರೋಧಾತ್ಮಕವಾದದ್ದೇನೂ ಅಲ್ಲ. ಇವೆರಡೂ ಮನುಷ್ಯನ ಬದುಕಿನ ಸತ್ಯಾನ್ವೇಷಣೆಯ ಎರಡು ಭಿನ್ನ ಮಾರ್ಗಗಳು ಅಷ್ಟೆ. ವಿಜ್ಞಾನ ಅಂಕಿ-ಅಂಶಗಳ ಮೂಲಕ, ಸಾಕ್ಷಾಧಾರಗಳ ಮೂಲಕ ಹೊರಟರೆ ಸಾಹಿತ್ಯವು ಭಾವನಾತ್ಮಕ ತರ್ಕ ಮತ್ತು ಬದುಕಿನ ಅನುಭವದ ರೂಪಕದ ಮೂಲಕ ಹೊರಡುತ್ತದೆ. ಅಂತಿಮವಾಗಿ ಎರಡೂ ಸ್ಪಂದಿಸುವುದು ಮನುಷ್ಯನ ಬದುಕಿನ ಸುಂದರ ಸ್ಥಿತಿಯ ನಿಮರ್ಾಣದಲ್ಲಿಯೆ. ಹಾಗೆನ್ನುವಾಗ ವಿಜ್ಞಾನಕ್ಕೂ ಕಲ್ಪನೆಗೂ ಸಂಬಂಧವೇ ಇಲ್ಲವೇ? ಸಾಹಿತ್ಯಕ್ಕೆ ಮಾತ್ರ ಅಗಾಧ ಕಲ್ಪನೆಯ ಅಗತ್ಯತೆಯಿದೆ ಎಂಬುದು ಅಷ್ಟು ಸರಿಯಲ್ಲ. ನಿಜವಾಗಿ ನೋಡಿದರೆ ವಿಜ್ಞಾನಕ್ಕೆ ಈ ಕಲ್ಪನೆಯ ಅವಶ್ಯಕತೆ ಮತ್ತೂ ಹೆಚ್ಚಿನದು. ಕಣ್ಣಿಗೆ ಕಾಣದ ಪರಮಾಣು ಒಳಗಿನ ಜಗತ್ತನ್ನು ಕೇವಲ ಕಲ್ಪನೆಯ ಕಣ್ಣುಗಳಿಂದ ಊಹಿಸಬೇಕು. ಅದರ ಹೊರ ಪರಿಣಾಮಗಳನ್ನು ಅಧ್ಯಯಿಸಿ ಒಳಅಂತರಂಗವನ್ನು ಅರಿಯಬೇಕು (ನೇಮಿಚಂದ್ರ: 1993, ಪು.3) ಎಂದು ನೇಮೀಚಂದ್ರ ಹೇಳುತ್ತಾರೆ. ಸಾಹಿತ್ಯವೂ ಹಾಗೆಯೇ. ಕೇವಲ ಕಲ್ಪನೆಯ ಕತೆಯಲ್ಲ, ವಸ್ತುನಿಷ್ಠತೆಯನ್ನು ಬಯಸುತ್ತದೆ. ಹಾಗಾಗಿ ಸಾಹಿತ್ಯ ಮತ್ತು ವಿಜ್ಞಾನಗಳು ಪರಸ್ಪರ ಪೂರಕವೇ ಆಗಿದೆ.

 ಟಿಪ್ಪಣೆ -2

ನಾಗೇಶ ಹೆಗಡೆಯವರ ಬರಹದಲ್ಲಿ ವಿಜ್ಞಾನದ ವಸ್ತುನಿಷ್ಠತೆ, ಕಾವ್ಯದ ಭಾವನಾತ್ಮಕತೆ ಒಟ್ಟೊಟ್ಟಿಗೆ ಇದೆ. ವಿಜ್ಞಾನದ ನಿಷ್ಠುರತೆಯಷ್ಟೇ ಕಾವ್ಯದ ಭಾಷೆಯ ಲಾಲಿತ್ಯವೂ ಇದೆ. ಹಾಗಾಗಿ ಇವರ ಬರಹಕ್ಕೆ ತನ್ನ ಓದುಗರನ್ನು ಸೃಷ್ಟಿಸಿಕೊಳ್ಳುವ ತಾಕತ್ತಿದೆ. ಕನ್ನಡದಲ್ಲಿ ಇಂತಹ ಓದುಗರನ್ನು ಸೃಷ್ಟಿಸಿಕೊಂಡ ವಿಜ್ಞಾನ ಬರಹಗಾರರ ಸಂಖ್ಯೆ ತೀರಾ ಅಪರೂಪ. ಬಿ.ಜಿ.ಎಲ್.ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಸಿ.ಆರ್. ಚಂದ್ರಶೇಖರ, ನೇಮಿಚಂದ್ರ ಹೀಗೆ........ ಬೆರಳಣಿಕೆಯಷ್ಟು ಜನ ಮಾತ್ರ. ಈ ಪರಂಪರೆಯ ಸಾರ್ಥಕ ಕೊಂಡಿಯೆಂದರೆ ನಾಗೇಶ ಹೆಗಡೆಯವರು.......
ಇವರ ಲೇಖನದ ಹರವು ತೀರಾ ವಿಸ್ತಾರವಾದದ್ದು, ವಿಜ್ಞಾನ, ಪ್ರಕೃತಿ, ಅಣುಸ್ಥಾವರ, ಪರಿಸರ, ಜಾಗತೀಕರಣ, ಭಾಷೆ, ಆಹಾರ, ಔಷಧ, ವೈದ್ಯಕೀಯ, ಕಾಡು, ನದಿ, ಪ್ರಾಣಿ ಪ್ರಪಂಚ, ಆಧುನಿಕತೆ, ಹೀಗೆ ವೈವಿಧ್ಯಪೂರ್ಣವಾದ ಲೇಖನಗಳು. ಬಹುತೇಕ ಲೇಖನಗಳು ಒಂದು 'ಅಂಕಣ'ದ ಮಿತಿಗೆ ಒಳಪಟ್ಟಿದೆ. 2-3 ಪುಟಗಳಲ್ಲಿ ಲೇಖನ ಮುಗಿಸಬೇಕಾಗಿರುವುದರಿಂದ ಪ್ರತಿ ವಿವರದಲ್ಲೂ ಕಂಜೂಸುತನ ಇದೆ. ಅನವಶ್ಯಕ ವಾಚಾಳಿತನ ಎಲ್ಲೂ ಇಣುಕುವುದಿಲ್ಲ. ಇದು ಇವರ ಬರೆಹದ ಹೆಚ್ಚುಗಾರಿಕೆಯೂ ಹೌದು.
ಸಾಹಿತ್ಯವು ಕಲ್ಪನೆ ಮತ್ತು ಭಾವನಾತ್ಮಕ ಸಂಬಂಧದ  ಮೂಲಕ ಸತ್ಯದೆಡೆಗೆ ಪಯಣಿಸಿದರೆ ವಿಜ್ಞಾನವು ಪ್ರಶ್ನೆ, ಕುತೂಹಲ ಮತ್ತು ಭೌತಿಕ ಸಂಬಂಧದ ಮೂಲಕ ಸತ್ಯದೆಡೆಗೆ ಪ್ರಯಾಣ ಬೆಳೆಸುತ್ತವೆ. ಸಾಹಿತ್ಯ ರೂಪಕದ ಮೂಲಕ ಮಾತನಾಡಿದರೆ ವಿಜ್ಞಾನವು ನೇರನುಡಿಯಲ್ಲಿ ಮಾತನಾಡುತ್ತದೆ. ಹಾಗಾಗಿ ಒಬ್ಬ ಸಾಹಿತಿ ಮತ್ತು ಒಬ್ಬ ವಿಜ್ಞಾನಿ - ಇವರಿಬ್ಬರ ನಡುವೆ ಇರುವ ಸೃಜನಶೀಲ ಚಿಂತನೆ ಮೂಲತಃ ಒಂದೇ ಮೂಲದಿಂದ ಹೊರಟಿದ್ದು. ಅದು ಮೂಲ ಮನುಷ್ಯನ ಬದುಕಿನ ಸೌಂದರ್ಯಕ್ಕೆ ಸಂಬಂಧಿಸಿದ್ದು ; ಸೌಂದರ್ಯವನ್ನು ಆಗು ಮಾಡುವ ಕನಸಿಗೆ ಸಂಬಂಧಿಸಿದ್ದು. ಹಾಗಾಗಿ ಸಾಹಿತಿಗೆ ಕನಸಿರಬೇಕು ; ಬದುಕು ಕಟ್ಟುವ ಕನಸಿರಬೇಕು. ವಿಜ್ಞಾನಿಗೂ ಕನಸಿರಬೇಕು ; ಬದುಕು ಎತ್ತರಿಸುವ ಕನಸಿರಬೇಕು. ನಾಗೇಶ ಹೆಗಡೆಯವರ ವಿಜ್ಞಾನ ಲೇಖನಗಳು ಹೊರಡುವುದು ಈ ಕನಸಿನ ಮೂಲದಿಂದಲೇ. ಅದು ವಿಸ್ತರಿಸಿಕೊಳ್ಳುವುದು ಕೂಡ ಬದುಕು ಕಟ್ಟುವ ವಿನ್ಯಾಸದ ಅರಸುವಿಕೆಯಲ್ಲಿಯೇ. ಹಾಗಾಗಿ ಇದು ಆಪ್ತವೂ, ಅರ್ಥಪೂರ್ಣವೂ ಆಗುತ್ತದೆ.

ಟಿಪ್ಪಣೆ-3

ವೈಯಕ್ತಿಕವಾಗಿ ನನಗೆ ನಾಗೇಶ ಹೆಗಡೆಯವರ ಲೇಖನ ಇಷ್ಟ ಆಗುವುದು ಅವರ ಸೈದ್ಧಾಂತಿಕ ಖಚಿತತೆ ಮತ್ತು ಶೈಲಿಯ ಆಪ್ತತೆಯಿಂದಾಗಿ. ಒಂದು ಸಣ್ಣ ಘಟನೆ, ಒಂದು ಸಣ್ಣ ಕತೆ, ಒಂದು ಸಣ್ಣ ತಮಾಷೆ ಎನ್ನಬಹುದಾದ ಸಂಗತಿಗಳಿಂದ ಪ್ರಾರಂಭವಾಗುವ ಲೇಖನ ('ಪಶ್ಚಿಮ ಘಟ್ಟದ ಪತನ' 'ಬಿಸಿ ಪ್ರಳಯದ ಬಾಗಿಲಲ್ಲಿ' ಪ್ರಳಯ ನಿರೋಧಕ ಬೀಜದ ತಿಜೋರಿ' 'ಬಾಯೊಳಗಿನ ಪ್ರಚಂಡ ಪ್ರಪಂಚ' ಇತ್ಯಾದಿ) ಬೆಳೆಯುತ್ತಾ ಹೋದಂತೆ ಅದು ಪಡೆದುಕೊಳ್ಳುವ ಸೈದ್ಧಾಂತಿಕ ತಿರುವು ('ಗೋವಿನ ಸುತ್ತ........ಮುಗಿಯದ ವೃತ್ತ', 'ಫುಕುವೋಕಾ ಎಂಬ ಡೆಂಜರ ಸಿಗ್ನಲ್' 'ಪತ್ರಿಕಾ ಸ್ವಾತಂತ್ರ್ಯದ ಐದು ಮುಜುಗರದ ಮುಖಗಳು' 'ಜಾಗತೀಕರಣದ ದು:ಕಿ ಮುಖಗಳು' ಎಂದೂ ಮರೆಯಬಾರದು ಎಂಡೋ ಸಲ್ಫಾನ' 'ತುತ್ತಿನ ಮೇಲೆ ಶಸ್ತ್ರಾಸ್ತ್ರ' ) ಮತ್ತು ಒದಗಿಸುವ ಅಪರೂಪದ ಮಾಹಿತಿಯನ್ನೊಳಗೊಂಡ('ಅನ್ವೇಶಕರ ಶಕ ವರ್ಷಗಳು' 'ಗೋವಿನ ಸುತ್ತ........ಮುಗಿಯದ ವೃತ್ತ', 'ಅಸ್ವಸ್ಥ ಭಾಷೆಗಳಿಗೆ ಆಮ್ಲಜನಕ' 'ಜೀವಕಣದೊಳಗಿನ ಅದ್ಭುತ ಪ್ರಪಂಚ' 'ಐಕ್ಯೂ ಮತ್ತು ಈಕ್ಯೂ' 'ವಯಸ್ಸು ಮತ್ತು ಆಯಸ್ಸು' ಇತ್ಯಾದಿ ಬಹುತೇಕ ಲೇಖನಗಳು)  ಬರವಣಿಗೆ ಸಮಕಾಲೀನ ಜಗತ್ತಿನ ವ್ಯಾಖ್ಯಾನವೂ ಆಗುತ್ತದೆ.
ಇದನ್ನೆ ಸ್ವಲ್ಪ ವಿಸ್ತರಿಸುವುದಾದರೆ:
1.)ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಮಾಹಿತಿಯನ್ನು ನೀಡುವವರ ಸಂದಿಗ್ಧತೆಯ ಬಗ್ಗೆ ಹೆಗಡೆಯವರು ಬರೆಯುತ್ತಾ ವಿಜ್ಞಾನ ಎಂಬುದು ವಜ್ರದ ಕಡಲೆ ಎಂಬುದು ಮೊದಲನೆ ಅಡೆತಡೆ. ಎರಡನೆಯದಾಗಿ, ಅದನ್ನು ತುಸು ಸರಳಗೊಳಿಸಬಲ್ಲ ನಿಘಂಟುಗಳು, ಆಕರ ಗ್ರಂಥಗಳು ಲಭ್ಯವಿಲ್ಲ.ಎನ್ನುತ್ತಾರೆ. (ವಿಶೇಷ ಜ್ಞಾನಕ್ಕೆ ಗಿರಾಕಿಗಳು ಕಮ್ಮಿ - ಲೇಖನ ಪುಟ.53) ಈ ಲೇಖನದಲ್ಲಿ ಅವರು ವಿಜ್ಞಾನ ಎಷ್ಟೊಂದು ವೇಗವಾಗಿ ಬೆಳೆಯುತ್ತಿದೆಯೆಂದರೆ ಸುಲಭವಾಗಿ ಅದು ಪಂಡಿತರಿಗೂ ಅರ್ಥವಾಗುವುದಿಲ್ಲ. ಅವರು ರೂಢಿಸಿಕೊಂಡ ತಾಂತ್ರಿಕ ಭಾಷೆಗಳು, ಇಂಗ್ಲೀಷ್ ಬಲ್ಲವರಿಗೂ ಅರ್ಥವಾಗದಿರುವಾಗ ಜನಸಮಾನ್ಯರಿಗೆ ಅರ್ಥವಾಗುವುದಾದರೂ ಹೇಗೆ ಎನ್ನುವ ಕಡೆ ಗಮನ ಸೆಳೆಯುತ್ತಾ ನಾನು ಯಾರಿಗಾಗಿ ಬರೆಯಬೇಕು? ಹಳ್ಳಿಯವರಿಗೆ ಅರ್ಥ ಆಗೋದಿಲ್ಲ. ನಗರದಲ್ಲಿ ವೆಬ್ಸಫರ್ಿಂಗ್ ಮಾಡುವ ಕನ್ನಡಿಗರಿಗೆ ಇದು ನಿರರ್ಥಕ ಬರಹ (ಅದೇ ಪು. 54) ಎನ್ನುತ್ತಾರೆ. ಅಂದರೆ ಜ್ಞಾನವನ್ನು ಗ್ರಹಿಸುವಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ಇಷ್ಟೊಂದು  ಗ್ಯಾಪ್ ಇರುವುದು ಕೂಡ ಇಲ್ಲಿ ಗಮನಾರ್ಹ. ಹೀಗೆ ವಿಜ್ಞಾನ ಬರವಣಿಗೆ ಕೇವಲ ಬರವಣಿಗೆಯ ತೊಡಕಾಗಿ ಮಾತ್ರ ನಿಲ್ಲುವುದಿಲ್ಲ. ಸ್ಟ್ಯಾನ್ ಫೋರ್ಟ ಯುನಿವಸರ್ಿಟಿಯ ಯಾವುದೋ ತಜ್ಞನೊಬ್ಬ ಪ್ರೋಟಾನ್ ಅವಸಾನ ಸ್ಥಿತಿಯನ್ನು ತನ್ನ ಉಪಕರಣದಲ್ಲಿ ದಾಖಲು ಮಾಡಿದರೆ ಅದು ಸುದ್ದಿಯಾಗುತ್ತದೆ. ನಮ್ಮ ಮಧ್ಯಪ್ರದೇಶದ ಹಳ್ಳಿಯ ಇಂಜಿನಿಯರನೊಬ್ಬ ತನ್ನ ಊರಿನ ಕೆರೆಯ ಜೊಂಡು ಕಳೆಯನ್ನೇ ಕೊಳೆಯಿಸಿ ಶಕ್ತಿ ಉತ್ಪಾದನೆ ಮಾಡಿ, ಅದೇ ಜೊಂಡಿನ ನಾರಿನಿಂದ ಕಾಗದ ತಯಾರಿಸಿದರೆ ಅದು ಸುದ್ದಿಯಾಗುವುದಿಲ್ಲ. ನಮ್ಮವರ ಬದುಕಿಗೆ ಹತ್ತಿರವಾದ ಅವರ ಜೀವನ ಮಟ್ಟವನ್ನು ತುಸು ಮಟ್ಟಿಗೆ ಸುಧಾರಿಸಬಲ್ಲ ವಿಜ್ಞಾನ ತಂತ್ರಜ್ಞಾನ ವಾತರ್ೆಗಳು ಬೆಳಕು ಕಾಣುವ ಸಂಭವ ತೀರಾ ಕಮ್ಮಿ (ಪು.53) ಎನ್ನುವಲ್ಲಿ ಸುದ್ದಿಯ ಹಿಂದಿರುವ ಸಾಂಸ್ಕೃತಿಕ ಪ್ರಶ್ನೆಯನ್ನು ಕೂಡ ಕೆದಕುತ್ತಾರೆ. ಗ್ರಾಮೀಣ ಮತ್ತು ನಗರದ ನಡುವಿನ ಬಿರುಕು ಇಂಡಿಯಾದಲ್ಲಿ ಇನ್ನೂ ತೀವ್ರವಾಗಿಯೇ ಇದೆ. ಗ್ರಾಮೀಣ ಜ್ಞಾನವು ಜ್ಞಾನವೆಂದು ಇಲ್ಲಿ ಪರಿಗಣಿಸಲ್ಪಟ್ಟಿಲ್ಲ ಎನ್ನುವ ವಾಸ್ತವ ಇಲ್ಲಿಯದು. ಹಾಗೆ ನೋಡಿದರೆ ವಿಜ್ಞಾನದ ಲಾಭವನ್ನು ಅತಿ ಹೆಚ್ಚು ಪಡೆದವರು ಈ ದೇಶದಲ್ಲಿ ನಗರವಾಸಿಗಳು ಮತ್ತು ಶ್ರೀಮಂತರು. ಹೆಚ್ಚು ಕಳೆದುಕೊಂಡವರು ಗ್ರಾಮೀಣರು ಮತು ಬಡವರು.

ಇದೇ ಲೇಖನದಲ್ಲಿ ಕನ್ನಡದ ಯಾವ ಪತ್ರಿಕೆ ಕೂಡ ಒಬ್ಬ ವಿಜ್ಞಾನ ವರದಿಗಾರನನ್ನು ನೇಮಕ ಮಾಡಿಕೊಂಡಿಲ್ಲದಿರುವುದರ ಕಡೆಗೆ ಗಮನ ಸೆಳೆಯುತ್ತಾರೆ. ಕನರ್ಾಟಕದಲ್ಲಿ ಈವರೆಗೆ ಇವರು 'ಹೊಸ' ವಿಜ್ಞಾನ ಲೇಖಕರು ಸೃಷ್ಟಿಯಾಗಿಲ್ಲ ಎಂಬ ವಿಷಾದವನ್ನು ಲೇಖಕರು ವ್ಯಕ್ತಪಡಿಸುವುದರಲ್ಲಿ ಅರ್ಥ ಇದೆ. ಯಾಕೆಂದರೆ ನಿಂತರೆ, ಕುಳಿತರೆ, ಕಿವಿ ತೆರೆದರೆ, ಕಣ್ಣು ಮುಚ್ಚಿದರೆ ವಿಜ್ಞಾನದ ಹೊಸ ಹೊಸ ಸಾಧನೆಗಳು ನಮ್ಮನ್ನು ತಟ್ಟುತ್ತಿರುತ್ತದೆ. ಮಾರಗೊಂಡನ ಹಳ್ಳಿಯ ಅಲ್ಪಾಕ್ಷರಿ ಕೃಷಿಕ ರಾಮಯ್ಯನ ನಾಲಿಗೆಯ ಮೇಲೂ ಮೊಬೈಲ್ನ 'ಮಿಸ್ಕಾಲ್' ಉಲಿಯುತ್ತದೆ. ವಿಜ್ಞಾನ ತಂತ್ರಜ್ಞಾನದ ಸಾಧನೆಗಳು ಕಾಲಿಟ್ಟಲ್ಲೆಲ್ಲಾ ಇಂಗ್ಲೀಷ್ ಭಾಷೆಯೂ ದಾಂಗುಡಿ ಇಡುತ್ತಾ ಬರುತ್ತಿದೆ. ಕನ್ನಡ ಹೊಸಕಿ ಹೋಗದಂತೆ ನೋಡಿಕೊಳ್ಳುವ ಹೊಣೆ ಕನ್ನಡ ಸಮೂಹ ಮಾಧ್ಯಮಗಳ ಮೇಲೆಯೇ ಇವೆ ಎನ್ನುವ ಮೂಲಕ ಕನ್ನಡದಲ್ಲಿ ವಿಜ್ಞಾನ ಬರವಣಿಗೆ ಕೇವಲ ಜ್ಞಾನದ ಪ್ರಸರಣ ಮಾತ್ರವನ್ನು ಅದನ್ನು ದಾಟಿ ಆದು ಭಾಷೆಯ ಭವಿಷ್ಯದ ಪ್ರಶ್ನೆಯೂ ಹೌದು ಎನ್ನುವ ಮಹತ್ವದ ಸಂಗತಿ ತೆರೆದಿಡುತ್ತಾರೆ.
2.) 'ಅಸ್ವಸ್ಥ ಭಾಷೆಗಳಿಗೆ ಆಮ್ಲಜನಕ, ಪ್ರಾಣವಾಯು' ಎಂಬ ಲೇಖನದಲ್ಲಿ ಜೀವ ವೈವಿಧ್ಯತೆಗೂ ಭಾಷಾ ವೈವಿಧ್ಯತೆಗೂ ಇರುವ ಸಂಬಂಧವನ್ನು ಅರ್ಥಪೂರ್ಣವಾಗಿ ವಿವರಿಸುತ್ತಾರೆ. ಭಾಷಾ ವಿಜ್ಞಾನಿಗಳ ಅಂದಾಜಿನ ಪ್ರಕಾರ, ಪ್ರಪಂಚದಲ್ಲಿ ಸರಾಸರಿ ಇಪ್ಪತ್ತು ದಿನಗಳಿಗೆ ಒಂದೊಂದು ಭಾಷೆ ಸಾಯುತ್ತಿದೆ. ಜಗತ್ತಿನ ಅರ್ಧಕ್ಕರ್ಧ ಅಂದರೆ ಸುಮಾರು ಮೂರೂವರೆ ಸಾವಿರ ಭಾಷೆಗಳು ಮುಂದಿನ ಮೂರು ವರ್ಷಗಳಲ್ಲಿ ಶಾಶ್ವತವಾಗಿ ಕಣ್ಮರೆಯಾಗಲಿವೆ ಎನ್ನುತ್ತಾ ಇದರೊಂದಿಗೆ ಅಲ್ಲಿನವರ ಜಾನಪದ ಹಾಡು ಹಸೆ ಕಲೆ, ದೇಸೀ ಔಷಧ ಪದ್ಧತಿ, ಬೇಟೆಯ ಕೌಶಲ ಎಲ್ಲ ಸಾಯುತ್ತವೆ ಎನ್ನುವಲ್ಲಿ ಭಾಷೆ ಸಾಯುವುದೆಂದರೆ ಒಂದು ಜೀವನ ಪದ್ಧತಿಯೇ ಸಾಯುವುದೆನ್ನುವುದನ್ನು ಹೇಳುತ್ತಾರೆ. ಜಗತ್ತಿನ ಹಲವು ದೇಶಗಳ, ಭಾಷೆಗಳ ಉದಾಹರಣೆ ಕೊಡುತ್ತಾರೆ. ತಂತ್ರಜ್ಞಾನ ವಿಸ್ತರಿಸುತ್ತಾ ಹೋದಂತೆಲ್ಲಾ ಜೈವಿಕ ವೈವಿಧ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಜಗತ್ತಿನಲ್ಲಿ ಏಕರೂಪದ ಒಲೆ, ಏಕರೂಪದ ಅಡಿಗೆ ವಿಧಾನ, ಏಕರೂಪದ ಪಾಕ ಪುಸ್ತಕ ಬಂದಂತೆಲ್ಲಾ ಒಂದೇ ಬಗೆಯ ಕೃಷಿ ವಿಧಾನದಿಂದಾಗಿ ಗೋಧಿ, ಮೆಕ್ಕೆಜೋಳ, ಸೋಯಾ ಭತ್ತದ ಬೆಳೆಗಳಷ್ಟೇ ವಿಸ್ತರಿಸುತ್ತಾ ಹೋಗಿ ಸ್ಥಳೀಯ ತಳಿಗಳಾದ ಸೆಜ್ಜೆ, ನವಣೆ, ಬಾಲರ್ಿ ಆರಕಗಳೆಲ್ಲ್ಲಾ ಅವನತಿಯತ್ತ ಸಾಗುತ್ತಿದೆ. ಭಾಷೆಯ ಸ್ಥಿತಿಯೂ ಅಷ್ಟೇ. ಏಕರೂಪ ಶಾಲೆ, ಏಕರೂಪ ಪಠ್ಯಕ್ರಮ, ಏಕರೂಪ ಶಿಕ್ಷಣ ವಿಧಾನ, ಜಾರಿಗೆ ಬರುತ್ತಾ, ಜಗತ್ತಿಗೆಲ್ಲಾ ಇಂಗ್ಲಿಷ್, ಸ್ಪ್ಯಾನಿಷ್, ಚೀನಿ, ರಷ್ಯನ್ ಮತ್ತು ಹಿಂದಿ ಭಾಷೆ ವ್ಯಾಪಿಸುತ್ತವೆ (72) ಹೀಗೆ ಎಲ್ಲದರಲ್ಲಿಯೂ ವೈವಿಧ್ಯತೆ ನಾಶವಾಗಿ ಏಕರೂಪತೆಯ ಕಡೆ ಹೊರಳುತ್ತಿರುವ ಅಪಾಯದ ಬಗ್ಗೆ ಗಮನ ಸೆಳೆದಿದ್ದಾರೆ. ನಾವು ಕನ್ನಡವೇ ಸತ್ಯ, ನಿತ್ಯವೆಂದು ಹೇಳಿ ಸ್ಥಳೀಯ ಹಲವು ಭಾಷೆಗಳನ್ನು ಕಡೆಗಣಿಸಿದ್ದನ್ನು ಇಲ್ಲಿ ಗಮನಿಸಬಹುದು. ಉತ್ತರಕನ್ನಡದಲ್ಲಿಯೇ ಹಾಲಕ್ಕಿ ಭಾಷೆ, ಅಗೇರ ಭಾಷೆ, ಕುಣಬಿ ಭಾಷೆ, ಗೌಳಿ ಭಾಷೆ........... ಹೀಗೆ ಹಲವು ಭಾಷೆಗಳು ಕೀಳರಿಮೆಯಿಂದ ಮತ್ತು ಪ್ರೋತ್ಸಾಹದ ಕೊರತೆಯಿಂದ ಅಪ್ರಸ್ತುತವಾಗುತ್ತಿರುವುದನ್ನು ನೋಡಬಹುದು. ಹಾಗಾಗಿ ಭಾಷೆ ಉಳಿಸುವುದೆಂದರೆ ಜೀವನ ವಿಧಾನ ಉಳಿಸುವುದು, ಅವನ ಕಲೆ, ಸಾಹಿತ್ಯ ಇತ್ಯಾದಿ ಜೀವನ ಮೌಲ್ಯ ಉಳಿಸುವುದು. ಜೀವನ ಮೌಲ್ಯಗಳು ರೂಪಿತವಾದ ಪರಿಸರವನ್ನು ಗೌರವಿಸುವುದು. ಅದಕ್ಕೇ ಅವರು ಹುಲಿಯನ್ನು ಮೃಗಾಲಯದಲ್ಲೂ, ಭಾಷೆಯನ್ನು ಗ್ರಂಥಾಲಯದಲ್ಲೂ ಸಂರಕ್ಷಿಸಲು ಸಾಧ್ಯವೇ? ಎಂದು ಕೇಳುತ್ತಾ ಜೀವಿ ಮತ್ತು ಭಾಷೆ ಎರಡನ್ನು ಉಳಿಸಿಕೊಳ್ಳಲು ಅನುಸರಿಸುತ್ತಿರುವ ವಿಧಾನವನ್ನು ವ್ಯಂಗ್ಯವಾಡುತ್ತಾರೆ. ಆಧುನಿಕತೆ, ಅಭಿವೃದ್ಧಿಯ ಹುಚ್ಚು ವೇಗವನ್ನು ಅನುಸರಿಸಿಕೊಂಡಿರುವ ಮನುಷ್ಯ 'ನಮ್ಮೊಳಗಿನ ಜೈವಿಕ ಗಡಿಯಾರ ಕೆಟ್ಟು ಕೂತಿರುವುದನ್ನು ಗ್ರಹಿಸಲಾರದ ಸ್ಥಿತಿಯಲ್ಲಿದ್ದಾನೆ ಎಂದು ವಿಷಾದಿಸುತ್ತಾರೆ.

ಟಿಪ್ಪಣೆ-4

ಇತ್ತೀಚಿನ ದಶಕದಲ್ಲಿ ಈ ದೇಶವನ್ನು ಕಾಡುತ್ತಿರುವ ಜಾಗತಿಕರಣದ ಅಪಾಯಕಾರಿ ಬೆಳವಣಿಗೆಯ ಕುರಿತು, ಅದು ವಿಜ್ಞಾನದ ಮೇಲೆ, ಅಭಿವೃದ್ಧಿಯ ಸ್ವರೂಪದ ಮೇಲೆ, ಶಿಕ್ಷಣದ ಮೇಲೆ, ಆರೋಗ್ಯದ ಮೇಲೆ ಬೀರುತ್ತಿರುವ ಕೆಟ್ಟ ಪ್ರಭಾವದ ಕುರಿತು ಹಲವು ಲೇಖನದಲ್ಲಿ ಗಮನ ಸೆಳೆಯುತ್ತಾರೆ. ಮುಖ್ಯವಾಗಿ ಇಲ್ಲಿ  'ಜಾಗತೀಕರರಣದ  ದು:ಖಿ ಮುಖಗಳು' ಲೇಖನ ನೋಡಬಹುದು.
ಇದರಲ್ಲಿ ವಾಣಿಜ್ಯೋದ್ಯಮವೇ ಇಂದಿನ ಸಮಾಜದ ಮೂಲಮಂತ್ರವಾಗುತ್ತಿದೆ. ಹಿಂದೆಲ್ಲಾ ಅಪ್ರತಿಮ ಯೋಧರು, ಮಹಾಮುತ್ಸದ್ದಿಗಳು, ಕಲಾವಿದರು, ಲೇಖಕರು, ವಿದ್ವಾಂಸರು ಆಯಾ ಸಮಾಜದ ಹೀರೋಗಳೆನಿಸುತ್ತಿದ್ದರು. ಈಗ ಅವರೆಲ್ಲ ಮೂಲೆ ಗುಂಪಾಗುತ್ತಾರೆ. ಬಿಲ್ ಗೇಟ್ಸ, ಅಜೀಂ ಪ್ರೇಮ್ಜಿ, ನಾರಾಯಣ ಮೂತರ್ಿಯಂಥವರು ಹೀರೋಗಳಾಗುತ್ತಿದ್ದಾರೆ. ಮಾಧ್ಯಮಗಳು ಹಾಡಿ ಹೊಗಳುತ್ತವೆ. ಎನ್ನುವ ಹೆಗಡೆಯವರು ಪಾಶ್ಚಾತ್ಯ ಸಮಾಜದ ಕೊಳ್ಳುಬಾಕತನವನ್ನೂ ಲಾಭಕೋರ ಮನೋವೃತ್ತಿಯನ್ನೂ ಟೀಕಿಸುತ್ತಿದ್ದ ಭಾರತ, ಬ್ರೆಜಿಲ್, ಚೀನಾದಂಥ ರಾಷ್ಟ್ರಗಳು ಈಗ ಪೈಪೋಟಿ ಮೇಲೆ ಅಂಥದ್ದಕ್ಕೆ ಪ್ರೋತ್ಸಾಹ ನೀಡುವ ರಫ್ತು ಕಾರಿಡಾರ್ಗಳನ್ನೂ ಏಕಗವಾಕ್ಷಿಗಳನ್ನೂ ಟೇಕ್ ಪಾರ್ಕಗಳನ್ನೂ ನಿಮರ್ಿಸತೊಡಗಿವೆ. ಎನ್ನುವ ವಿಷಾದಕ್ಕೆ ಅರ್ಥ ಇದೆ. ಮುಂದುವರಿದು ಭಾರತಕ್ಕೆ 1429 ದಿನಬಳಕೆ ವಸ್ತುಗಳನ್ನು ವಿದೇಶಿಕಂಪನಿಗಳು ಭಾರತಕ್ಕೆ ತಂದು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿಹಾಕಿದ ಘಟನೆಯ ಅಪಾಯವನ್ನು ಇವರು ಇಲ್ಲಿ ವಿವರಿಸುತ್ತಾರೆ. .......ಇದು ಭಾರತದ ನೆಲ ನಡುಗಿಸಬಲ್ಲ ಸಂಗತಿ ಏಕೆಂದರೆ, ಸ್ವಾತಂತ್ರ್ಯ ಬಂದ ಲಾಗಾಯ್ತೂ ಇವೆಲ್ಲಾ ಸಾಮಗ್ರಿಗಳನ್ನು ವಿದೇಶೀಯರು ನಮ್ಮಲ್ಲಿ ತಂದು ಸುರಿಯದ ಹಾಗೆ ನಾವು ನಿರ್ಭಂಧ ಹಾಕಿಕೊಂಡಿದ್ದೆವು. ಇವು ಬಂದಿದ್ದೇ ಆದರೆ ನಮ್ಮ ರೈತರು, ನಮ್ಮ ಕೂಲಿಕಾರರು, ನಮ್ಮ ಕುಶಲಕಮರ್ಿಗಳು, ನಮ್ಮ ಕಿರು ಕೈಗಾರಿಕೋದ್ಯಮಿಗಳು ಅಪ್ಪಚ್ಚಿ ಆಗುತ್ತಾರೆ. ವಿದೇಶಿ ವಸ್ತುಗಳೊಂದಿಗೆ ಪೈಪೋಟಿ ನಡೆಸಲಾರದೇ ಸೋಲುತ್ತಾರೆ ಎಂಬ ಭಾವನೆ ಇತ್ತು. ಈಗ ಹಾಗೆಯೇ ಆಗಿದೆ ಕೂಡ. ವಿದರ್ಭನ್ನೊಳಗೊಂಡಂತೆ ದೇಶದಲ್ಲಿ ನಡೆದ ರೈತರ ಆತ್ಮಹತ್ಯೆ, ತೀವೃಗೊಡ ನಿರುದ್ಯೋಗ, ಕೆಲಸದ ಅಭದ್ರತೆ, ಬೆಲೆ ಏರಿಕೆ. . . ಸಾಮಾನ್ಯ ಜನರ ಬದುಕನ್ನು ದುಸ್ತರಗೊಳಿಸಿದೆ. ಮತ್ತೆ ಇತ್ತೀಚೆಗೆ ಸಕರ್ಾರ ಜಾರಿಗೆ ತಂದ ಸಗಟು  ವ್ಯಾಪಾರದಲ್ಲಿ ವಿದೇಶಿ ಭಂಡವಾಳಕ್ಕೆ ಅವಕಾಶದಿಂದಾಗಿ ಮತ್ತ್ತಿಷ್ಟು ಜನ ಬೀದಿಗೆ ಬೀಳುತ್ತಿದ್ದಾರೆ.  . . . ಇದು ರೈತರ ಸ್ಥಿತಿಯಾದರೆ ಚಿಕ್ಕ ಉದ್ಯಮಿಯ ಪರಿಸ್ಥಿತಿ ಇನ್ನೂ ಗಂಭೀರವಾಗುವ ಸಾಧ್ಯತೆ ಕಾಣುತ್ತದೆ. ಕಳೇದ ಮೂರು ವರ್ಷಗಳಲ್ಲಿ ನಮ್ಮ ದೇಶದ 40% ಚಿಕ್ಕ ಉದ್ಯಮಗಳು ಸ್ಥಗಿತಗೊಂಡಿವೆ. ಮನೆ ಬಳಕೆಯ ಅದೆಷ್ಟೋ ಉಪಕರಣಗಳನ್ನು ಸಿದ್ಧ ಪಡಿಸುತ್ತಿದ್ದ ಲಕ್ಷಾಂತರ ಘಟಕಗಳು, ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆಯಿದೆ. ಎನ್ನುತ್ತಾ ವಿದೇಶಿ ಸರಕುಗಳು ದೇಶಕ್ಕೆ ಬಂದಾಗ ಆಗುವ ಅಪಾಯದ ಬಗ್ಗೆ ಸೋದಾಹರಣ ವಿವರಿಸುತ್ತಾರೆ.

ಹಾಗೆಯೇ ಜಾಗತಿಕರಣದಿಂದ ಜಾಗತಿಕವಾಗಿ ಬಡವ ಬಲ್ಲಿದನ ನಡುವೆ ಹೆಚ್ಚುತ್ತಿರುವ ಕಂದಕದ ಬಗ್ಗೆ ಗಮನ ಸೆಳೆಯುತ್ತಾರೆ. ಶ್ರೀಮಂತರು ಎಷ್ಟು ಶ್ರೀಮಂತರಾಗುತ್ತಿದ್ದಾರೆಂದರೆ ಮೈಕ್ರೋಸಾಫ್ಟ ಕಂಪನಿಯ ಬಿಲ್ ಗೇಟ್ಸನ ಸಂಪತ್ತು ಜಗತ್ತಿನ 85 ದೇಶಗಳ ಒಟ್ಟೂ ನಿವ್ವಳ ಉತ್ಪನ್ನಕ್ಕಿಂತ ಹೆಚ್ಚಿರುವುದನ್ನು ಉದಾಹರಿಸುತ್ತಾರೆ. ಜಾಗತೀಕರಣದ ಇನ್ನೊಂದು ಅಪಾಯದ ಬಗ್ಗೆ ಗಮನ ಸೆಳೆಯುತ್ತಾ ವಾಣಿಜ್ಯ ಸಂಸ್ಥೆಗಳೇ ಮುಂದಿನ ಭವಿಷ್ಯವನ್ನು ರೂಪಿಸಲು ಹೊರಟಿವೆ. ಆ ಜಗತ್ತಿನಲಿ ದಯೆ, ದಾಕ್ಷಿಣ್ಯ, ಸಹಿಷ್ಣುತೆ ಅನುಕಂಪಗಳಂಥ ಕೋಮಲ ಭಾವನೆಗಳಿಗೆ ಸ್ಥಾನವಿಲ್ಲ. ಲಾಭಗಳಿಕೆ, ನಿರ್ದಯ ಆಥರ್ಿಕ ದಕ್ಷತೆ, ನಿರಂತರ ಅಭಿವೃದ್ಧಿ ಇವು ಈ ಜಗತ್ತಿನ ಲಾಂಛನಗಳಾಗಿರುತ್ತವೆ. ಅಸಮಾನತೆ, ಅನ್ಯಾಯ, ಅಶಕ್ತತೆ, ಅಭದ್ರತೆ ಇವುಗಳತ್ತ ಲಕ್ಷ್ಯಕೊಡಲು ಯಾರಿಗೂ ಬಿಡುವಿರುವುದಿಲ್ಲ. ಹೀಗೆ ದೇಶವೊಂದರ ಭವಿಷ್ಯವಿರುವುದು ಈ ಜಾಗತೀಕರಣದ ಜಾರಿಯಲ್ಲಿ ಎನ್ನುವ ಬಂಡವಾಳಶಾಹಿ ಮತ್ತು ಅಮೇರಿಕನ್ ಸಾಮ್ರಾಜ್ಯಶಾಹಿಯ ಒಳ ಹಿತಾಸಕ್ತಿಯನ್ನು ಆಧಾರ ಸಹಿತ ಬಯಲಿಗಿಡುತ್ತಾರೆ.

  ಕನರ್ಾಟಕ ಗಡಿಯಲ್ಲಿರುವ 'ಪಡ್ರೆ' ಎಂಬ ಊರಿನಲ್ಲಿ ಎಂಡೋಸಲ್ಫಾನ್ನಿಂದ ನಡೆದ ಅಪಾಯಕಾರಿ ಬೆಳವಣಿಗೆ ಕುರಿತು, ಭಾರತದಲ್ಲಿ ಶೀಘ್ರವಾಗಿ ಕ್ಷೀಣಿಸುತ್ತಿರುವ ಕಪ್ಪೆಗಳ ಸಂತತಿಯ ಕುರಿತು, ಬಾಯೊಳಗೆ ಅಸಂಖ್ಯ ಪ್ರಮಾಣದಲ್ಲಿರುವ ಏಕಾಣು ಜೀವಿಗಳ ಕುರಿತು....... ವಿದೇಶಿ ಯಾತ್ರೆಗೆ ಹೊರಟಿರುವ ಬಸವನ ಹುಳುವಿನ ಕುರಿತು........ ಮನುಷ್ಯನ ಪ್ರಯೋಗಕ್ಕೆ ಬಲಿಯಾದ ಮಂಗಗಳ ಕುರಿತು, ಭೂದಿನದ ಕುರಿತು, ಪ್ರನಾಳ ಶಿಶುವಿನ ಕುರಿತು, ವಿಶ್ವ ವಿಜ್ಞಾನದ ದಿನ, ಕುಲಾಂತರಿ ತಳಿ, ಬಾಯ್ಯಾಕಾಶಕ್ಕೆ ಕ್ಷಿಪಣಿ ಪ್ರಯಾಣ. . . . ಹೀಗೆ ನೂರಾರು ವಿಷಯಗಳ ಕುರಿತು ಬರೆಯುವಾಗ ನಾಗೇಶ ಹೆಗಡೆಯವರು ಅದಕ್ಕಿರುವ ಸಮಾಜೋಆಥರ್ಿಕ ಮುಖವನ್ನು ಕಡೆಗಣಿಸುವುದಿಲ್ಲ. ಇಡೀ ಜಾಗತಿಕ ಹಂತದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಕಣ್ಣೋಟದಲ್ಲಿಯೇ ಇದು ವಿಸ್ತಾರ ಪಡೆದುಕೊಳ್ಳುತ್ತವೆ.

ಟಿಪ್ಪಣೆ-5

 'ಭವಿಷ್ಯದ ವಿರುದ್ಧ ಬಂಡಾಯ' ಇನ್ನೊಂದು 'ಪತ್ರಿಕಾ ಸ್ವಾತಂತ್ರ್ಯದ ಐದು ಮುಜುಗರದ ಮುಖಗಳು' ಎನ್ನುವ ಎರಡು ಲೇಖನ ಅವರ ಬರಹದ ಸೈದ್ಧಾಂತಿಕ ಖಚಿತತೆಯನ್ನು ಸ್ಪಷ್ಟಪಡಿಸುತ್ತದೆ. ಬಂಡವಾಳಶಾಹಿ ತಂತ್ರಜ್ಞಾನ ಎಂಥ ಪ್ರಬಲ ಗಣತಂತ್ರವನ್ನೂ ತನ್ನ ಅಡಿಯಾಳಾಗಿಸಿಕೊಳ್ಳುತ್ತದೆ. ಜಾಗತೀಕರಣದ ನಂತರವಂತೂ ಅದು ನಿಚ್ಚಳವಾಗಿ ಕಾಣಿಸತೊಡಗಿದೆ ಎನ್ನುವ ನಾಗೇಶ ಹೆಗಡೆಯವರು ಬಂಡವಾಳಶಾಹಿ ಲಾಭಕೋರ ವ್ಯವಸ್ಥೆ ಪ್ರತಿಭಟನೆಯನ್ನು ಗೌಣಗೊಳಿಸುವ ಹಲವು ತಂತ್ರಗಳನ್ನು ಅನುಸರಿಸುತ್ತವೆ. ಸಂಘಟನೆಯಲ್ಲಿ ಒಡಕು ಹುಟ್ಟಿಸುವುದು, ಮುಂದಾಳುಗಳನ್ನು ಖರೀದಿಸುವುದು, ವಿರೋಧಿಗಳು ವಿಜ್ಞಾನಿಗಳಾದರೆ ಅಂಥವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಬಾಯಿ ಮುಚ್ಚಿಸುವುದು, ಸ್ಥಳೀಯರಿಗೆ ಅಷ್ಟಷ್ಟು ಉದ್ಯೋಗ ಭರವಸೆ ನೀಡುವುದು, ದೇವಾಲಯ ಕಟ್ಟಿಸುವುದು, ಆಸ್ಪತ್ರೆ ಮತ್ತು ಶಾಲೆಗೆ ಗ್ರಂಥಾಲಯದಂಥ ಮುಖಲೇಪನ ಮಾಡುವುದು, ಪರಿಸರವಾದಿಗಳಾದರೆ ಅಲ್ಲಲ್ಲಿ ಗಿಡಮರಗಳನ್ನು ನೆಟ್ಟು ಕಣ್ಣೊರೆಸುವುದು ಮುಂತಾದ ಪರೋಕ್ಷ ಮಾರ್ಗವನ್ನು ಅನುಸರಿಸುವುದನ್ನು ವಿವರಿಸುತ್ತಾರೆ ಮತ್ತು ಸಂಘಟಿತ ಕಾಮರ್ಿಕರು ಎಲ್ಲೆಲ್ಲಿ ಬಂಡಾಯ ಏಳುತ್ತಾರೋ ಅಲ್ಲೆಲ್ಲ ವಿಕೇಂದ್ರೀಕರಣವನ್ನು ಜಾರಿಗೆ ತಂದು ಬಿಡುವುದು ಕೂಡ ಇನ್ನೊಂದು ತಂತ್ರ ಎನ್ನುತ್ತಾರೆ. ಇದಕ್ಕೆ ಅವರು ಮುಂಬೈ ಮತ್ತು ಕನರ್ಾಟಕದ ದಾವಣಗೆರೆಯ ಜವಳಿ ಕಾಮರ್ಿಕರ ಸ್ಥಿತಿಯನ್ನು ಉದಾಹರಿಸುತ್ತಾರೆ. ಹೀಗೆ ಲಾಭದ ಬೆನ್ನು ಹತ್ತಿ ಕಾಮರ್ಿಕರನ್ನು, ಪ್ರತಿಭಟನೆಕಾರರನ್ನು, ಆಪೋಷಣೆ ತೆಗೆದುಕೊಳ್ಳುತ್ತಲೇ ಮುನ್ನುಗ್ಗುತ್ತಿರುವ ಬಂಡವಾಳಶಾಹಿ ಅಭಿವೃದ್ಧಿ  ಸ್ವರೂಪವನ್ನು ನಾಗೇಶ ಹೆಗಡೆಯವರು ಸರಿಯಾಗಿಯೇ ಗುರುತಿಸಿದ್ದಾರೆ. ಇಂದು ಈ ದೇಶದಲ್ಲಿ ನಡೆಯುತ್ತಿರುವುದೂ ಇದೇ ಅಲ್ಲವೆ? ಮಾನವ ಸಂಪನ್ಮೂಲಗಳನ್ನು ಸಂಪೂರ್ಣ ಕಡೆಗಣಿಸಿ ಯಂತ್ರಾಧಾರಿತ ಅಭಿವೃದ್ಧಿಯು ದೇಶವನ್ನು ಆಕ್ರಮಿಸಿದೆ. ಇಂದು ಈ ದೇಶಕ್ಕೆ ಲಗ್ಗೆ ಇಡುತ್ತಿರುವ ಮಲ್ಟಿನ್ಯಾಶನಲ್ ಕಂಪನಿಗಳಂತೂ ಆಳುವ ಸಕರ್ಾರವನ್ನೇ ಕೊಂಡುಕೊಂಡು ದೇಶವನ್ನು ಲೂಟಿ ಹೊಡೆಯುವುದನ್ನು ನೋಡುತ್ತಿದ್ದೇವೆ. ಈ ದೇಶದ ಯಾವುದೇ ಕಾನೂನುಗಳೂ- ಕಾಮರ್ಿಕ ಕಾನೂನು, ಪರಿಸರ ಸಂಬಂಧಿ ಕಾನೂನು ಇತ್ಯಾದಿ- ಇವರಿಗೆ ಬೈಂಡಿಂಗ ಆಗುತ್ತಿಲ್ಲ. ದೇಶವನ್ನು ಕೊಳ್ಳೆ ಹೊಡೆಯಲು ನಮ್ಮದೇ ಸರಕಾರ ಬೆಂಗಾವಲಾಗಿ ನಿಂತಿರುವುದು ಮಾತ್ರ ಕೇದಕರ.ಹೀಗೆ ಬಂಡವಾಳಶಾಹಿ ಅಭಿವೃದ್ದಿಯ ಸ್ವರೂಪದ ಅಪಾಯ ಹೇಳುವ ಹೆಗಡೆಯವರು ಆಗಾಗ ಸಮಾಜವಾದಿ ಅಭಿವೃದ್ದಿಯ ಸ್ವರೂಪವನ್ನೂ ಇದರೊಂದಿಗೆ ಸೇರಿಸಿದ್ದು ಆಶ್ಚರ್ಯವನ್ನುಂಟು ಮಾಡುತ್ತದೆ.

ಅವರ ಬರವಣಿಗೆಯ ನಿಷ್ಠುರತೆಯನ್ನು ಹೇಳುವ ಇನ್ನೊಂದು ಮುಖ್ಯ ಲೇಖನ 'ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು'. ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯವೆಂದರೆ ಏನು? ಎನ್ನುವ ಕುರಿತು 5 ನೀತಿಪಾಠವನ್ನು ಮುಂದಿಡುತ್ತಾರೆ.
1) ಪತ್ರಿಕಾ ಸ್ವಾತಂತ್ರ್ಯವೆಂದರೆ ಸಂಪಾದಕರ ಸ್ವಾತಂತ್ರ್ಯವಷ್ಟೆ. ವರದಿಗಾರರ ಸ್ವಾತಂತ್ರ್ಯ ಅಲ್ಲ.
2) ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ಸಂಪಾದಕರ ಸ್ವಾತಂತ್ರ್ಯವಲ್ಲ ಅದು ಪತ್ರಿಕಾ ಮಾಲಿಕನ ಸ್ವಾತಂತ್ರ್ಯ.
3) ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ಪತ್ರಿಕಾ ಮಾಲಿಕನ ಸ್ವಾತಂತ್ರ್ಯ ಅಲ್ಲ .ಅದು ಪತ್ರಿಕಾ ಪ್ರಸರಣಾಧಿಕಾರಿಗಳ ಸ್ವಾತಂತ್ರ್ಯ.
4) ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ಜಾಹಿರಾತು ವಿಭಾಗದ ಮುಖ್ಯಸ್ಥರ ಸ್ವಾತಂತ್ರ್ಯ.
 ಎಂಬುದನ್ನು ವಿವಿಧ ಉದಾಹರಣೆಯ ಮೂಲಕ ಸಾಬೀತು ಪಡಿಸುತ್ತಾ ಬರುತ್ತಾರೆ. ಲೇಖನದ ಕೊನೆಗೆ ಬಂದಾದ ಪತ್ರಿಕಾ ಸ್ವಾತಂತ್ರ್ಯವೆಂದರೆ ವರದಿಗಾರನ ಸ್ವಾತಂತ್ರ್ಯವೂ ಅಲ್ಲ, ಸಂಪಾದಕರ ಸ್ವಾತಂತ್ರ್ಯವೂ ಅಲ್ಲ. ಪತ್ರಿಕಾ ಮಾಲಿಕರ ಸ್ವಾತಂತ್ರ್ಯವೂ ಅಲ್ಲ. ಅದು ದುಡ್ಡಿನ ದೊರೆಗಳ ಸ್ವಾತಂತ್ರ್ಯ(5 ನೇ ನೀತಿ) ಎನ್ನುತ್ತಾರೆ. ಸ್ವತಃ ಪತ್ರಿಕೆಯೊಂದರ ಉಪಸಂಪಾದಕರಾಗಿರುವಾಗಲೇ ಇಂಥದೊಂದು ಲೇಖನ ಬರೆಯುವ ಧೈರ್ಯ ತೋರಿದವರು ಹೆಗಡೆಯವರು. ಪತ್ರಿಕೆ ಎನ್ನುವುದು ಇಂದು ಜನಸಾಮಾನ್ಯರ ಮುಖವಾಣಿಯಾಗಿ ಉಳಿದಿಲ್ಲ. ಉಳ್ಳವರ ಮಜರ್ಿ ಕಾಯುವ ಅಸ್ತ್ರವಾಗಿಬಿಟ್ಟಿದೆ. ಕಾಣದ ಕೈ ಇಡೀ ಪತ್ರಿಕೆಯ ಸುದ್ದಿಸ್ವರೂಪವನ್ನು, ಸುದ್ದಿ ಭವಿಷ್ಯವನ್ನು ನಿರ್ಧರಿಸುವ ಹಂತಕ್ಕೆ ಬಂದಿದೆ. ಎಲೆಕ್ಟ್ರಾನಿಕ್ ಮಾಧ್ಯಮವೂ ಸೇರಿದಂತೆ ಇಂದು ಬಹುತೇಕ ಮಾಧ್ಯಮಗಳು ಕೋಟ್ಯಾಧಿಪತಿ ರಾಜಕಾರಣಿಗಳ, ಉದ್ಯಮಪತಿಗಳ ಒಡೆತನಕ್ಕೆ ಸೇರಿವೆ. ವಿದೇಶಿ ಪತ್ರಿಕೆಗಳನ್ನು ಇಲ್ಲಿ ಪ್ರವೇಶಿಸಲು ವೇದಿಕೆ ಸಿದ್ಧವಾಗುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮಗಳ ಸಾವಕಾಶವಾಗಿ ತನ್ನ ಎಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡು ಜಾಗತೀಕರಣದ ಮುಖವಾಣಿಯಾಗುತ್ತಿರುವ ಅಪಾಯವನ್ನು ಇಲ್ಲಿ ದಿಟ್ಟವಾಗಿಯೇ ವಿವರಿಸಿದ್ದಾರೆ.

ಉದ್ದಿಮೆಪತಿಗಳೇ ಈ ದೇಶವನ್ನಾಳುವ ಹುನ್ನಾರ ಒಂದೆಡೆಯಾದರೆ ಅವರ ಪೂರಕವಾಗಿ ಲಾಭ ತರುವ ನೀತಿಯನ್ನು ಜಾರಿಗೊಳಿಸುವ ಸರಕಾರದ ಕ್ರಮ ಇನ್ನೊಂದು ಕಡೆ. 'ಚನರ್ೊಬಿಲ್ ಚಂಡಿಯ ರುಂಡ ಮಾಲೆ', 'ಗಣಿಗಳ ಕಪ್ಪುಹಣ ಮತ್ತು ಕಾಮರ್ಿಕರ ಬಿಳಿ ಮೃತ್ಯು' 'ತುತ್ತಿನ ಮೇಲೆ ಶಸ್ತ್ರಾಸ್ತ್ರ' -ಹೀಗೆ ಹಲವು ಲೇಖನಗಳು ಇಲ್ಲಿ ಗಮನಾರ್ಹ.ಬಂಡವಾಳಶಾಹಿ ಜಗತ್ತಿನ ಕೌರ್ಯವನ್ನು ತೆರೆದಿಡುತ್ತದೆ.

ಟಿಪ್ಪಣೆ-6

ನಾಗೇಶ ಹೆಗಡೆಯವರ ಬರಹ ಎಂದೂ ಕೋಮುವಾದದ ಜೊತೆ ನಿಂತಿಲ್ಲ. ಸಾಧ್ಯವಾದಲೆಲ್ಲಾ ಕೋಮುಗಲಭೆಗೆ ಕಾರಣವಾಗಬಹುದಾದ ಸಂಗತಿಗಳನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ. ಇಂಥ ಒಂದು ಲೇಖನ 'ಗೋವಿನ ಸುತ್ತ........ಮುಗಿಯದ ವೃತ್ತ'. ಒಂದು ಕಾಲದಲ್ಲಿ ಗೋವು ಕೃಷಿಕರ ಆಪ್ತ 'ಸಖ' ನಾಗಿತ್ತು. ಇಂದು ಅದು ಕೋಮು ಗಲಭೆಗೆ ಒಂದು ನೆಪ ಆಗಿದೆ. ಗೋಹತ್ಯಾ ನಿಷೇದ ಕಾನೂನು ಜಾರಿ ಮಾಡುವ ಹುನ್ನಾರ ಜೋರಾಗಿ ನಡೆಯುತ್ತಿರುವ ಕಾಲದಲ್ಲಿ ನಾಗೇಶ ಹೆಗಡೆಯವರ ಈ ಲೇಖನ ಸನಾತನವಾದಿಗಳಿಗೆ ಕೊಟ್ಟ ತಣ್ಣನೆಯ ಉತ್ತರದಂತಿದೆ.
ತಲೆತಲಾಂತರದಿಂದ ಆಹಾರವಾಗಿ ಉಪಯೋಗಿಸುತ್ತಿರುವ ಗೋವು ಇತ್ತೀಚೆಗೆ 'ಗೋಮಾತೆ'ಯಾಗಿ ದಲಿತ ಮತ್ತು ಮುಸ್ಲಿಂರ ವಿರುದ್ಧ ಹಿಂದೂ ಕೋಮುವಾದಿಗಳು ನಡೆಸುತ್ತಿರುವ ಸಂಚಿನ ಭಾಗವಾಗಿದೆ. ದಲಿತರು ಮತ್ತು ಮುಸ್ಲೀಮರು ಇದನ್ನು ಆಹಾರವಾಗಿ ಉಪಯೋಗಿಸಿದರೆ ಹಿಂದುಗಳ ಭಾವನೆಗೆ ದಕ್ಕೆ ಆಗುತ್ತದೆಯೆಂದು ಬೊಬ್ಬೆ ಹಾಕುತ್ತಿರುವಾಗ ಆಧುನಿಕ ಕೈಗಾರಿಕೆಯಲ್ಲಿ ,ಔಷಧೀಯ ರಂಗದಲ್ಲಿ, ಆಹಾರದಲ್ಲಿ, ಬಣ್ಣದಲ್ಲಿ ಹೇಗೆ ಗೋವಿನ ಉತ್ಪನ್ನಗಳು ಬಳಕೆಯಾಗುತ್ತವೆ ಎಂದು ವಿವರಿಸಿದ್ದಾರೆ.,

ಬ್ರೇಕು,ಟಯರು, ಡಾಂಬರಿನಲ್ಲಿ ಮಾತ್ರವಲ್ಲ ಇನ್ನು ಮೂಳೆ ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯ ಯೋಗ್ಯ ಟ್ಯಾಲೆ ಎಣ್ಣೆ ದೊರಕುತ್ತದೆ. ಇದು ಚ್ಯುಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ. ದನದ ಅಂಗಾಂಶಗಳನ್ನು ಜೋಡಿಸುವ ಕೊಲಾಜಿನ್ ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆಯಿದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜಿನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚು ಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್ಗಳ ತಯಾರಿಕೆಗೆ ಇದೇ ಬೇಕು. ಎಂದು ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯ ದನದ ಕೊಬ್ಬಿನ ಉತ್ಪನ್ನ ಬಳಸುವುದು ಅನಿವಾರ್ಯ ಅನ್ನುತ್ತಾರೆ. ಮುಂದುವರಿದು ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ವಿಶೇಷವಾಗಿ ಗ್ಯಾಂಗ್ರಿನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರೆನಾಲಿನ್ ಗ್ರಂಥಿಗಳಿಂದ ತಯಾರಾದ ಸ್ಟಿರಾಯಿಡ್ ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ, ರಕ್ತದ ಒತ್ತಡವನ್ನು ಹೆಚ್ಚಿಸಲು ಹೃದ್ರೋಗ ಚಿಕಿತ್ಸೆಗೆ ಮಧುಮೇಹಿಗಳ ಇನ್ಸುಲಿನ್ ಗೆ ಸಂಧಿವಾತ, ಕೀಲು ನೋವುಗಳಿಗೆ ಇದನ್ನು ಬಳಸುತ್ತಾರೆ. ಗ್ರಿಸರಿನ್, ನೋವುನಿವಾರಕ ಎಣ್ಣೆ,ಸೌಂದರ್ಯವರ್ಧಕ ಕೋಲಾಜಿನ್ ಕ್ರೀಮ್, ಫೋಟೊ ಫಿಲ್ಮ ಹೀಗೆ ಇದರ ಕತೆ ಮುಂದುವರಿಯುತ್ತದೆ. 'ಇದು ಮುಗಿಯುವ ಕಥೆಯಲ್ಲ ಎನ್ನುತ್ತ ಪುಟ ಮಗುಚಿ ಎದ್ದು ಹೊರಟಿರಾ? ಹೊರಡುವ ಮುನ್ನ ಮುದ್ರಿತವಾದ ಅಕ್ಷರಗಳತ್ತ ಒಮ್ಮೆ ಕಣ್ಣು ಹಾಯಿಸಿ. ಇದಕ್ಕೆ ಬಳಸಿದ ಇಂಕಿನಲ್ಲಿಯೂ ಗೋವಿನಂಶವಿದೆ.' ಎನ್ನುವ ಮೂಲಕ ವೈಜ್ಞಾನಿಕವಾಗಿ ಎಲ್ಲರು ದನವನ್ನು ಸೇವಿಸುವವರೆ ಎನ್ನುತ್ತಾರೆ.

ಟಿಪ್ಪಣೆ - 7

ಆದರೆ ಕೆಲವು ಸಂದರ್ಭದಲ್ಲಿ ಅವರ ಕೆಲವು ತೀಮರ್ಾನಗಳು ಇನ್ನಷ್ಟು ಹೆಚ್ಚು ಚಚರ್ೆ ಬಯಸುತ್ತವೆ. ಉದಾಹರಣೆ ಸ್ಥಳೀಯ ಭಾಷೆ ಉಳಿದಷ್ಟು ದಿನ ಮಾತ್ರ ಅಲ್ಲಿ ಏನಿದೆ ಎಂಬುದು ಗೊತ್ತಿರುತ್ತದೆ. ಅಂಥ ಆದಿವಾಸಿಗಳ ಮಕ್ಕಳು ಶಾಲೆಯ ಮೆಟ್ಟಿಲು ಹತ್ತಿ ಹೊರಪ್ರಪಂಚಕ್ಕೆ ಕಾಲಿಟ್ಟರೆ ಸಾಕು. ಭಾಷೆಯ ನೆನಪು ಮರೆಯಾಗುತ್ತದೆ. ಜ್ಞಾನದ ಅವಸಾನವಾಗುತ್ತದೆ (ಪು.71) ಎಂದು ವಿಷಾದದಿಂದ ಹೇಳುತ್ತಾರೆ. ಹಾಗಾದರೆ ಆದಿವಾಸಿಗಳ ಮಕ್ಕಳು ಹೊರಪ್ರಪಂಚಕ್ಕೆ ತೆರೆದುಕೊಳ್ಳದೆ ಎಷ್ಟು ದಿನ ಹಾಗೇ ಇರಬೇಕು? ಅವರು ಹೊರ ಪ್ರಪಂಚಕ್ಕೆ ತೆರೆದುಕೊಂಡೂ ಭಾಷೆ, ಕಲೆ, ಜ್ಞಾನ ಉಳಿಸಿಕೊಳ್ಳುವುದು ಹೇಗೆ? ಎಂದು ಆಲೋಚಿಸಬೇಕಾಗಿದೆ.

ಹಲವು ಸಂದರ್ಭದಲ್ಲಿ ಅವರು ಈಗಿರುವ 'ಅಭಿವೃದ್ಧಿ' ಯ ಕಲ್ಪನೆಯನ್ನು ಸಂಪೂರ್ಣ ವಿರೋಧಿಸುತ್ತಾರೆ. ಅಂದರೆ ಅಭಿವೃದ್ಧಿಯ ವಿಕಾರ ಮುಖವನ್ನು ತಿರಸ್ಕರಿಸಬೇಕೆನ್ನುವುದು ಆಶಯ. ಇದಕ್ಕೆ ಬದಲಾಗಿ ಮಾನವ ಮುಖಿ ತಂತ್ರಜ್ಞಾನ ಹೇಗಿರಬೇಕು ಎನ್ನುವಾಗ ಗಾಂಧೀಜಿ ಹೇಳಿದ ಹೊಸ ತಂತ್ರಜ್ಞಾನ ಹೇಗಿರಬೇಕೆಂದರೆ ನಮ್ಮ ಶರೀರದಂತಿರಬೇಕು. ನಮ್ಮ ಬಾಯಲ್ಲಿ ಅಗಿಯುವ ಯಂತ್ರವಿದೆ. ಅದಕ್ಕೆ ಬೇಕಾದ ಶಕ್ತಿ ಮೂಲವನ್ನು ದೇಹವೇ ಒದಗಿಸುತ್ತದೆ. ಈ ದೇಹದಿಂದ ಹೊರ ಬರುವ ತ್ಯಾಜ್ಯ ವಸ್ತುಗಳು ಇನ್ನೊಂದು ಜೀವಿಯ ಬದುಕಿಗೆ ಆಧಾರವಾಗುತ್ತದೆ (ಪು.32) ಆದರೆ ಈಗಿನ ಅಭಿವೃದ್ಧಿ ಸಮುದಾಯಕ್ಕಷ್ಟೇ ಅಲ್ಲ, ತನ್ನ ತ್ಯಾಜ್ಯದಿಂದ ಇತರ ಜೀವಿಗಳಿಗೂ ಮಾರಕ ಎನಿಸಿದೆ ಎನ್ನುತ್ತಾರೆ. ಇದನ್ನು ಒಪ್ಪಿಕೊಳ್ಳಬಹುದಾದರೂ ಅವನು ಎಲ್ಲದಕ್ಕೂ ಕೊಡುವ ಗಾಂಧಿಮಾರ್ಗ, ಫುಕೋಮಾರ್ಗ  ಇಂದು ಪರ್ಯಾಯವಾಗಬಲ್ಲವೆ? ಎಂಬ ಬಗ್ಗೆ ನನಗೆ ನನ್ನದೇ ಆದ ಸಂಶಯ ಉಳಿದುಕೊಂಡಿದೆ. ಬಡವರಿಗೆ ಆಹಾರ ತಲುಪದಿರುವುದು ಆಹಾರ ಕೊರತೆಯಿಂದಲ್ಲ. ಬದಲಾಗಿ ಇದನ್ನು ತಲುಪಿಸಲಾದ ಜನರ ನಡಾವಳಿಯಿಂದಾಗಿ ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತಲೇ ಆಧುನಿಕ ಕೃಷಿ ಬಿಟ್ಟು ಹಳೆಯ ಪದ್ಧತಿಯನ್ನೇ ಅನುಸರಿಸಿದರೆ ಕೋಟಿ ಕೋಟಿ ಹಸಿದ ಹೊಟ್ಟೆಗೆ ಸಾಕಾಗುವಷ್ಟು ಆಹಾರ ಬೆಳೆಯಲು ಸಾಧ್ಯವೇ? ಎಂದು ಸಂಶಯ ಕಾಡುತ್ತದೆ. ಪರಿಸರದ ಕುರಿತು ಅವರ ಕಾಳಜಿ ಒಪ್ಪತಕ್ಕದ್ದೆ. ಆದರೆ ಯಂತ್ರ ನಾಗರಿಕತೆಯನ್ನು ಬಿಟ್ಟು ನಾವು ಬದುಕು ಸಾಗಿಸಬಹುದೇ? ಅಥವಾ ಯಂತ್ರಗಳನ್ನು ಜನಸಾಮಾನ್ಯರ, ಪರಿಸರದ, ಸಕಲಜೀವಿಗಳ ಪರವಾಗಿ ಬಳಸುವ ಕಾಳಜಿಯನ್ನು ಬದ್ಧತೆಯನ್ನು ಹೊಂದಿರುವ ಪ್ರಭುತ್ವವನ್ನು ಸ್ಥಾಪಿಸಲು ಮುಂದಾಗುವುದು ಒಳ್ಳೆಯದೆ? ಎನ್ನುವ ಕಡೆ ಚಚರ್ೆ ಬೆಳೆಸಬೇಕಾಗಿದೆ.                
                                                                                                                   -  ವಿಠ್ಠಲ ಭಂಡಾರಿ










1 comment:

  1. ನಾಗೇಶ ಹೆಗಡೆಯವರ ವಿಜ್ಞಾನ ಬರೆಹ: ಕೆಲವು ಟಿಪ್ಪಣೆಗಳು -vittal bhandari ತುಂಬಾ ಚೆನ್ನಾಗಿ ಬರೆದಿದ್ದೀರಿ.ಧನ್ಯವಾದಗಳು. ಆದರೆ ನಾವು ನೀವು ಮಾಡಬೇಕಾದ ಅಗತ್ಯ ಕೆಲಸಗಳು ತುಂಬಾ ಚೆನ್ನಾಗಿ ನಮ್ಮ ಕಣ್ಮುಂದೆ ಕಾಣಿಸುತ್ತಿವೆ. ಐದು ಅಂಕೆಯ ಮೊಬೇಲ್ (ಹತ್ತು ಸಾವಿರ ರೂಪಾಯಿ ) ಮೊಬೇಲ್ ತೆಗೆದು ಕೊಂಡು ಪೊಳ್ಳು ಸಿನೆಮ ನೋಡುವ ಮಂದಿಗೆ ಅದೇ ಮೊಬೇಲ್ ,ಅದೇ ಇಂಟರ್ ನೆಟ್ ನಲ್ಲಿ ತನಗೆ ಬೇಕಾದ , ಅವಶ್ಯವಾದ ಮಾಹಿತಿ ತಿಳಿಯುವಂತೆ ಮಾಡುವುದು. ಇಂಗ್ಲೀಷ್ ಕಲಿಯುವಂತೆ ತಿಳಿಸುವುದು. ನಮ್ಮ ನಿಮ್ಮ ರೀತಿ ಬರಹಗಳನ್ನು ಬರೆಯುವಂತೆ , ಓದುವಂತೆ , ಓದಿದಕ್ಕೆ ಧನ್ಯವಾದಗಳನ್ನು ಹೇಳುವಂತೆ ತಿಳಿಸುವುದು .

    ಮೊನ್ನೆ ತಾನೇ ನಮ್ಮ ಕಂಪನಿಯ ಹೆಚ್ , ಆರ್ . ಡಿ ಭೇಟಿ ಮಾಡಲು ಹೋದೆ. ಆತನ ಹತ್ತಿರ ಹೋಗಿ ಸಂಬಳ ಹಾಗೂ ಅನುಭವದ ದೃಡೀಕರಣ ಪತ್ರ ಕೇಳಿದೆ. ತನ್ನ ನೌಕರಿಗೆ ನಾ ಲಾಯಕ್ ಆದ ಹೆಚ್ . ಆರ್. ಡಿ ಮಹಾನು ಭಾವ ನಾಯಿ ಯಂತೆ ಅರಚಿದ. ಯೋಗ್ಯತೆ ಇಲ್ಲದವರನ್ನು ಯೋಗ್ಯತೆ ಇರುವವರ ಮೇಲ್ವಿಚಾರಕರನ್ನಾಗಿ ದೊಡ್ಡ ಕಂಪನಿಗಳು ನೇಮಿಸಿ ಕೈ ಕಟ್ಟಿ ಕೊಳ್ಳುತ್ತವೆ ಅನ್ನುವುದಕ್ಕೆ ಇದೊಂದು ಸೂಕ್ತ ಉದಾಹರಣೆ.

    ವಂದನೆಗಳೊಂದಿಗೆ

    ಎ.ಟಿ.ನಾಗರಾಜ
    ನೆಟ್ ನಾಗ ಅಟ್ ಜಿ ಮೆಲ್ ಡಾಟ್ ಕಂ

    ReplyDelete