Thursday 27 June 2013

ಸಿಮೋಲ್ಲಂಘನೆ- @ ಆರ್.ವಿ.ಭಂಡಾರಿ

ಸಿಮೋಲ್ಲಂಘನೆ

ಮೊಳಗುತಿದೆ ಹಕ್ಕಿಗಳುಲಿ
ಹೊಸಕಾಲದ ಹಾಡು
ವಿಚ್ಛೇದಿಸಿ ಕತ್ತಲ ಗಡಿ
ಸೀಮೋಲ್ಲಂಘನೆಗೆ

ಅರಮನೆಗಳ ಗೋಪುರಗಳ
ಕಂಬಗಳಾದವರೆ
ಟಾಟಾಗಳ ತ್ರಿಝೂರಿಯ
ಬೆನ್ನಲಿ ಹೊತ್ತವರೆ
ಕೈಜಾಡಿಸಿ, ಮೈಜಾಡಿಸಿ,
ತಲೆಯೆತ್ತಿರಿ ಒಮ್ಮೆ
ಹೊಸ ಹಗಲಿನ ರವಿ ರಶ್ಮಿಯು
ಪಾದದ ಬಳಿ ಹೆಮ್ಮೆ

ದೇವರಂತೆ ಧರ್ಮವಂತೆ
ಜಾತಿಯಂತೆ ಪಂಥವಂತೆ
ಜನಜನಗಳ ಒಡೆಯಲಿಕ್ಕೆ
ಬಡಜನಗಳ ಸುಲಿಯಲಿಕ್ಕೆ
ಎಂತೆಂಥ ಮಂತ್ರವೋ
ಎಂತೆಂಥ ತಂತ್ರವೋ

ಊರ ಹೊರ ಹಟ್ಟಿಯಲ್ಲಿ
ಕತ್ತಲೆಯಲಿ ಕೊಳೆವವರೆ
ಸದಾ ಕನಸು ಕಂಡು ಕಂಡು
ಕಣ್ಣೀರಲೆ ಉಂಡವರೆ
ಬನ್ನಿ ಬನ್ನಿ ಬಂಧುಗಳೆ
ಹೋರಾಟದ ಪಂಜು ಹಿಡಿದು
ಸಮತೆಯ ಪತಾಕೆ ನೆಗೆದು
ಹೊಸ ಹಗಲಿನ ಹಾಡು ನುಡಿದು
ಚರಿತೆಯ ನಿಮರ್ಿತಿಗೆ

ಪ್ರೀತಿಯ ಕುಶಾಲು ತೋಪು ಸಿಡಿದು
ಸೀಮೋಲ್ಲಂಘನೆಗೆ

    @ ಆರ್.ವಿ.ಭಂಡಾರಿ

ಮಕ್ಕಳ ರಂಗಭೂಮಿ ಮತ್ತು ನಾಟಕ -R V Bhandari

                                       .ಮಕ್ಕಳ  ರಂಗಭೂಮಿ  ಮತ್ತು  ನಾಟಕ
ರಂಗಭೂಮಿಯ ಕುರಿತು ಅನೇಕ ಪರಿಕಲ್ಪನೆಗಳಿವೆ. ಒಂದು ವಿಶಾಲವಾದ ಅರ್ಥದಲ್ಲಿ ಇವೆಲ್ಲವುಗಳನ್ನು ಒಳಗೊಂಡಿದ್ದೇ 'ರಂಗಭೂಮಿ' ಎಂಬ ಪರಿಕಲ್ಪನೆ ಕೂಡ. 'ರಂಗಭೂಮಿ' ಎನ್ನುವುದು ಸರ್ವತಂತ್ರ ಸ್ವತಂತ್ರವಲ್ಲ. ಅದಕ್ಕೆ ವಸ್ತು ಸಿಕ್ಕಿದಾಗಲೇ 'ರಂಗಭೂಮಿ' ಎನ್ನಿಸಿಕೊಳ್ಳುವುದು. ಪ್ರಸ್ತುತವಾಗಿ 'ರಂಗಭೂಮಿ' ಎಂದು ಕರೆಯುವುದು ನಾಟಕ ರಂಗಭೂಮಿಯೇ ಆದ್ದರಿಂದ ರಂಗಭೂಮಿ ನಾಟಕಾವಲಂಬಿ.

ರಂಗಭೂಮಿಯಲ್ಲಿ ಅಭಿಜಾತ ಮತ್ತು ಜಾನಪದ ಎಂಬೆರಡು ಬಗೆ. ಅಭಿಜಾತದಲ್ಲಿ ಪೌರಾತ್ಯ ಮತ್ತು ಪಾಶ್ಚಾತ್ಯ ಎಂಬುದು. ಇನ್ನು ಇದರಲ್ಲಿಯ ಪ್ರಕಾರಗಳು ಎಷ್ಟೋ ಇದ್ದರೂ ಇಂದು ಇವೆಲ್ಲ ಹತ್ತಿರ ಬಂದಿವೆ. ಪೌರಾತ್ಯದಲ್ಲಿ, ಪಾಶ್ಚಾತ್ಯ, ಅಭಿಜಾತ, ಜಾನಪದ ಹೀಗೆ ಯಾವುಯಾವುದು ಉದ್ದೇಶ ಪೂರಕವೆನಿಸುತ್ತದೋ ಅವೆಲ್ಲ ಒಂದೆಡೆ ಬಂದು ಸೇರಿಕೊಳ್ಳುತ್ತಿವೆ. ಆದ್ದರಿಂದ ನಮ್ಮ ಆಧುನಿಕ ರಂಗಭೂಮಿಯ ಬಗ್ಗೆ ಶಾಸ್ತ್ರ ವ್ಯಾಖ್ಯೆ ಮಾಡಲು ಮತ್ತೊಬ್ಬ 'ಭರತ ಮುನಿ' ಹುಟ್ಟಿ ಬರಬೇಕು. ಅಲ್ಲಿಯ ತನಕವೂ ವಿವಿಧ ಪ್ರಯೋಗ ಆಕರವನ್ನು ನಿಮರ್ಿಸುತ್ತಲೇ ಹೋಗಬೇಕಾಗುತ್ತದೆ. ಆ ಮೇಲೂ ಶಾಸ್ತ್ರಕ್ಕಿಂತ ಪ್ರಯೋಗವೇ ಸ್ವಾಭಾವಿಕ.

ಮಕ್ಕಳ ನಾಟಕ ಹೇಗೆ ಹೊಸ ಕಲ್ಪನೆಯೋ ಹಾಗೇ ಮಕ್ಕಳ ರಂಗಭೂಮಿ ಎನ್ನುವುದೂ ಕೂಡ. ಪಾಶ್ಚಾತ್ಯರಲ್ಲಿ, ರಷ್ಯಾದಲ್ಲಿ ಇದು ಒಂದು ಪರಿಕಲ್ಪನೆಯಾಗಿ ಪ್ರಯೋಗವಾಗುತ್ತಿದೆ ಎಂದು ಕೇಳಿದ್ದೇನೆ. ಅದರಂತೆ ಆಧುನಿಕ ಶಿಕ್ಷಣ ಮತ್ತಿತರ ವಿದ್ಯಮಾನದ ಬೆನ್ನು ಹಿಡಿದು ನಮ್ಮಲ್ಲೂ ಬಂದುದು ಈ ಮಕ್ಕಳ ರಂಗಭೂಮಿ ಎಂಬ ಹೊಸ ಕಲ್ಪನೆ.
ಮಕ್ಕಳ ರಂಗಭೂಮಿಗೂ ವಯಸ್ಕರ ರಂಗಭೂಮಿಗೂ ಇರುವ ವ್ಯತ್ಯಾಸ ಮನಃಶಾಸ್ತ್ರಕ್ಕೆ ಸಂಬಂಧಿಸಿ ನಿರೂಪಣೆಗೊಳ್ಳಬೇಕಾದುದು. ದೊಡ್ಡವರ 'ರಂಗಭೂಮಿ'ಯ ಎಲ್ಲ ಪರಿಕರಗಳೂ ಮಕ್ಕಳ ರಂಗಭೂಮಿಗೂ ಇರುತ್ತವೆ. ಆದರೆ ಅದು 'ವಾಸ್ತವಿಕ' ರಂಗಭೂಮಿಗಿಂತ ತೀರ ಭಿನ್ನ. ಅದರಲ್ಲಿ ಹಾಡು, ಕುಣಿತ, ಭ್ರಾಮಕ ಕಲೆ (ಫೆಂಟಸಿ) ಕತೆ, ಕನಸು, ಮನೋರಂಜನೆ, ವೇಷಭೂಷಣ, ಬಣ್ಣ ಬೆಡಗು, ಮುಖವಾಡ, ಬೆಳಕಿನ ವ್ಯವಸ್ಥೆ ಎಲ್ಲವೂ ಇರಬಹುದು. ಇವು ದೊಡ್ಡವರ ರಂಗಭೂಮಿಯಲ್ಲೂ ಇರುತ್ತದೆ. ಆದರೆ ಮಕ್ಕಳ ರಂಗಭೂಮಿಯ ತಿರುಳು ಇರುವುದು ಇವುಗಳನ್ನು ದುಡಿಸಿಕೊಳ್ಳುವ ರೀತಿಯಲ್ಲಿ ಅಥವಾ ಇವು ಪ್ರತ್ಯಕ್ಷವಾಗುವ ಸ್ವರೂಪದಲ್ಲಿ ಇವು ಜನಪದ ರಂಗಭೂಮಿಯ ಉತ್ಸವ ಸ್ವರೂಪಿಯಾದುದು. ಲವಲವಿಕೆ ಚಟುವಟಿಕೆ ಮತ್ತು ರಂಜನೆಯಿಂದ ವೈಶಿಷ್ಟ್ಯ ಪೂರ್ಣವಾದುದು.

ಮಕ್ಕಳ 'ರಂಗಭೂಮಿ'ಯ ಪರಿಕಲ್ಪನೆಯಲ್ಲಿ ಬರುವ ಮಕ್ಕಳು ಯಾರು? ಇವು ಬಹಳ ಮುಖ್ಯವಾದ ಪ್ರಶ್ನೆ. ನಮಗೆಲ್ಲ ಗೊತ್ತಿರುವಂತೆ ಮಕ್ಕಳ ಬೆಳವಣಿಗೆ ಸಂಕೀರ್ಣವಾದುದು. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ವೇಗಪೂರ್ಣ. ಈ ಬೆಳವಣಿಗೆಯನ್ನು ಶಾರೀರಿಕ ಮತ್ತು ಮಾನಸಿಕ ಎರಡನ್ನೂ ಒಟ್ಟಿಗೇ ನೋಡಬೇಕು. ಪರಿಸರ ಕೂಡ ಪ್ರಭಾವಶಾಲಿಯಾಗಿದ್ದರೂ ಮುಖ್ಯವಾಗಿ ಗಮನಿಸಬೇಕಾದುದು ಈ ಎರಡನ್ನೇ. ಇದನ್ನು ಗ್ರಹಿಸುವಾಗ ಒಂದು ಸ್ಥೂಲ ಸ್ವರೂಪ ಮಾತ್ರ ಸಾಧ್ಯ. ಇದು ಮನಃಶಾಸ್ತ್ರದಲ್ಲೂ ಸರಿ. ಆದ್ದರಿಂದ ಮನೋವಿಜ್ಞಾನದ ಅನುಸರಿಯಾಗಿ ಲೆಕ್ಕಹಾಕಬೇಕಾಗುತ್ತದೆ.
ಮೊದಲನೆಯದಾಗಿ ಮಕ್ಕಳೆಂದರೆ ದೊಡ್ಡವರಲ್ಲ. ನಮ್ಮ ಯಕ್ಷಗಾನದಲ್ಲಿ ಬರುವ ಪ್ರಹ್ಲಾದ, ಲೋಹಿತಾಶ್ವ ಮುಂತಾದವೆಲ್ಲ ಸಣ್ಣವರ ರೂಪದಲ್ಲಿರುವ ದೊಡ್ಡವರೇ ಹೊರತು ಮಕ್ಕಳಲ್ಲ. ಮಕ್ಕಳ ಮಾನಸಿಕ ಸ್ಥಿತಿಯ ರೀತಿಯೇ ಬೇರೆ. ಇಲ್ಲಿ ಬರುವ ಕತೆ, ಹಾಡು, ಕುಣಿತ, ಕನಸು, ಭ್ರಮೆ, ರಂಜನೆ ಇವೆಲ್ಲ ಮಕ್ಕಳ ಮನೋಭೂಮಿಕೆಯ ರಂಜನೀಯ ಸ್ಥಿತಿಯಿಂದ ಪೋಷಣೆಗೊಂಡಿರಬೇಕು. ಹಾಗೆಯೇ ಅದರ ಪ್ರತಿಬಿಂಬ ಗತಿಬಿಂಬ ಕೂಡ ಆಗಿರಬೇಕು. 'ಬುಶ್ಕೋಟು, ಮದುವೆ ಪತ್ತಲ, ಸದಾರಮೆ, ಸತ್ಯಾವಾನ ಸಾವಿತ್ರಿ, ಸಂಗ್ಯಾಬಾಳ್ಯ, ಶೋಕ ಚಕ್ರ ಇಂಥವೆಲ್ಲ ಇಲ್ಲಿ ಸಲ್ಲದು. ಇದು ಪ್ರದರ್ಶನ ದೃಷ್ಟಿಯಿಂದಲೂ ಮಕ್ಕಳ ರಂಗಭೂಮಿಗೆ ಸಲ್ಲದು. ನೋಡುವುದರಿಂದ ಕೆಲ ಅಂಶ ಮಕ್ಕಳಿಗೂ ರಂಜನೆಗೆ ಸಲ್ಲಬಹುದು. ಮಕ್ಕಳು ಮೀಸೆ ಬರೆದೋ, ಸೀರೆ ಉಟ್ಟೋ ಅಭಿನಯಿಸುವದರಿಂದ ದೊಡ್ಡವರಿಗೆ ಒಂದು ನಗೆಯಾಟ ದೊರಕಬಹುದು. ಆದರೆ ಇದು ಅರ್ಥಪೂರ್ಣವಲ್ಲ. ಯಾಕೆಂದರೆ ಇವು ಮಕ್ಕಳ ಮಾನಸಿಕ ಬೆಳವಣಿಗೆ ಹಂತದಲ್ಲಿ ಪ್ರತಿಕ್ರಿಯಿಸಲಾರವು.
ಮಕ್ಕಳು ಎಂದು ನಾವು ನಿರ್ಣಯಿಸುವಲ್ಲೂ ಯಾವ ವಯಸ್ಸಿನ ಮಕ್ಕಳು ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ 'ಮಕ್ಕಳ' ಬೆಳವಣಿಗೆಯಲ್ಲಿ ಅನೇಕ ಹಂತಗಳಿವೆ. ಆಯಾ ಹಂತದ ಬೇಡಿಕೆ ಮತ್ತು ಅರ್ಹತೆ ಬೇರೆ ಬೇರೆಯೇ ಆಗಿರುತ್ತದೆ. ಇದನ್ನು ಗಮನಿಸಿ ಮನೋವಿಜ್ಞಾನದ ನೆರವಿನಿಂದ ಸ್ಥೂಲವಾಗಿ ಹೀಗೆ ವಿಂಗಡಿಸಿಕೊಳ್ಳಬಹುದು.

1) 6 ರಿಂದ 9 ವರ್ಷ
2) 10 ರಿಂದ 13 ವರ್ಷ
3) 14 ರಿಂದ 17 ವರ್ಷ
ಮೊದಲಹಂತದಲ್ಲಿ ಮುಗ್ಧತೆ, ಕ್ರಿಯಾಶೀಲತೆ, ಹಾಡು, ಕುಣಿತ, ಗುಂಪುಕ್ರಿಯೆ, ರಂಜನೆ, ಭ್ರಾಮಕತೆ, ಬಣ್ಣಬೆಡಗು ಸೂಕ್ಷ್ಮವಲ್ಲದ ನಟನೆ ಮುಖ್ಯ. ಕಲ್ಲು, ಮಣ್ಣು, ನೀರು, ಮರ, ಮಳೆ, ಸೂರ್ಯ, ಚಂದ್ರ, ಬೆಕ್ಕು, ಹುಲಿ, ಹಾವು ಇತ್ಯಾದಿಗಳು ಜೀವ ತಳೆದು ಮಾತಾಡಬಲ್ಲವು. ಅವು ಮನುಷ್ಯರೂಪಿ ಪದಾರ್ಥಗಳೂ ಪದಾರ್ಥರೂಪಿ ಮನುಷ್ಯರೋ ಆಗಬಲ್ಲವು. ಒಂದನ್ನೊಂದು ಸ್ಪಂದಿಸಬಲ್ಲವು. ಇಲ್ಲಿ ಲಘು ಸಂಗೀತ ಹಾಡು ಅಪೇಕ್ಷಣೀಯ.
ಎರಡನೆಯ ಹಂತದಲ್ಲಿ ಇವೆಲ್ಲವೂ ಇರುತ್ತದೆ. ಆದರೂ ಇಲ್ಲಿ ವಾಸ್ತವಿಕತೆಯ ಗ್ರಹಿಕೆ ಬೆಳೆದಿರುತ್ತದೆ. ಹೀಗೆ ಮಾಡುವುದಕ್ಕಿಂತ ಹೀಗೆ ಮಾಡಿದರೆ ಚೆನ್ನಲ್ಲವೇ ಎಂಬ ಕುತೂಹಲ. ಮುಖವಾಡಕ್ಕಿಂತ ನೇರ ಪ್ರದರ್ಶನ ಇಚ್ಛೆ, ಪ್ರದರ್ಶನದಲ್ಲಿ ಹೆಚ್ಚು ಶಿಸ್ತು ಇವೆಲ್ಲ ಇಲ್ಲಿ ಮುಖ್ಯ. ನಟನೆ ಕೂಡ ಕಲಾತ್ಮಕತೆ, ಸೂಕ್ಷ್ಮತೆಯ ಕಡೆ ಒಲಿಯುತ್ತದೆ. ಭ್ರಾಮಕತೆಯಿದ್ದು ತಾಕರ್ಿಕ ಮನೋಭಾವ ಬೆಳೆದಿರುತ್ತದೆ. ಕತೆಯಲ್ಲಿ (ವಸ್ತುವಿನಲ್ಲಿ) ಒಂದು ಸುಸಂಬದ್ಧತೆ ಇಲ್ಲಿಯ ನಿರೀಕ್ಷೆ.
ಮೂರನೇ ಹಂತದಲ್ಲಿ ಇನ್ನೂ ಪ್ರೌಢಾವಸ್ಥೆ. ಹಿಂದಿನ ಎಲ್ಲ ರಂಜನೀಯ ಅಂಶ ಇಲ್ಲಿಯೂ ಇರುತ್ತದೆ. ಆದರೆ ಬಣ್ಣ ಬೆಡಗಿನಕ್ಕಿಂತ ಚಿಂತನೆ, ಗಾಂಭೀರ್ಯದ ಕಡೆ ಒಲವು ಜಾಸ್ತಿ. ವಾಸ್ತವದ ಪ್ರಜ್ಞೆಯೊಂದಿಗೆ ಆದರ್ಶವಾದಿ ಮತ್ತು ಸಾಹಸದ ಕನಸು ಗರಿಗೆದರುತ್ತದೆ. ಕಲಾತ್ಮಕತೆಯಲ್ಲಿ ಹೆಚ್ಚು ಸ್ವಾತಂತ್ರ್ಯ, ವೈಯುಕ್ತಿಕ ಮೆಚ್ಚಿಕೆಯೆಲ್ಲ ಇಲ್ಲಿ ಜಾಸ್ತಿ. ರಸಭಾವದ ದೃಷ್ಟಿಯಿಂದ ವೀರ, ರೌದ್ರ, ಶಾಂತ, ಕರುಣೆ ಇಂಥವುಗಳ ಬೆಳವಣಿಗೆ.

ಈ ಹಂತದ ಹುಡುಗಿಯರ ಮನೋಭಾವದಲ್ಲಿ ಇನ್ನೂ ಹೆಚ್ಚಿನ ರಸಾತ್ಮಕತೆ ಕಾಣಲು ಸಾಧ್ಯ. ಶೃಂಗಾರ ರಸದ ಪರಿಭಾವನೆಯ ಪಟುತ್ವ ಕಾಣಿಸಿಕೊಳ್ಳುತ್ತದೆ. ಶೀಲಾಶ್ಲೀಲಗಳ ದೃಷ್ಟಿಯಿಂದ ಸಾಮಾಜಿಕ ಅಪೇಕ್ಷೆಯ ಅರಿವು ಹೆಚ್ಚಿರುತ್ತದೆ. ಹಾಗೆಯೇ ವಾಸ್ತವತೆಯನ್ನು ಮೀರುವ ಅಲ್ಲಿ ನಿರುಂಬಳವಾಗುವ ಆಕಾಂಕ್ಷೆ ಹೆಚ್ಚಿರುತ್ತದೆ. ಇಲ್ಲಿ ಹೆಚ್ಚು ಕಲಾತ್ಮಕತೆಯ ಅಪೇಕ್ಷೇ ಕೂಡ ಇರುತ್ತದೆ. ಭಾವಸ್ಪಂದನ ಜಾಸ್ತಿ ಹಾಗೂ ಕಲ್ಪನಾವಿಹಾರ.
ಹಿಂದೆ 'ಮಕ್ಕಳು' ದೊಡ್ಡವರಲ್ಲ ಎಂದೇ ಹೇಳಿದೆ. ಹಾಗಿದ್ದಾಗ
ಲೂ ಅವು ಬಿಡಿಬಿಡಿಯಾದ ಪ್ರತ್ಯೇಕ ಘಟಕಗಳಲ್ಲ. ಅದು ಕೈಯಲ್ಲಿ ಕೈಸೇರಿಕೊಂಡ ಮಾನವ ಸರಪಳಿ. ಒಂದು ಹಂತದ ಬುತ್ತಿ ಮತ್ತೊಂದು ಹಂತದಲ್ಲಿಯೂ ಸಲ್ಲುತ್ತದೆ. ಅದರಿಂದ ಪುಷ್ಟಿಗೊಂಡು ಮುಂದಿನ ಹಂತ ಸಿದ್ಧವಾಗುತ್ತದೆ. 'ಮಗುವೆ ಮಾನವನ ತಂದೆ' ಎಂಬ ವಡ್ಸ್ವತರ್್ ಕವಿಯ ಮಾತು ಕೇವಲ ಕವಿತೆಯ ಮಾತಲ್ಲ. ಮನೋವೈಜ್ಞಾನಿಕವಾಗಿ ಮತ್ತು ಸಾಮಾಜಿಕ ಮನೋಜ್ಞಾನದ ದೃಷ್ಟಿಯಿಂದಲೂ ಅರ್ಥಪೂರ್ಣವಾಗಿದೆ. ಆದ್ದರಿಂದ ಇಲ್ಲಿಯ ವಸ್ತುವಿನ ಆಯ್ಕೆ ಕಲ್ಲಲ್ಲ. ಹರಿವ ಹಳ್ಳದ ನೀರೂ ಅಲ್ಲ. ಅದು ಉಕ್ಕಿನ ಹಾಗೆ ಸೆಟೆದು ಮೇಣದ ಹಾಗೆ ಮಿದುವಾಗಬಲ್ಲದು. ಮನಸ್ಸಿನಲ್ಲಿ ಮೂಡಿಸಿಕೊಳ್ಳುವ ಶಕ್ತಿ ಒಳಗಿನದಾದರೆ, ಮೂಡಿಸುವ ಪ್ರಭಾವ ಹೊರಗಿನದು. ಅಂದರೆ ಆನುವಂಶಿಕ ಒಲವು ಚೆಲುವು ಮತ್ತು ನಿಲುವು ವೈಶಿಷ್ಟ್ಯ ಪೂರ್ಣವಲ್ಲದ್ದು, ದುರ್ಬಲವಾದುದು, ಅಸ್ಪತಂತ್ರವಾದುದು ಎಂದಲ್ಲ. ಆದರೆ ಆ ಪರಿವರ್ತನೀಯವಾದ ಸ್ಥಾವರ ಅಲ್ಲವೆಂದು ಮಾತ್ರ. ಆದ್ದರಿಂದ ಶೈಕ್ಷಣಿಕ ಮನೋವಿಜ್ಞಾನದ ನೆರವು ಇಲ್ಲಿ ಸಾಪೇಕ್ಷಣಿಯವಾದುದು.

ಆದರ್ಶವನ್ನು ಬೆಳೆಸುವುದಕ್ಕಾಗಿ ಮಕ್ಕಳ ರಂಗಭೂಮಿ ಇರಬೇಕೆಂದು ನಾನು ಹೇಳುತ್ತಿಲ್ಲ. 'ವಿಜ್ಞಾನಕ್ಕಾಗಿ ವಿಜ್ಞಾನ ಅಲ್ಲ' ಕಲೆಗಾಗಿ ಕಲೆ ಅಲ್ಲ. ಅದು ಇಡಿಯಾಗಿ ಮಾನವತೆಯ ಆವಿಭರ್ಾವಕ್ಕಾಗಿ, ಹೊರೆಯುವುದಕ್ಕಾಗಿ ಇರಬೇಕು. ನಾವು ಇಂದು 'ನಾನು' ಕ್ಕಿಂತ 'ನಾವು' ಎಂಬ ಪ್ರಜ್ಞೆಯ ಕಡೆಗೆ ಸಾಗುತ್ತಿದ್ದೇವೆ. ಈ 'ನಾವು' ಅಲ್ಲಿ 'ನಾನು' ಕೂಡ ಅಷ್ಟೇ ಮುಖ್ಯ. ಇದರ ಸಮತೋಲನ ಸಂಕೀರ್ಣವಾದುದು ಎಂದು ಒಪ್ಪಿದಾಗಲೂ ನಿರಾಕರಣೆಯದಲ್ಲ. ಗಾಂಧಿಯಂತೆ ಅನೇಕ ಜನ ಶ್ರವಣಕುಮಾರರ ಚರಿತ್ರೆಯನ್ನು ಓದಿದ್ದಾರೆ. ಹರಿಶ್ಚಂದ್ರ ನಾಟಕ ನೋಡಿದ್ದಾರೆ. ಆದರೆ ಯಾರೂ 'ಗಾಂಧಿ' ಆಗಲಿಲ್ಲ. ಆದರೆ ಗಾಂಧಿ ಮಾತ್ರ 'ಗಾಂಧಿ' ಆದರು. ಇದು ಅವರ ವ್ಯಕ್ತಿ ವೈಶಿಷ್ಟ್ಯ. ಆದರೆ ಗಾಂಧಿ 'ಗಾಂಧಿ' ಆಗುವಲ್ಲಿ ಭಾಗವಹಿಸಿದ್ದು ಹದಗೊಳಿಸಿದ್ದು ಸಮಾಜ. ಆದ್ದರಿಂದ ಮಕ್ಕಳ ನಾಟಕ ಮತ್ತು ರಂಗಭೂಮಿ ಕೂಡ ಕಾಲದ ಅವಶ್ಯಕತೆಯನ್ನು ನಿರಾಕರಿಸಬಾರದು. ಹಾಗೆ ನಿರಾಕರಿಸಿದರೆ ಅದಕ್ಕೊಂದು ವೈಶಿಷ್ಟ್ಯವೇ ಇರುವುದಿಲ್ಲ. ಆದ್ದರಿಂದ ಪ್ರಜಾಪ್ರಭುತ್ವದ ವಿಕಾಸಕ್ರಿಯೆಯಲ್ಲಿ ಇವೆಲ್ಲ ಸೇರಬೇಕಾಗಿದೆ. ಸಮಾಜವಾದಿ ಮನೋಭಾವದ ವಿಕಸನ ಶೀಲತೆ ಇಂದಿನ ಸಾಮಾಜಿಕ ಅವಶ್ಯಕತೆ. ಸೂತ್ರ ರೂಪವಾಗಿ ಹೇಳುವುದಾದರೆ ನಮ್ಮ ಮುಂದೆ ಎರಡು ಸಾಹಸ ಆದರ್ಶಗಳಿವೆ. ಒಂದು : ಗಾಂಧಿ, ನೆಹರು, ಮೌಲಾನಾ ಅಬುಲ್ ಕಲಾಮ್ ಆಝಾದ್, ಅರುಣ ಅಸಫ್ ಆಲಿ, ಸುಭಾಶ್ಚಂದ್ರ ಭೋಸ್, ಭಗತ್ಸಿಂಗ್, ಮದರ್ ತೆರೇಸಾ, ಎ.ಕೆ. ಗೋಪಾಲನ್, ವಿವೇಕಾನಂದ, ನಾರಾಯಣ ಗುರು ಹೀಗೆ ಹೀಗೆ. ಎರಡು : ಸುಖರಾಮ್, ಜಯಲಲಿತಾ, ಚಂದ್ರಸ್ವಾಮಿ, ದಾವೂದ್, ಹರ್ಷದ್ ಮೆಹೆತಾ, ವೀರಪ್ಪನ್ ಹೀಗೆ ಹೀಗೆ. ನಮ್ಮ ಮಕ್ಕಳ ಮುಂದೆ ಇಡಬೇಕಾದ ಮಾದರಿ ಯಾವುದೆಂಬುದರ ಬಗ್ಗೆ ಜಗಳ ಇರಲಾರದು ಅಂದುಕೊಂಡಿದ್ದೇನೆ. ರಂಗಭೂಮಿ ಕೂಡ ಶೈಕ್ಷಣಿಕ ಎನ್ನುವ ನಿಲುವು ಇಲ್ಲಿಯದು.
ಇಲ್ಲಿಯವರೆಗೆ ಪ್ರಸ್ತಾಪಿತವಾದ ಮಕ್ಕಳ ರಂಗಭೂಮಿಯ ವಸ್ತುವನ್ನು ನಾವು ಗಮನಿಸಿದಾಗ ಮಧ್ಯಮ ವರ್ಗದ ಒಲವು ಚೆಲುವುಗಳ ಬಗ್ಗೆ ಹೆಚ್ಚು ಗಮನಿಸಿದ್ದು ಕಂಡು ಬರುತ್ತವೆ. ಆದರೆ ಕೆಳಸ್ಥರದ ಮಕ್ಕಳ ಮನೋಭೂಮಿಕೆಯ ಚಿತ್ರಣ ಹಾಗೂ ಭಾಗವಹಿಸುವಿಕೆ ನಮ್ಮ ನಿಲುಕಿನ ಹೊರಗೇ ಇದೆ. ಕೆಳಜಾತಿಯ, ಕೆಳವರ್ಗದ, ಬಾಲಕಾಮರ್ಿಕರ, ಅಸ್ಪೃಶ್ಯ ಮತ್ತು ಕೊಳಚೆ ಮಕ್ಕಳ ರಂಗಭೂಮಿಗೆ ವಿಶೇಷವಾದ ಆಹ್ವಾನವಾಗಿದೆ. ಅದರ ಅಭ್ಯಾಸ ಮತ್ತು ಪ್ರಯೋಗ ಅದ್ಭುತ ಲೋಕವೇ ಹೊರತಂದೀತು. ಸಾಮಾಜಿಕವಾಗಿಯಂತೂ ಅದರ ಮಹತ್ವ ಇಷ್ಟು ಎಂದು ಹೇಳಲಸಾಧ್ಯ.
'ಮಕ್ಕಳ ರಂಗಭೂಮಿ'ಯ ಕುರಿತಾಗಿ ಮಾತನಾಡುವಾಗ ನಾವು ಇನ್ನೊಂದು ಬಹಳ ಮಹತ್ವದ ಪ್ರಶ್ನೆಯ ಕಡೆ ಗಮನಿಸಬೇಕು. ಪ್ರಶ್ನೆ ಇಷ್ಟೇ, ಮಕ್ಕಳ ರಂಗಭೂಮಿ ಮಕ್ಕಳಿಂದಲೆ ನಿರ್ವಹಿಸಲ್ಪಡಬೇಕೋ ಅಥವಾ ಮಕ್ಕಳಿಗಾಗಿ ದೊಡ್ಡವರಿಂದ ನಿರ್ವಹಿಸಲ್ಪಡುತ್ತದೆಯೋ? ಪಾತ್ರ ನಿರ್ವಹಣೆಯಲ್ಲಿ ದೊಡ್ಡವರ ಪಾತ್ರವನ್ನು ಮಕ್ಕಳು ನಿರ್ವಹಿಸಬಹುದೇ?

ಇದಕ್ಕೆ ಎರಡೂ ರೀತಿಯಲ್ಲಿ ಉತ್ತರ ಸಾಧ್ಯ. ಮಕ್ಕಳೇ ಮಕ್ಕಳ ರಂಗಭೂಮಿಯ ನಿವರ್ಾಹಕರು. ಅಂದರೆ ಕೆಲವು ತಾಂತ್ರಿಕ ವ್ಯವಸ್ಥೆಯನ್ನು ಹೊರತುಪಡಿಸಿ. ಅದರಂತೆ ದೊಡ್ಡವರು ಮಕ್ಕಳಿಗಾಗಿ ರಂಗಭೂಮಿಯನ್ನು ನಿರ್ವಹಿಸಬಹುದು. ಆದರೆ ಮಕ್ಕಳೇ ಪಾತ್ರ ನಿರ್ವಹಣೆ, ಹಾಡು ಇತ್ಯಾದಿ ಕಲೆಗೆ ಸಂಬಂಧಿಸಿದ ವಿಷಯದಲ್ಲಿ ಭಾಗವಹಿಸುವುದು ಹೆಚ್ಚು ಅಪೇಕ್ಷಣೀಯ ಮತ್ತು ಪರಿಪೂರ್ಣ ಕೂಡ. 'ಕಲೆ' ಎಂಬುದು ಕಲಿತದ್ದು ಕೂಡ ಹೌದು. ಅದೊಂದು ಯಶಸ್ವೀ ಅನುಕರಣೆ. ಹಾಗಿರುವಾಗ ಮಕ್ಕಳೇ ದೊಡ್ಡವರ ಪಾತ್ರವನ್ನು ಅಜ್ಜ, ರೈತ. ಆರಕ್ಷಕ, ರಾಜ ಇತ್ಯಾದಿ. ವಹಿಸಬಹುದು ಅದನ್ನು ಯಶಸ್ವಿಗೊಳಿಸಬಹುದು. ಮನೋವಿಜ್ಞಾನದ ದೃಷ್ಟಿಯಿಂದ ತೀರ ಅಭಾಸಪೂರ್ಣವಾಗಿ ಮಾತ್ರ ಇರಬಾರದು. ಅಷ್ಟೇ, ದೊಡ್ಡವರ ಪಾತ್ರವನ್ನು ದೊಡ್ಡವರೇ ವಹಿಸಬಹುದು.

ಇನ್ನೊಂದು ವಿಷಯವನ್ನು ಇಲ್ಲಿಯ ನಿದರ್ೆಶಕರು ಗಮನಿಸಬೇಕಾಗಿದೆ. ನಾವು ಮಕ್ಕಳಿಗೆ ಕಥೆಕೊಟ್ಟು ಅಥವಾ ಕೊಡದೆ ಅವರನ್ನು ಅಭಿನಯಕ್ಕೆ ಹಚ್ಚಿ ನೋಡಿದ್ದೇವೆಯೇ? ರಂಗಕ್ರಿಯೆ ಕುರಿತು ಸ್ವಾತಂತ್ರ್ಯ ಕೊಟ್ಟು ಪರಿಣಾಮ ನೋಡಿದ್ದೇಯೇ? ನಮ್ಮ ನಿದರ್ೆಶನದ ಕುರಿತು ಅವರ (ವಿವಿಧ ಹಂತಕ್ಕೆ ತಕ್ಕಾಗಿ) ಅಭಿಪ್ರಾಯ ಸಂಗ್ರಹಿಸಿದ್ದೇವೆಯೇ?
ಇದು ಮುಖ್ಯ ಆದರೂ ರಂಗಭೂಮಿ ಕಲೆಗೆ ಸಂಬಂಧಿಸಿರುವಂತೆ ತರಬೇತಿ, ನಿದರ್ೆಶನ ಅವಶ್ಯ.
ನಮ್ಮ ಜಿಲ್ಲೆಯ ಕುರಿತಾಗಿ ಹೇಳುವುದಾದರೆ 'ಮಕ್ಕಳ ರಂಗಭೂಮಿ'ಯ ಕೆಲಸ ಬಹಳ ಆಗಿದೆ. ಆದರೆ ಅದರ ದಾಖಲೆ ಮತ್ತು ವಿಶ್ಲೇಷಣೆ ಆದದ್ದು ಮಾತ್ರ ಏನೂ ಸಾಲದು. ನಮ್ಮಲ್ಲಿ ರಂಗಸಂಗದ ಗೆಳೆಯರನ್ನೊಳಗೊಂಡು ಕಿರಣ ಭಟ್ಟ, ಜಿ.ಎಂ. ಹೆಗಡೆ, ವಿ. ಎಂ. ಹೆಗಡೆ, ಚಂದ್ರು ಉಡುಪಿ, ಶ್ರೀಪಾದ ಭಟ್ಟ, ಎಸ್. ಪಿ. ಹೆಗಡೆ, ಕೆ. ಆರ್. ಪ್ರಕಾಶ ಇನ್ನೂ ಅನೇಕರು ಮಕ್ಕಳ ನಾಟಕ ಆಡಿಸಿದ್ದಾರೆ. ಒಟ್ಟಾರೆಯಾದ ಮಕ್ಕಳ ರಂಗಭೂಮಿಗೆ ಅವರ ಕೊಡುಗೆ ಗಣನೀಯ. ಅದರಲ್ಲೂ ಗ್ರಾಮೀಣ ಪ್ರದೇಶದ ವಿಶಿಷ್ಟವಾದ ಅನುಭವ ಅವರದ್ದು. ಸಾಮಾಜಿಕರ ಮಧ್ಯೆ, ಶಿಕ್ಷಕರ ಮಧ್ಯೆ ಮತ್ತು ಮುಖ್ಯವಾಗಿ ಮಕ್ಕಳ ಮಧ್ಯೆ ಅವರ ಅನುಭವ ಪ್ರತ್ಯಕ್ಷ ಮತ್ತು ಪ್ರಾಯೋಗಿಕವಾದದ್ದು. ಅದನ್ನು ಚಾಚೂ ತಪ್ಪದೆ ಟಿಪ್ಪಣಿ ಮಾಡಬೇಕು. ಅದರ ವಿಶ್ಲೇಷಣೆಯೂ ರಂಗಾಸಕ್ತರ ಮಧ್ಯೆ ನಡೆಯಲಿ. ಇದರಿಂದ ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತವೆ. ಹಾಗೆಯೇ ಮಕ್ಕಳ ರಂಗಭೂಮಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆಯಾಗುತ್ತದೆ.

ಕೊನೆಯದಾಗಿ ಖಲೀಲ್ ಗಿಬ್ರನ್ನ ಒಂದು ಉಕ್ತಿಯನ್ನು ಹೇಳಬಯಸುತ್ತೇನೆ.
'ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಜೀವನ ಸ್ವ ಪ್ರೇಮದ ಪುತ್ರ ಪುತ್ರಿಯರವರು
ಅವರು ನಿಮ್ಮ ಜೊತೆಗೆ ಇರುವುದಾದರೂ
ಅವರು ನಿಮಗೆ ಸೇರಿದವರಲ್ಲ
ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು
ಆದರೆ ನಿಮ್ಮ ಆಲೋಚನೆಗಳನ್ನಲ್ಲ
ಅವರಂತಿರಲು ನೀವು ಪ್ರಯತ್ನಿಸಬಹುದು
ಆದರೆ ಅವರನ್ನು ನಿಮ್ಮಂತೆ ಮಾಡದಿರಿ
ಜೀವನ ಹಿಮ್ಮುಖವಾಗಿ ಹರಿಯದಿರಲಿ'

ಗಿರಿ ಪಿಕಳೆ avara ಮಕ್ಕಳ ಪದಗಳು- R V Bhandari

ಮಕ್ಕಳ ಪದಗಳು
ಗಿರಿ ಪಿಕಳೆ ಎಂದರೆ ಖ್ಯಾತ ಕಾಮರ್ಿಕ ಧುರೀಣ ಮತ್ತು ಶೈಕ್ಷಣಿಕ ವ್ಯಕ್ತಿ. ಈ ಶೇಷಗಿರಿ ಪಿಕಳೆ ಅಂಕೋಲದವರು. ತಾವು ಉದ್ಯೋಗದಿಂದ ಕವಿಗಳಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಾದರೆ ಈ ರೈತ-ಕಾಮರ್ಿಕ ಧುರೀಣನಿಗೂ ಈ ಮಕ್ಕಳ ಪದಗಳಿಗೂ ಎಲ್ಲಿಗೆ ಎಲ್ಲಿಯ ಸಂಬಂಧ! ಕೂಗು, ಸ್ಲೋಗನ್, ಹೊರಡಲಿ ಜಾಥಾವೆನ್ನುವ ಕಾಮರ್ಿಕ ಕಠೋರತೆ ಎಲ್ಲಿ, ಮಕ್ಕಳು ಮನಸ್ಸಿಗೆ ಮಿಡಿಯುವ ಮನಸ್ಸೆಲ್ಲಿ? ಆದರೆ ಇಲ್ಲೇ ಇರುವುದು ಶೇಷಗಿರಿ ಪಿಕಳೆಯವರ ವ್ಯಕ್ತಿತ್ವದ ವೈಶಿಷ್ಟ್ಯ. ಒಬ್ಬ ನಿಜ ನೇತಾರನ ಯೋಚನೆ ಕೇವಲ ವರ್ತಮಾನವಲ್ಲ. ಅದು ಭವಿಷ್ಯತ್ತನ್ನು ಸಮೃದ್ಧ ಕನಸನ್ನಾಗಿ ಕಟ್ಟಿಕೊಳ್ಳುವಂತಹದು. ಶೇಷಗಿರಿ ಪಿಕಳೆ ಉತ್ತರ ಕನ್ನಡ ಜಿಲ್ಲೆಯ ರೈತ ಅಂದೋಲನ ಸಂದರ್ಭದಲ್ಲಿ ಅತ್ಯಂತ ವೀರ ಮತ್ತು ತ್ಯಾಗದಿಂದ ಹೋರಾಡಿದರು. ಉತ್ತರ ಕನ್ನಡದಲ್ಲಿ ರೈತ ಹೋರಾಟವನ್ನು, ಶೈಕ್ಷಣಿಕ ಆಂದೋಲನವನ್ನು ಶುರುಮಾಡಿ ಬೆಳೆಸಿದವರಲ್ಲಿ ಡಾ. ದಿನಕರ ದೆಸಾಯಿಯವರ ಸಂಗಡ ಶ್ರಮಿಸಿದವರು.

ಹೀಗಾಗಿ ಪಿಕಳೆಯವರು ಶೈಕ್ಷಣಿಕ ವ್ಯಕ್ತಿ. ಈ ವ್ಯಕ್ತಿಗೆ ಬಾಲವಾಡಿ, ಪ್ರಾಥಮಿಕ ಶಾಲೆಯ ಮಕ್ಕಳ ಮಧ್ಯೆಯೇ ವೇಳೆ ಕಳೆಯುವ ಒತ್ತಡ. ಆದ್ದರಿಂದ ಮಕ್ಕಳ ಶೈಕ್ಷಣಿಕ ಮನೋವಿಜ್ಞಾನಿ ಕೂಡ. ಈ ಹಿನ್ನೆಲೆಯಲ್ಲಿ ಪಿಕಳೆಯವರ ಮಕ್ಕಳ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ನವೀನ ಪ್ರಯೋಗವಾಗಿದೆ. ಇಂಥ ಪ್ರಯೋಗ ಮತ್ತೆಲ್ಲೂ ನಡೆದಿಲ್ಲ.

ಪಿಕಳೆಯವರು ಚಿಕ್ಕ ಮಕ್ಕಳ ಸಹಜ ವರ್ತನೆಯನ್ನು ಅವರಲ್ಲಿ ಬೆರೆತು ಮತ್ತು ಮರೆಯಾಗಿ ನಿಂತು ನಿರೀಕ್ಷಿಸಿದರು. ಅವರ ಶಾಲೆಯ ಶಿಕ್ಷಕರು ಮಕ್ಕಳ ಸಾಹಿತ್ಯದ ಕೊರತೆ ಎಂದಾಗ, ಈ ನಿರೀಕ್ಷಣೆಯ ಹಿನ್ನೆಲೆಯಲ್ಲಿ ಪದ ರಚಿಸಿದರು.
ಅದನ್ನು ಮತ್ತೆ ಮಕ್ಕಳ ಮಧ್ಯ ಹಾಡಿದರು. ಹಾಡಿಸಿದರು. ಅವರ ಪ್ರತಿಕ್ರಿಯೆ ಪಡೆದರು. ಭಾಷೆ ಭಾವಗಳ ಅರಿತು ಮತ್ತೆ ಮರುರಚನೆ ಮಾಡಿದರು. ಮತ್ತೆ ವಾಚಿಸಿದರು. ಇಂಥ ವಾಚನದ ಮಧ್ಯ ಮೂಡಿ ಬಂದುದು ಈ ಪುಸ್ತಕದ ಮುಖಪುಟ ಮತ್ತು ಒಳ ಪುಟಗಳಲ್ಲಿಯ ಮತ್ತು ಒಳಚಿತ್ರ. ಈ ಚಿತ್ರ ಬಿಡಿಸಿದ ಹುಡುಗ ಈಗ ಮೇಲಿನ ತರಗತಿಗೆ ಹೋಗಿದ್ದಾನೆ. ಹೀಗೆ ಈ ಕಾಮರ್ಿಕ ಧುರೀಣ ಭವಿಷ್ಯದ ಕನಸು ಮಕ್ಕಳಲ್ಲಿ ಗುಡಿ ಕಟ್ಟಿದೆ.

ಕವಿ ಮನಸ್ಸಿನಲ್ಲಿ ತುಂಬಿರುವ ಪ್ರೇರಣೆಯಿಂದ ಹುಟ್ಟಿದ ಕವನಗಳು ಇವಲ್ಲ. ಕಾವ್ಯ ಸೌರಭ, ಲಾವಣ್ಯಗಳು ಈ ಚಿಕ್ಕ ಕವನಗಳಲ್ಲಿ ಇರುವುದಿಲ್ಲವೆಂದು ನನಗೆ ಗೊತ್ತು ಎಂದು ತಾವೇ ಹೇಳಿಕೊಂಡಿದ್ದಾರೆ. ಆದರೆ ಗೌರೀಶ ಕಾಯ್ಕಿಣಿಯವರು ಗುರುತಿಸಿರುವಂತೆ ಇದು ಕೆಲ ಕವನಗಳಲ್ಲಿ ಹೌದು, ಆದರೆ ಪುಟ್ಟ ಟಿ.ವಿ. ಪುಟ್ಟನ ಟೆಂಪೂ, ನನ್ನ ಮನೆ, ರವಿ ಬಂದ, ಗುಬ್ಬಚ್ಚಿ ಸಂವಾದ, ಕನ್ನಡಿಯ ಮುಂದೆ, ಕಪ್ಪೆಯ ಮದುವೆ, ಕಾಗಣ್ಣದಂತಹ ಕವನಗಳಿಗೆ ಸಂಬಂಧವಿಲ್ಲ. ಕಾವ್ಯದ ಕಲ್ಪನೆ ಮತ್ತು ವಾಸ್ತವ ಹದವಾಗೇ ಬೆರೆತು ಬಂದ ಕವಿತೆಗಳಿವು. ಈ ಎಲ್ಲದರ ಹಿಂದೆ ಒಂದು ಸಮಾಜವಾದಿ ಎಚ್ಚರವಿದೆ. ಅದು ಪಕ್ಷದ್ದಲ್ಲ, ವೈಜ್ಞಾನಿಕ ಮಾನವತೆಗೆ ಬದ್ಧತೆ ಹೊಂದಿದ್ದು, ಇಂಥ ದಿಸೆಯಲ್ಲಿ ಒಂದು ಹೊಸ ಪ್ರಯೋಗ ಕೂಡಾ ಆಗಿದೆ.

ಅನೇಕ ಪದ್ಯಗಳು ಆಹ್ಲಾದಕರವಾಗಿ ಮಕ್ಕಳ ಮನಸ್ಸನ್ನು ಮುದಗೊಳಿಸಬಲ್ಲವು. 'ಅಕ್ಕವರ' ಮಗ ಒಂದು ವಿದ್ರಾವಕ ಕವಿತೆ ಗಂಡ ಹೆಂಡರಿಬ್ಬರೂ ದುಡಿಯುತ್ತಿರುವವರೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮೂಡಿ ಬಂದ ಹೊಸ ಕವಿತೆ ಇದು. ಇದನ್ನು ದೊಡ್ಡವರು ಓದಬೇಕು.

ಹೀಗೆ ವೈಜ್ಞಾನಿಕಕ್ಕೊಳಪಟ್ಟು ಒಳ್ಳೆಯ ಮಕ್ಕಳ ಕವಿತೆಯನ್ನು ಕೊಡುವ ಸಂಕಲನ 'ಮಕ್ಕಳ ಪದಗಳು'.
* ಜನಮಾಧ್ಯಮ, ಸಿಸರ್ಿ 7.1.1999

ಪ್ರಾಥಮಿಕ ಶಾಲೆಗಳಲ್ಲಿ ಕನ್ನಡವನ್ನು ಹೇಗೆ ಉಳಿಸಬೇಕು? ಬೆಳೆಸಬೇಕು? R V Bhandari

 ಪ್ರಾಥಮಿಕ  ಶಾಲೆಗಳಲ್ಲಿ  ಕನ್ನಡವನ್ನು  ಹೇಗೆ ಉಳಿಸಬೇಕು? ಬೆಳೆಸಬೇಕು?

ನಿ ನಿ ಕನ್ನಡ ಭಾಷೆ ಕನರ್ಾಟಕದ ರಾಜ್ಯ ಭಾಷೆ. ಹಾಗೆಯೇ ಅದು ಇಲ್ಲಿಯ ಮುಖ್ಯವಾದ ವ್ಯಾವಹಾರಿಕ ಭಾಷೆಯೂ ಆಗಿದೆ. ಅದು ಕನರ್ಾಟಕದ ಹೆಚ್ಚಿನ ಶಾಲೆಗಳಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗಿನ ಶಿಕ್ಷಣ ಮಾಧ್ಯಮವಾಗಿದೆ ಕೂಡ. ಒಂದು ಭಾಷೆ ವ್ಯಾವಹಾರಿಕ ಮಾಧ್ಯಮವಾಗುವುದು ಎಂದರೆ ಆ ಭಾಷೆಯ ಮುಖಾಂತರ ನಮ್ಮ ಗ್ರಹಿಕೆಯ ಶಕ್ತಿ, ವ್ಯಕ್ತಿತ್ವದ ಬೆಳವಣಿಗೆ ಮತ್ತು ಅಭಿವ್ಯಕ್ತಿಯ ಸೂಕ್ಷ್ಮತೆಯನ್ನು ಸಾಧಿಸುವುದೇ ಆಗಿದೆ. ಒಟ್ಟಾರೆಯಾಗಿ ಭಾಷೆ ನಮ್ಮ ಇಡಿಯಾದ ಬೆಳವಣಿಗೆಗೆ ಮೂರ್ತಸ್ವರೂಪಿಯಾಗಿದೆ.

ಕನ್ನಡ ಮಾಧ್ಯಮದ ಶಾಲೆಗಳಲ್ಲಿ, ಅದರಲ್ಲೂ ನನ್ನ ಅನುಭವದ ಖಾಸಾತನಕ್ಕೆ ಬಂದಂತೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಗಮನಾರ್ಹವಾಗಿ ಕುಸಿದಿದೆ. ಇದಕ್ಕೆ ಕೇವಲ 'ಆಂಗ್ಲ ಮಾಧ್ಯಮ ವ್ಯಾಮೋಹ' ಎಂದು ಒಂದೇ ಮಾತಿನಲ್ಲಿ ಹೇಳುವುದೂ ಈಗ ಸಾಮಾನ್ಯವೂ ಸುಲಭವೂ ಆಗಿಬಿಟ್ಟಿದೆ. ಇದು ಸರಿಯಲ್ಲ. ಅದಕ್ಕೆ ಇದೊಂದೇ ಕಾರಣವೂ ಅಲ್ಲ. ಅನೇಕ ಕಾರಣಗಳು ಬೇರೆಯೇ ಇವೆ. ವೃಥಾ ಆರೋಪ ಪಟ್ಟಿ ಮಾಡುವಂತಿಲ್ಲ. ಒಟ್ಟಿನಲ್ಲಿ ಕನ್ನಡ ಭಾಷೆಯ ಸ್ಥಿತಿ-ಗತಿ ನಿರಾಶಾದಾಯಕವಾಗಿದೆ. ಹಾಗೆಂದು ಇದು ಸುಧಾರಿಸಲು ಅಸಾಧ್ಯವಾದುದೇನೂ ಅಲ್ಲ ಅಥವಾ 'ಅಸಾಧ್ಯ'ವೆಂದು ಕೈಚೆಲ್ಲಿ ಕುಳಿತುಕೊಳ್ಳುವಂತೆಯೂ ಇಲ್ಲ. ಬದಲಾವಣೆ, ಸುಧಾರಣೆ, ಸತ್ತ್ವಭರಿತ ಭಾಷಾ ಬೆಳವಣಿಗೆ, ನಾವು-ನೀವು ಮುಖ್ಯವಾಗಿ ಶಾಲೆಗಳ ಉಪಾಧ್ಯಾಯರುಗಳು ಮನಸ್ಸು ಮಾಡಿದರೆ ಖಂಡಿತ ಸಾಧ್ಯ. ಆ ದಿಕ್ಕಿನಲ್ಲಿ ನಾನು ಕನ್ನಡ ಶಾಲಾ ಶಿಕ್ಷಕನಾಗಿ ದುಡಿದ ಆಯುಷ್ಯದ, ಅನುಭವದ ಹಿನ್ನೆಲೆಯಲ್ಲಿ ಕೆಲವು ಸೂಚನೆಗಳನ್ನೂ, ಮಾರ್ಗಗಳನ್ನೂ, ಉಪಾಯಗಳನ್ನೂ ಇಲ್ಲಿ ಸೂಚಿಸಬಯಸುತ್ತೇನೆ.

ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯದ ತನಕದ ಅಧ್ಯಾಪಕರು ಸಾಮಾನ್ಯವಾಗಿ ಗುರುತಿಸುವುದೇನೆಂದರೆ-'ವಿದ್ಯಾಥರ್ಿಗಳು ಬರವಣಿಗೆಯಲ್ಲಿ ಗಣನೀಯವಾಗಿ ಕಾಗುಣಿತ, ಅಲ್ಪ ಪ್ರಾಣ, ಮಹಾ ಪ್ರಾಣ ಮತ್ತು ಹ್ರಸ್ವ, ದೀರ್ಘ ತಪ್ಪು ಮಾಡುವಿಕೆ. ಇದನ್ನು ಆರಂಭದಲ್ಲಿಯೇ ತಿದ್ದ ಬೇಕಿತ್ತು. ಹಾಗೆ ಮಾಡದಿರುವುದೇ ಇದಕ್ಕೆ ಕಾರಣ' ಎನ್ನುವುದು ಅವರ ವಾದ. ಇದು ಸತ್ಯವೂ ಹೌದು. ಆದರೆ ತಿದ್ದುವಿಕೆ ಕೇವಲ ಪ್ರಾಥಮಿಕ ಹಂತದ ಕ್ರಿಯೆ ಮಾತ್ರವಲ್ಲ. ಅದು ನಿರಂತರವಾಗಿ ಸಾಗಬೇಕಾದ ಪ್ರಕ್ರಿಯೆಯೂ ಹೌದು.

ಈ ತಪ್ಪುಗಳಿಗೆ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಕೇಳಿದರೆ ಅವರು ಕೊಡುವ ಕಾರಣಗಳು ಹೀಗೆ-'ಮೊದಲು ಅಕ್ಷರ ಪದ್ಧತಿಯಿಂದ ಕಲಿಸುತ್ತಿದ್ದರು. ಆಗ ಸರಿಯಾಗಿ ಕಾಗುಣಿತ, ಹ್ರಸ್ವ, ದೀರ್ಘಗಳ ರೂಢಿ ಆಗುತ್ತಿತ್ತು. ಮಕ್ಕಳು ಅಕ್ಷರ ಗುರುತಿಸಿ ಶಬ್ದ, ವಾಕ್ಯದ ಕಡೆಗೆ ಹೋಗುತ್ತಿದ್ದುದರಿಂದ ಮರೆಯಲಾರದಷ್ಟು ಮೈಗೂಡುತ್ತಿತ್ತು. ಈಗ ಆ ಪದ್ಧತಿ ಬಿಟ್ಟದ್ದೇ ಇಷ್ಟೊಂದು ತಪ್ಪುಗಳಿಗೆ ಕಾರಣ.'

ಈಗ ಶಬ್ದ ಮತ್ತು ವಾಕ್ಯ ಪದ್ಧತಿ ಜಾರಿಯಲ್ಲಿದೆ. ಇದರಲ್ಲಿ ಗಿಳಿ ಓದಿನ ತರ ಮಕ್ಕಳು ರೂಢಿಸಿಕೊಳ್ಳುತ್ತಾರೆ. ಹಾಗಾಗಿ ಅಕ್ಷರ ಸ್ಖಾಲಿತ್ಯ ಮತ್ತು ಅಕ್ಷರ ಲೋಪ ಉಂಟಾಗುತ್ತದೆ. ಅದು ದೋಷ ರೂಪದಲ್ಲಿ ಪ್ರಕಟವಾಗುತ್ತದೆ.
ಮೇಲಿನ ಎರಡು ಹೇಳಿಕೆಗಳ ಒಳಹೊಕ್ಕು ನೋಡಿದಾಗ ಸತ್ಯದ ದರ್ಶನ ಆಗಬಹುದು ಎನ್ನುವುದು ನನ್ನ ನಂಬಿಕೆ. ಭಾಷೆಯ ಕಲಿಕೆಯಲ್ಲಿ ಅಕ್ಷರ ಕಲಿಕೆ ಮೊದಲೊ? ಆಲಿಸುವಿಕೆ ಮೊದಲೇ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗಿ ಹುಟ್ಟುತ್ತದೆ. ಯಾವ ಮಗುವೂ ಮಾತನಾಡುವುದಕ್ಕಿಂತ ಮೊದಲು ಓದುವುದಿಲ್ಲ. ಇದು ಬಹಳ ಸಾಮಾನ್ಯ ವಿಚಾರ.

ಮಕ್ಕಳು ಮಾತು (ಭಾಷೆ) ಕಲಿಯುವುದು ತಾಯಿ-ತಂದೆ, ಮನೆಯವರ, ನೆರೆಯವರ, ಸುತ್ತಣ ಪರಿಸರದವರ ಮತ್ತು ಶಾಲೆಗಳ ಸಹಾಯದಿಂದ. ಮೊದಲ ಮಾತು ಕಲಿಯುವ ಮಗು ತನ್ನ ಹತ್ತಿರದವರ ಮಾತುಗಳನ್ನು ಗಮನವಿಟ್ಟು ಅಂದರೆ ತನ್ನ ಸಂಪೂರ್ಣ ಇಂದ್ರಿಯ ಶಕ್ತಿಗಳ ಮೂಲಕ 'ಆಲಿಸಿ' ಅನುಕರಿಸುತ್ತದೆ. ಆಡುವವರನ್ನು ತದೇಕಚಿತ್ತದಿಂದ ನೋಡುತ್ತಾ ಮುಖದ ಭಾವ ವೈವಿಧ್ಯ, ತುಟಿಯ ಚಲನೆ ಮತ್ತು ಧ್ವನಿಯನ್ನು ತನ್ನದಾಗಿಸಿಕೊಳ್ಳಲು, ಭಾಷೆಯನ್ನಾಗಿಸಲು ಪ್ರಯತ್ನಿಸುತ್ತದೆ. ಮತ್ತೆ ಮತ್ತೆ ಅದೇ ಸನ್ನಿವೇಶ, ಅದೇ ಮಾತು, ಅದೇ ವಸ್ತು ಸಿಕ್ಕಿದಾಗ ಪುನರಾವರ್ತನೆ ಆಗುತ್ತದೆ. ಆದ್ದರಿಂದ ಭಾಷಾ ಕಲಿಕೆಯಲ್ಲಿ ಆಲಿಸುವಿಕೆ ಮತ್ತು ಸಂಭಾಷಣೆಗೆ ಪ್ರಥಮ ಸ್ಥಾನ. ಇದು ಅಕ್ಷರ ಪದ್ಧತಿಯಲ್ಲೂ ಅಷ್ಟೇ. ಶಬ್ದ, ವಾಕ್ಯ ಪದ್ಧತಿಯಲ್ಲೂ ಅಷ್ಟೇ. ಅದಕ್ಕೇ ಹೇಳುವುದು-ಶಿಕ್ಷಕರು ಅಕ್ಷರವನ್ನಾಗಲೀ, ಶಬ್ದವನ್ನಾಗಲೀ ಉಚ್ಚರಿಸುವಾಗ ಮಗುವಿಗೆ ಕೇಳುವಂತೆ ಸ್ಪಷ್ಟವಾಗಿ, ವೇಗವೂ ಅಲ್ಲದ, ನಿಧಾನವೂ ಅಲ್ಲದ ರೀತಿಯಲ್ಲಿ ಮಗುವಿನ ಮುಖ ನೋಡುತ್ತಾ ಹೇಳಬೇಕು. ಪುನಃ ಉಚ್ಚರಿಸಬೇಕು. ಮಗು, ಒಂದು ಬಾರಿ ಹೇಳಿದಾಗ ಆಲಿಸುತ್ತದೆ. ಎರಡನೆಯ ಬಾರಿ ಹೇಳಿದಾಗ ಮನನ ಮಾಡುತ್ತದೆ. ಮೂರನೆಯ ಸಲ ಹೇಳಿದಾಗ ಶಬ್ದರೂಪ ಕೊಡಲು ಸಿದ್ಧವಾಗುತ್ತದೆ. ಪರಭಾಷೆಯಾದಾಗಲಂತೂ (ಇಂಗ್ಲಿಷ್ ಇತ್ಯಾದಿ) ಪುನರಾವರ್ತನೆಯನ್ನು ಹೆಚ್ಚು ಮಾಡಬೇಕು.
ಹಾಗೆಯೇ ಶಿಕ್ಷಕರು ಶಬ್ದಗಳನ್ನು ಉಚ್ಚರಿಸುವಾಗ ಅಲ್ಪ ಪ್ರಾಣ, ಮಹಾ ಪ್ರಾಣ ಗ್ರಹಿಕೆಯನ್ನು ಸ್ಪಷ್ಟವಾಗಿ ಇಟ್ಟುಕೊಳ್ಳಬೇಕು. 'ಕ.....ಖ' ಎನ್ನುವ ಬದಲು 'ಕ.....ಕ ಎಂದೋ, 'ಮುಖ್ಯ' ಎನ್ನುವ ಬದಲು 'ಮುಕ್ಯ' ಎಂದೋ ತಪ್ಪು ಉಚ್ಚರಿಸಿದರೆ ಮಕ್ಕಳೂ ಇದೇ ತಪ್ಪನ್ನು ಮಾಡುತ್ತಾರೆ. ಬರೆಯುವಾಗಲೂ ಅಷ್ಟೇ. ಶಿಕ್ಷಕರು ಸರಿಯಾಗಿ ಬರೆದು ತೋರಿಸಬೇಕು. ಅಕ್ಷರ ಪದ್ಧತಿಯಾಗಲಿ, ಶಬ್ದ ಪದ್ಧತಿಯಾಗಲಿ, ಅದರ ಯಶಸ್ಸು ಮಕ್ಕಳ ಆಲಿಸುವಿಕೆ ಮತ್ತು ನೋಡುವಿಕೆಯನ್ನು ಅವಲಂಬಿಸಿದೆ. ಮಕ್ಕಳು ಬರಹವನ್ನು ಕಣ್ಣಿನಿಂದಲೂ ಕಿವಿಯಿಂದಲೂ ಏಕಕಾಲದಲ್ಲಿ ಓದುತ್ತಾರೆ. ಇವರೆಡರ ಸುಸಂಗತತೆ ಬಹಳ ಮುಖ್ಯ.
ಈ ಪದ್ಧತಿಗಳ ಸಾಧಕ-ಬಾಧಕಗಳೇನು?

ಅಕ್ಷರ ಪದ್ಧತಿ ಮತ್ತು ಶಬ್ದ ಪದ್ಧತಿಗಳ ಸಾಧಕ-ಬಾಧಕಗಳ ಬಗ್ಗೆ ತುಸು ಚಚರ್ಿಸಬೇಕು. ಅಕ್ಷರಗಳನ್ನು ಮಕ್ಕಳಿಗೆ ಹೇಳಿಕೊಡುವಾಗ ಬೋಧಕರು ವೈಯಕ್ತಿಕವಾಗಿ ಮಕ್ಕಳ ಸಂಪರ್ಕವನ್ನು ಹೊಂದಿರುತ್ತಾರೆ. ಪಾಟಿ (ಸ್ಲೇಟ್)ಯ ಮೇಲೆ ವಿದ್ಯಾಥರ್ಿಯ ಹತ್ತಿರದಲ್ಲಿಯೇ ಕುಳಿತು ಅಕ್ಷರವನ್ನು ಎಲ್ಲಿಂದ ಆರಂಭಿಸಬೇಕು? ಹೇಗೆ ಬರೆಯಬೇಕು? ಎನ್ನುವುದನ್ನು ಕಾಣಿಸುತ್ತಾರೆ. ಕೆಲವು ಸಲ ಶಿಕ್ಷಕರೇ ಮಗುವಿನ ಕೈ ಹಿಡಿದು ಬರೆಸುತ್ತಾರೆ. ಹಾಗೇ ತಿದ್ದುವಾಗ ಬಾಯಿಯಲ್ಲಿ ತಾವೂ ಹೇಳುತ್ತಾ ಮಕ್ಕಳಿಂದ ಹೇಳಿಸುತ್ತಾ ತಿದ್ದಿಸುತ್ತಾರೆ. ಇದರಿಂದ ಅಕ್ಷರ ಬರೆಯುವಲ್ಲಿ ಖಚಿತತೆ ಬರುತ್ತದೆ. ಇದು ಸ್ಮೃತಿಪಟಲದಲ್ಲಿ ಗಟ್ಟಿಯಾಗಿ ಒತ್ತಲ್ಪಡುತ್ತದೆ. ಮರೆಯುವುದಿಲ್ಲ. ಇದರಲ್ಲಿ ಸಣ್ಣ ದೋಷವೂ ಇದೆ ಅನ್ನಿ. ಅದೆಂದರೆ, ಮಗುವಿಗೆ ಓದು ಬರೆಹವೆಂದರೆ ಒಂದು ರೀತಿಯ ಜೈಲುಶಿಕ್ಷೆಯಾಗಿ ಬಿಡಬಹುದು. ಬೇಗ ಕಲಿಯದಿದ್ದರೆ, ತಪ್ಪಿದರೆ ಮನೆಯಲ್ಲಿ ಹೆತ್ತವರು, ಶಾಲೆಯಲ್ಲಿ ಶಿಕ್ಷಕರು ಅಥವಾ ಶಿಕ್ಷಕಿಯರು ಕಿವಿಗೆಂಡೆ ಮೇಲೆ ಎತ್ತುತ್ತಾರೆ. ಆದ್ದರಿಂದ ಶಿಕ್ಷೆ ಶಿಕ್ಷಣವಾಗದೆ ಶಿಕ್ಷಣ ಒಂದು ಶಿಕ್ಷೆಯಾಗಿಬಿಟ್ಟಿದೆ.
ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದುವುದರಿಂದ ಕಣ್ಣು, ಕಿವಿ, ಧ್ವನ್ಯಂಗ ಒಟ್ಟಿಗೇ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಪಟುತ್ವ ಹೆಚ್ಚುತ್ತದೆ.

ಶಬ್ದಪದ್ಧತಿಯಲ್ಲಿ ಈ ಶಿಕ್ಷೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಅರ್ಥವಿಲ್ಲದ ಅಕ್ಷರವನ್ನು 'ಗೋಳೋ' ಎಂದು ತಿದ್ದುವುದಕ್ಕಿಂತ ಅರ್ಥಪೂರ್ಣವಾದ ಶಬ್ದವನ್ನು ಮಗು ಲವಲವಿಕೆಯಿಂದ ಕಲಿಯುತ್ತದೆ. ಇದನ್ನು ಒಂದು ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. 'ಹಸ್ತ' ಎಂಬ ಶಬ್ದವನ್ನು ಹೇಳುವಿರಿ ಎಂದಿಟ್ಟುಕೊಳ್ಳೋಣ. ಆಗ ಮಗು ಇಡಿಯಾಗಿ ಹಸ್ತವನ್ನು ಗ್ರಹಿಸುತ್ತದೆ ಮತ್ತು ಆಸಕ್ತಿ ತೋರುತ್ತದೆಯೇ ಹೊರತು ಬೆರಳು, ಮಧ್ಯದ ಕರತಲವನ್ನು ಬಿಡಿಬಿಡಿಯಾಗಿ ಯೋಚಿಸಿಕೊಳ್ಳುವುದಿಲ್ಲ. ಹಾಗೆಯೇ 'ಹಸ್ತ' ಎಂದು ಬರೆದಾಗ ಅದು 'ಹ' ಬೇರೆ, 'ಸ್ತ' ಬೇರೆ ಎಂದು ಗ್ರಹಿಸುವುದಿಲ್ಲ. 'ಹಸ್ತ' ಎಂಬುದನ್ನು ಒಂದು ಘಟಕ (ಯುನಿಟ್) ಆಗಿಯೇ ಮಗು ಗ್ರಹಿಸುತ್ತದೆ. ಆದ್ದರಿಂದ ಶಬ್ದವನ್ನು ಮೊದಲು ಓದಿ, ಆಮೇಲೆ ಬರೆದು, ಅನಂತರ ಕೇಳಿ ಬರೆಯುತ್ತದೆ. ಇಲ್ಲಿ ಬೇಸರ ಬರುವುದಿಲ್ಲ. ಪಾಠವು ಆಟವಾಗುತ್ತದೆ. ಹೀಗೆ 200 ಶಬ್ದ ಕಲಿಯುವುದರಲ್ಲಿ ಎಲ್ಲಾ ಅಕ್ಷರಗಳನ್ನು ಮಗು ಕಲಿಯುತ್ತದೆ. ಬಿಡಿ ಬಿಡಿ ಅಕ್ಷರಗಳ ಅಭ್ಯಾಸವೂ ತನ್ನಿಂದ ತಾನೇ ಆಗುತ್ತದೆ. ಮೂಲ ಅಕ್ಷರ, ಕಾಗುಣಿತ, ಒತ್ತಕ್ಷರ ಇತ್ಯಾದಿ ಒಟ್ಟಿಗೇ ಅಭ್ಯಾಸವಾಗಿಬಿಡುತ್ತದೆ. ಆದ್ದರಿಂದ 'ಶಬ್ದ ಪದ್ಧತಿ' ಹೆಚ್ಚು ಸುಖ ಮತ್ತು ಸುಲಭದ ಪದ್ಧತಿ ಆಗಿದೆ.

ಅಂದ ಮಾತ್ರಕ್ಕೆ ಈ ಪದ್ಧತಿ ಅಪಾಯರಹಿತವೇನಲ್ಲ. ಮಕ್ಕಳು ಪಾಠವನ್ನು 'ಉರು' ಹೊಡೆದುಬಿಡುವ ಅಪಾಯವಿದೆ. 'ಹತ್ತನೆಯ ಪಾಠ ಓದು' ಎಂದರೆ ಸಾಕು. ಪುಸ್ತಕ ತೆರೆಯುವ ಮೊದಲೇ ಪಾಠದ ತಲೆಬರೆಹದಿಂದ ಹಿಡಿದು ಇಡಿಯ ಪಾಠದ ಓದನ್ನು ಮುಗಿಸಿಬಿಡುತ್ತಾರೆ. ಏಕೆ ಹೀಗೆ ಆಗುತ್ತದೆ ಎಂದರೆ ಮಕ್ಕಳ ಜತೆ ಬೋಧಕರು ಹೆಚ್ಚು ವೇಳೆ ಕಳೆಯುವುದಿಲ್ಲ. ಮಕ್ಕಳಿಗೆ ಶಬ್ದದ ಕಲಿಕೆಯಲ್ಲಿ ಸಾಕಷ್ಟು ರೂಢಿ (ಪ್ರಾಕ್ಟೀಸ್) ಆಗಿರುವುದಿಲ್ಲ. 'ಶಬ್ದ ಕಲಿಕೆ' ಎಂದರೆ ಬರೀ ಓದುವುದಲ್ಲ. ನೋಡಿ ಬರೆಯುವುದೂ ಅಲ್ಲ. ಕೇಳಿ ಬರೆಯಬೇಕು. ತಾವಾಗಿಯೇ ಯೋಚಿಸಿ ಬರೆಯಬೇಕು. ಅಂದರೆ ಒಂದು ಶಬ್ದ ಸರಿಯಾದ ಉಚ್ಚಾರದೊಂದಿಗೆ ಸರಿಯಾದ ಬರಹದಲ್ಲಿ ಅಂತರ್ಗತ ಆಗಬೇಕು. ಹೀಗೆ ಆಗದೇ ಇರುವುದರಿಂದಲೇ 'ಶಬ್ದ ಪದ್ಧತಿಯ' ಪ್ರಯೋಗದಲ್ಲಿ ದೋಷಗಳು ಹೆಚ್ಚಾಗುತ್ತವೆ. ಮೊದಲ ಪದ್ಧತಿ ಬೋಧಕರಿಗೆ ಸುಖ. ಎರಡನೆಯದು ಮಕ್ಕಳಿಗೆ ಸುಖ. ಇದನ್ನು ಸರಿಪಡಿಸಲು ಆಗದೇ ಇದ್ದುದರಿಂದಲೇ ಈಗ ಪುನಃ ಅಕ್ಷರ ಪದ್ಧತಿಯನ್ನೇ ಜಾರಿಗೆ ತಂದಿದ್ದಾರೆಂದು ತೋರುತ್ತದೆ.
ಪದ್ಧತಿಗಳು 'ಸ್ವಯಂಭೂ' ಅಲ್ಲ

ಯಾವುದೇ ಪದ್ಧತಿಯೂ ಸ್ವಯಂಭೂ ಅಲ್ಲ. ಪರಿಪೂರ್ಣವೂ ಅಲ್ಲ. ಮುಂದಿನ ಪದ್ಧತಿಯಲ್ಲಿ ಹಿಂದಿನ ಗಟ್ಟಿ ದ್ರವ್ಯ ಇರಲೇ ಬೇಕು. ಕುಶಲಿಯಾದ ಶಿಕ್ಷಕರು ಈ ಮೇಲಿನ ಎರಡೂ ಪದ್ಧತಿಗಳನ್ನು ಹೊಂದಿಸಿಕೊಂಡು ಯಶಸ್ವಿಯಾಗಿ ಬೋಧನ ಕಾರ್ಯ ಕೈಗೊಳ್ಳುವಲ್ಲಿ ಮಕ್ಕಳ ಸರ್ವತೋಮುಖ ಪ್ರಗತಿ, ಯಶಸ್ಸು ಇದೆ. ಹಾಗೇ ಶಿಕ್ಷಕ ಪದ್ಧತಿಗಳಲ್ಲಿ ಯಾವುದು ಶ್ರೇಷ್ಠ ಎಂದು ಹುಡುಕುವ ಸಿದ್ಧಾಂತವಲ್ಲ. ಬದಲಾಗಿ ಎಲ್ಲದರಲ್ಲಿಯೂ ಒಳ್ಳೆಯದನ್ನೂ ಆರಿಸಿಕೊಂಡು ಸಂಯೋಜಿಸಿಕೊಂಡು ದುಡಿಯುವ ನಿತ್ಯ ಪ್ರಯೋಗಶೀಲ ಮತ್ತು ಪ್ರಯೋಗ ಕರ್ತ. ಹಾಗಾದಾಗಲೇ ಬೋಧನೆಗೆ ಸವರ್ಾಂಗ ಯಶಸ್ಸು ದೊರೆಯುತ್ತದೆ.
ಆಡಳಿತಾತ್ಮಕ ದೋಷ

ಹೀಗೆ ಕಲಿಕೆಯ ದೋಷಗಳನ್ನು ಪದ್ಧತಿಯಲ್ಲಿ ಅರಸುವವರು ಒಂದು ಮಹತ್ತ್ವದ ಆಡಳಿತಾತ್ಮಕ ಅಂಶವನ್ನು ಮರೆಯುತ್ತಾರೆ. ಅದೆಂದರೆ, ಮಕ್ಕಳಿಗೆ ವೈಯಕ್ತಿಕ ಗಮನ ಕೊಡಬೇಕು ಎನ್ನುವುದು ಸುಲಭ. ಆದರೆ ಪರಿಸ್ಥಿತಿ ಹೇಗಿದೆ? ವಿದ್ಯಾಥರ್ಿಗಳು ಮತ್ತು ಶಿಕ್ಷಕರ ಅನುಪಾತ ಎಷ್ಟಿದೆ? ಒಂದು ಹಳ್ಳಿಪರಿಸರದ ತಾಲೂಕಿನಲ್ಲಿಯೇ 200 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಇರುವ ಶಾಲೆಗಳಲ್ಲಿ ಕೇವಲ ಇಬ್ಬರು ಶಿಕ್ಷಕರೋ, ಶಿಕ್ಷಕಿಯರೋ ಇರುವ ಶಾಲೆ ಆರು-ಏಳು ಆದರೂ ಇವೆ. ಒಂದು ಪೂರ್ಣ ಪ್ರಾಥಮಿಕ ಶಾಲೆಗೆ ನಾಲ್ಕು ಜನ ಬೋಧಕರೂ ಇಲ್ಲದಿದ್ದ ಮೇಲೆ ಬೋಧನೆಯ ಮಟ್ಟ ಹೇಗಿರಬೇಕು? ನೀವೇ ಊಹಿಸಿ. ಇದು ಇಂದಿನ ಕನರ್ಾಟಕದ ಪ್ರಾಥಮಿಕ ಕನ್ನಡ ಶಾಲೆಗಳ ವಸ್ತುಸ್ಥಿತಿ.
ಅದೇನೇ ಇದ್ದರೂ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕೆಲವು ಮುಖ್ಯ ಸಲಹೆಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ.

ಗಟ್ಟಿಯಾಗಿ ಓದುವುದು
ಪ್ರಾಥಮಿಕ ಶಾಲಾ ಹಂತದ ಕಲಿಕೆಯಲ್ಲಿ ಗಟ್ಟಿಯಾಗಿ ಓದುವುದು ಬಹಳ ಮುಖ್ಯ. ಹೀಗೆ ಓದುವುದರಿಂದ ಮಕ್ಕಳು ತಮ್ಮ ಉಚ್ಚಾರವನ್ನು ತಾವೇ ಕೇಳಿಕೊಳ್ಳುತ್ತಾರೆ. ಅಂದರೆ 'ಆಲಿಸುವಿಕೆ' ಬಲಗೊಳ್ಳುತ್ತದೆ. ಇದರಿಂದ ಧ್ವನ್ಯಂಗಗಳು ಪಟುತ್ವ ಹೊಂದುತ್ತವೆ. ಹೀಗೆ ಓದುವುದರಿಂದ ಮಕ್ಕಳು ತಪ್ಪಿದರೆ ಶಿಕ್ಷಕರು, ಹಿರಿಯರು, ಪಾಲಕರು ತಿದ್ದಲು ಅನುಕೂಲವಾಗುತ್ತದೆ. ಈ ತಿದ್ದುವಿಕೆ ಒಂದು 'ಶಿಕ್ಷೆ' ಆಗದಂತೆ ತಿದ್ದುವವರು ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ತೆನಾಲಿ ರಾಮಕೃಷ್ಣನ ಬೆಕ್ಕು ಹಾಲು ಕುಡಿದಂತೆ ಆಗುತ್ತದೆ. ಕೆಳಗಿನ ತರಗತಿಯ ಓದು ಬಾಯ್ದೆರೆಯದ್ದಾಗಿರಬೇಕು. ಬೋಧಕರು ಮಾದರಿ ಓದನ್ನು ಒದಗಿಸಬೇಕು.

ಶಬ್ದ ಬರೆಯುವುದು
ಇದು ಬಹಳ ಮಹತ್ತ್ವದ್ದು. ಪಾಠದ ಪುನರಾವರ್ತನೆಯ ಸಂದರ್ಭದಲ್ಲಿ ಕಡ್ಡಾಯವಾಗಿ 'ಶಬ್ದ ಕೇಳಿ ಬರಹ' ಇರಬೇಕು. ಬೋಧಕರು ಮೊದಲೇ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರಬೇಕು. ಹ್ರಸ್ವ, ದೀರ್ಘ, ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತಕ್ಷರ, ಅನುನಾಸಿಕ, ಅನುಸ್ವಾರಗಳ ವ್ಯತ್ಯಾಸಗಳಿಂದ ಶಬ್ದಗಳ ಪಟ್ಟಿ ತಯಾರಿಸಬೇಕು. ಉದಾ: ದಡ್ಡ-ದಡ, ನೆಗ್ಗು-ನೆಡು, ಅಂಗಳ-ಅಗಳ, ರೋಖು-ರೊಕ್ಕ, ಅತ್ತೆ-ಕತ್ತೆ, ಅಮ್ಮ-ಗುಮ್ಮ, ತಮ್ಮ-ಎಮ್ಮೆ, ಸ್ಥಾನ-ಸ್ಥಾಪನೆ, ಮಂಗ-ಮಗ, ಕಷ್ಟ-ನಷ್ಟ, ಕ್ಷಾರ-ಕ್ಷತ್ರಿಯ ಇತ್ಯಾದಿಯಾಗಿ ಧ್ವನ್ಯಂತರವುಳ್ಳ ಆಘಾತ (ಸ್ಟ್ರೆಸ್)ಗಳ ಶಬ್ದಗಳ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಇಂಥ ಒಂದು ನೂರು ಶಬ್ದಗಳನ್ನು ತಯಾರಿಸಿ ಕೊಟ್ಟು ಒಂದು ವಾರದ ಅನಂತರ ಅದರ ಸ್ಪಧರ್ೆ ಏರ್ಪಡಿಸಬಹುದಾಗಿದೆ.
ಹಾಗೇ 'ಮಂಗ' ಶಬ್ದ ಬರೆಸಿ, ಓದಿಸುವುದು-ಮಧ್ಯದ ಸೊನ್ನೆ ತೆಗೆದು ಇನ್ನೊಮ್ಮೆ ಓದಿಸುವುದು. 'ಏಣಿ' ಬರೆಸಿ ಒಮ್ಮೆ ಓದಿಸುವುದು. ಇನ್ನೊಮ್ಮೆ 'ಎಣಿ' ಬರೆಸಿ ಓದಿಸುವುದು. ಹೀಗೆ ಬರೆಯುವುದರಲ್ಲಿ ಸರಿ, ತಪ್ಪು ಬರೆಸಿ ದೊಡ್ಡದಾಗಿ ಓದಿಸಿ ತಿದ್ದಿಸಬೇಕು. ಇದು ಶಬ್ದಗಳ ಬರೆಯುವಿಕೆಯಲ್ಲಿ ಸರಿ, ತಪ್ಪಿನ ಅರಿವನ್ನು ಸ್ಪಷ್ಟವಾಗಿ ಮಾಡಿಸುತ್ತದೆ. ಶಬ್ದಗಳ ಕುರಿತು ಖಚಿತ ಜ್ಞಾನವನ್ನು ತರುತ್ತದೆ.

ಶುದ್ಧ ಬರಹ ಅಥವಾ ಕೇಳಿ ಬರಹ
ಪ್ರತಿ ಪಾಠ ಮುಗಿದಾಗಲೂ ಒಂದು ದೀರ್ಘವಾದ ಪ್ಯಾರಾವನ್ನು ಕೇಳಿ ಬರಹಕ್ಕಾಗಿ ಉಪಯೋಗಿಸಬೇಕು. ಬೋಧಕರು ಓದುವಾಗ ಎಲ್ಲ ಮಕ್ಕಳಿಗೂ ಕೇಳುವಂತೆ ಸರಿಯಾದ ರೀತಿಯಲ್ಲಿ ಹೆಚ್ಚು ನಿಧಾನವೂ ಹೆಚ್ಚು ವೇಗವೂ ಆಗದ ರೀತಿಯಲ್ಲಿ ಓದಬೇಕು.
ಉದಾ: ಅಶೋಕನು ರಣರಂಗದಲ್ಲಿ ಬಿದ್ದು ಆರ್ತನಾದ ಮಾಡುತ್ತಿದ್ದ ಲಕ್ಷಾಂತರ ಗಾಯಾಳು ಸೈನಿಕರನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದನು ಎಂಬ ವಾಕ್ಯವಿದೆ ಎಂದುಕೊಳ್ಳುವ. ಇದನ್ನ ಕೇಳಿ ಬರಹಕ್ಕೆ ಅರಿಸಿಕೊಂಡಾಗ ವಾಕ್ಯ ಖಂಡವನ್ನು ಒಮ್ಮೆಲೇ ಓದಬೇಕು. ಬದಲಾಗಿ ಅಶೋಕನು...... ಅಶೋಕನು, ರಣರಂಗದಲ್ಲಿ ಬಿದ್ದು..... ಬಿದ್ದು ಹೀಗೆ ಬಿಡಿಸಿ ಬಿಡಿಸಿ ಓದಬಾರದು. ನಾಲ್ಕಾರು ಬಾರಿ ದೊಡ್ಡದಾಗಿ ವಾಕ್ಯ ಓದಿಸಬೇಕು. ಅನಂತರ ಬರೆಯಲು ಹೇಳಬೇಕು. ತಪ್ಪಿದರೆ ಹತ್ತು ಬಾರಿ ಬರೆಸಬೇಕು. ಅಥವಾ ಅದಕ್ಕೂ ಮೊದಲು ಮಕ್ಕಳ ಪ್ರಗತಿಯನ್ನೂ ಗಮನಿಸಿ ಅರ್ಥಪೂರ್ಣವಾದ ವಾಕ್ಯಖಂಡವನ್ನು ಓದಬೇಕು.

ನೋಡಿ ಬರಹ
ಇದರಲ್ಲಿ ಎರಡು ವಿಧಗಳು. ಅಕ್ಷರಗಳನ್ನು ಸುಂದರಗೊಳಿಸುವುದಕ್ಕಾಗಿ ಬರೆಯುವುದು. ಇನ್ನೊಂದು ಪಾಠವನ್ನು ನೋಡಿ ಬರೆಯುವುದು. ಮೊದಲನೆಯದು ಅಕ್ಷರಗಳನ್ನು ಸುಂದರಗೊಳಿಸಿದರೆ, ಎರಡನೆಯದು ಬರಹವನ್ನು ಶುದ್ಧ ಗೊಳಿಸುತ್ತದೆ. ದಿನಾಲೂ ಮನೆಯಿಂದ ಒಂದು ಜೋಡು ಗೆರೆ ನೋಟ್ ಪುಸ್ತಕದಲ್ಲಿ (ಹಿಂದಿ ಬರೆಯಲು ಉಪಯೋಗಿಸುವ) ಪಾಠ ಬರೆದು ತರಲು ಹೇಳಬೇಕು. ಮೂರನೆಯ ತರಗತಿಯಿಂದಲೇ ಈ ಪದ್ಧತಿ ಜಾರಿಗೆ ಬಂದಲ್ಲಿ ನಾಲ್ಕು ಮತ್ತು ಐದನೆಯ ತರಗತಿಗೆ ಮಗು ಬರುವ ಹೊತ್ತಿಗೆ ಅಕ್ಷರಗಳು ಮುತ್ತಿನಂತೆ ಆಕಾರ ಪಡೆಯುತ್ತವೆ.

ಉಚ್ಚಾರದ ಸುಭಗತೆ
ಬಹಳ ಮಕ್ಕಳಿಗೆ ಉಚ್ಚಾರದ ತೊಂದರೆ ಇರುತ್ತದೆ. ಶಬ್ದ, ವಾಕ್ಯಗಳ ಉಚ್ಚಾರ ಕಷ್ಟವಾಗುತ್ತದೆ. ಇದಕ್ಕೆ ವಾಡಿಕೆಯಲ್ಲಿ 'ನಾಲಗೆ ತಿರುಗದೇ ಇರುವುದು' ಎನ್ನುತ್ತಾರೆ. ಇದಕ್ಕೆ ಕೆಲವು ಪದ್ಯಗಳನ್ನು ಆರಿಸಿಕೊಂಡು ಒಂದು ಆಟವನ್ನು ಆಡಿಸಬಹುದು. ಕರಿ ಕುರಿ ಮರಿ ಕೆರೆ ಏರಿ ಮೇಲೆ ಮೇಯ್ತದೆ ಎಂಬ ಸಾಲನ್ನು ತೀರಾ ವೇಗ ವೇಗವಾಗಿ ಉಚ್ಚರಿಸಲು ಹೇಳಬೇಕು. ಶಿಕ್ಷಕರಿಗೆ ಮೊದಲು ಈ ರೀತಿಯ ಪದ್ಯ ಬರಬೇಕು. ಮಕ್ಕಳಿಗೆ ಈ ರೀತಿಯ ಉಚ್ಚಾರ ಖುಶಿ ಕೊಡುತ್ತದೆ. ಪಾಠ, ಆಟ ಆದಂತಾಗಿ ಮಕ್ಕಳಿಗೆ ಉಚ್ಚಾರದ ಸಮಸ್ಯೆ ಅರಿವಿಲ್ಲದಂತೆ ಮಾಯವಾಗಿ ಬಿಡುತ್ತದೆ. ಇದಕ್ಕೆ ಪೂರಕವಾದ ಪದ್ಯದ ಸಾಲುಗಳು ನಮ್ಮ ಜಾನಪದ ಸಾಹಿತ್ಯದಲ್ಲಿ ಬಹಳ ಸಿಗುತ್ತವೆ.

ಕವನ ಹಾಡುವುದು ಮತ್ತು ಓದುವುದು
ಕವನಗಳನ್ನು ಹಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಹುರುಪು. ಕೆಳಗಿನ ತರಗತಿಯಲ್ಲಿ ಪ್ರಾಸಪದ್ಯ, ಮಕ್ಕಳ ಪದ್ಯ, ತಮಾಷೆಯ ಪದ್ಯ ಹಾಡಿಸಬಹುದು. ಮುಂದಿನ ತರಗತಿಗಳಲ್ಲಿ ಭಾವಗೀತೆ ಹಾಡಿಸಬೇಕು. ಷಟ್ಟದಿಯನ್ನು ಗಮಕದ ರೀತಿಯಲ್ಲಿ ಹಾಡುವುದು. ಇವುಗಳನ್ನು ಮತ್ತು ಇತರ ಕವನಗಳನ್ನು ಮಾದರಿ ಓದನ್ನಾಗಿ ಕೊಟ್ಟು ಅರ್ಥವತ್ತಾಗಿ ಓದುವುದನ್ನು ಕಲಿಸಬೇಕು.
ನೆನಪನ್ನು ಹೆಚ್ಚಿಸಲು ಸ್ವರಚಿತ ಪದ್ಯ
ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಪದ್ಯ ಹೆಣೆಯುವ ಆಟ ಆಡಿಸಬಹುದು. ಉದಾಹರಣೆಗಾಗಿ ಇಲ್ಲಿ ಒಂದು ಪದ್ಯ ಕೊಡುತ್ತೇನೆ. (ಇದನ್ನು ನನಗೆ ಗೆಳೆಯ ಶ್ರೀಪಾದ ಭಟ್ಟ ಹೇಳಿದ್ದು. ಅವರಿಗೆ ಬೇರೆ ಯಾರೋ....)
ಕೂಜಳ್ಳಿ ಮುದುಕ ಪೇಟೆಗೆ ಬಂದ.
ಇದನ್ನು ಮಕ್ಕಳ ಗುಂಪು ಹೇಳಬೇಕು.
ಅನಂತರ ಪುನಃ ಬೋಧಕ -
ಮುದುಕನ ಹೆಂಡತಿ ಪೇಟೆಗೆ ಬಂದಳು.
ಪುನಃ ಮಕ್ಕಳು ಹೇಳಬೇಕು.
ಅನಂತರ ಶಿಕ್ಷಕ -
ಕೂಜಳ್ಳಿ ಮುದುಕ ಮುದುಕನ ಹೆಂಡತಿ ಪೇಟೆಗೆ ಬಂದರು.
ಪುನಃ ಮಕ್ಕಳ ಗುಂಪು ಉಚ್ಚರಿಸಬೇಕು.
ಅನಂತರ ಶಿಕ್ಷಕ -
ಮುದುಕನ ಮಗ ಪೇಟೆಗೆ ಬಂದ.
ಮಕ್ಕಳ ಗುಂಪು ಉಚ್ಚರಿಸಬೇಕು
ಅನಂತರ ಬೋಧಕ -
ಕೂಜಳ್ಳಿ ಮುದುಕ, ಮುದುಕನ ಹೆಂಡತಿ, ಮುದುಕನ ಮಗ ಪೇಟೆಗೆ ಬಂದರು.

ಪುನಃ ಮಕ್ಕಳ ಗುಂಪು ಹೇಳುತ್ತದೆ. ಹೀಗೆ ಸಾಲುಗಳನ್ನು ಮೊದಲಿನ ಸಾಲಿಗೆ ತಕ್ಕಂತೆ ಕೂಡಿಸುತ್ತಾ ಹೋಗುವ ಆಟ. ಆಯಾಯ ಊರು, ಅಲ್ಲಿನ ಜನ, ಭಾಷೆ, ರಿವಾಜುಗಳನ್ನು ಬಳಸಿ ಅವರವರಿಗೆ ಸುಲಭವಾದ ಪದ್ಯ ಹೆಣೆಯಬಹುದು. ಇದನ್ನು ಎಷ್ಟೂ ಬೆಳಸಬಹುದು. ಅನಂತರ ಇದರಲ್ಲಿಯೇ ಒಂದು ಸ್ಪಧರ್ೆ ಏರ್ಪಡಿಸಬಹುದು. ಮಕ್ಕಳು ಸೋಲುವ ತನಕ ಪದ್ಯ ಮುಂದುವರಿಯಬಹುದು. ಇದರಿಂದ ಮಕ್ಕಳಿಗೆ ಖುಶಿ ಸಿಗುತ್ತದೆ. ಪಾಠ, ಆಟವಾಗುವಲ್ಲಿನ ಹೊಸ ಲೋಕ ಸೃಷ್ಟಿಯಾಗುತ್ತದೆ.
ಹಲವು ಮಕ್ಕಳು ಅಂತ್ಯಾಕ್ಷರಿ ಸ್ಪಧರ್ೆಯನ್ನು ಟಿ.ವಿ. ಗಳಲ್ಲಿ ನೋಡಿರಬಹುದು. ಶಬ್ದ ಯಾ ವಾಕ್ಯಗಳನ್ನು ಬಳಸಿ ಅದರ ಕೊನೆಯ ಅಕ್ಷರದಿಂದ ಮುಂದೆ ಬೆಳೆಸುವ ಕ್ರಿಯೆ-ಸ್ಪಧರ್ೆ. ಪದ್ಯಗಳನ್ನೂ ಬಳಸಿಕೊಳ್ಳಬಹುದು. ವೈಯಕ್ತಿಕವಾಗಿ ಅಥವಾ ಗುಂಪು ಗುಂಪಾಗಿ ಬೇಕಾದಂತೆ ಈ ಸ್ಪಧರ್ೆಯನ್ನು ರೂಪಿಸಿಕೊಳ್ಳಬಹುದು. ಇದರ ಜತೆ ಕವನಗಳ 'ರಸಪ್ರಶ್ನೆ' ಕಾರ್ಯಕ್ರಮಗಳನ್ನೂ ಮಾಡ ಬಹುದಾಗಿದೆ. ಒಂದರಿಂದ ಏಳನೆಯ ತರಗತಿಯ ವರೆಗಿನ ಪಠ್ಯಪುಸ್ತಕದ ಪದ್ಯಗಳನ್ನು ಇದಕ್ಕೆ ಸೀಮಿತಗೊಳಿಸಬಹುದು.

ಕತೆ ಹೇಳುವುದು 
ಕತೆ ಹೇಳುವುದು ಮತ್ತು ಕೇಳುವುದು ಯಾವ ತರಗತಿಯ ಮಕ್ಕಳಿಗೇ ಆದರೂ ಬಹಳ ಪ್ರಿಯ. ಕತೆ ಹೇಳಿಸುವ, ಕೇಳಿಸುವ ಕ್ರಿಯೆ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಾ ಸಾಗಬೇಕು. ಬೋಧಕರು ಕೊನೆಗೆ ಒಂದು ಕತೆ ಹೇಳಬೇಕು. ಮುಂದಿನ ವಾರ ಇದೇ ಕತೆಯನ್ನು ಮಕ್ಕಳು ಹೇಳಬೇಕೆಂದು ಸವಾಲು ಹಾಕಬೇಕು. 'ಖೊ...... ಖೋ ಕತೆಯನ್ನು ಮಾಡಿಸಬಹುದು. (ಒಬ್ಬೊಬ್ಬರು ಒಂದೊಂದು ವಾಕ್ಯ ಹೇಳಿ ಕತೆ ಮುಗಿಸುವುದಕ್ಕೆ 'ಖೊ.... ಖೋ ಕತೆ ಅನ್ನುತ್ತಾರೆ'). ಇದರಿಂದ ಮಕ್ಕಳ ಕಲ್ಪನಾಶಕ್ತಿ ಕುದುರುತ್ತದೆ. ಭಾಷೆ ಬೆಳೆಯುತ್ತದೆ.

ಒಗಟು ಮತ್ತು ಗಾದೆ ಮಾತುಗಳು
ಐದರಿಂದ ಏಳನೆಯ ತರಗತಿಯ ಮಕ್ಕಳಿಗೆ ಈ ಅಭ್ಯಾಸ ಮಾಡಿಸಬಹುದು. ಒಗಟುಗಳನ್ನು ಮತ್ತು ಗಾದೆ ಮಾತುಗಳನ್ನು ಪುಸ್ತಕರೂಪದಲ್ಲಿ ಸಂಗ್ರಹಿಸಿ, ಶಾಲೆಯಲ್ಲಿ ಅಂದವಾಗಿ ಇಡಬಹುದು. ಒಂದು ನೋಟ್ ಬುಕ್ ತಂದು ಒಂದು ಕಡೆ ಗಾದೆಗಳು; ಇನ್ನೊಂದು ಕಡೆ ಒಗಟುಗಳನ್ನು ಬರೆದು ಇಡಬಹುದು. ಯಾರು ಹೆಚ್ಚು ಸಂಗ್ರಹಿಸುತ್ತಾರೋ ಅಂಥವರಿಗೆ ಬಹುಮಾನ ಕೊಡಬೇಕು. ಪುಸ್ತಕವನ್ನು ಅಂದವಾಗಿ ಇಟ್ಟವರಿಗೂ ಪ್ರೋತ್ಸಾಹಕರ ಬಹುಮಾನ ಇಡಬೇಕು. ವರ್ಷದಲ್ಲಿ ಕೆಲವು ಬಾರಿ ಇದರ ಪ್ರದರ್ಶನ ಏರ್ಪಡಿಸಬಹುದು. ಇದರ ಜತೆಗೆ ಮಕ್ಕಳು ಸ್ವತಂತ್ರವಾಗಿ ಗಾದೆಗಳನ್ನು, ಒಗಟುಗಳನ್ನು ರಚಿಸುವಂತೆ ಹುರಿದುಂಬಿಸಬೇಕು.
ಜನಪದ ಕತೆ, ಕವನ ಸಂಗ್ರಹಿಸುವಿಕೆ
ಮಕ್ಕಳಿಗೆ ಮನೆಗೆಲಸದ ಜತೆ ಒಂದು ವಿಶೇಷ ಕೆಲಸವನ್ನೂ ಕೊಡಬಹುದಾಗಿದೆ. ತಂತಮ್ಮ ಹಿರಿಯರಿಂದ ಮತ್ತು ಸುತ್ತಮುತ್ತಲಿನ ಜನಪದರಿಂದ ಜನಪದ ಕತೆ, ಕವನಗಳನ್ನು ಸಂಗ್ರಹಿಸಲು ಪ್ರೋತ್ಸಾಹಿಸಬೇಕು. ಜನಪದ ವೈದ್ಯ, ಮಾಟಗಳ ಬಗ್ಗೆಯೂ ಸಂಗ್ರಹಿಸಲು ಸೂಚಿಸಬೇಕು. ಇವುಗಳನ್ನು ಸೇರಿಸಿ, 'ಕೈಬರಹ ಪತ್ರಿಕೆ' ತರಬಹುದು.

ಏಕಪಾತ್ರಾಭಿನಯ
ಭಾಷೆಯ ಬೆಳವಣಿಗೆಯಲ್ಲಿ ಏಕಪಾತ್ರಾಭಿನಯ ಮಹತ್ತ್ವದ ಪಾತ್ರವಹಿಸುತ್ತದೆ. ಒಂದೇ ವ್ಯಕ್ತಿ ಎರಡು, ಮೂರು ಜನರ ಅನುಕರಣೆ ಮಾಡುವುದು, ಪೌರಾಣಿಕ (ರಾಮಾಯಣ, ಮಹಾಭಾರತ, ಪಂಚತಂತ್ರ, ಬೈಬಲ್, ಜನಪದ, ಕುರಾನ್ ಹೀಗೆ) ಪಾತ್ರ ಕತೆಗಳನ್ನು ಅಭಿನಯಿಸುವುದು ಇತ್ಯಾದಿ. ಇದರಿಂದ ಭಾವಪೂರ್ಣವಾದ ಮಾತು, ಅರ್ಥಪೂರ್ಣವಾದ ಕಲ್ಪನೆ ಬೆಳೆಯುತ್ತದೆ.
ಚಚರ್ಾಕೂಟ
ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಚಚರ್ಾಕೂಟ ಕಾರ್ಯಕ್ರಮಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಅನುಭವ ಮತ್ತು ಕಲ್ಪನೆಗೆ ಎಟಕುವ ವಿಷಯಗಳನ್ನೇ ಆಯ್ದು ಚಚರ್ಾಗೋಷ್ಠಿ ಏರ್ಪಡಿಸಬಹುದು. 'ಕೊಡೆ ಮೇಲೋ ಕಂಬಳಿ ಮೇಲೋ', 'ನಗರ ಮೇಲೋ ಹಳ್ಳಿ ಮೇಲೋ', 'ವಿಜ್ಞಾನ ವರವೋ ಶಾಪವೊ?' ಇತ್ಯಾದಿ. ಮಕ್ಕಳಲ್ಲಿ ಚಚರ್ಾಕೂಟಗಳ ಮೂಲಕ ತಾಕರ್ಿಕ ಜ್ಞಾನ, ವಿಷಯ ಜ್ಞಾನ, ಚುರುಕುತನ, ನಿರೀಕ್ಷಣಾ ಚತುರತೆ ಬೆಳೆಯುತ್ತದೆ. ಎಲ್ಲವೂ ಮಕ್ಕಳ ಸ್ವಂತ ಬೌದ್ಧಿಕತೆಯ ಮೇಲೇ ಕೂಟ ಸಾಗಬೇಕು'.

ಚಿತ್ರ ಕತೆ 
ಒಂದು ಚಿತ್ರವನ್ನು ಕೊಟ್ಟು ಮಕ್ಕಳಿಗೆ ಅದರ ಮೇಲೆ ಕಥೆ ಅಥವಾ ಕವನ ರಚಿಸುವಂತೆ ಸೂಚಿಸಬೇಕು.

ಟಿ.ವಿ. ಸುದ್ದಿ ರಚನೆ
ಈಗ ಹಳ್ಳಿಹಳ್ಳಿಗಳಲ್ಲೂ ಟಿ.ವಿ. ಬಂದಿದೆ. ಹೀಗಾಗಿ ನಮ್ಮ ಮಕ್ಕಳಿಗೆ ಟಿ.ವಿ. ಹೊಸದೇನಲ್ಲ. ಮಕ್ಕಳಿಗೆ ಟಿ.ವಿ.ಯಲ್ಲಿ ಬರುವ ಸಮಾಚಾರವನ್ನೇ ಅನುಕರಿಸಿ ತಂತಮ್ಮ ಸ್ವಂತ ಕಲ್ಪನಾಶಕ್ತಿಯ ಆಧಾರದ ಮೇಲೆ ಸುದ್ದಿ ಸೃಷ್ಟಿಸಿ ಹೇಳಲು ಹೇಳಬೇಕು. ಮಕ್ಕಳಿಗೆ ಇಂಥ ಆಟ-ಪಾಠ ಅಂದರೆ ಇಷ್ಟ. ಅವರಿಗೆ ಒಳ್ಳೆಯ ಮನೋರಂಜನೆಯೂ ದೊರಕುತ್ತದೆ.
ಉದಾ: ನಿನ್ನೆ ಇಂಥ ಊರಿನ ಸಮೀಪದ ಇಂಥಲ್ಲಿ ಮೀನಿಗೂ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೂ ಭೀಕರ ಅಪಘಾತ ಸಂಭವಿಸಿ ಬಸ್ಸು ತೀವ್ರ ಹಾನಿಗೊಳಗಾಯಿತು.
ದೇಶದ ಪ್ರಧಾನ ಮಂತ್ರಿಗಳು (ಇಂಥವರು) ನಮ್ಮ ಶಾಲೆಯ ಪ್ರಧಾನಮಂತ್ರಿಯನ್ನು ಭೇಟಿಯಾಗಿ ತಮ್ಮ ಮಂತ್ರಿ ಮಂಡಲಕ್ಕೆ ಸೇರುವಂತೆ ಆಹ್ವಾನ ನೀಡಿದರು. ಆದರೆ ನಮ್ಮ ಪ್ರಧಾನಿ ಕು| ಇಂಥವರು ಅದನ್ನು ನಯವಾಗಿಯೇ ನಿರಾಕರಿಸಿದರು.
ಹೀಗೆ ಹಾಸ್ಯಭರಿತ ಸುದ್ದಿಗಳನ್ನು ಸೃಷ್ಟಿಸಿ ಟಿ.ವಿ. ನ್ಯೂಸ್ ಮಾಡಬಹುದು.
ಪ್ರಬಂಧ, ಅಜರ್ಿ, ಆಮಂತ್ರಣ ಪತ್ರಿಕೆ, ಪತ್ರಿಕಾ ವರದಿ ರಚನೆ
ಶಾಲೆಗಳಲ್ಲಿ ಪ್ರಬಂಧ ಬರೆಸುವುದು ಸಾಮಾನ್ಯ. ಆದರೆ ಬದಲಾದ ಸಾಮಾಜಿಕ ವ್ಯವಸ್ಥೆಯ ಸಂದರ್ಭದಲ್ಲಿ ಅಜರ್ಿ ಬರೆಯುವ, ಆಮಂತ್ರಣ ಪತ್ರಿಕೆ ತಯಾರಿಸುವ, ಪತ್ರಿಕಾ ವರದಿ ತಯಾರಿಸುವ ಪರಿಪಾಠವನ್ನು ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳಿಗೆ ಹೊಸ ಹೊಸ ವಿಷಯ, ವಿಚಾರಗಳ ಪರಿಚಯ, ಖುಶಿ, ರಂಜನೆ ಎಲ್ಲವೂ ದೊರಕುತ್ತದೆ. ಜತೆಗೆ ಬುದ್ಧಿಶಕ್ತಿ ಬೆಳೆಯುತ್ತದೆ. ಬದುಕಿನ ವಿವಿಧ ವ್ಯಾವಹಾರಿಕ ದಿನಚರಿಗಳ ಅರಿವೂ ಆಗುತ್ತದೆ.
ಪ್ರಬಂಧಕ್ಕೆ, ಪತ್ರಿಕಾ ವರದಿಗಳ ತಯಾರಿಕೆಗೆ ನಿದರ್ಿಷ್ಟ ವಿಷಯ ಕೊಡಬೇಕು. ಉತ್ತಮ ವರದಿ, ಪ್ರಬಂಧ, ಅಜರ್ಿ ತಯಾರಿಕೆಗಳಿಗೆ ಬಹುಮಾನ ಇರಿಸಬೇಕು.

ಕೈಬರೆಹ ಪತ್ರಿಕೆ
ನಮ್ಮ ಶಾಲೆಗಳಲ್ಲಿ ಕೈಬರೆಹ ಪತ್ರಿಕೆ ತಯಾರಿಸುವುದು ಯಾವಾಗಿನಿಂದಲೂ ಇದೆ. ಆದರೆ ಅದು ವರ್ಷಕ್ಕೊಮ್ಮೆ ಎಂಬ ತಿಳುವಳಿಕೆಯಾಗಿದೆ. ವಾಷರ್ಿಕೋತ್ಸವಕ್ಕೆ ಮಾತ್ರ ಎಂಬಂಥಾಗಿದೆ. ಹೀಗಾಗಬಾರದು. ಕೈಬರಹ ಪತ್ರಿಕೆ ಪ್ರತಿ ತಿಂಗಳಿಗೊಂದರಂತೆ ಹೊರಬರಬೇಕು. ಅದಕ್ಕೆ ಮಕ್ಕಳಲ್ಲಿಯೇ ಒಂದು ಸಂಪಾದಕೀಯ ಮಂಡಳಿ ರಚಿಸಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಾ ಮಾರ್ಗದರ್ಶನ ಮಾಡಬೇಕು. ಪುಟ್ಟ-ಪುಟ್ಟ ಬರೆಹ, ಚಿತ್ರಗಳು, ಜನಪದ ಸಂಗ್ರಹ, ಕವನ, ಕಥೆ, ಲೇಖನ, ರಂಗೋಲಿ, ಸಾಹಿತಿ-ಕಲಾವಿದರ, ವಿಜ್ಞಾನಿಗಳ ಮಹಾತ್ಮರ, ರಾಜಕಾರಣಿಗಳ ಚಿತ್ರ, ವಿವರ ಸಂಗ್ರಹ ಇತ್ಯಾದಿ ವೈವಿಧ್ಯ ಇರಬೇಕು.

ಮೂರು ಮುಖ್ಯ ಚಟುವಟಿಕೆಗಳು
ಕೊನೆಯದಾಗಿ ಅತ್ಯಂತ ಮಹತ್ತ್ವದ ಮತ್ತು ಹೊಸದಾದ ಮೂರು ಚಟುವಟಿಕೆಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷಾ ಬೆಳವಣಿಗೆಗಳಿಗೆ ಪೂರಕವಾಗಿ ಸೂಚಿಸುತ್ತೇನೆ. ಅವೆಂದರೆ ಶಬ್ದಕೋಶ ರಚನೆ. ವಿಶ್ವಕೋಶ ರಚನೆ. ಮುಕ್ತ ಗ್ರಂಥಾಲಯ.
ಶಬ್ದಕೋಶ ರಚನೆ
ಶಬ್ದಕೋಶ ರಚನೆ ಎಂದೊಡನೆ ಇದೇನಪ್ಪಾ ಆಗುಹೋಗದ ಕೆಲಸ. ಇದೇನು ವಿಶ್ವವಿದ್ಯಾಲಯವೇ? ಮುಂತಾಗಿ ಯೋಚಿಸಿ ಗಾಬರಿ ಆಗಬೇಕಾಗಿಲ್ಲ.
ಶಬ್ದಕೋಶ ರಚನೆಯಿಂದ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ, ಸ್ವಾವಲಂಬನೆ, ಸೂಕ್ಷ್ಮ ಗ್ರಹಿಕೆ, ಖಚಿತ ಜ್ಞಾನ, ನೆನಪು, ವಿಷಯ ಜ್ಞಾನ ಇತ್ಯಾದಿಗಳ ಪಟುತ್ವ ಬೆಳೆಯುತ್ತದೆ. ಈ ಶಬ್ದಕೋಶ ರಚನೆಯ ಕಾರ್ಯವನ್ನು ಆರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ವಿಸ್ತರಿಸಬಹುದು.
ಇದರಲ್ಲಿ ಕೇವಲ ಭಾಷೆಗೆ ಸಂಬಂಧಿಸಿ ಮಾತ್ರ ಇರಬೇಕಾಗಿಲ್ಲ. ಮಕ್ಕಳ ಜ್ಞಾನಕ್ಕೆ ಅನುಸರಿಸಿ ಭೂಗೋಲ ಪದಕೋಶ, ಚರಿತ್ರೆಯ ಪದಕೋಶ, ವಿಜ್ಞಾನ ಪದಕೋಶ ಹೀಗೆ ವೈವಿಧ್ಯಮಯವಾಗಿ ಮಾಡಬಹುದು.
ಕೆಲವು ಉದಾಹರಣೆಗಳು
ಆರನೆಯ ತರಗತಿ
ಮೃಗರಾಜ - ಸಿಂಹ, ಪಂಚಾಸ್ಯ
ನದಿ - ಹೊಳೆ, ದೊಡ್ಡಹಳ್ಳ
ಬಾನು - ಆಕಾಶ, ಆಗಸ
ಭಾನು - ಸೂರ್ಯ, ನೇಸರು
ಗುಲಾಬಿ - ಒಂದು ಹೂವಿನ ಹೆಸರು
ರಸ್ತೆ - ದಾರಿ, ಹಾದಿ, ಮಾರ್ಗ

ಏಳನೆಯ ತರಗತಿ
ಇಲ್ಲಿ ತುಸು ವಿಸ್ತರಿಸಬೇಕು. ಪದಕೋಶದಲ್ಲಿ ಉಪಯೋಗಿಸುವ ಸಂಕ್ಷಿಪ್ತ ಚಿಹ್ನೆಗಳ ಬಳಕೆ ಬರಬೇಕು. ಉದಾ: ನಾಮಪದ (ನಾ.ಪ)
ಕ್ರಿಯಾಪದ (ಕ್ರಿ.ಪ), ನಾಮ ವಿಶೇಷಣೆ (ನಾ.ವಿ)
ಭಾವನಾಮ (ಭಾ.ನಾ) ಇತ್ಯಾದಿ
ಅಡವಿ - (ನಾ.ಪ). ಬೆಟ್ಟ, ವನ
ನದಿ - (ರೂ.ನಾ) ಹೊಳೆ, ದೊಡ್ಡಹಳ್ಳ
ಆನಂದ - (ಭಾ.ನಾ) ಸಂತೋಷ, ಸುಖ
ಓಡು - (ಕ್ರಿ.ಪ) ವೇಗವಾಗಿ ಚಲಿಸು ಇತ್ಯಾದಿ.
ಹೀಗೆ ಎಂಟನೆಯ ತರಗತಿ, ಒಂಬತ್ತನೆಯ ತರಗತಿವರೆಗೆ ಶಬ್ದಕೋಶ ರಚಿಸಬಹುದು. ಇದಕ್ಕೆ ಒಂದು ಪ್ರತ್ಯೇಕ ನೋಟ್ಬುಕ್ ತಯಾರಿಸಬೇಕು. ಸ್ವಚ್ಛ, ಸುಂದರವಾಗಿ ಬರೆಯಬೇಕು. ಪರಿಶೀಲನೆಗೆ ಮಕ್ಕಳಲ್ಲಿಯೇ ಒಂದು ಕಮಿಟಿ ಮಾಡಬೇಕು. ಶಿಕ್ಷಕರು ಮಾರ್ಗದರ್ಶನ ಮಾಡಬೇಕು.

ಹತ್ತನೆಯ ತರಗತಿಯಲ್ಲಿ ವಾಗ್ರೂಢಿಗಳ ವಾಕ್ಯ ಪ್ರಯೋಗಗಳನ್ನು ಸೇರಿಸಬೇಕು. ಭೂಗೋಲ, ಇತಿಹಾಸ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಶಬ್ದಕೋಶ ರಚಿಸಬೇಕು.
ಹೀಗೇ ಮನೆಮಾತುಗಳ ಸಂಗ್ರಹಗಳನ್ನೂ ಮಕ್ಕಳಿಂದ ಮಾಡಿಸಬಹುದು. ಪ್ರೌಢಶಾಲೆಗಳಿಗೆ ಅನುಕೂಲವಾಗುವ ವಿಶ್ವಕೋಶವನ್ನು ರಚನೆ ಮಾಡಲು ಮಕ್ಕಳಿಗೆ ಪ್ರೇರೇಪಿಸಬಹುದು.
ಉದಾ: ನಮ್ಮ ನಮ್ಮ ಮನೆಗಳಲ್ಲಿಯೇ ಇರುವ ಸಾಮಾನುಗಳ ವಿವರ ಸಂಗ್ರಹಿಸುವುದು.
ಚೂಳಿ : ಇದು ಬೆತ್ತದಿಂದ ಮಾಡುವ ದೊಡ್ಡದಾದ ಬುಟ್ಟಿ. ರೈತರ ದಿನಚರಿಯಲ್ಲಿ ಬಹಳ ಮುಖ್ಯ ಪಾತ್ರವಹಿಸುವ ಸಾಧನ. ಇದು ಗುಡಿ ಕೈಗಾರಿಕೆಯ ಉತ್ಪನ್ನ. (ಸಾಧ್ಯವಾದರೆ ಚಿತ್ರ ಕೊಡಬಹುದು.)
ಹೀಗೇ ಬೆಳೆಸಬಹುದು.

ಮುಕ್ತ ಗ್ರಂಥಾಲಯ
ಈಗಂತೂ ಶಾಲೆಗಳಿಗೆ ಸರಕಾರ ತಾನೇ ಗ್ರಂಥ ಖರೀದಿಸಿ ಕೊಡುತ್ತದೆ. ಆ ಪುಸ್ತಕಗಳ ಸದುಪಯೋಗ ಆಗಬೇಕಾದದ್ದು ಅಗತ್ಯ. ಶಾಲೆಯಲ್ಲಿ ಇರುವ ಪುಸ್ತಕಗಳನ್ನು ಒಂದು ಕಪಾಟಿನಲ್ಲಿ ಇಟ್ಟು ಯಾವುದೇ ಸಮಯದಲ್ಲಿ (ಸಮಯ ಸಿಕ್ಕಾಗ) ಅವರೇ ತೆಗೆದು ಓದಲು ಹೇಳಬೇಕು. ಪುಸ್ತಕವನ್ನು ಚೆಂದವಾಗಿ, ಜೋಪಾನವಾಗಿ ಇಡುವುದನ್ನು ಕಲಿಸಬೇಕು. ಪುಸ್ತಕ ಪ್ರೀತಿ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ವಾಚನಾಭಿರುಚಿ ಬೆಳೆಯುತ್ತದೆ. ಬಹುತೇಕ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ನೇರ ಪುಸ್ತಕದ ಕಪಾಟಿಗೆ ಕೈಹಾಕಲು ಬಿಟ್ಟರೆ ಪುಸ್ತಕಗಳು ಹಾಳಾಗುತ್ತವೆ ಎಂಬ ಭಾವನೆ ಇದೆ. ಇದು ಹೋಗಬೇಕು.
ಹೀಗೆ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಬೆಳವಣಿಗೆಯ ದಿಕ್ಕಿನಲ್ಲಿ ಪ್ರಯೋಗ ಮಾಡಬಹುದಾಗಿದೆ. ಪ್ರಯೋಗಶೀಲತೆ ಎನ್ನುವುದೇ ಒಂದು ಕಷ್ಟ ಮತ್ತು ಜವಾಬ್ದಾರಿ. ಆದರೆ ಇಂಥ ಕಷ್ಟ ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡಾಗಲೇ ಫಲ ಪ್ರಾಪ್ತವಾಗುವುದು.

ಆರ್.ವಿ. ಜೀವ ಯಾನ

                               ಆರ್.ವಿ. ಜೀವ ಯಾನ


ಹೆಸರು: : ಆರ್. ವಿ. ಭಂಡಾರಿ (ರೋಹಿದಾಸ ವಿಠ್ಠಲ ಭಂಡಾರಿ)
ಅಂಚೆ ವಿಳಾಸ: : ಕೆರೆಕೋಣ, ಅಂಚೆ: ಅರೆಅಂಗಡಿ ತಾ: ಹೊನ್ನಾವರ, ಉತ್ತರ ಕನ್ನಡ-581 430
ಜನ್ಮ ದಿನಾಂಕ: : 5. ಮೇ. 1936
ಅಗಲಿದ್ದು                    :25 ಅಕ್ಟೋಬರ್ 2008
ವಿದ್ಯಾರ್ಹತೆ : ಎಂ.ಎ. (ಇಂಗ್ಲಿಷ್), ಎಂ.ಎ.(ಕನ್ನಡ) ಪಿ.ಎಚ್.ಡಿ.
        (ಮಂಗಳೂರಿನ ವಿಶ್ವವಿದ್ಯಾಲಯ) 1995                                          
ವಿಷಯ : ನಿರಂಜನ, ಬಸವರಾಜ ಕಟ್ಟೀಮನಿ, ವ್ಯಾಸರಾಯ ಬಲ್ಲಾಳ ಮತ್ತು ಚದುರಂಗರ                                                                                                              
        ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ.
ವೃತ್ತಿ        : ಪ್ರಾಥಮಿಕ ಶಾಲಾ ಶಿಕ್ಷಕ, ನಿವೃತ್ತಿ 1994 ಜೂನ್.
ಕುಟುಂಬ : ಸರಸ್ವತಿ (ತಾಯಿ) ಸುಬ್ಬಿ (ಹೆಂಡತಿ) ಇಂದಿರಾ, ಮಾಧವಿ, ವಿಠ್ಠಲ (ಮಕ್ಕಳು) ಛಾಯಾ,
       ಅನಿಲ (ಮೊಮ್ಮಕ್ಕಳು) ಕಮಲಾಕರ (ಅಳಿಯ) ಯಮುನಾ ಗಾಂವ್ಕರ (ಸೊಸೆ)

ಸಾಹಿತ್ಯಕ ಚಟುವಟಿಕೆ:

  • ಕನರ್ಾಟಕ ಸಾಹಿತ್ಯ ಅಕಾಡೆಮಿ ಸದಸ್ಯ 1992-1995 
  • ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಲ್ಲಿ ಒಬ್ಬರು. (ಪ್ರೋ. ಚಂದ್ರಶೇಖರ ಪಾಟೀಲ, ಡಾ. ಮಲ್ಲಿಕಾ ಘಂಟಿ,      
  •                                                                                                          ಸಿ.ಕೆ. ಮಹೇಶರೊಂದಿಗೆ)
  • ಚಿಂತನ ಉತ್ತರ ಕನ್ನಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು.
  • ಬಂಡಾಯ ಪ್ರಕಾಶನ ಸ್ಥಾಪನೆ 
  • ರಂಗದರ್ಶನ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯ.
  • 'ಟೀಚರ್' ಶೈಕ್ಷಣಿಕ ಪತ್ರಿಕೆಯ ಸಲಹಾ ಸಮಿತಿ ಸದಸ್ಯ.
  • ಸಾಕ್ಷರತಾ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ.
  • ಸಾಕ್ಷರತಾ ಜ್ಞಾನವಾಹಿನಿಯ  ಪ್ರಕಾಶಿತ ಅಕ್ಷರ ಸಂಗಾತಿ, ಅಕ್ಷರವಾಹಿನಿ ಮಾಸಿಕ ಪತ್ರಿಕೆಯ     ಸಂಪಾದಕ.
  • ಅಖಿಲ ಕನರ್ಾಟಕ ಕೇಂದ್ರ ಕ್ರಿಯಾ ಸಮಿತಿ - ಜಿಲ್ಲಾ ಅಧ್ಯಕ್ಷ.
  • ಉ.ಕ. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ.
  • ಜಿಲ್ಲಾ ಗ್ರಂಥಾಲಯ ಸಮಿತಿ ಸದಸ್ಯ.
  • ಭಾರತ ಜ್ಞಾನ - ವಿಜ್ಞಾನ ಸಮಿತಿ (ಬಿ.ಜಿ.ವಿ.ಎಸ್.) ಜಿಲ್ಲಾ ಸಮಿತಿ ಅಧ್ಯಕ್ಷ.


ಪ್ರಶಸ್ತಿಗಳು

  • ವಾಜಂತ್ರಿ ಶಿಕ್ಷಕ ಪ್ರಶಸ್ತಿ
  • ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ
  • ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಪ್ರಶಸ್ತಿ
  • ರಾಜ್ಯ ಸರಕಾರದ ಶಿಕ್ಷಕ ರಾಜ್ಯ ಪ್ರಶಸ್ತಿ -                    1994 
  • ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ -                    1996
  • 'ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ 2002ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
  • 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ 
  • ಭಾರತೀಯ ದಲಿತ ಸಾಹಿತ್ಯ ಅಕಾಡಮಿಯ ಅಂಬೇಡ್ಕರ ಫೆಲೋಶಿಪ್ - 1997
  • ಕನರ್ಾಟಕ ಸಾಹಿತ್ಯ ಅಕಾಡಮಿ ಗೌರವವಾಷರ್ಿಕ ಪ್ರಶಸ್ತಿ- 2005


ಭಾಗವಹಿಸಿರುವ ಪ್ರಮುಖ ಕಾರ್ಯಕ್ರಮಗಳು


  • ಅಂಬೇಡ್ಕರ ಮತ್ತು ವರ್ತಮಾನ - ವಿಚಾರ ಸಂಕಿರಣ. ಸ್ನಾತಕೋತ್ತರ ಕೇಂದ್ರ - ಕೋಲಾರ 
  • ಕನರ್ಾಟಕ ಸಂಘ ಮುಂಬೈ - 'ಜಾಗತೀಕರಣದ ಪರಿಣಾಮಗಳು' ಗೋಷ್ಠಿ - ಅಧ್ಯಕ್ಷತೆ
  • 'ಶತಮಾನದ ಮಕ್ಕಳ ಸಾಹಿತ್ಯ' ಉಪನ್ಯಾಸ - ಧಾರವಾಡ
  • ದಸರಾ ಕವಿಗೋಷ್ಠಿ - ಮೈಸೂರು
  • ಬಂಡಾಯ ಸಾಹಿತ್ಯ ದಶಮಾನೋತ್ಸವ  ವಿಚಾರ ಸಂಕಿರಣ - ಕುವೆಂಪು ವಿ.ವಿ. ಶಿವಮೊಗ್ಗ
  • 'ಮಕ್ಕಳಿಗಾಗಿ ಕಥೆ' (ಬಾದಾಮಿ) ಗೋಷ್ಠಿಯ ಅಧ್ಯಕ್ಷತೆ 
  • 'ಬಂಡಾಯ 25' ವಿಚಾರಗೋಷ್ಠಿಯ ಅಧ್ಯಕ್ಷತೆ, ಬೆಂಗಳೂರು
  • ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಲಿತಗೋಷ್ಠಿಯಲ್ಲಿ - ಪ್ರಬಂಧ ಮಂಡನೆ
  • ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಗಳಲ್ಲಿ ಉಪನ್ಯಾಸ
  • 'ಸಿಸು ಸಾಹಿತ್ಯ' ರಾಜ್ಯ ವಿಚಾರ ಸಂಕಿರಣ, ಧಾರವಾಡ - ಪ್ರಬಂಧ ಮಂಡನೆ 
  • ಉತ್ತರ ಕನ್ನಡ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ - 2005, ಜೋಯಿಡಾ - ಸವರ್ಾಧ್ಯಕ್ಷತೆ
  • 'ಸಾಂಸ್ಕೃತಿಕ ಮುಖಾಮುಖಿ' ಕನ್ನಡ 'ಧಮರ್ಾಮೃತ' ಕನ್ನಡ ವಿ.ವಿ.ಹಂಪಿ ಯಲ್ಲಿ ಪ್ರಬಂಧ ಮಂಡನೆ
  • ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ; ಬೀದರ- ಪ್ರಬಂಧ ಮಂಡನೆ, ಇತ್ಯಾದಿ.


********************
                                               2.  ಆರ್.ವಿ. ಕೃತಿ ಸೂಚಿ
ಅ)  ಕವನ ಸಂಗ್ರಹ:

1) ಕಣ್ಣೇಕಟ್ಟೆ ಕಾಡೇ ಗೂಡೆ - 1977
2) ಕೊಲೆಗಾರ ಪತ್ತೆಯಾಗಲಿಲ್ಲ - 1981
3) ಹದ್ದುಗಳು
- 2007
ಆ) ಕಾದಂಬರಿ :
4) ಬೆಂಕಿಯ ಮಧ್ಯೆ - 1984
5) ಬಿರುಗಾಳಿ - 2001
6) ನೆರೆಹಾವಳಿ ಮತ್ತು ಗೋಡೆಗಳು - 2002
7) ತಲೆಮಾರು

  - 2004
ಇ) ಕಥಾ ಸಂಕಲನ:
8) ಮೀನ್ ಪಳ್ದಿ
- 2007
ಈ) ವಿಮಶರ್ೆ:
9) ಸಮಾಜವಾದಿ ವಾಸ್ತವ - 1989
10) ವರ್ಣದಿಂದ ವರ್ಗದ ಕಡೆಗೆ - 2003
11) ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - 2003
12) ಒಳದನಿ - 2005
13) ಸಾಹಿತ್ಯ ಮತ್ತು ಪ್ರಭುತ್ವ - 2005
14) ದಿವ್ಯಾಗ್ನಿ - (ಅಚ್ಚಿನಲ್ಲಿ)
15) ಕುವೆಂಪು ದೃಷ್ಠಿ-ಸೃಷ್ಠಿ

16) ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - 1984
17) ಬೆಳಕಿನ ಕಡೆಗೆ (13  ನಾಟಕ)
18) ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - 2004
19) ಬಣ್ಣದ ಹಕ್ಕಿ (2 ನಾಟಕಗಳು) - 2005
20) ಆಡು ಬಾ ಹಾಡು ಬಾ
21) ಹೂವಿನೊಡನೆ ಮಾತುಕತೆ - 2007
22) ಯಶವಂತನ ಯಶೋಗೀತ (ಕಾದಂಬರಿ) - 2002
23) ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ)                                           - 2008
24) ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ)                         -2009
25) ಪ್ರೀತಿಯ ಕಾಳು  (ನಾಟಕ)                                                     -2011
26) ಒಂದೇ ಗೂಡಿನ ಹಕ್ಕಿಗಳು(ನಾಟಕ)                                           -2011

ಊ) ನಾಟಕ:
27) ಯಾನ ಮತ್ತು ಇತರ ನಾಟಕಗಳು - 2001

ಎ) ವ್ಯಕ್ತಿ ಚಿತ್ರ:
28) ನಿರಂಜನ - 2005
29) ಕಾಡಿನ ಕವಿ (ಕುವೆಂಪು) - 2004
30) ನೇತಾಜಿ ಸುಭಾಶ್ಚಂದ್ರ ಬೋಸ್ - 2003
ಏ) ಸಾಕ್ಷರತಾ ಸಾಹಿತ್ಯ:
31) ಕೇವಲ ಸಹಿ - 1994
32) ಐದು ಯಕ್ಷಗಾನ ಏಕಾಂಕಗಳು - 1994
33) ಇಟ್ಟ ಹೆಜ್ಜೆ ಮುಂದಕೆ - 2002
34) ನಾನು ಪ್ರೀತಿಸುತ್ತೇನೆ.(ಸಾಕ್ಷರ ಸಾಹಿತ್ಯ)

ಐ) ಇತರೆ:
35) ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - 2004
ಒ) ಸಂಪಾದನೆ:
36) ರಸರಾಜ
37) ದೀಪರಾಧನೆ
38) ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ)
39) ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು)
40) ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು)




ಕವಿ 'ವಿಡಂಬಾರಿ' ಮತ್ತು ಅವರ 'ಕಾವ್ಯ'- ಡಾ . ವಿಠ್ಠಲ ಭಂಡಾರಿ, ಕೆರೆಕೋಣ,vVITTAL BHANDARI



                                                        ಕವಿ 'ವಿಡಂಬಾರಿ' ಮತ್ತು ಅವರ 'ಕಾವ್ಯ'


ವಿಡಂಬಾರಿಯವರ ಬದುಕು ಪ್ರಾರಂಭವಾಗಿದ್ದೇ ದುರಂತದ ಮೂಲಕ. ಮನುಷ್ಯ ಲೋಕಕ್ಕೆ  ಶಾಪವಾಗಿರುವ, ಸೂಳೆ ಬಿಡುವ ಪದ್ದತಿ ಇನ್ನೂ ಜೀವಂತವಾಗಿರುವ ಕಾಲ ಅದು. ದೇವರ ಹೆಸರಿನಲ್ಲಿ ಊರ ಪ್ರತಿಷ್ಟಿತರೋ,ಪೂಜಾರಿಯೋ ತಮ್ಮ ತೆವಲಿಗೆ ಕೆಳಜಾತಿಯ ಹೆಣ್ಣುಗಳನ್ನು ದೇವದಾಸಿಯಾಗಿಸುವುದನ್ನು ಸ್ವತಃ ದೇವರಿಗೂ(!?) ನಿಲ್ಲಿಸಲಾಗಿರಲಿಲ್ಲ.

ದೇವಸ್ಥಾನದ ದೇವರೆಂಬ ಮೂತರ್ಿಯ ಎದುರು ತನ್ನ ತಾಯಿಯ ತಂದೆಯವರನ್ನು ಕರೆತಂದು ನಿಲ್ಲಿಸಿ, ನೋಡು, ನಿನ್ನ ಹಿರಿಯ ಮಗಳ ಮೇಲೆ ನಮ್ಮ ದೇವರಿಗೆ ಮನಸ್ಸಾಗಿದೆ. ಕಾರಣ ನಿನ್ ಮಗಳನ್ನು ನಾಳೇಯೇ ದೇವರ ಹೆಸರಿನಲ್ಲಿ ಬಿಡದಿದ್ದರೆ ನಿನ್ನ ಕುಲವೇ ನಾಶವಾದೀತೆಂದು ಹೇಳಿದರಂತೆ. ಆಗ ತಾಯಿಯ  ತಂದೆಯಾದ ವೆೆಂಕಟಪ್ಪ ಭಂಡಾರಿ ಹೌದ್ರಾ ಒಡ್ಯಾ,ಆಗ್ಲಿ ಒಡ್ಯಾ ಅಂದರಂತೆ. ಹೀಗಾಗಿ ವೆಂಕಪ್ಪ ಭಂಡಾರಿಯವರ ಮುಗ್ಧತನ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟವರ ಸ್ವಾರ್ಥಕ್ಕೆ ಬಲಿಯಾಗಿ ನನ್ನ ತಾಯಿಯಾದ ಗಣಪಿ ದೇವರ ಹೆಸರಿನಲ್ಲಿ ಸೂಳೆ ಆದಳಂತೆ. [ಅಂಚೆಪೇದೆಯ ಆತ್ಮ ಚರಿತೆ] ಎಂದು ತಾನು ಹುಟ್ಟುವ ಮೊದಲು ನಡೆದು ಹೋದ ಒಂದು ಅಮಾನವೀಯ ಘಟನೆಯನ್ನು ನೆನಪಿಸಿಕೊಳ್ಳಲು ವಿಡಂಬಾರಿ ಹಿಂಜರಿಯುವುದಿಲ್ಲ.

ಇವರು ಹುಟ್ಟಿದ್ದು 1935ರಲ್ಲಿ ಅಂದು ಅಮವಾಸ್ಸೆ ಮತ್ತೆ ಅಪಶಕುನ. ಅಮಾವಾಸ್ಸೆ ದಿನ ಹುಟ್ಟಿದ ಮಗುವನ್ನು ಬೇರೆಯವರಿಗೆ ಕೊಡುವ ರಿವಾಜಿತ್ತು. ಕವಿ  ವಿಡಂಬಾರಿಯವರನ್ನೂ ಹುಟ್ಟಿದ 12ನೇ ದಿವಸಕ್ಕೆ ಬೇರೆಯವರಿಗೆ ಕೊಡಲಾಯಿತು. ಸಾಕು ತಂದೆ -ತಾಯಿಯ ಪ್ರೀತಿ ಹೆಚ್ಚುದಿನ ಇರಲಿಲ್ಲ. ಸಾಕುತಾಯಿ ತೀರಿಕೊಂಡ ನಂತರ ಆ ಸ್ಥಾನಕ್ಕೆ ಬಂದ ಮಲತಾಯಿಯ ಉಪಟಳ,ಹಿಂಸೆಯನ್ನು ಸಹಿಸಬೇಕಾಯಿತು. ಮನೆಯಾಚೆ ಹೋಗಲೇಬೇಕಾಯಿತು.

ಯಾರದೋ ನೆರಳೀನಲಿ ನಾ ಬಾಳಿ ಬೆಳೆದೆ
ಕೂಳಿಗೂ ವಿಧವಿಧದ ವೇಷವನ್ನು ತಳೆದೆ ಎನ್ನುತ್ತಾರೆ.

ಅಲ್ಲಿಂದ ಪ್ರಾರಂಭವಾದ ಕಷ್ಟದ ಪರಂಪರೆ ಇನ್ನೂ ಮುಂದುವರಿದೇ ಇದೆ. ಹೆಚ್ಚು ಓದಲಾಗಲಿಲ್ಲ. ಹೊಟ್ಟೆ ಹೊರೆದುಕೊಳ್ಳುವ ಕಡೆ ಗಮನ. 3ನೇ ಈಯತ್ತೆಗೆ ಶಾಲಾ ಓದು ಮುಕ್ತಾಯ. ದೇವಸ್ಥಾನದ ಚಾಕರಿ, ಅಡಿಕೆ ಸ್ವಚ್ಛಗೋಳಿಸುವ ಕೂಲಿ, ಸ್ವಾಮಿಗಳೊಂದಿಗೆ ವಾದ್ಯ(ಪಂಚವಾದ್ಯ)ಕ್ಕಾಗಿ ತಿರುಗಾಟ.... ಹೀಗೆ  ಹೊಟ್ಟೆಗಾಗಿ ವಿವಿಧ ವೇಷಗಳು. ನಂತರ  ತಂದು ನಿಲ್ಲಿಸಿದ್ದು ಬ್ರಾಂಚ ಪೋಸ್ಟ್ ಆಫೀಸ್ನಲ್ಲಿ ಅಂಚೆಯಣ್ಣನಾಗಿ(ಪೋಸ್ಟಮ್ಯಾನ್)

ಆಗಲೇ ಯಕ್ಷಗಾನ, ನಾಟಕಗಳಲ್ಲ್ಲಿ ಆಸಕ್ತಿ. ಹಲವು ಪಾತ್ರ ನಿರ್ವಹಿಸಿ 'ಸೈ'ಎನಿಸಿಕೊಂಡರು. ಓದು ಆಗಲೇ ಪ್ರಾರಂಭ.ದಿನಕರ ದೇಸಾಯಿ ಹೊರಡಿಸುತ್ತಿದ್ದ 'ಜನಸೇವಕ'ದ ಮೇಲೆ ಕಣ್ಣು. ಅಂತ್ಯ ಪ್ರಾಸ, ಅನಿರೀಕ್ಷಿತ ತಿರುವಿನ ಚೌಪದಿ ಇವರ ಗಮನ ಸೆಳೆಯಿತು. ಮುಂದೆ ಇದೇ ಇವರ ಮಾಧ್ಯಮವೂ ಆಯಿತು.

ಹೀಗೆ ಹುಟ್ಟಿಸಿದ ಮನೆ ನೆರಳಾಗಲಿಲ್ಲ; ಎತ್ತಿ ಆಡಿಸಿದವರು ಬೇರೆ , ಮೊಲೆಹಾಲನಿಕ್ಕಿ ಪ್ರೀತಿ ಹಂಚಿದವರು ಬೇರೆ, ತುತ್ತ ನಿಕ್ಕಿದವರು ಬೇರೆ; ಅಕ್ಷರ ದೀಕ್ಷೆ ಕೊಟ್ಟವರು ಬೇರೆ.... ಹೀಗೆ ಸರ್ವರಲಿ ಒಂದೊಂದು ನೆರವು ಪಡೆದು ವಿಡಂಬಾರಿಯಾಗಿ ಬೆಳೆದರು. ಅವರಿಗೆ ಅವರೇ ಮಾರ್ಗದರ್ಶಕರು, ತಾನು ಏಕಲವ್ಯನ ಮಗನ ಮೊಮ್ಮಗನು ಎನ್ನುತ್ತಾರೆ. ಅಂದಿನ ಅದೇ ಹಠ,ಸಾಧಿಸುವ ಏಕಾಗ್ರತೆಯನ್ನು ಅವರು ಇಂದಿಗೂ ಜತನದಿಂದ ಕಾಯ್ದುಕೊಂಡು ಬಂದಿದ್ದಾರೆ.

'ವಿಶಾಲ ಕನರ್ಾಟಕ' ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು 'ವಿಡಂಬಾರಿ' ಎಂದು ಬದಲಿಸಿ ಪ್ರಕಟಿಸಿದರು. (ಆಗ ಅಂಚೆ ನೌಕರರ  ಹೋರಾಟ ನಡೆಯುತ್ತಿತ್ತು. ಇಲಾಖೆಯ ವಿರುದ್ಧ ಬರೆದ ಚುಟುಕು ಪ್ರಕಟವಾಗಿದ್ದರೆ ಅನವಶ್ಯಕ ತೊಂದರೆ ಎಂದು ಸಂಪಾದಕರೇ ನಿಜ ನಾಮಧೇಯವನ್ನು ಬದಲಿಸಿದ್ದರು) ಅದೇ ಮುಂದೆ ಕಾವ್ಯನಾಮವೂ ಆಯಿತು. ಹಾಗೆ ನೋಡಿದರೆ ಅವರ ಬದುಕನ್ನು ರೂಪಿಸಿದ್ದು ಅಂಕೋಲೆ. ಅಲ್ಲಿಯ  ಸಮಾಜವಾದಿ ಹೋರಾಟಶಾಲಿ ಸ್ನೇಹಿತರು. ಅಂಚೆನೌಕರಿಯೂ ಹೌದು.ಬದುಕಿಗೆ ಪಕ್ವತೆ ತಂದುಕೊಟ್ಟಿದ್ದು ಭಟ್ಕಳದ ಶಿರಾಲಿ. ಅಲ್ಲಿ ಅವರು ನಿವೃತ್ತಿಯೂ ಆದರು. ಬದುಕಿಗೆ ಹೊಸಚಾಲನೆಕೊಟ್ಟಿದ್ದು ಶಿರಸಿಯ 'ಚಿಂತನ' ಪುಸ್ತಕ ಮಳಿಗೆ. ಪುಸ್ತಕಗಳೇ ಅವರ ದಿನಚರಿಯಾಯಿತು. ಪ್ರತಿದಿನ ಶಿರಸಿ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸಲ್ಲ್ಲಿ ಹತ್ತಿ ಭಾಷಣಮಾಡಿ ಸಾವಿರಾರು ಪುಸ್ತಕಗಳನ್ನು ಮಾರುತ್ತಿದ್ದರು!. ಅಂಚೆಯಣ್ಣ  ಪುಸ್ತಕದ ಅಜ್ಜನಾಗಿ ಬದಲಾದರು. ಸಹಸ್ರ ಸಹಸ್ರ ಪುಸ್ತಕ ಮಾರಿ ಓದುವ ಸಂಸ್ಕೃತಿ ಹುಟ್ಟು ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು. ಮುಗ್ಧತೆ, ವಿನಯ, ಮುಜುಗರ,ಸಹನೆ ಅವರೊಂದಿಗೆ ಬೆಳೆದ ಗುಣಗಳು. ವೈರಿಗಳನ್ನು ಕ್ಷಮಿಸಿ ಬಿಡುವ ಹೃದಯವೈಶಾಲ್ಯ ಅವರಲ್ಲಿದೆ. ಆದರೆ  ಸ್ವಾಭಿಮಾನ,ಆಶಾವಾದ ಸಾಧಿಸುವ ಛಲ ಅದರೊಳಗೆ ಸದಾ ಜಾಗೃತವಾಗಿವೆ.

ವಿಡಂಬಾರಿಯವರು ಬರೆದಂತೆ ಬದುಕಿದವರು. ಇವೆರಡರ ನಡುವೆ ಮುಚ್ಚುಮರೆಯಾಗಲೀ, ಕಂದಕವಾಗಲೀ ಇಲ್ಲ. ತೀರಾ ಗ್ರಾಮೀಣ ಭಾಗದಲ್ಲಿ ನೆಲೆನಿಂತು ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಸಂಸ್ಕೃತಿಯನ್ನು ಜೀವಂತ ಇಟ್ಟಿದ್ದಾರೆ.ಕಿರು ತೊರೆಯ ಹಾಗೆ ನೀಧಾನವಾಗಿ ಹರಿಯುತ್ತಿದೆ. ದೊಡ್ಡ ದೊಡ್ಡ ನದಿಗಳಲ್ಲಿ ಪ್ರವಾಹ ಬರುತ್ತದೆ. ಹೋಗುತ್ತದೆ. ಅದಕ್ಕೊಂದು ನಿಯತತೆ ಇಲ್ಲ. ಆದರೆ ಇಂತಹ ಕಿರುತೊರೆಗಳು ಹಾಗಲ್ಲ. ಉಬ್ಬರ ಇಳಿತಗಳಿಲ್ಲದೆ ಸದಾ ಹರಿವ ನೆಲವನ್ನು ಬರಿದಾಗದಂತೆ ಕಾಯುತ್ತವೆ. ಸಾಹಿತ್ಯದ ಅಂತರ್ಜಲವನ್ನು ಕಾಯುತ್ತಾರೆ. ಆದರೇನು ಮಾಡೋಣ ನದಿಗಳು ನಮ್ಮ ಇತಿಹಾಸದ ಭಾಗವಾಗುತ್ತವೆ, ಪತ್ರಿಕೆಗಳಿಗೆ ಸುದ್ಧಿಯಾಗುತ್ತವೆ. ಕಿರುತೊರೆಗಳಿಗೆ ಹೆಸರೂ ಇಲ್ಲ.ಇತಿಹಾಸದಲ್ಲಿ ಜಾಗವೂ ಇಲ್ಲ.
                               
ವಿಡಂಬಾರಿಯವರ 4 ಕವನ ಸಂಕಲನ ಈವರೆಗೆ ಪ್ರಕಟವಾಗಿವೆ. 1981 ರಲ್ಲಿ 'ಒಗ್ಗರಣೆ' 1986ರಲಿ 'ಕವಳ'2004ರಲ್ಲಿ 'ಕುದಿ ಬಿಂದು' 2010ರಲ್ಲಿ 'ವಿಡಂಬಾರಿ ಕಂಡಿದ್ದು' ಚುಟುಕು ಸಂಕಲನವಾದರೆ 'ಅಂಚೆ ಪೇದೆಯ ಆತ್ಮ ಚರಿತೆ' ಅವರ ಆತ್ಮಕಥನ.ಇದನ್ನು ಹೊರತಾಗಿಸಿ ಪ್ರಕಟಣೆಗಾಗಿ ಸುಮಾರು 3,000 ಚುಟುಕುಗಳು ಕಾದಿವೆ.

'ಚುಟುಕು' ಕಾವ್ಯ ಪ್ರಕಾರವೇ ಅಲ್ಲ ಎನ್ನುವ ವಾದವೂ ಇದೆ. ಖಂಡಿತವಾಗಿಯೂ ಒಂದು ಅಕಾಡೆಮಿಕ್ ವಿಮಶರ್ೆಯ ಪರಿಭಾಷೆಯಲ್ಲಿ ಚುಟುಕು ಕಾವ್ಯವಾಗಿ ಸ್ಥಾನ ಪಡೆದಿರಬಹುದು.  ಆದರೆ ಸಾಮಾನ್ಯ ಓದುಗರ ಮಧ್ಯೆ ಜನಸಾಮಾನ್ಯರ ಮಧ್ಯೆ 'ಚುಟುಕು' ವಿಶಿಷ್ಟವಾದ ಸ್ಥಾನಗಳಿಸಿದೆ. ಅತ್ಯಂತ ಸರಳ ಬಂಧ, ಅಂತ್ಯಪ್ರಾಸ,ಸ್ಪಷ್ಟ ಆಶಯ, ಕೊನೆಯ ಸಾಲಿನಲ್ಲಿ ಕಾಣುವ ತಿರುವುಗಳನ್ನು ಒಳಗೊಂಡು 4 ಸಾಲಿನ ಚುಟುಕು ಮನನಾಟುವಂತೆ ವ್ಯಂಗ್ಯ-ವಿಡಂಬನೆ ಮತ್ತು ಚಾಟಿ ಏಟಿನಂತೆ ಹರಿತವಾಗಿರುವುದರಿಂದ ಓದುಗರಿಗೆ ಹೆಚ್ಚು ಆಪ್ತವಾಗುತ್ತಿದೆ. ಜನರನ್ನು ಬೇಗ ತಲುಪುತ್ತದೆ. ಹಾಗಾಗಿಯೇ ದಿನಕರದೇಸಾಯಿಯವರು ತನ್ನ ಹೋರಾಟದ ಭಾಗವಾಗಿ ಸ್ವತಃ ಚೌಪದಿಯನ್ನು ಬರೆದರು;ಬಳಸಿದರು. ಓದುಗರಲ್ಲಿ ಹೋರಾಟ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ,ಹೋರಾಟಕ್ಕೆ ಜನರನ್ನು ಅಣಿ ನೆರೆಸುವದರಲ್ಲಿ ಇದು ಸಾಧ್ಯಂತವಾಗಿ ದುಡಿಯಿತು.

ದೇಸಾಯಿವರ ನಂತರ ಈ ಸ್ಥಾನ ವಿಡಂಬಾರಯವರಿಗೇ ಸೇರಬೇಕು. ದಿನಕರದೇಸಾಯಿಯವರನ್ನು ಬಿಟ್ಟರೆ ಚುಟುಕುಗಳನ್ನು ವಿಡಂಬಾರಿಯವರಷ್ಟು ವ್ಯಾಪಕವಾದ ರೀತಿಯಲ್ಲಿ ನಮ್ಮ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿ ಆರಿಸಿಕೊಂಡವರು ಕನ್ನಡದಲ್ಲಿ ತೀರಾ ವಿರಳ ಎನ್ನುತ್ತಾರೆ ಹಿರಿಯ ಲೇಖಕ ಯಶವಂತ ಚಿತ್ತಾಲರು. ಹಾಗೆ ನೋಡಿದರೆ ದಿನಕರ ದೇಸಾಯಿವಯವರಂತೆ ಅವೂ ಸತ್ವ ಹಾಗೂ ಸಂಖ್ಯೆಯಲ್ಲಿ ಚುಟುಕ ಬರೆದವರು ವಿಡಂಬಾರಿಯವರೇ ಎಂಬುದು ಗಮನಾರ್ಹ ಸಂಗತಿ ಎಂದಿದ್ದಾರೆ ದಿವಂಗತ ಜಿ.ಎಸ್. ಅವಧಾನಿಯವರು. ವಿಡಂಬಾರಿಯವರೂ ತಮ್ಮ ಆತ್ಮಕತೆಯಲ್ಲಿ ದೇಸಾಯಿಯವರು ನೀಡಿದ ಪ್ರೀತಿ, ಮಾರ್ಗದರ್ಶನವನ್ನು  ನೆನಪಿಸಿಕೊಂಡಿದ್ದಾರೆ

'ಬರಹಕ್ಕೆ ದಿನಕರನನ್ನು ಗುರುವೆಂಬೆ
ಬರೆವಾಗ ನಿತ್ಯವೂ ನಾ ಸ್ಮರಿಸಿಕೊಂಬೆ 'ಎಂದು ಚುಟುಕುಗಳಲ್ಲಿಯೂ ದೇಸಾಯಿವರನ್ನು ನೆನೆಯುತ್ತಾರೆ.

ಮಾತ್ರವಲ್ಲ

'ಕುಳಿತಲ್ಲಿ ನೋಡುತ್ತಾ ತಮ್ಮ ಅವತಾರ
ಹೆಣೆಯುತ್ತಾ ಇಹೆನಯ್ಯ ಚುಟುಕೆಂಬ ಹಾರ 'ಎನ್ನುತ್ತಾರೆ.

ಆದರೆ ಅವರ ಚೌಪದಿಯೆಲ್ಲವೂ ದಿನಕರರ  ಅಂಧಾನುಕರುಣೆಯಲ್ಲಿ ಇವರ  ಸ್ವಂತಿಕೆ ಕೂಡ ಸಾಕಷ್ಟಿದೆ.
'ಆದರೂ ಇನ್ನೊಂದು ಮಾತುಂಟು ಕೇಳಿ
ತುಂಬಿಹೆನು ಇದರೊಳಗೆ ನನ್ನದೇ ಗಾಳಿ '
ಎನ್ನುತ್ತಾರೆ. ಚುಟುಕ ವಿಡಂಬಾರಿಯವರ ಅಭಿವ್ಯಕ್ತಿಯ ಮಾಧ್ಯಮ.                            
'ನನ್ನ ಮನ ಕುದಿಕುದಿದು ಸಿಡಿದುಕ್ಕಿ ಬಂದು
ಚೆಲ್ಲುತಿದೆ ಆಗಾಗ ಒಂದೊಂದು ಹುಂಡು' (ಒಗ್ಗರಣೆ)
ಎಂದು ಚುಟುಕಿನ ಹಿಂದಿರುವ ಆಶಯವನ್ನು ಹೇಳುತ್ತಾರೆ

ಬದುಕಿನ ತುಂಬಾ ನೋವುಂಡ ವಿಡಂಬಾರಿಯವರು ಒಂದರ್ಥದಲ್ಲಿ ಪುರಾಣದ ಕತೆಯಲ್ಲಿ ಬರುವ ಶಿವನಂತೆ. ನೋವನ್ನು, ನಿಂದನೆಯನ್ನು ಗಂಟಲಲ್ಲಿಯೇ ಧರಿಸಿದ್ದಾರೆ. ಅದು ಮೈಗೊಳ್ಳಲು ಬಿಡಲಿಲ್ಲ. ಈ ನೋವೆ ಚುಟುಕಾಗಿದೆ.
'ಇದುವರೆಗೆ ಬಾಳಿನಲಿ ಕಂಡುಂಡ ನೋವು
ಮೂಡಿಸಿತು ಒಂದೊಂದೆ ಚುಟುಕೆಂಬ ಹೂವು'.

 ಅಂದರೆ ನೋವು ಇಲ್ಲಿ ವೈಭವೀಕರಣಗೊಂಡಿಲ್ಲ. ಬದಲಾಗಿ ಅದನ್ನು ಹೂವನ್ನಾಗಿಸಿದ್ದಾರೆ ವಿಡಂಬಾರಿ. ಆದರೆ ಒಮ್ಮೊಮ್ಮೆ ನೋವು ಪ್ರಕಟವಾಗುವುದು ಹೀಗೆ.

'ನೋವುಗಳು ಕಾಡುತ್ತಾ ಎದೆಯೊಳಗೆ ಬಾವು
ಎದ್ದೆದ್ದು ಒಡೆದೊಡೆದು ಸುರಿಯುವುದು ಕೀವು
ಕೀವಿನೊಳು ಆಗಾಗ ಚುಟುಕುಗಳು ತೇಲಿ
ಬರುತಿರಲು ನಾನೇನು ಮಾಡುವುದು ಹೇಳಿ' ಅವರ ಜಾಗೃತ ಪ್ರಜ್ಞೆಯನ್ನು ಮೀರಿ ಬಂದುಬಿಡಬಹುದಾದ ನೋವಿನ ಎಳೆಗಳನ್ನು ಅಸಹಾಯಕ ಧ್ವನಿಯನ್ನು ಕಾಣಬಹುದಾಗಿದೆ.

ಪ್ರತಿ ಸಂಕಲನದಲ್ಲಿಯೂ ತನ್ನ ಬದುಕಿನ ನೋವನ್ನು, ಯಾತನೆಯನ್ನು ಹೇಳುವ ನಾಲ್ಕಾರು ಚುಟುಕುಗಳಷ್ಟೇ ಇವೆ. ಇದೇ ತುಂಬಿದ್ದೆ ಆದರೆ ಅವರ ಸಂಕಲನಕ್ಕೇನೂ ಮಹತ್ವ ಬರುತ್ತಿರಲಿಲ್ಲ. ಬದಲಾಗಿ ಸ್ಪಷ್ಟವಾದ ಸಾಮಾಜಿಕ ಪ್ರಜ್ಞೆ,ರಾಜಕೀಯ ಪ್ರಜ್ಞೆಯಿಂದಾಗಿ ಸಂಕಲನ ಮಹತ್ವ ಪಡೆಯುತ್ತದೆ.


 ಸಾಹಿತ್ಯ ಕ್ಷೇತ್ರವನ್ನು ಸೂಕ್ಷ್ಮವಾಗಿ ನೋಡಿದರೆ 2 ಮಾದರಿಯ ಲೇಖಕರಿದ್ದಾರೆ. 
1. ನನ್ನ ನೋವೇ ಜಗದ ನೋವು ಎಂದು ತಿಳಿದವರು.
2. ಜಗದ ನೋವೆ ನನ್ನ ನೋವು ಎಂದು ಪರಿಭಾವಿಸಿದವರು.
ವಿಡಂಬಾರಿವರ ಈ ಎರಡನೇ ಪಂಗಡಕ್ಕೆ ಸೇರಿದವರು. ಜಗದ ನೋವಿಗಾಗಿ ಅವರು ತನ್ನ ನೋವನ್ನು ಪಕ್ಕಕ್ಕಿಡುತ್ತಾರೆ. ಇದು ಕವಿಯೊಬ್ಬ ತನ್ನ ನೋವನ್ನು ಮರೆಯುವ ಅಥವಾ ದಾಟುವ ಪ್ರಕ್ರಿಯೆ ಕೂಡ. ಆದರೆ ಹಲವು ಸಂದರ್ಭದಲ್ಲಿ ವಿಡಂಬಾರಿಯವರ ಮತ್ತು ಅವರು ಪ್ರಸ್ತುತಪಡಿಸುವ ಸಮಾಜದ ನೋವು-ನಲಿವುಗಳು ಒಂದೇ ಆಗಿಬಿಡುವುದು ಆಕಸ್ಮಿಕವೇನೂ ಅಲ್ಲ.

ವಿಡಂಬಾರಿ ಈ ಸಮಾಜದಲ್ಲಿ ಆಗುಹೋಗುವ ಪ್ರತಿಘಟನೆಗೂ ಕಣ್ಣು-ಕಿವಿತೆರೆದುಕೊಂಡವರು.ಹಾಗಾಗಿಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯ ಬಂದಾಗೆಲ್ಲ ಅವರ ಪ್ರಜ್ಞೆ ಎಚ್ಚೆತ್ತುಕೊಳ್ಳುತ್ತದೆ. ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ. ಕೋಮುವಾದ, ಬ್ರಷ್ಟಾಚಾರ, ಲಂಚಗುಳಿತನ, ಸ್ವಜನಪಕ್ಷಪಾತ, ಜಾತಿವಾದ, ಮೌಢ್ಯ ಕಂದಾಚಾರ,ಧಾಮರ್ಿಕ ಅಸಹಿಷ್ಣುತೆಯನ್ನು ಒಳಗೊಂಡಂತೆ ಮನುಷ್ಯನ ಮನಸ್ಸಿನ ಒಳತೋಟಿಗಳ ಬಗ್ಗೆ ಕೂಡ ಸೂಕ್ಷ್ಮವಾಗಿ ಬರೆಯುತ್ತಾರೆ.
ಅವರನ್ನು ತೀವ್ರವಾಗಿ ಕಾಡಿದ್ದು ಈ ನೆಲದ ಸೌಹಾರ್ದತೆಯನ್ನು ನಾಶಮಾಡುತ್ತಿರುವ ಕೋಮುವಾದದ ಬಗ್ಗೆ
'ಹಿಂಸೆಯೇ ಧರ್ಮಗಳ ತಿರುಳಾಗಿ ಇಂದೆ
ಸುತ್ತೆಲ್ಲ ನೆತ್ತರಿನ ಹೊಳೆಯನ್ನು ಕಂಡೆ
ಕಡುಕ್ರೂರ ಮಂದಿಗಳ ಕೈಯಲ್ಲಿ ಧರ್ಮ
ಸಿಕ್ಕಿಂದು ಸತ್ತಿಹುದು ಧರ್ಮಗಳ ಮರ್ಮ(ಧರ್ಮ)
ಹರಿಯುತಿದೆ ವಿಧವೆಯರ ಕಣ್ಣೀರು ಕೋಡಿ
ಅನಾಥ ಮಕ್ಕಳನು ಕಣ್ತೆರೆದು ನೋಡಿ
ನೆತ್ತರೊಳು ಕೆಸರಾಯ್ತು ಭಾರತದ ಭೂಮಿ
ಕಾರಣವು ಮಂದಿರ-ಮಸಿದಿಗಳು ಸ್ವಾಮಿ' (ಮಂದಿರ-ಮಸೀದಿ)

ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದದ ಕ್ರೌರ್ಯದ ಹಲವು ಮುಖವನ್ನು ಹಲವು ಚುಟುಕುಗಳಲ್ಲಿ ವಿವರಿಸಿದ್ದಾರೆ.ಧರ್ಮ-ಧರ್ಮಗಳ ನಡುವಿನ ಜಗಳ, ಹಿಂದಿನ ಕಾರಣ ಧಾಮರ್ಿಕವಾದದ್ದಲ್ಲ. ಧರ್ಮ ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡು ಸಂಘಪರಿವಾರದ ಕೈಯಲ್ಲಿ ನಲುಗುತ್ತಿರುವುದನ್ನು ಗುರುತಿಸುತ್ತಾರೆ. ಇದು ಕೇವಲ ರಾಜಕೀಯ ದುರುದ್ದೇಶದ್ದು.
ರಾಜಕೀಯ ಲಾಭಕ್ಕೆ ದೇಶದೊಳು ಕೋಮು
ದ್ವೇಶವನು ಬಿತ್ತುವರುಗೊತ್ತೇನು ಖೇಮು.
ಇನ್ನೊಂದೆಡೆ ಪ್ರಗತಿಯ ಹೆಸರಿನಲ್ಲಿ ನಡೆಯುವ ಡೊಂಬರಾಟ ಕೂಡ ಇವರಿಗೆ ಒಪ್ಪಿತವಲ್ಲ.

ತಂದಿರುವ ವಿಪರೀತ ಪರದೇಶಿ ಸಾಲ
ಲೂಟಿಕೋರರಿಗೆಲ್ಲ ಆಯ್ತು ಅನುಕೂಲ
ಇದು ನಮ್ಮ ಸ್ವಾತಂತ್ರ್ಯ ಭಾರತದ ಪ್ರಗತಿ
ಬಾನಿನೆತ್ತರಕ್ಕೆ ಬೆಳೆದ ಉದ್ಯೋಗಪತಿ(ಪ್ರಗತಿ)
ಹೀಗೆ ಭಾರತದಲ್ಲಿ ಟಾಟಾ ಬಿಲರ್ಾಗಳು ಬೆಳೆದರು.ಇದೇ ಪ್ರಗತಿ ಎಂದು ಚಿತ್ರಿಸಲಾಗುತ್ತದೆ. ಇದಕ್ಕೆ ಕಾರಣವಾದ ಲೋಕಸಭೆ,ವಿಧಾನ ಸಭೆಗಳಲ್ಲಿ ಕೂಡ ಇರುವ ಕಿಸೆಕಳ್ಳರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಉದಾರೀಕರಣದ ಹುಚ್ಚು ಭಾರತಕ್ಕೆ ಹಿಡಿದದ್ದನನ್ನು ಪ್ರಸ್ತಾಪಿಸುತ್ತಾರೆ.

ಅಂದು ಈ ಕರಣ ಉದಾರೀಕರಣ
ಮತ್ತೊಮ್ಮೆ ಭಾರತದ ಸ್ವಾತಂತ್ರ್ಯ ಹರಣ
ಹಿಡಿಯುತ್ತ ಬುಶ್ ಎಂಬ ಅಹಂಕಾರಿ ಚರಣ
ಹರಾಜುಹಾಕಿದರು ದೇಶದಂತಃಕರಣ (ಉದಾರೀಕರಣ)
  ಎನ್ನುವಲ್ಲಿ ಮತ್ತೊಮ್ಮೆ ಭಾರತದ ಸ್ವಾತಂತ್ರ್ಯ ಹರಣವಾಗುವ ಅಪಾಯವನ್ನು ಹೇಳುತ್ತಾರೆ. ಸ್ವದೇಶಿ,ಬಡವನುದ್ಧಾರ, ಭರವಸೆ ಜಾಗತೀಕರಣ ಇಲ್ಲೆಲ್ಲ ಲೇಖಕ ಉದಾರೀಕರಣವನ್ನು ನಗ್ನಗೊಳಿಸುತ್ತಾರೆ.
ಈ ವರೆಗೆ ಆಳಿದ ಎಲ್ಲಾ ಪಕ್ಷವನ್ನು ಅವರ ಚುಟುಕೆಂಬ ಕುಲುಮೆಯಲ್ಲಿ ಸುಡುತ್ತಾರೆ. ಎಲ್ಲರೂ ಸುಟ್ಟು ಬೂದಿಯಾಗುತ್ತಾರೆ. ಆದರೆ ಕೆಲವು ಮಾತ್ರ ಉಳಿಯುತ್ತವೆ

ದುಡಿಯುವವರ ಏಳಿಗೆಯ ದ್ಯೋತಕದ ಕೆಂಪು
ಬಾವುಟವ ಹಿಡಿದೆತ್ತಿ ಬರುತಿಹುದು ಗುಂಪು
ಈ ಗುಂಪು ಮನುಷ್ಯತ್ತ ಉಳ್ಳವರ ಕೂಡಿ
ಒಕ್ಕೂಟ ರಚಿಸುವುದು ಖಂಡಿತವು ನೋಡಿ (ಕೆಂಪು ಬಾವುಟ)
ಇದು ಮಾತ್ರ ದೇಶವನನ್ನು ಅಪಾಯದಿಂದ ಮೇಲೆತ್ತ್ತುತ್ತದೆ. ಎನ್ನುವ ಖಚಿತ ರಾಜಕೀಯ ನಿಲುವನ್ನು ಇವರು ಪ್ರಕಟಿಸುತ್ತಾರೆ.
'ಕ್ಯೂಬಾ','ಸಮಾಜವಾದ', 'ಭಗತ್ಸಿಂಗ್' 'ಅಸಮಾನತೆ' ಮುಂತಾದ ಚುಟುಕುಗಳಲ್ಲಿ ಇದನ್ನು ಸ್ಪಷ್ಟ ಪಡಿಸುತ್ತಾರೆ.
ಈ ರೋಗ ತೊಲಗಿಸಲು ಎಡಪಂಥ ಮಾತ್ರ
ವಹಿಸುತ್ತಾ ಬಂದಿಹುದು ಬಹು ದೊಡ್ಡ ಪಾತ್ರ
ಎಂಬುದು ಕೇವಲ ಭಾವನಾತ್ಮಕವಾದ ಸಂಗತಿಯಲ್ಲ. ಅವರೊಳಗಿದ್ದ ಎಚ್ಚೆತ್ತ ಪ್ರಜ್ಞೆ ತಲುಪಿದ ಅಂತಿಮ ನಿಲುವು ಕೂಡ.  ಸಮಾಜದ  ಆಗು ಹೋಗುಗಳನ್ನು ವಿಮಶರ್ಾತ್ಮಕವಾದ,ವಸ್ತುನಿಷ್ಟ ದೃಷ್ಟಿಯಲ್ಲಿ ನೋಡುವುದರ ಜೊತೆಗೆ ಭವಿಷ್ಯದ ಕುರಿತು ಆಶಾದಾಯಕ ನಿಲುವು ಹೊಂದಿರುವ ಪ್ರತಿಯೊಬ್ಬನೂ ಅನಿವಾರ್ಯವಾಗಿ ತಲುಪಬಹುದಾದ ಕೊನೆಯನ್ನು ವಿಡಂಬಾರಿಯವರು ತಲುಪುತ್ತಾರೆ.
ಹಾಗಾಗಿಯೇ,ದಲಿತರೇ ರೈತರೇ ಬಡಜನರೇ ಕೇಳಿ
ಎಡಪಂಥ ಸಂಘಟನೆ ಮೈಕೊಡವಿ ಏಳಿ
ಅರವತ್ತು ವರುಷಗಳು ದೇಶವನು ಆಳಿ
ಉಳಿದವರು ನಿಮಗೇನು ಕೊಟ್ಟಿಹರು ಹೇಳಿ
ಎಂದು ಎಡ ಚಳುವಳಿಯ ಕಡೆಗೆ ಕಾವ್ಯದ ಮೂಲಕ ಕರೆ ಕೊಡುತ್ತಾರೆ. ಇದು ಕಾವ್ಯದ ಕರೆ ಮಾತ್ರವಲ್ಲ ಇಂತಹ ಜನಪರ ಚಳುವಳಿಯಲ್ಲಿ ಅವರು 70ನೇ ವರ್ಷದಲ್ಲಿಯೂ ಕೆಂಬಾವುಟ ಹಿಡಿದು ಹೋರಾಟದ ಮಾರ್ಗದಲ್ಲಿ ನಿಂತರು.
ಹಾಗೆಯೇ ಅವರಿಗೆ ಹೇಸಿಗೆ ಹುಟ್ಟಿಸಿದ ಇನ್ನೊಂದು ರೋಗವೆಂದರೆ ಜಾತೀಯತೆಯದು ಮತ್ತು ಸಮಾಜವನ್ನು ಕಾಡುತ್ತಿರುವ ಮೌಢ್ಯದ್ದು. ಈ ಹಿನ್ನೆಲೆಯಲ್ಲಿಯೇ ರಚಿತವಾದ ಬಸವಣ್ಣ ಅಂಬೇಡ್ಕರ್ ಕುರಿತಾದ ಚುಟುಕು 'ಕರ್ಣನ' ಕುರಿತು ಚುಟುಕು ಗಮನಸೆಳೆಯುತ್ತದೆ.
'ಬಸವಣ್ಣ ಆ ನಿನ್ನ ದಲಿತ ಜನರಿಲ್ಲಿ
ಬಲಿಯಾಗುತ್ತಿಹರಲ್ಲೋ ಕ್ರೂರಿಗಳ ಕೈಲಿ' ಎನ್ನುತ್ತಾರೆ.
ಜಾತಿ ವ್ಯವಸ್ಥೆಯ ಕ್ರೌರ್ಯದ ಬಗ್ಗೆ ಗಮನಸೆಳೆಯುತ್ತಾರೆ. ಮತ್ತು
ಜಾತಿ ಪದ್ದತಿ ಇಲ್ಲಿ ಸವರ್ಾಂತಯರ್ಾಮಿ
ತಲೆ ತಲಾಂತರದ ಪಿಡುಗು ಇದು ಸ್ವಾಮಿ ಎನ್ನುತ್ತಾರೆ. ಹಾಗಾಗಿ
ಕಿತ್ತೆಸೆದು ಜಾತಿಮತ ಕೋಮುಗಳ ಕಟ್ಟು
ಊರಿನೇಳಿಗೆಗಾಗಿ ಶ್ರಮಿಸೋಣ ಒಟ್ಟು ಎಂದು ಸೌಹಾರ್ದತೆಯನ್ನು ಪ್ರತಿಪಾದಿಸುತ್ತಾರೆ.

ಅಸಮಾನತೆ, ಅಜ್ಞಾನ ಅಳಿಯಲು ಅವಶ್ಯವಾಗಿ ರೂಢಿಸಿ ಕೊಳ್ಳಬೇಕಾದ್ದು
' ವೈಜ್ಞಾನಿಕ ಕ್ರಾಂತಿಯೇ ಏಕೈಕ ದಾರಿ
 ಎಂದೆಂಬ ಸತ್ಯವನು ಹೇಳುವೆನು ಸಾರಿ'
ಎಂದು ವಿಜ್ಞಾನ ಕುರಿತು, ವೈಜ್ಞಾನಿಕ ಚಿಂತನೆಯ ಕುರಿತು ಹೇಳುವಾಗಲೇ
'ಅಣುಬಾಂಬು ಎಸೆದುದರ ಪರಿಣಾಮವೇನು?
ಎಂಬುದನು ಚೆನ್ನಾಗಿ ಬಲ್ಲವನು ನೀನು
ಇಂತಿರಲು ಒಳಗಣ್ಣು ಅಂದಕರ ಕೂಡ
ಬಾಂಬನ್ನು ಕೊಡುವವನು ನೀನೆಂಥ ಮೂಢ' ಎಂದು ಅದರ ಅಪಾಯದ ಕಡೆಗೆ ಕೂಡ ಎಚ್ಚರಿಸುತ್ತಾರೆ.
ಒಟ್ಟಾರೆ ಅವರು ಮನುಷ್ಯತ್ವದ ಪ್ರತಿಪಾದಕರು. ಮನುಷ್ಯನನ್ನು  ಜಾತಿ,ಧರ್ಮ,ಬಡವ,ಶ್ರೀಮಂತ ಎಂದು ವಿಭಾಗಿಸುವ ಮತ್ತು ಮನುಷ್ಯನನ್ನು ಓಟಿನ ಲೆಕ್ಕಾಚಾರದಲ್ಲಿ ಗುಣಿಸುವ ಇಡೀ ವ್ಯವಸ್ಥೆಯ ಬಗ್ಗೆಯೇ ಅವರ ಚುಟುಕು ಆಕ್ರೋಶ ವ್ಯಕ್ತಪಡಿಸುತ್ತವೆ.

ಆಕ್ರೋಶ,ನೋವು,ನಲಿವುಗಳಿಗೆ ,ವ್ಯಂಗ್ಯ-ವಿಡಂಬನೆ ಸೂಕ್ಷ್ಮವಾದ ಭಾಷೆ,ದೃಷ್ಟಾಂತಗಳಿಂದಾಗಿ ಅವರ ಆಶಯ ತನ್ನೆಲ್ಲ ಶಕ್ತಿಯೊಂದಿಗೆ ಪ್ರಕಟವಾಗುತ್ತದೆ.ಜನಮುಖಿಯಾದ ಚಿಂತನೆಯಿಂದಾಗಿ ಕಾವ್ಯ ಸೌಂದರ್ಯವನ್ನಾದರೂ ಕಡಿಗಣಿಸಿಯಾರೇ ಹೊರತು (ಪುನರಾವರ್ತನೆ,ವಾಚಾಳಿತನ,..............ಇತ್ಯಾದಿ ಅಲ್ಲಲ್ಲಿ ಇಲ್ಲದಿಲ್ಲ.) ಕಾವ್ಯವಸ್ತುವಿನ ಜೊತೆ  ಅವರ ರಾಜಿ ಇಲ್ಲ. ಆಶ್ಚರ್ಯವೆಂದರೆ ಅವರ ಚುಟುಕಿಗೂ ಅವರಿಗೂ ಇರುವ ಸಂಬಂಧ ವೈರುಧ್ಯದಿಂದ ಕೂಡಿದ್ದು. ವೈಯಕ್ತಿಕವಾಗಿ ಅವರ ಸ್ವಭಾವ ಹೆಚ್ಚು ಮೃದು ಮತ್ತು ಮುಗ್ಧತನದ್ದು. ಯಾರಿಗೂ ಎದುರುವಾದಿಸದ, ವೈರಿಗಳಿಗೂ ಶುಭ ಹಾರೈಸುವ ಕೆಟ್ಟ ಮುಲಾಜಿನ ಮನುಷ್ಯ. ಎತ್ತರದ ದನಿಯಲ್ಲಿ ಮಾತನಾಡಿಸಿದ್ದ್ದನ್ನು ನಾನರಿಯೆ. ಎಲ್ಲಾ ನೋವನ್ನು ಸ್ವತಃ ನುಂಗಿಕೊಳ್ಳುವ ಸ್ವಭಾವ. ಆದರೆ ಅವರ ಚುಟುಕು ಇದರ ವಿರದ್ಧ. ಸಿಟ್ಟು,ಪ್ರತಿಭಟನೆ,ಆಕ್ರೋಶಗಳು ಬೆಂಕಿಯುಂಡೆಯಂತೆ ಏಳುತ್ತವೆ. ಅವರ ಚಾಟಿಗೆ, ವ್ಯಂಗ್ಯಕ್ಕೆ ಒಳಗಾಗದ ವಸ್ತುವೇ ಇಲ್ಲ ಎನ್ನಬಹುದು.  ಚೇಳಿನಂತೆ ಕುಟುಕುವ ,ಕಟ್ಟಿರುವೆಯಂತೆ ಕಚ್ಚುವ, ರಣ ಹದ್ದಿನಂತೆ ತಲೆಯ ಮೇಲೆ ಎರಗುವ ಚುಟುಕುಗಳು ಸಾಂತ್ವನದ ಅಪ್ಪುಗೆಯನ್ನು ನೀಡುವುದರಿಂದ ಕನ್ನಡದ ಪ್ರಮುಖ ಕವಿಯಾಗಿ ಅವರು ನಮಗೆ ಮುಖ್ಯವಾಗುತ್ತಾರೆ.


                                                                                                             ಡಾ . ವಿಠ್ಠಲ ಭಂಡಾರಿ, ಕೆರೆಕೋಣ


Tuesday 25 June 2013

ಪಂಚವಾದ್ಯ ಕಲೆಗೆ ಆವರಿಸಿದ ಜಾತಿ ಮೋಡ- -ವಿಠ್ಠಲ ಭಂಡಾರಿ,ಕೆರೆಕೋಣ vittal bhandari

                                               ಪಂಚವಾದ್ಯ ಕಲೆಗೆ ಆವರಿಸಿದ ಜಾತಿ ಮೋಡ

       ಪಂಚವಾದ್ಯವನ್ನು, ವಾಲಗವೆಂದೂ, ಮಂಗಲವಾದ್ಯವೆಂದೂ ಕರೆಯುತ್ತಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿದ್ದ ಒಂದು ಜನಪದ ವಾದ್ಯ ಪ್ರಕಾರ. ಮೋವರಿ (ಮೌರಿ) ಶೃತೆ, ದೋಳು, ತಾಸ್ಮೋರು, ತಾಳ ಇವುಗಳು ಪಂಚವಾದ್ಯದ ಘಟಕಗಳಾಗಿವೆ. ಮದುವೆ ಮತ್ತಿತರ ಶುಭ ಕಾರ್ಯದಲ್ಲಿ ಅನಿವಾರ್ಯವೆಂಬಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಇದು ಬಳಕೆಯಲ್ಲಿದೆ.
          ಇದರ ಇತಿಹಾಸ ತೀರಾ ಹಿಂದಿನದೆ. ಮೊದಲು ಇದು ದೇವಾಲಯದಲ್ಲಿ ಆರಾಧನೆಯ ಭಾಗವಾಗಿಯೇ ಬಂದಿದ್ದು. ದೇವಸ್ಥಾನದ ಪರಿಚಾರಿಕ ಕೆಲಸ ಮಾಡುತ್ತಿರುವವರೇ ಈ ಪಂಚವಾದ್ಯದ ಜನಕರೂ ಇರಬಹುದು. ಹಿಂದೆ ಹಲವು ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೇವದಾಸಿಯಾಗಿರುವ ಕುಟುಂಬಗಳು ಈ ಪಂಚವಾದ್ಯದಲ್ಲಿ ನಿರತ ಆಗಿದ್ದರು.
'ದೋಳು' ಮತ್ತು 'ತಾಸ್ಮೋರು' ಚರ್ಮ ವಾದ್ಯ. ಮರದ ಕಲಶಕ್ಕೆ ಚರ್ಮದ ಹೊದಿಕೆ ಹಾಕಿ ಹಗ್ಗದಿಂದ ಬಿಗಿದಿರುತ್ತಾರೆ. ಆಕಳು, ಎಮ್ಮೆ, ಕುರಿಯ ಚರ್ಮವನ್ನು ಇದಕ್ಕೆ ಉಪಯೋಗಿಸುತ್ತಾರೆ. 'ಮೋವರಿ' ಮತ್ತು 'ಶೃತೆ'ಯು ಮರದಿಂದ ಕಡೆಯಲ್ಪಟ್ಟ ನಳಿಕೆ, ಮೇಲೆ ತಾಳೆಗರಿಯಿಂದ ಮಾಡಿದ 'ಜೀವಾಳ' ಉಪಯೋಗಿಸುತ್ತಾರೆ. ಪೂರ್ಣ ಪ್ರಮಾಣದಲ್ಲಿ ಜನಪದರು ನಿಮರ್ಿಸಿದ ವಾದ್ಯ ಪರಿಕರವೇ ಆಗಿದೆ.
          ಉತ್ತರಕನ್ನಡದಲ್ಲಿ ಮುಖ್ಯವಾಗಿ ಭಂಡಾರಿ(ಕನ್ನಡ ಮಾತೃಭಾಷೆ), ದೇಶಭಂಡಾರಿ (ಕೊಂಕಣಿ ಮಾತೃಭಾಷೆ) ಆಗೇರರು (ದಲಿತರು) ಈ ವಾಲಗವನ್ನು ನುಡಿಸುತ್ತಾರೆ. ಭಂಡಾರಿ ಸಮುದಾಯದಲ್ಲಿ ಸುಮಾರು 40-50 ತಂಡಗಳಿವೆ ; ದೇಶಭಂಡಾರಿ ಸಮುದಾಯದಲ್ಲಿ ಸುಮಾರು 10-15 ತಂಡಗಳಿವೆ; ಆಗೇರ ಸಮುದಾಯದಲ್ಲಿ 8-10 ತಂಡಗಳು ಪಂಚವಾದ್ಯದಲ್ಲಿ ನಿರತರಾಗಿವೆ. ವಾಲಗವನ್ನೇ ನಮ್ಮ ಉಪವೃತ್ತಿಯಾಗಿಸಿಕೊಂಡ 'ಭಂಡಾರಿ' ಸಮುದಾಯದಲ್ಲಿ ಇರುವವರೇ 5-7 ಸಾವಿರ ಜನರು. ಕಲಾವಿದರಿಲ್ಲದ ಕುಟುಂಬವೇ ಇಲ್ಲವೇನೋ ಅನ್ನುವಷ್ಟು ವ್ಯಾಪಕವಾಗಿ ಪಂಚವಾದ್ಯ ಕಲೆ ಇವರಿಗೆ ಮೈಗೊಂಡಿದೆ. ವಾದ್ಯ ಮಾಡುವುದು ಮಾತ್ರವಲ್ಲ, ವಾದ್ಯದ ಪರಿಕರ ತಯಾರಿಸುವುದು, ಮಣ್ಣಿನ ಮೂತರ್ಿ ತಯಾರಿಸುವುದು, ಯಕ್ಷಗಾನದ ಮುಮ್ಮೇಳ-ಹಿಮ್ಮೇಳದಲ್ಲಿ ಕಲಾವಿದರಾಗಿ ಸೇವೆ....... ಇತ್ಯಾದಿ ಕಲೆಗಳಲ್ಲಿ ಕೂಡ ಇವರು ಪರಿಣತರು. ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 40-50 ತಂಡಗಳು (5-5 ಕಲಾವಿದರಂತೆ ಒಂದು ತಂಡ ; ತೀರಾ ಬೇಡಿಕೆ ಇದ್ದರೆ 4-4 ಜನರ ತಂಡ ಮಾಡುತ್ತಾರೆ. ಕೆಲಸ ಮಾಡುತ್ತವೆ. ವಾದ್ಯದ ಮೇಳವೊಂದಕ್ಕೆ (ವಾದ್ಯದ ತಂಡಕ್ಕೆ 'ಮೇಳ' ಎನ್ನುತ್ತಾರೆ) ಒಂದು ಸಾವಿರದಿಂದ ನಾಲ್ಕು ಸಾವಿರದವರೆಗು ಸಂಭಾವನೆ ಇದೆ. ಆದರೆ ಇಡೀ ವರ್ಷಕ್ಕೆ ಹೆಚ್ಚೆಂದರೆ 40-50 ದಿನ ಕೆಲಸ ಸಿಗಬಹುದು.
ಪಾಂಡುರಂಗ ಭಂಡಾರಿ, ಮಂಜ ಭಂಡಾರಿ, ಸಾಂಬ ಭಂಡಾರಿ, ಕನ್ನಯ್ಯ ಭಂಡಾರಿ, ಸೀತಾರಾಂ ಭಂಡಾರಿ, ಕೃಷ್ಣ ಭಂಡಾರಿ ಮುಂತಾದ ತೀರಾ ಮಹತ್ವದ ಕಲಾವಿದರು ಈ ಸಮುದಾಯದಲ್ಲಿ ಆಗಿ ಹೋಗಿದ್ದಾರೆ. ಸುಬ್ರಾಯ ಭಂಡಾರಿ, ರಾಮಕೃಷ್ಣ ಭಂಡಾರಿ,  ಭೈರವ ಭಂಡಾರಿ, ದತ್ತ ಭಂಡಾರಿ. ಇಡಗುಂಜಿ ಗಜಾನನ ಭಂಡಾರಿ, ಹೊಸಾಕುಳಿ ಶಿವ, ಹೊನ್ನಾವರ ಬಾಬು ಭಂಡಾರಿ. .  ಮುಂತಾದವರು ಪಂಚವಾದ್ಯದ ಕಸುಬುದಾರರೆಂದೇ ಹೆಸರು ಪಡೆದಿದ್ದಾರೆ. ದುರಂತವೆಂದರೆ ಈ ವಾದ್ಯಕ್ಕೊಂದು 'ಜಾತಿ'ಯ ಮುಸುಕಿರುವುದರಿಂದ ಸ್ವತಃ ಕಲಾವಿದರೂ ತಮ್ಮದೊಂದು 'ಕಲೆ' ಎಂದುಕೊಳ್ಳುವ ಬದಲು ಇದೊಂದು ಸಂಪ್ರದಾಯ ಮತ್ತು ಆರಾಧನೆಯ ಭಾಗ ಅಂದುಕೊಂಡಿದ್ದಾರೆ. ಹೊರಗಿನವರೂ ಇದೇ ಗುಣವನ್ನು ರೂಢಿಸಿಕೊಂಡಿದ್ದಾರೆ.
         ಭಂಡಾರಿ ಜಾತಿಯಲ್ಲಿಯೇ ಮದುವೆಯಾದರೆ ಮದುವೆಗೆ ಬಂದ ಸಂಬಂಧಿಕರಲ್ಲಿ ಅತ್ಯುತ್ತಮ ಕಲಾವಿದರೆಲ್ಲಾ ಸೇರಿ ವಾದ್ಯ ನುಡಿಸುವುದನ್ನು ಕೇಳುವುದೇ ಒಂದು ಸೊಬಗು. ಒಬ್ಬರನ್ನು ಒಬ್ಬರು ಮೀರಿಸುವ ರೀತಿಯಲ್ಲಿ ಇದು ನಡೆಯುತ್ತದೆ ; ಜನ ಅವರನ್ನು ಸುತ್ತುವರಿದು ಕೇಳಿ ಆನಂದಿಸುತ್ತಾರೆ. ಅವರು ಮಾಡಿದ ಸರಿ ತಪ್ಪುಗಳ ಬಗ್ಗೆ ದೀರ್ಘ ಚಚರ್ೆ ದಿನವಿಡೀ ನಡೆಯುತ್ತದೆ. ಒಂದು ರೀತಿಯಲ್ಲಿ ಈ ಚಚರ್ೆಯೇ ಹೊಸಬರಿಗೆ ಪಾಠ ಕೂಡ.
        ಸಂಗೀತದ ಬಗ್ಗೆ ಸ್ವಲ್ಪ ಆಸಕ್ತಿ ಇರುವ ಜನರು ಮದುವೆ-ಮುಂಜಿಗಳಿಗೆ ಅತ್ಯುತ್ತಮವಾದ ಕಲಾವಿದರಿದ್ದ ಮೇಳವನ್ನೇ ಆಯ್ಕೆ ಮಾಡಿ ಕರೆಸುತ್ತಾರೆ. ಇದು ಸಾಂಪ್ರದಾಯಿಕ ವಾದ್ಯ ಅನ್ನೋದಕ್ಕಿಂತ ಇದೊಂದು ಸಂಗೀತ ಕಾರ್ಯಕ್ರಮವೆಂದೇ ಪರಿಗಣಿಸುವವರೂ ಕೆಲವರಿದ್ದಾರೆ.

         ಆದರೆ ಪಂಚವಾದ್ಯವನ್ನು ಈ ನೆಲದ ಮಹತ್ವದ ಜಾನಪದ ಕಲೆಯೆಂದು ಅಕಾಡೆಮಿಗಳಾಗಲೀ, ಸಂಸ್ಕೃತಿ ಇಲಾಖೆಯಾಗಲೀ, ಪರಿಗಣಿಸಲೇ ಇಲ್ಲ. ರಾಜ್ಯದ ಯಾವುದೇ ಉತ್ಸವದಲ್ಲಿಯೂ (ಜಿಲ್ಲೆಯ ಹೊರಗೆ) ಈ ಕಲೆ ಪ್ರದರ್ಶನಗೊಂಡಿಲ್ಲ. ಯಾವೊಬ್ಬ ಕಲಾವಿದರಿಗೂ ಅಕಾಡೆಮಿಯಿಂದ, ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿಯನ್ನಾಗಲೀ, ಮಾಶಾಸನವನ್ನಾಗಲೀ ನೀಡಿಲ್ಲ. ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
       ಪಂಚವಾದ್ಯವೆನ್ನುವ ಜಾನಪದ ಕಲೆಯ ಆಧುನಿಕ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿಲ್ಲ. ಸಾವಕಾಶವಾಗಿ ಅದು ತನ್ನ ಜಾನಪದ ಮಟ್ಟಿನಿಂದ ಹೊರಬರುತ್ತಿದೆ. 'ಮೋವರಿ' ಎನ್ನುವುದು 'ಶಹನಾಯಿ' ಯ ರೂಪ ಪಡೆದು ಕೊಂಡು 'ಹಿಂದೂಸ್ಥಾನಿ'ಯನ್ನು ಅನುಸರಿಸುತ್ತಿದೆ. ಹೊಸತಲೆಮಾರು ಈ ಕಲೆಯ ಕಡೆಗೆ ಉತ್ಸುಕವಾಗಿಲ್ಲ. 'ಸಾಂಪ್ರದಾಯಿಕತೆ' ಮತ್ತು 'ಕಲೆ' ಯ ಒಟ್ಟಂದವಾಗಿ ಬೆಳೆದು ಬಂದ ಪಂಚವಾದ್ಯ ತನ್ನೊಳಗಿರುವ ಕಲೆಯ ಅಸ್ತಿತ್ವವನ್ನು ಕಳೆದುಕೊಂಡು ಕೇವಲ 'ಸಂಪ್ರದಾಯಿಕ' ವಾದ್ಯವಾಗಿ ಮಾತ್ರ ಹಾಗೋ ಹೀಗೋ ಉಳಿದು ಬಿಡುವ ಅಪಾಯವೂ ಇದೆ. ಯಾವುದೇ ಜಾನಪದ ಕಲೆಯಾಗಲಿ, ನಿದರ್ಿಷ್ಟ ಸಮುದಾಯ ಕೇಂದ್ರಿತ ಕಲೆಯಾಗಲೀ ತನ್ನ ಅನನ್ಯತೆಯನ್ನು ಉಳಿಸಿಕೊಂಡೇ ಕಾಲಕಾಲಕ್ಕೆ ಹೊಸರೂಪವನ್ನು ಪಡೆದುಕೊಳ್ಳುತ್ತಿರಬೇಕು. ಹೊಸ ತಲೆಮಾರು ಇದರಲ್ಲಿ ತೊಡಗಿಕೊಳ್ಳಬೇಕು. ವರ್ತಮಾನದ ಬದಲಾವಣೆಯ ಜೊತೆ ಅರ್ಥಪೂರ್ಣವಾದ, ಮೌಲಿಕವಾದ ಅನುಸಂಧಾನ ಸಾಧ್ಯ ಇಲ್ಲದಿದ್ದರೆ ಯಾವುದೇ ಕಲೆ 'ಮ್ಯೂಸಿಯಂ'ನ ಒಂದು ಸಂಗತಿ ಆಗಿ ಬಿಡುವ ಅಪಾಯ ಕೂಡ ಇದೆ. ಪಂಚವಾದ್ಯದ ಹಳೆಯ ಮಟ್ಟುಗಳೆಲ್ಲ ಮರೆಯಾಗಿ ಇದು ಕೂಡ 'ಮ್ಯೂಸಿಯಂ' ಸೇರುವ ಅಪಾಯ ಕಾಣುತ್ತಿದೆ.
        ಈವರೆಗೆ ಪಂಚವಾದ್ಯವನ್ನು ಹೊಸ ತಲೆಮಾರಿಗೆ ಕಲಿಸುವ ಯಾವ ವ್ಯವಸ್ಥೆಯೂ ಇಲ್ಲ. ಇದು ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಅಜ್ಜನಿಂದ ಅಪ್ಪನಿಗೆ, ಅಪ್ಪನಿಂದ ಮಗನಿಗೆ.......... ಹೀಗೆ ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ. ಈ ಪಂಚವಾದ್ಯ ಇನ್ನಷ್ಟು ಹೆಚ್ಚು ವಿಸ್ತಾರ ಆಗದಿರಲು, ಹೊಸ ಹೊಸ ಪ್ರಯೋಗಗಳು ನಡೆದು ಜನಪ್ರಿಯವಾಗದಿರಲು ಬಹುಶಃ ಎರಡು ಕಾರಣಗಳನ್ನು ಗುರುತಿಸಬಹುದು.

        1)    ಈಗಿರುವ ಸ್ಥಿತಿಯಲ್ಲಿ ಇದನ್ನೇ ನಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಕುಟುಂಬ ನಿರ್ವಹಣೆಗೆ ಬೇಕಾದ ಆಥರ್ಿಕದ ಶಕ್ತಿಯನ್ನು ಕೂಡ ಇದು ನೀಡಲಾರದು. ಇದು 'ಸೀಸನ್ ಬೆಸ್ಟ್' ವೃತ್ತಿಯಾಗಿರುವುದರಿಂದ ಈ ಕಲಾವಿದರೆಲ್ಲಾ ಜೀವನ ನಿರ್ವಹಣೆಗೆ ಕೂಲಿ, ಕೃಷಿ ಕೂಲಿ ಇತ್ಯಾದಿಗಳನ್ನು ಅವಲಂಬಿಸಬೇಕಾಗಿದೆ. ಇನ್ನು ವಾದ್ಯ ಕಟ್ಟಲು, ಸೂಕ್ತ ಚರ್ಮವೂ ಸಿಗುತ್ತಿಲ್ಲ. ಮರಗಳೂ ಸಿಗುತ್ತಿಲ್ಲ. ವಾದ್ಯಗಳೆಲ್ಲಾ 'ರೆಡಿಮೇಡ್' ಬಂದಿರುವುದರಿಂದ ಆ ಕೆಲಸವೂ ಇಂದು ಆಥರ್ಿಕವಾಗಿ ಲಾಭದ್ದಲ್ಲ. ಹಾಗಾಗಿ ಹೊಸ ತಲೆಮಾರಿಗೆ ಇದರಲ್ಲಿ ಆಕರ್ಷಣೆ ಉಳಿದಿಲ್ಲ.


2)    ಸಾಮಾಜಿಕ ಮನ್ನಣೆಯ ಪ್ರಶ್ನೆ ಕೂಡ ಇಲ್ಲಿದೆ. ಯಾಕೆಂದರೆ ಪಂಚವಾದ್ಯ 'ಭಂಡಾರಿ' ಜಾತಿ ಕಸುಬು ಎನ್ನುವ ಹಣೆಪಟ್ಟಿಯಲ್ಲಿ ಬೆಳೆಯುತ್ತಿದೆ. ಹಾಗಾಗಿ ಬೇರೆ ಜಾತಿಯ ಸಮುದಾಯದ ಜನರು ಇದರಲ್ಲಿ ಸೇರುತ್ತಿಲ್ಲ. ಭಂಡಾರಿ ಶೂದ್ರವರ್ಣದ ಒಂದು ಜಾತಿ. ಬಹುತೇಕ ದೇವಸ್ಥಾನದ ಚಾಕರಿ ಮಾಡುತ್ತಾ ಬೆಳೆದವನು. ತೀರಾ ಹಿಂದಕ್ಕೆ ಹೋದರೆ 'ದೇವದಾಸಿ' ಕುಟುಂಬದಿಂದ ಬಂದವರು ಹಲವರಿದ್ದಾರೆ. ಬ್ರಾಹ್ಮಣರು ಇವರನ್ನು ಕೀಳು ಜಾತಿಯವರೆಂದು ಸಹ ಪಂಕ್ತಿಗೆ, ವೈವಾಹಿಕ ಸಂಬಂಧಕ್ಕೆ ಅನರ್ಹರೆಂದು ಪರಿಗಣಿಸಿದ್ದಾರೆ. ಪೂಜಾರಿಗಳು ಗರ್ಭಗುಡಿಯ ಒಳಗಡೆ ಇದ್ದರೆ ಇವರು ಗರ್ಭಗುಡಿಯ ಆಚೆಗೆ ನಿಂತು ದೇವಸ್ಥಾನ ಸ್ವಚ್ಛ ಮಾಡುವುದು, ಪೂಜೆಯಾಗುವಾಗ 'ವಾದ್ಯ' ಮಾಡುವುದು, ಪೂಜಾ ಸಾಮಗ್ರಿಯನ್ನು ತೊಳೆದು ಶುಚಿಗೊಳಿಸುವುದು ದೇವಕಾರ್ಯವಾದರೆ ಬ್ರಾಹ್ಮಣರ ಊಟದ ನಂತರ ಎಲ್ಲಾ ಪಾತ್ರೆ ತೊಳೆದು, ಪಾತ್ರೆಯ ತಳದಲ್ಲಿರುವುದನ್ನು (ಇದ್ದರೆ) ಊಟ ಮಾಡುವುದುಸಾಂಪ್ರದಾಯಿಕವಾದ ಕ್ರಮ.
       ಬ್ರಾಹ್ಮಣರ ಮನೆಗೆ ಮದುವೆಗೆ ಹೋದರೂ (ಈಗ ಕಲ್ಯಾಣ ಮಂಟಪದ ಮದುವೆಯಾದ್ದರಿಂದ ರೀತಿ ರಿವಾಜು ಸ್ವಲ್ಪ ಭಿನ್ನ) ಮದುವೆ ಅಂಗಳದ ಕೊನೆಗೆ ಇವರ ಸ್ಥಳ. ಎಲ್ಲರ ಊಟ ಆದ ಮೇಲೆ ಅಂಗಳದ ಕೊನೆಗೆ ಇವರಿಗೆ ಊಟ. ತಾವೇ ಬಾಳೆ ತೆಗೆದು ಸಗಣಿ ಹಾಕಿ ಸ್ವಚ್ಛ ಮಾಡಿ ಬರಬೇಕು. ತನ್ನದೇ ತರಗತಿಯಲ್ಲಿ ಓದಿದ ಒಬ್ಬ ದಡ್ಡ ಸಹಪಾಠಿಯ ಮನೆಗೆ ಹೋದರೂ ಹೀಗೆ; ಹೊರಗೆ ಕುಳಿತೆ ಊಟ ಮಾಡಬೇಕು. ಭಂಡಾರಿಗಳ ಕತೆಯೇ ಹೀಗಾದರೆ ಇನ್ನು ದಲಿತ ವರ್ಗಕ್ಕೆ ಸೇರಿದ ಆಗೇರರ ಸ್ಥಿತಿಯನ್ನು ನಾನು ಪ್ರತ್ಯೇಕವಾಗಿ ವಣರ್ಿಸಬೆಕಾಗಿಲ್ಲ. ಹಾಗಾಗಿ ಜಾತಿಯ ಕಾರಣದಿಂದ 'ಕಲೆ'ಯ ಅಂಶ ನಗಣ್ಯವಾಗಿ 'ಜಾತಿ' ಮುಖ್ಯವಾಗುವುದು ಹೊಸ ಹುಡುಗರಿಗೆ ಅವಮಾನ ಅನ್ನಿಸದೇ ಇರದು.

      3)    ಆಶ್ಚರ್ಯವೆಂದರೆ 'ಭಂಡಾರಿ'ಗಳು ಗಳು ತಾವು ಉಳಿದೆಲ್ಲಾ ಬ್ರಾಹ್ಮಣೇತರ ಜಾತಿಗಳಿಗಿಂತ ಶ್ರೇಷ್ಠ 'ಜಾತಿ' ಎಂದು ಕೊಳ್ಳುತ್ತಾರೆ. ಹಿಂದೆಲ್ಲಾ ಬ್ರಾಹ್ಮಣೇತರ ಜಾತಿಗಳ ಮದುವೆಗೆ ಹೋದರೆ ಅವರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಅಕ್ಕಿ, ಕಾಯಿ, ಬೇಳೆ ಪಡೆದು ತೋಟದಲ್ಲಿ 3 ಕಲ್ಲು ಹೂಡಿ ಅಡಿಗೆ ಮಾಡಿಕೊಳ್ಳುತ್ತಿದ್ದರು. ಬಡಿಸಿಕೊಳ್ಳಲು ತಲೆಯನ್ನು ಒಡೆಯಲು ಕಾಲನ್ನು ಹೊಂದಿದ ಸ್ಥಿತಿ ಇವರು.

         ಹೀಗೆ 'ಪಂಚವಾದ್ಯ' ಒಂದು ಜಾತಿ ಕಸುಬು ಎಂದು ಮುದ್ರೆ ಒತ್ತಿರುವುದರಿಂದ ಬೇರೆ ಜಾತಿ ಸಮುದಾಯದವರು ಇದರಲ್ಲಿ ಪ್ರವೇಶವನ್ನು ಮಾಡಿಲ್ಲ. ಮಹತ್ವದ ಒಂದು ಕಲೆ 'ಜಾತಿ'ಯ ಚೌಕಟ್ಟಿನ ಕಾರಣಕ್ಕೆ ಸೊರಗುವ ಸ್ಥಿತಿ ಬಂದಿದೆ. ಹಲವು ಮಹತ್ವದ ಜನಪದ ಕಲೆಗಳ ಸ್ಥಿತಿಯೂ ಹೀಗೆ ಆಗಿದೆ. ಈ ಕಲೆಗಳ ಹುಟ್ಟು ಎಂದೂ ಜಾತಿ ಕೇಂದ್ರಿತವಾಗಿರಲಿಲ್ಲ. ಒಂದು ಸಮುದಾಯದ ಒಟ್ಟಂತರ ಕೊಡುಗೆ ಇದು. ಜಾನಪದದ ಪ್ರತಿಭೆಯ ಹೆಗ್ಗುರುತುಗಳಿವು. ಒಂದು ಪ್ರದೇಶದಲ್ಲಿ ಬದುಕುತ್ತಿರುವ ಜನಪದರ ಸಾಂಸ್ಕೃತಿಕ ಮೈಲುಗಲ್ಲಿದು. ಆದರೆ ಒಂದು ಘಟ್ಟದಲ್ಲಿ ಇದು 'ಜಾತಿ' ಕೇಂದ್ರಿತವಾಗಿ ತನ್ನ ಬೆಳವಣಿಗೆಯನ್ನು ತಾನೆ ಕುಂಟಿತಗೊಳಿಸಿಕೊಂಡಿತು.

     ಹಾಗಾಗಿ ಇಂತಹ ಕಲೆಗಳು 'ಜಾತಿ' ಆವರಣವನ್ನು ಬಿಟ್ಟು ಆಚೆ ಬಂದು ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಇಂತಹ ಕಲೆಗೆ ಆಥರ್ಿಕ ಮನ್ನಣೆಯೂ, ಸಾಮಾಜಿಕ ಮನ್ನಣೆಯೂ ಲಭ್ಯವಾಗಬೇಕು. ಹೀಗಾಗುವಾಗ ಮೊದಲು ಸಮಾಜದಲ್ಲಿ ಇಂದಿಗೂ ಪ್ರಭಲವಾಗಿ ಅಸ್ತಿತ್ವದಲ್ಲಿದ್ದ 'ಜಾತಿ' ಪದ್ಧತಿ ನಾಶವಾಗಬೇಕಾಗಿದೆ. ಜಾತಿ ಪದ್ಧತಿಯನ್ನು ವಿವಿಧ ರೂಪದಲ್ಲಿ ಹಾಗೆಯೇ ಇಟ್ಟುಕೊಂಡು 'ಜಾತಿ ಕಸುಬಿನ' ಹಣೆಪಟ್ಟಿಯಲ್ಲಿರುವ 'ಕಲೆ' ಯನ್ನು ಉಳಿಸಲು ಜನಪ್ರಿಯಗೊಳಿಸಲು ಸಾಧ್ಯವಿಲ್ಲ.
                                                                                       --ವಿಠ್ಠಲ ಭಂಡಾರಿ,ಕೆರೆಕೋಣ
                                                            {ದಿನಾಂಕ 04-02-2013 ರಂದು ಪ್ರಜಾವಾಣಿಯಲ್ಲಿ ಪ್ರಕಟಿತ}

Tuesday 18 June 2013

ಅಂತಾರಾಷ್ಟ್ರೀಯ ಉತ್ಸವಕ್ಕೆ ಕಳೆತಂದ ಜಾನಪದ ಕುಣಿತ - ವಿಠ್ಠಲ ಭಂಡಾರಿ, ಕೆರೆಕೋಣ

                                         ಅಂತಾರಾಷ್ಟ್ರೀಯ ಉತ್ಸವಕ್ಕೆ ಕಳೆತಂದ ಜಾನಪದ ಕುಣಿತ

                            ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಸಮೀಪದ ಲುಕಸ್ ಮೊರಿಪೆ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ವಿದ್ಯಾಥರ್ಿ-ಯುವಜನ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಕಳೆ ಬಂದಿದ್ದೇ ಪ್ರಸಿದ್ಧ ಜುಲು ಬುಡಕಟ್ಟು ಕುಣಿತದ ಮೂಲಕ. ಸುಮಾರು ನೂರಕ್ಕಿಂತ ಹೆಚ್ಚು ಜನರಿರುವ ನೃತ್ಯ ತಂಡ ಸಾಂಪ್ರದಾಯಿಕವಾದ ಚರ್ಮದ ಉಡುಗೆ, ಪ್ರಾಣಿ ತುಪ್ಪಳವನ್ನು ಸಂಕೇತಿಸುವ ಹೆಡ್ ಗೇರ್, ಮುಖವಣರ್ಿಕೆಗಳ ಮೂಲಕ ಜಗತ್ತಿನ ಗಮನ ಸೆಳೆದರು. ಕಿವಿ ಗಡಚಿಕ್ಕುವ ಧರ್ಮವಾದ್ಯಗಳ ಲಯಕ್ಕೆ ಇಡೀ ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕದವರಿಲ್ಲ. ಅವರ ಹಾಡಿಗೆ ದನಿ ಸೇರಿಸದವರಿಲ್ಲ. ಬಳ್ಳಿಯಂತೆ ಬಳಕುವ, ತೆರೆಯಂತೆ ಸರಿಯುವ, ಪ್ರವಾಹದಂತೆ ಮುನ್ನುಗ್ಗುವ, ಬೇಟೆಯನ್ನು ಬೆನ್ನಟ್ಟುವ, ಬೇಟೆಯಿಂದ ತಪ್ಪಿಸಿಕೊಳ್ಳುವ, ದೇವರನ್ನು ಆರಾಧಿಸುವ ವಿವಿಧ ಭಂಗಿಗಳು, ವಿವಿಧ ಹೆಜ್ಜೆಗಳು ಅವರ ಸಾಂಸ್ಕೃತಿಕ ಅನನ್ಯತೆಗೆ ಸಾಕ್ಷಿಯಾಗಿದ್ದವು.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜೂಮೋ ಅವರ ಭಾಷಣದ ಮೊದಲು ಮತ್ತು ನಂತರ 3-4 ತಾಸುಗಳ ಕಾಲ ಬೀಳುತ್ತಿರುವ ಮಳೆಯನ್ನೂ ಲೆಕ್ಕಿಸದೇ, ನಡುಗುವ ಚಳಿಯನ್ನು ಧಿಕ್ಕರಿಸಿ ಅವರ ಉತ್ಸಾಹ ಮುಗಿಲು ಮುಟ್ಟಿತ್ತು. ಜಗತ್ತಿನಾದ್ಯಂತ ಬಂದ ಪ್ರತಿನಿಧಿಗಳಿಗೆ ಆಫ್ರಿಕಾದ ಬುಡಕಟ್ಟುಗಳ ಕಲೆಯನ್ನು, ಅದರೊಳಗಡೆ ಅಡಗಿದ ಜೀವನ ಪ್ರೀತಿಯನ್ನು ತೆರೆದು ತೋರಿಸುವ ಆಸೆ ಅವರಲ್ಲಿತ್ತು.


                ಒಂದೆಡೆ ಅಮೆರಿಕಾ ಪ್ರೇರಿತ ಪಾಶ್ಚಾತ್ಯ ಸಂಸ್ಕೃತಿಗಳು ಅಭಿವೃದ್ಧಿಶೀಲ ದೇಶಗಳ ಸಾಂಸ್ಕೃತಿಕ ಚಹರೆಗಳ ಮೇಲೆ ದಾಳಿ ಇಡುತ್ತಿರುವಾಗ, ತಮ್ಮ ತಮ್ಮ ಕಲೆ, ಸಾಹಿತ್ಯ, ಪಾರಂಪರಿಕ ಕಲೆಗಳ ಕುರಿತು ಕೀಳರಿಮೆ ಹುಟ್ಟಿಸುತ್ತಿರುವಾಗ 10ದಿನಗಳ ಉತ್ಸವ ಇದಕ್ಕೆ ಸೆಡ್ಡು ಹೊಡೆದಂತೆ ಆಫ್ರಿಕಾ ಖಂಡದ ವಿವಿಧ ದೇಶಗಳಿಂದ, ದಕ್ಷಿಣ ಆಫ್ರಿಕಾದ ವಿವಿಧ ಪ್ರಾವಿನ್ಸ್ಗಳಿಂದ ಬಂದ ನೃತ್ಯ ತಂಡಗಳು, ಸಾಂಪ್ರದಾಯಿಕ ಹಾಡುಗಳ ಉಡುಗೆ ತೊಡುಗೆಗಳ ಮೂಲಕ, ವಾದ್ಯ ಪರಿಕರಗಳ ಮೂಲಕ ತಮ್ಮ ಅನನ್ಯತೆಯನ್ನು ಅಭಿವ್ಯಕ್ತಿಸಿದರು.

            ದಕ್ಷಿಣ ಆಫ್ರಿಕಾವನ್ನು ಪ್ರವೇಶಿಸಿದ ಸಂದರ್ಭದಿಂದಲೂ ಕಪ್ಪು ಸುಂದರಿ-ಸುಂದರರ ಗುಂಪು ನರ್ತನಗಳೇ ಕಣ್ಣೆದುರಿಗಿದ್ದವು. ಅಲ್ಲಿ ಸೇರಿದ ಕಾರ್ಯಕರ್ತರೂ ಕೂಡ ಹಲವು ಸಂದರ್ಭಗಳಲ್ಲಿ ತಮ್ಮ ಕೆಲಸ ಬಿಟ್ಟು ನರ್ತನದಲ್ಲಿ ತೊಡಗಿರುತ್ತಿರು. ಉದ್ಘಾಟನೆಯ ಪ್ರತಿ ಘಟ್ಟದಲ್ಲಿಯೂ ಘೋಷಣೆಯುಕ್ತ ನರ್ತನ. ಇದು ಅಲ್ಲಿಯ ಅತಿಥಿಗಳಿಗೂ ಅದೆಷ್ಟು ರೂಢಿಯಾಗಿದೆಯೆಂದರೆ ಅವರ ಭಾಷಣದ ಮಧ್ಯೆ ಮಧ್ಯೆ ನರ್ತನಕ್ಕಾಗಿ, ಹಾಡಿಗಾಗಿ 2-3 ನಿಮಿಷ ಸಮಯ ನೀಡುತ್ತಿದ್ದರು. ಮತ್ತು ಅವರೂ 'ಅಮಾಂಜಾ, ವೀವಾ' ಎಂದು ಘೋಷಣೆ ಕೂಗುತ್ತಿದ್ದರು. ಉದ್ಘಾಟಕರಾದ ಅಧ್ಯಕ್ಷ ಜಕೋಬ್ ಜೂಮಾ, ಪ್ರಿಪರೇಟರಿ ಕಮೀಟಿಯ ಅಧ್ಯಕ್ಷ ಜ್ಯೂಲಿಯನ್ ಮಲೇಮಾರ ಮಾತುಗಳು ನಡೆಯುತ್ತಿರುವಾಗ ಆಫ್ರಿಕಾದ ಪ್ರತಿನಿಧಿಗಳು ಕೂಗುವ ಘೋಷಣೆಗೆ, ಸಾಮೂಹಿಕ ನರ್ತನಗಳಿಗೆ ಅತಿಥಿಗಳು ಕೆರಳಿಸಬಹುದೆಂದು, ಪೋಲೀಸರು ಬಂದು ಅವರನ್ನು ಗದರಿಸಬಹುದೆಂದುಕೊಂಡೆವು. ಯಾಕೋ ಅವರದು ಅತಿಯಾಯಿತೆಂದು ಅನಿಸಿತು. ಆದರೆ ಅತಿಥಿಗಳು ಸಿಡುಕುವ ಬದಲು ಎಂಜೋಯ್ ಮಾಡುತ್ತಿದ್ದರು. ಸ್ವತಃ ಉದ್ಘಾಟಕರಾದ ಜುಮೋ ಅವರೇ 'ಅಮಾಂಜಾ, ವೀವಾ' ಎಂದು ಘೋಷಣೆ ಕೂಗಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು.


               ಒಂದು ರೀತಿಯಲ್ಲಿ ಅವರ ಬದುಕೇ ಈ ಹಾಡು ಕುಣಿತಕ್ಕೆ ಟ್ಯೂನ್ ಆದಂತಿದೆ. ಒಂದು ಸಣ್ಣ ಹಾಡು ಒಂದೆರಡು ರೀದಂ ಕೇಳಿದರೆ ಸಾಕು, ಊಟ ಮಾಡುತ್ತಿದ್ದವರು ಕೆಳಗಿಟ್ಟು ಕುಣಿಯುತ್ತಾರೆ. ಮುಗಿದವರು ಅಲ್ಲೇ ಕೈ-ಕಾಲು ಆಡಿಸುತ್ತಾರೆ. ನಿದ್ದೆ ಮಾಡುತ್ತಿದ್ದವರೂ ಅರೆನಿಮಿಷ ಎದ್ದು ಕುಣಿದು ಏನೂ ಆಗಿಯೇ ಇಲ್ಲ ಎನ್ನುವಂತೆ ಮಲಗಿಬಿಡುತ್ತಾರೆ. ನಾವು ಒಂದೆರಡು ಹೆಜ್ಜೆ ಕುಣಿದರೆ ಸಾಕು, ಸ್ವಲ್ಪ ಮೈ ಕುಲುಕಿಸಿದರೆ ಸಾಕು ಅವರು ಅರೆಘಳಿಗೆ ನಮ್ಮ ಕೈ ಹಿಡಿದು ನತರ್ಿಸಿಯೇ ಮುಂದೆ ಹೋಗುತ್ತಾರೆ
.
              ಈ ಹಾಡು, ನರ್ತನ ತಮ್ಮ ಬುಡಕಟ್ಟುಗಳಿಂದ ಬಂದ ಸಾಂಪ್ರದಾಯಿಕ ಬಳುವಳಿ ಎನ್ನುತ್ತಾರೆ. ಇದು ಬಿಳಿಯರ ವಿರುದ್ಧ ಪ್ರತಿಭಟನೆಯ, ಹೋರಾಟದ ಒಂದು ಭಾಗವಾಗಿತ್ತು ಎಂದು ನೆನಪಿಸುತ್ತಾರೆ. ಪ್ರತಿ ಹಂತದಲ್ಲಿ ಯಾಕೆ ಕೈ ಕೈಹಿಡಿದು ಸಾಮೂಹಿಕವಾಗಿ ನತರ್ಿಸುತ್ತೀರೆಂದು ಕೇಳಿದಾಗ, 'ಇದು ಬಿಳಿಯರ ವಿರುದ್ಧದ ಪ್ರತಿಭಟನೆ. ಕರಿಯರ ಸಂಘಶಕ್ತಿಯ ಪ್ರತೀಕ.' ಎನ್ನುವ ಉತ್ತರ ಬಂತು. ಅವರ ಹಲವು ನರ್ತನದಲ್ಲಿಯೂ ಕೂಡ ಬಿಳಿಯರನ್ನು ಅಪಹಾಸ್ಯ ಮಾಡುವ, ಕರಿಯರ ಗೆಲುವನ್ನು ಸಂಭ್ರಮಿಸುವ ಧ್ವನಿ ಅಡಗಿದೆ. ಇದರೊಂದಿಗೆ ಬಿಳಿಯರೊಂದಿಗೆ ಪಟ್ಟ ಹಿಂಸೆ, ಅವಮಾನ, ನೋವು, ಪ್ರಾಣಿ ಸದೃಶವಾಗಿ ಬದುಕಿದ ರೀತಿಗಳೂ ಕೂಡ ಸೂಟು, ಶಂಗಾನ್, ವೆಂಡಾ ಮುಂತಾದ ಬುಡಕಟ್ಟುಗಳ ಕುಣಿತದಲ್ಲಿ ಸೇರಿಕೊಂಡಿವೆ. ಹಲವು ಹಾಡುಗಳಲ್ಲಿ ತಮ್ಮ ಪೂವರ್ಿಕರನ್ನು ನೆನೆಯುತ್ತಾರೆ. ಬಹುತೇಕರು ಬಿಳಿಯರು ಬರುವ ಪೂರ್ವದಲ್ಲಿ ಆಗಿಹೋದ ಬುಡಕಟ್ಟುಗಳ ನಾಯಕರು, ಇನ್ನು ಹಲವರು ಬಿಳಿಯರ ವಿರುದ್ಧದ ಹೋರಾಟದಲ್ಲಿ ಹತರಾದವರು. ಉಳಿದಂತೆ ಅವರಲ್ಲಿ ಸ್ವಾತಂತ್ರ್ಯದ ಬೀಜ ಬಿತ್ತಿದವರು, ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡವರು ಹಾಡಿನಲ್ಲಿ ಸ್ಪೂತರ್ಿಯಾಗಿ ಬರುತ್ತಾರೆ.

         ATLEGANG CULTURAL GROUP, THE LESEDI CULTURAL VILLAGE GROUP, MALEDI YOUTH CLUB  ಮುಂತಾದ ಸಾಂಸ್ಕೃತಿಕ ತಂಡಗಳು ನಡೆಸಿಕೊಟ್ಟ ಕಾರ್ಯಕ್ರಮಗಳನ್ನು ನೋಡಿದಾಗ ಬಡತನ, ಅವಮಾನದಲ್ಲಿಯೂ ಕಾಪಿಟ್ಟುಕೊಂಡ ಸಾಂಸ್ಕೃತಿಕ ಶ್ರೀಮಂತಿಕೆ ಯಾರನ್ನೂ ಬೆರಗುಗೊಳಿಸುತ್ತದೆ.
ಆಫ್ರಿಕಾದ ಇತರ ದೇಶಗಳಾದ ನಮೀಬಿಯಾ, ಇಥಿಯೋಪಿಯಾಗಳಿಂದ ಬಂದ ತಂಡಗಳೂ ಕೂಡ ಈ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹಾಗೇ ಉಳಿಸಿಕೊಂಡಿವೆ. ಆದರೆ ಇಂತಹ ಪ್ರದರ್ಶನಕೊಡುವ ಕೆಲವು ತಂಡಗಳು ಮಾತ್ರ ಉಳಿದುಕೊಂಡಿದ್ದು, ಸಾವಕಾಶವಾಗಿ ಕಡಿಮೆ ಆಗುತ್ತಿರುವ ಸಾಧ್ಯತೆಯ ಬಗ್ಗೆ ಗಮನ ಸೆಳೆಯುತ್ತಾರೆ. ಆದರೆ ಅಲ್ಲೆಲ್ಲಾ ಇಂತಹ ನರ್ತನವನ್ನು ಹೊಸ ಶಿಕ್ಷಣ ಪಡೆಯುತ್ತಿರುವ ವಿದ್ಯಾಥರ್ಿ-ಯುವಜನರಿಗೆ ಹೇಳಿ ಕೊಡುವ ಶಾಲೆಗಳೂ, ತರಬೇತಿ ಕೇಂದ್ರಗಳೂ ಇವೆ, ಕೆಲವು ಸಕರ್ಾರದ ನೆರವಿನಿಂದ ನಡೆದರೆ, ಇನ್ನು ಕೆಲವು ಕಾರ್ಯಕ್ರಮ ನೀಡಿ ಗಳಿಸಿದ ಹಣದಲ್ಲಿ ತರಬೇತಿ ನೀಡುತ್ತಿವೆ.


         ಆಫ್ರಿಕಾ ದೇಶಗಳ ತಂಡಗಳು ಮಾತ್ರವಲ್ಲ ವಿಯೆಟ್ನಾಂ, ಪಶ್ಚಿಮ ಸಹಾರಾ, ಕ್ಯೂಬನ್ ಹಾಡು, ಕುಣಿತದಲ್ಲಿಯೂ ಇದೇ ಪ್ರತಿಭಟನೆಯ ಧ್ವನಿ ಇದ್ದು ಕಾಣುತ್ತಿತ್ತು. ಹಾಡು, ನರ್ತನದ ವಸ್ತುವೇ ಆದೇಶಗಳಲ್ಲಿ ನಡೆದ ಕ್ರಾಂತಿಯ ಕತೆ; ಹುತಾತ್ಮರ ಕುರಿತ ಮೆಚ್ಚುಗೆ; ಹುತಾತ್ಮರಿಂದ ಸ್ಪೂತರ್ಿ, ಶಕ್ತಿ ಬೇಡುವುದು, ಹೋರಾಡಿಯೇ ಸಿದ್ಧ ಎನ್ನುವ ಸಂದೇಶ ನೀಡುವುದು. ಹಾಡು ಆಧುನಿಕವಾಗಿದ್ದರೂ ಅದರ ಧಾಟಿ ಮಾತ್ರ ಜಾನಪದದ್ದು. ಅವರು ಬಳಸುವ ಬಹುತೇಕ ವಾದ್ಯಗಳು ಸಾಂಪ್ರದಾಯಿಕ ವಾದ್ಯಗಳು.

          ಬೆಳಿಗ್ಗೆಯಿಂದ ಸಂಜೆಯವರೆಗೆ ಕುಣಿಯುತ್ತೀರಿ. ನಿಮಗೆ ಆಯಾಸ-ದಣಿವು ಆಗುವುದಿಲ್ಲವೇ ಎಂದು ಕೇಳಿದರೆ 'ನಮಗ್ಯಾಕೆ ದಣಿವಾಗಬೇಕು? ನಾವು ವಿಯೆಟ್ನಾಂ ಹುಡುಗಿಯರು, ಹೊಚಿಮ್ಹಿನ್ ನಾಡಿನವರು. ಇನ್ನೂ ನಾಲ್ಕು ತಾಸು ಹಾಡುತ್ತೇವೆ; ಕುಣಿಯುತ್ತೇವೆ. ಬನ್ನಿ, ನಮ್ಮೊಂದಿಗೆ ಹೆಜ್ಜೆ ಹಾಕಿ.' ಎಂದು ಕೈ ಹಿಡಿದು ಹತ್ತಾರು ಬಿದಿರುಗಳ ಬಲೆಯೊಳಗೆ ಹೆಜ್ಜೆ ಹಾಕುವುದನ್ನು ಹೇಳಿಕೊಡುತ್ತಾರೆ. ಹೀಗೆ 8 ದಿನ ಕುಣಿದಿದ್ದಾರೆ, ವಿವಿಧ ದೇಶಗಳ ಪ್ರತಿನಿಧಿಗಳನ್ನು ಕುಣಿಸಿದ್ದಾರೆ. ಇಂಪಾದ ಸಂಗೀತ ಅವರದು. ಕೊಳಲು, ಬಿದಿರಿನಿಂದ ಮಾಡಿದ ವಾದ್ಯಗಳು, ತಂತಿ ವಾದ್ಯಗಳು ಉತ್ಸವದ ಗಮನ ಸೆಳೆದವು. ಸುಂದರ ಧ್ವನಿ ಅವರದು; ವಿಯೆಟ್ನಾಮಿ ಹುಡುಗಿಯರ ಹಾಗೆ.

            ಆದರೆ ಕ್ಯೂಬಾದ ಹಾಡು, ಕುಣಿತ ಹಾಗಲ್ಲ. ಏರಿದ ಧ್ವನಿ, ಅಬ್ಬರದ ವಾದ್ಯ, ಮೈ ಮುರಿದ ಕುಣಿತ. . . . ಅವರ ಹೋರಾಟದಂತೆ; ಜಗತ್ತಿಗೆ ಕೇಳುವಂತೆ. ಅಮೇರಿಕಾವನ್ನೇ ಬೆದರಿಸುವಂತೆ. ಹೆಚ್ಚು ಕುಣಿಯುವುದು ಹುಡುಗಿಯರೇ. ಬಿಳಿ, ಕಪ್ಪು, ಕಂದು ಬಣ್ಣದ ಬೆಡಗಿಯರು. ವಿಶ್ವಾಸದ ನರ್ತನ. ಎಲ್ಲಾ ದೇಶಗಳ ವೈವಿಧ್ಯತೆಗಳನ್ನೂ ಪ್ರದಶರ್ಿಸಲು ಕೊಟ್ಟ ಸ್ಟಾಲ್ ಗಳಿವೆ. ಒಂದು ಸುತ್ತು ಮೆರವಣಿಗೆಯಲ್ಲಿ ನಡೆದು ಜನರ ಗಮನ ಸೆಳೆದು ಕಾರ್ಯಕ್ರಮ ನೀಡಿ ವೀವಾ ಕ್ಯೂಬಾ ಎಂದು ಜನರ ಬಾಯಲ್ಲೇ ಬರುವಂತೆ ಮಾಡುವ ಸಾಹಸ ಮೆಚ್ಚಲೇ ಬೇಕು
.

                 ಮೊರಕ್ಕೋದಿಂದ ಧಾಳಿಗೊಳಗಾದ ವೆಸ್ಟರ್ನ ಸಹಾರಾ ಮತ್ತು ಇಸ್ರೈಲ್ ನಿಂದ ಧಾಳಿಗೊಳಗಾದ ಪ್ಯಾಲಿಸ್ಟೈನಿಯರ ಹಾಡು, ನೃತ್ಯಗಳು ಜಾನಪದದ ಸೊಗಡಿನಿಂದ ಕೂಡಿರದಿದ್ದರೂ ಮಹಿಳೆಯರೇ ಹೆಚ್ಚಾಗಿ ಕುಣಿಯುವ ಅವರ ಸಾಂಪ್ರದಾಯಿಕ ಉಡುಗೆಯಿಂದ ಗಮನ ಸೆಳೆಯುತ್ತಿದ್ದರು. ಹಲವು ತಂಡಗಳು ಪ್ರತಿನಿಧಿಗಳ ಗಮನ ಸೆಳೆದುವು. ಜುಲು ಡಾನ್ಸ್ ಸುಮಾರು 10-15 ರೀತಿಯ ಹೆಜ್ಜೆಗಳನ್ನು ಕುಣಿಯುತ್ತಾರೆ. ಇವೆಲ್ಲವೂ ಭಿನ್ನಭಿನ್ನವಾದದ್ದೇ. ಬಿಟ್ಟ ಮೈ, ಸೊಂಟಕ್ಕೆ, ಎದೆಗೆ ಚರ್ಮದ ಬಟ್ಟೆ, ಕುತ್ತಿಗೆಗೆ ಮಣಿಸರ, ಎಲುವಿನ ಬಣ್ಣದ ಮಾಲೆಗಳು. ಕಾಲು ಕೈಗಳಿಗೆ ಕೂಡ ಮಣಿಗಳ ಕಟ್ಟುಗಳು. ತಲೆಗೆ ಪ್ರಾಣಿ ಚರ್ಮದ ಕೂದಲಿನಿಂದ ಮಾಡಿದ ಹೆಡ್ ಗೇರ್. ಆಕಾದೆತ್ತರಕ್ಕೆ ಕಾಲುಗಳನ್ನೆತ್ತಿ ಕುಣಿಯುವ ಭಂಗಿ ಆಕರ್ಷಕವಾದದ್ದು. ಕಾಂಗೋ ರೀತಿಯ ಚರ್ಮವಾದ್ಯ ಮತ್ತು ದೊಡ್ಡ ದೊಡ್ಡ ಡೋಲು, ಕಾಡಿನಲ್ಲಿ ಸಿಗುವ ಯಾವುದೋ ಕಾಯಿಯಿಂದ ಮಾಡಿದ ಗೆಜ್ಜೆ, ಹೆಜ್ಜೆಗೊಂದು ಗತ್ತು ತಂದಿದ್ದವು.

THE LUMBOOT DANCING ತಂಡ ಮುಖ್ಯವಾಗಿ ಯುದ್ಧದ ವಸ್ತುವುಳ್ಳ ಕುಣಿತ ಮಾಡುತ್ತದೆ. ಅದನ್ನವರು TRADITIONAL WAR DANCE  ಂದು ಕರೆಯುತ್ತಾರೆ. ಕೈಯಲ್ಲಿ ಈಟಿ ಇತ್ಯಾದಿ ಆಯುಧಗಳೊಂದಿಗೆ ಯುದ್ಧದ ಕುಣಿತ NALEDI YOUTH CLUB  ಪ್ರಸ್ತುತ ಪಡಿಸಿದ ಕುಣಿತದಲ್ಲಿ ದೇವರನ್ನು ಆರಾಧಿಸುವುದು ಮತ್ತು ಬೇಟೆಯ ದೃಶ್ಯ ಪ್ರದರ್ಶನ ಪ್ರಧಾನವಾಗಿತ್ತು. ಸುಮಾರು 36 ಜನರ ತಂಡ. ಅವರು ಸಮೂಹಕ್ಕೆ ಸಂಪತ್ತನ್ನು ಬೇಡುತ್ತಾರೆ. ಮತ್ತು ಹಿರಿಯರಿಗೆ ಸದ್ಗತಿಯನ್ನು ಕೋರುತ್ತಾರೆ. ಉಳಿದಂತೆ ಸಮುದಾಯಕ್ಕೆ ಖುಷಿಯನ್ನು ಬೇಡುತ್ತಾರೆ.


TSHWANE TRADITIONAL DANCE, KURU DANCE, KASANE BOSTSWANA TRADITIONAL DANCE, VANUATU TRIBAL DANCE ಹೀಗೆ ವಿವಿಧ ತಂಡಗಳು ಪ್ರಸ್ತುತ ಪಡಿಸಿದ ಹಲವು ನರ್ತನಗಳು ಮತ್ತು ಅವರು ಹಾಕುವ ಹೆಜ್ಜೆಯ ವಿನ್ಯಾಸ ಕನರ್ಾಟಕದ ಹಲವು ಬುಡಕಟ್ಟುಗಳ ಕುಣಿತವನ್ನು ಹೋಲುತ್ತವೆ.
ಎಲ್ಲಾ ಕುಣಿತಗಳೂ ಸಾಮೂಹಿಕ ಕುಣಿತ, ಸ್ತ್ರೀಯರೇ ಪ್ರಧಾನವಾಗಿರುವ ಕುಣಿತ, ಕಾಡಿನ ಮನುಷ್ಯರಂತೆ ಉಡುಪು, ಆಭರಣಗಳನ್ನೇ ಬಟ್ಟೆಯಂತೆ ತೊಡುವ ರೀತಿ, ಶೇಡಿಯಂತಹ ಬಣ್ಣದಿಂದ ನಮ್ಮಲ್ಲಿಯ ವಿದೂಷಕನಂತೆ ಮುಖವಣರ್ಿಕೆ, ಅಪರೂಪಕ್ಕೆ ಕಾಣುವ ಮುಖವಾಡ ಇತ್ಯಾದಿಗಳು ಹೊಸ ಲೋಕವನ್ನೇ ಸೃಷ್ಟಿಸುತ್ತವೆ.
ಉತ್ಸವದ ಪ್ರತಿ ದಿನವೂ ಬೇರೆ ಬೇರೆ ದೇಶಗಳ, ಖಂಡಗಳ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಏಷ್ಯಾ, ಯುರೋಪ್, ಅಮೇರಿಕಾ, ಆಫ್ರಿಕಾ ಮುಂತಾದ ಖಂಡಗಳ ಪ್ರತಿನಿಧಿಗಳು ಪರಸ್ಪರ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಇದೊಂದು ಸದವಕಾಶವಾಗಿತ್ತು.

         ಸಾಮ್ರಾಜ್ಯ ಶಾಹಿ ಶಕ್ತಿಗಳ ಕ್ರೂರ ಧಾಳಿಗೆ ಒಳಗಾಗಿರುವ ದೇಶಗಳು ಪ್ರಭುತ್ವದ ಧಾಳಿಗೆ ವಿರುದ್ಧವಾಗಿ ರಾಜಕೀಯ ಹೋರಾಟವನ್ನು ಮಾಡುತ್ತಲೇ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಮತ್ತೆ ಮತ್ತೆ ಅಪ್ಪಿಕೊಳ್ಳುತ್ತಿವೆ. ಆಫ್ರಿಕಾದ ಅನೇಕ ದೇಶಗಳು ಸಾಂಪ್ರದಾಯಿಕ ಕಲೆಗಳನ್ನು ಯಥಾವತ್ತಾಗಿ ಪ್ರದಶರ್ಿಸಿದರೆ ಕ್ಯೂಬಾ, ವಿಯೆಟ್ನಾಂ ನಂಥ ದೇಶಗಳು ಟ್ರೆಡಿಶನಲ್ ಕಲೆಗಳಿಗೆ ಹೊಸಕಾಲದ ಆಶಯವನ್ನು ಅನುಸಂಧಾನಿಸಿ ಜನರ ಮಧ್ಯೆ ಹೋಗುತ್ತಿದ್ದಾರೆ. ಜನಸಾಮಾನ್ಯರನ್ನು ಒಳಗೊಳ್ಳುತ್ತಿದ್ದಾರೆ.



             ಆದರೆ ಇಡೀ ಉತ್ಸವದಲ್ಲಿ ಭಾರತದ ಪಾಲ್ಗೊಳ್ಳುವಿಕೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಲ್ಲಿ ನಿರಾಶಾದಾಯಕವಾಗಿತ್ತು. ಮಣಿಪುರಿ ನರ್ತನವೊಂದನ್ನು ಬಿಟ್ಟರೆ ಗಮನ ಸೆಳೆಯುವ ಯಾವ ಕುಣಿತವಾಗಲೀ, ಹಾಡುಗಳಾಗಲೀ, ವಾದ್ಯಗಳಾಗಲೀ ಇರಲಿಲ್ಲ. ಹಾಗೆ ನೋಡಿದರೆ ಕನರ್ಾಟಕವನ್ನೂ ಒಳಗೊಂಡಂತೆ ಜಾನಪದ ಕಲೆ, ಕುಣಿತ, ಹಾಡುಗಳನ್ನು ಹೋರಾಟದ ಭಾಗವಾಗಿಸಿಕೊಂಡಿಲ್ಲ. ಈ ವಿಷಯಗಳಲ್ಲಿ ನಾವು ಕೇವಲ ಭಾಷಣಕ್ಕೆ ಸೀಮಿತಗೊಂಡಿದ್ದೇವೆ ಎಂದೆನಿಸಿತು.

              ಜಗತ್ತಿನಲ್ಲಿಯೇ ಅತ್ಯಂತ ವೈವಿಧ್ಯಮಯ ಸಂಸ್ಕೃತಿಗಳನ್ನು ಭಾರತ ದೇಶವು ಹೊಂದಿದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ವಿಶಿಷ್ಟವಾದ ಮತ್ತು ವೈವಿಧ್ಯಮಯವಾದ ಜಾನಪದ ಕಲೆ, ಸಾಹಿತ್ಯವನ್ನು ಹೋರಾಟ ಕಟ್ಟುವಲ್ಲಿ, ಜನಸಾಮಾನ್ಯರ ಬಳಿ ಹೋಗುವಲ್ಲಿ ಹೇಗೆ ದುಡಿಸಿಕೊಂಡಿದ್ದೀರಿ? ಎಂದು ಕೆಲವು ದೇಶಗಳ ಪ್ರತಿನಿಧಿಗಳು ಕೇಳಿದಾಗ ನಮಗೆ ಸುಮ್ಮನಿರದೇ ಬೇರೆ ದಾರಿಯಿರಲಿಲ್ಲಾ. ಮಾತನ್ನು ಬೇರೆಡೆ ಹೊರಳಿಸುವುದೊಂದೇ ನಮಗಿರುವ ದಾರಿಯಾಗಿತ್ತು!

ವಿಠ್ಠಲ ಭಂಡಾರಿ, ಕೆರೆಕೋಣ
                                                                                                                     (ಜನಶಕ್ತಿಯಲ್ಲಿ ಪ್ರಕಟ)